ಕರೋನಾ: ನೀತಿ ಆಯೋಗ ಹೇಳಿದ್ದೇನು? ವಾಸ್ತವವಾಗಿ ನಡೆದಿದ್ದೇನು?
ಅಭಿಮತ

ಕರೋನಾ: ನೀತಿ ಆಯೋಗ ಹೇಳಿದ್ದೇನು? ವಾಸ್ತವವಾಗಿ ನಡೆದಿದ್ದೇನು?

ಮೇ 16 ಹೊತ್ತಿಗೆ ದೇಶ ಕರೋನಾ ಮುಕ್ತವಾಗಲಿದೆ ಎಂದು ನೀತಿ ಆಯೋಗ ಹೇಳಿತ್ತು. ಆದರೆ, ಇದೀಗ ವಾಸ್ತವಾಂಶಗಳು ಕರೋನಾ ವಿಷಯದಲ್ಲಿ ದೇಶದ ಅತ್ಯುನ್ನತ ಚಿಂತಕರ ಚಾವಡಿ ನೀತಿ ಆಯೋಗ ಎಂಥ ಮೂರ್ಖತನದ ಲೆಕ್ಕಾಚಾರಗಳನ್ನು ಮಾಡಿದೆ ಎಂಬುದನ್ನು ಬಯಲುಗೊಳಿಸಿದೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಇಂದು ಮೇ 15. ದೇಶದ ಕರೋನಾ ಸೋಂಕಿತರ ಸಂಖ್ಯೆ 85 ಸಾವಿರ ಗಡಿ ದಾಟಿದೆ. 2750 ಮಂದಿ ರೋಗಕ್ಕೆ ಈಗಾಗಲೇ ಬಲಿಯಾಗಿದ್ದಾರೆ. ಇದು ಕೇಂದ್ರ ಸರ್ಕಾರವೇ ಒದಗಿಸಿದ ಅಧಿಕೃತ ಮಾಹಿತಿ. ಆದರೆ, ಕರೋನಾ ಸೋಂಕು ಹಿನ್ನೆಲೆಯಲ್ಲಿ ರಚಿಸಲಾಗಿರುವ ದೇಶದ ವೈದ್ಯಕೀಯ ತುರ್ತುಪರಿಸ್ಥಿತಿ ನಿರ್ವಹಣೆ ಯೋಜನೆ ಕುರಿತ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರೂ ಆಗಿರುವ ನೀತಿ ಆಯೋಗದ ಸದಸ್ಯ ಡಾ ವಿ ಕೆ ಪೌಲ್ ಪ್ರಕಾರ ನಾಳೆ(ಮೇ 16)ಯ ಹೊತ್ತಿಗೆ ದೇಶದ ಕರೋನಾ ವಿರುದ್ಧ ದಿಗ್ವಿಜಯ ಸಾಧಿಸಬೇಕಿತ್ತು! ಒಂದೇ ಒಂದು ಕರೋನಾ ಸೋಂಕು ಪ್ರಕರಣ ಕೂಡ ಇಲ್ಲದೆ, ಭಾರತ ಕರೋನಾ ಮುಕ್ತ ಎಂದು ಘೋಷಣೆಯಾಗಬೇಕಿತ್ತು!

ಹೌದು, ಕಳೆದ ಏಪ್ರಿಲ್ 24ರಂದು ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಖಾತೆಯ ಪ್ರೆಸ್ ಇನ್ ಫಾರ್ಮೇಷನ್ ಬ್ಯೂರೋ(ಪಿಐಬಿ) ನೀಡಿದ ಟ್ವೀಟ್ ಮಾಹಿತಿ ಪ್ರಕಾರ, ಮೇ 16ರ ಹೊತ್ತಿಗೆ ದೇಶದಲ್ಲಿ ಕರೋನಾ ಸೋಂಕು ಸಂಖ್ಯೆ ಶೂನ್ಯಕ್ಕೆ ತಲುಪಬೇಕಿತ್ತು. ಸೋಂಕು ಪ್ರಕರಣಗಳ ಏರಿಳಿಕೆ ಸೂಚಿಸುವ ರೇಖೆ ಏಪ್ರಿಲ್ ಅಂತ್ಯದಿಂದಲೇ ಕೆಳಮುಖವಾಗಲು ಆರಂಭಿಸಿ ಕ್ರಮೇಣ ಮೇ 16ಕ್ಕೆ ಶೂನ್ಯಕ್ಕೆ ತಲುಪಿದ ದಿನಾಂಕವಾರು ಪ್ರಕರಣಗಳ ಇಳಿಮುಖ ಅಂಕಿಅಂಶ ಒಳಗೊಂಡ ಗ್ರಾಫ್ ಚಿತ್ರವನ್ನು ಉಲ್ಲೇಖಿಸಿ ಪಿಐಬಿ ಈ ಟ್ವೀಟ್ ಮಾಡಿತ್ತು.

ಡಾ ವಿ ಕೆ ಪೌಲ್ ಅವರೇ ಸ್ವತಃ ಈ ಮಾಹಿತಿ ನೀಡಿದ್ದಾಗಿಯೂ ಟ್ವೀಟ್ ನಲ್ಲಿ ಹೇಳಲಾಗಿತ್ತು. ಜೊತೆಗೆ, “ದೇಶದಲ್ಲಿ ಮಾರ್ಚ್ 24ರಂದು ಹೇರಿದ ಲಾಕ್ ಡೌನ್ ಬಹಳ ಸಕಾಲಿಕ ಮತ್ತು ಪರಿಣಾಮಕಾರಿ ಕ್ರಮ. ಅಂತಹ ದಿಟ್ಟ ಕ್ರಮ ಈಗ ಫಲ ನೀಡತೊಡಗಿದೆ. ಪ್ರಕರಣಗಳ ಗ್ರಾಫ್ ಇಳಿಯತೊಡಗಿದೆ. ಲಾಕ್ ಡೌನ್ ಎಷ್ಟು ಪರಿಣಾಮಕಾರಿ ಎಂಬುದನ್ನು ದೇಶದ ಈ ಚಿತ್ರಣ ತೋರಿಸಿಕೊಟ್ಟಿದೆ. ಜನರ ಜೀವ ಉಳಿಸುವ, ಕೋವಿಡ್-19 ಸೋಂಕು ನಿಯಂತ್ರಿಸುವ ಮತ್ತು ಸೋಂಕು ದ್ವಿಗುಣ ಪ್ರಮಾಣಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಲಾಕ್ ಡೌನ್ ಮಹತ್ವದ ಕ್ರಮವಾಗಿದೆ. ನಾವು ಇದೇ ದಾರಿಯಲ್ಲಿ ಸಾಗಬೇಕಿದೆ” ಎಂದೂ ಪೌಲ್ ಹೇಳಿದ್ದಾರೆ ಎಂದು ಪಿಐಬಿ ಟ್ವೀಟ್ ನಲ್ಲಿ ನೀತಿ ಆಯೋಗದ ಸದಸ್ಯರ ಹೇಳಿಕೆಯನ್ನು ಉಲ್ಲೇಖಿಸಲಾಗಿತ್ತು.

ಪೌಲ್ ಅವರಷ್ಟೇ ಅಲ್ಲ; ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್, ಮತ್ತೊಬ್ಬ ಸದಸ್ಯ ಹಾಗೂ ವಿಜ್ಞಾನಿ ವಿ ಕೆ ಸಾರಸ್ವತ್ ಅವರುಗಳು ಕೂಡ ಏಪ್ರಿಲ್ ಮೂರನೇ ವಾರದ ಹೊತ್ತಿಗೆ ಇದೇ ವಾದವನ್ನು ಸಮರ್ಥಿಸಿಕೊಂಡು, ದೇಶ ಮೇ ಮಧ್ಯಂತರದ ಹೊತ್ತಿಗೆ ಕರೋನಾ ಪಿಡುಗಿನಿಂದ ಹೊರಬರಲಿದೆ ಎಂಬ ಮಾತುಗಳನ್ನೇ ಹೇಳಿದ್ದರು. ಕರೋನ ಪ್ರಕರಣಗಳ ಗ್ರಾಫ್ ಫ್ಲಾಟ್ ಆಗುತ್ತಿದೆ ಎಂದು ಆಗಲೇ ವಿಶ್ವಾಸ ವ್ಯಕ್ತಪಡಿಸಿದ್ದರು.

ಅಂದರೆ, ದೇಶದ ಸದ್ಯದ ಮತ್ತು ಭವಿಷ್ಯದ ನೀತಿ ನಿರೂಪಣೆಗಳು, ಕಾರ್ಯತಂತ್ರಗಳನ್ನು ನಿರ್ಧರಿಸುವ, ದೇಶ ಸಾಗಬೇಕಾದ ದಿಕ್ಕಿನ ಮಾರ್ಗಸೂಚಿ ಒದಗಿಸುವ ಗುರುತರ ಹೊಣೆಗಾರಿಕೆಯ ನೀತಿ ಆಯೋಗ ಇಡಿಯಾಗಿ ನಂಬಿದ್ದ ಸಂಗತಿ ಮೇ 16ರ ಹೊತ್ತಿಗೆ ದೇಶ ಕರೋನಾ ಮುಕ್ತವಾಗುತ್ತದೆ ಎಂದೇ. ಆದರೆ, ಇದೀಗ ವಾಸ್ತವಾಂಶಗಳು ಕರೋನಾ ವಿಷಯದಲ್ಲಿ ದೇಶದ ಅತ್ಯುನ್ನತ ಮಟ್ಟದ ಚಿಂತಕರ ಚಾವಡಿ ನೀತಿ ಆಯೋಗ ಎಂಥ ಮೂರ್ಖತನದ ಲೆಕ್ಕಾಚಾರಗಳನ್ನು ಮಾಡಿದೆ ಎಂಬುದನ್ನು ಬಯಲುಗೊಳಿಸಿದೆ.

ಕರೋನಾ ವೈದ್ಯಕೀಯ ತುರ್ತುಪರಿಸ್ಥಿತಿ ನಿರ್ವಹಣೆಯ ಉನ್ನತಾಧಿಕಾರ ಸಮಿತಿಯಂತಹ ಕರೋನಾದ ಕುರಿತ ನೀತಿ- ನಿರ್ಧಾರಗಳನ್ನು ಕೈಗೊಳ್ಳಬೇಕಾದ ದೇಶದ ಉನ್ನತ ವ್ಯವಸ್ಥೆಯ ಹೊಣೆಗಾರಿಕೆ ಹೊತ್ತ ಡಾ ವಿ ಕೆ ಪೌಲ್ ಅವರ ಆ ಅಧ್ಯಯನದ ಅಂದಾಜಿನ ಪ್ರಕಾರ, ಮೇ 3ರ ಹೊತ್ತಿಗೆಲ್ಲಾ ದೇಶದ ಕರೋನಾ ಸೋಂಕುಗಳ ಸಂಖ್ಯೆ ಅತ್ಯಧಿಕ ಮಟ್ಟಕ್ಕೆ ತಲುಪಿ, ಅಂದಿನಿಂದಲೇ ಗಣನೀಯ ಇಳಿಕೆ ಆರಂಭವಾಗಬೇಕಿತ್ತು. ಆ ಹೊತ್ತಿಗೆ ಅತ್ಯಧಿಕ ಸುಮಾರು 16 ಸಾವಿರಕ್ಕೆ ತಲುಪಿದ ಸೋಂಕಿತರ ಪ್ರಮಾಣ, ಕ್ರಮೇಣ ಕಡಿಮೆಯಾಗುತ್ತಾ ಬಂದು ಮೇ 10ರ ಹೊತ್ತಿಗೆ ಕೇವಲ 5 ಸಾವಿರಕ್ಕೆ ತಲುಪಿ, ಮೇ 16ಕ್ಕೆ ಸೊನ್ನೆಯಾಗಬೇಕಿತ್ತು.

ಆದರೆ, ವಾಸ್ತವವಾಗಿ ಅದೇ ಮೇ 3ರ ಹೊತ್ತಿಗೆ ದೇಶದ ಕರೋನಾ ಸೋಂಕು ಪ್ರಮಾಣ 42,778ಕ್ಕೆ ತಲುಪಿತ್ತು. ಅದರ ಮಾರನೇ ದಿನ ಬರೋಬ್ಬರಿ ಎರಡು ಸಾವಿರದಷ್ಟು ಪ್ರಕರಣಗಳು ಹೊಸದಾಗಿ ಸೇರ್ಪಡೆಯಾದವು. ಬಳಿಕ ನಿರಂತರವಾಗಿ ಸೋಂಕಿನ ಪ್ರಮಾಣ ಭಾರೀ ಪ್ರಮಾಣದ ಏರಿಕೆ ಕಾಣುತ್ತಲೇ ಹೋಯಿತು. ಇದೀಗ ಒಂದು ಲಕ್ಷದ ಸಮೀಪಕ್ಕೆ ಬಂದು ನಿಂತಿದೆ.

ಈ ನಡುವೆ, ಏಪ್ರಿಲ್ ಅಂತ್ಯದ ಹೊತ್ತಿಗೆ ಕೇಂದ್ರ ಸಂಪುಟ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯೊಂದರಲ್ಲಿ ರಾಜ್ಯಗಳೊಂದಿಗೆ ಹಂಚಿಕೊಂಡ ಮಾಹಿತಿಯ ಪ್ರಕಾರ, ಕರೋನಾ ಸೋಂಕು ಪ್ರಮಾಣ ದೇಶದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಭಾರೀ ಏರಿಕೆ ಕಾಣಲಿದೆ. ‘ದ ಇಂಡಿಯನ್ ಎಕ್ಸ್ ಪ್ರೆಸ್’ ತನ್ನ ವರದಿಯೊಂದರಲ್ಲಿ ಉಲ್ಲೇಖಿಸಿರುವ ಬಲ್ಲ ಮೂಲಗಳ ಮಾಹಿತಿ ಪ್ರಕಾರ, ಆಗಸ್ಟ್ 15 ಹೊತ್ತಿಗೆ ದೇಶದ ಸೋಂಕಿತರ ಸಂಖ್ಯೆ ಅಂದಾಜು 2 ಕೋಟಿ, 75 ಲಕ್ಷದಷ್ಟಾಗಲಿದೆ. ಆ ಅಂದಾಜು ಅಂಕಿಅಂಶದ ಪ್ರಕಾರ, ಮೇ 15(ಅಂದರೆ ಇಂದಿಗೆ) ಸೋಂಕಿತರ ಪ್ರಮಾಣ 65 ಸಾವಿರಕ್ಕೆ ತಲುಪಬೇಕಿತ್ತು. ನಂತರ ಮೇ 31ರ ಹೊತ್ತಿಗೆ 1,65,122ಕ್ಕೆ, ಜೂನ್ 15ರ ಹೊತ್ತಿಗೆ 3,95,727ಕ್ಕೆ, ಜೂನ್ 30ರ ಹೊತ್ತಿಗೆ 11,22,839ಕ್ಕೆ, ಜುಲೈ 15ರ ಹೊತ್ತಿಗೆ ಅಂದಾಜು 31,85,952ಕ್ಕೆ, ಜುಲೈ 31ರ ಹೊತ್ತಿಗೆ 96,90,715ಕ್ಕೆ ಮತ್ತು ಅಂತಿಮವಾಗಿ ಆಗಸ್ಟ್ 15ರ ಹೊತ್ತಿಗೆ 2,74,96,513ಕ್ಕೆ ತಲುಪಲಿದೆ. ಇದು ಆರೋಗ್ಯ ಇಲಾಖೆಯ ಏಪ್ರಿಲ್ ಕೊನೇ ವಾರದಲ್ಲಿ ಮಾಡಿದ ಅಂದಾಜು!

ಆದರೆ, ಈಗ ಸದ್ಯದ ಅಂಕಿಅಂಶಗಳನ್ನು ಗಮನಿಸಿದರೆ; ಆರೋಗ್ಯ ಇಲಾಖೆಯ ಈ ಅಂದಾಜು ಕೂಡ ನಿಖರವಾಗಿ ಸೋಂಕು ಪ್ರಮಾಣ ಊಹಿಸುವಲ್ಲಿ ಸೋತಿದೆ. ಸದ್ಯ ಮೇ 15ರ ಹೊತ್ತಿನ ಸರ್ಕಾರಿ ಅಧಿಕೃತ ಮಾಹಿತಿ ಪ್ರಕಾರವೇ ದೇಶದ ಕರೋನಾ ಸೋಂಕಿತರ ಸಂಖ್ಯೆ 85 ಸಾವಿರ ಸಮೀಪಿಸಿದೆ. ಅಂದರೆ, ಏಪ್ರಿಲ್ ಅಂತ್ಯದ ಹೊತ್ತಿನ ಅಂದಾಜಿಗಿಂತ ಸುಮಾರು 20 ಸಾವಿರ ಪ್ರಕರಣಗಳು ನಿಗದಿತ ದಿನಾಂಕದಂದು ಹೆಚ್ಚಾಗಿವೆ. ಅಂದರೆ; ಸರ್ಕಾರ ನೀಡಿರುವ ಮೇಲಿನ ಮಾಹಿತಿಯಲ್ಲಿ ಮೊದಲ ಹಂತದಲ್ಲೇ ಸುಮಾರು 20 ಸಾವಿರ ವ್ಯತ್ಯಯ ಕಂಡುಬಂದಿದ್ದರೆ, ಅದು ಊಹಿಸಿದಂತೆ ಆಗಸ್ಟ್ 15ರ ಹೊತ್ತಿಗೆ ಆಗಬಹುದಾದ ವ್ಯತ್ಯಯವನ್ನು ಲೆಕ್ಕ ಹಾಕಿದರೆ, ಆ ಹೊತ್ತಿಗೆ ವಾಸ್ತವವಾಗಿ ಇರಬಹುದಾದ ಪ್ರಕರಣಗಳ ಪ್ರಮಾಣ ನಾಲ್ಕು ಕೋಟಿ ಮೀರಿದರೂ ಅಚ್ಚರಿಯಲ್ಲ!

ಅಂದರೆ; ಕರೋನಾ ನಿಯಂತ್ರಣದ ಅಂತಿಮ ಹೊಣೆ ಹೊತ್ತಿರುವ ಉನ್ನತಾಧಿಕಾರಿ ಸಮಿತಿಯಿಂದ ಹಿಡಿದು ದೇಶವನ್ನು ಮುನ್ನಡೆಸುವ ದಿಕ್ಕುದೆಸೆ ನಿರ್ಧರಿಸುವ ನೀತಿ ಆಯೋಗದವರೆಗೆ ಕರೋನಾ ವಿಷಯದಲ್ಲಿ ಕೂಡ ಎಂದಿನಂತೆ ಸರ್ಕಾರದ ಮತ್ತು ಸರ್ಕಾರ ನಡೆಸುತ್ತಿರುವ ಪ್ರಭಾವಿ ವ್ಯಕ್ತಿಗಳ ಮುಖಸ್ತುತಿಗೆ, ಮೆಚ್ಚುಗೆಯ ಮಾತುಗಳ ಭಟ್ಟಂಗಿತನಕ್ಕೆ ಇಳಿದುಬಿಟ್ಟಿವೆ. ವಾಸ್ತವಾಂಶಗಳನ್ನು, ಸತ್ಯವನ್ನು ಅರಿತು, ಅದಕ್ಕೆ ತಕ್ಕಂತೆ ದೇಶದ ಜನರ ಪ್ರಾಣ ಉಳಿಸುವ ನಿಟ್ಟಿನಲ್ಲಿ ನೀತಿ-ನಿರ್ಧಾರಗಳನ್ನು, ಕಾರ್ಯತಂತ್ರಗಳನ್ನು ರೂಪಿಸುವ ಗುರುತರ ಜವಾಬ್ದಾರಿಯನ್ನು ಮರೆತು ಅಧಿಕಾರರೂಢದ ಹೊಗಳುಭಟರಾಗಿದ್ದಾರೆ.

ದೂರದೃಷ್ಟಿ, ವೈಜ್ಞಾನಿಕ ವಿಶ್ಲೇಷಣೆ, ಪ್ರಾಮಾಣಿಕ ಚಿಂತನೆಯ ಅಗತ್ಯವಿರುವ ಕಡೆ ಕೇವಲ ಭಟ್ಟಂಗಿಗಳನ್ನು, ಭಜನೆ ತಂಡಗಳನ್ನು ಕೂರಿಸಿಕೊಂಡರೆ ಉನ್ನತ ಸಂಸ್ಥೆಗಳು ಮತ್ತು ನಿರ್ಣಾಯಕ ತೀರ್ಮಾನಗಳನ್ನು ಕೈಗೊಳ್ಳಬೇಕಾದ ಸ್ಥಾನಮಾನಗಳು ಹೇಗೆ ಅಪಹಾಸ್ಯದ, ನಗೆಪಾಟಲಿನ ಸಂಗತಿಗಳಾಗುತ್ತವೆ ಎಂಬುದಕ್ಕೆ ಕರೋನಾ ಸೋಂಕಿನ ಕುರಿತ ಈ ಬಾಲಗ್ರಹ ಪೀಡಿತ ಅಂದಾಜುಗಳು, ಅಧ್ಯಯನಗಳೇ ಸಾಕ್ಷಿ.

ಈ ನಡುವೆ, ಮೂರನೇ ಹಂತದ ಲಾಕ್ ಡೌನ್ ತೆರವಿಗೆ ಇನ್ನು ಕೆಲವೇ ಗಂಟೆಗಳು ಉಳಿದಿವೆ. ಇದೀಗ ಲಾಕ್ ಡೌನ್ ತೆರವಿನ ಬಳಿಕ ದೇಶದಲ್ಲಿ ಕರೋನಾ ಸೋಂಕು ಸಮುದಾಯ ಸೋಂಕಾಗಿ ದೀಢೀರ್ ಪರಿವರ್ತನೆಯಾಗಲಿದೆ. ಆ ಬಳಿಕ ಅದನ್ನು ನಿಯಂತ್ರಿಸುವುದು ಸುಲಭವಲ್ಲ ಎಂದು ದೇಶದ ಹಲವು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯವರು ಮೊನ್ನೆ ತಮ್ಮ ಸ್ವಾವಲಂಬಿ ಭಾರತ ಭಾಷಣದ ವೇಳೆ, ಕರೋನಾದೊಂದಿಗೆ ಬದುಕುವುದನ್ನು ರೂಢಿಸಿಕೊಳ್ಳಿ ಎಂದು ದೇಶದ ಜನತೆಗೆ ಕರೆಕೊಟ್ಟದ್ದರ ಅಸಲೀ ಹಕೀಕತ್ತು ಬಹುಶಃ ಇನ್ನಷ್ಟೆ ಅರಿವಾಗಲಿದೆ!

Click here Support Free Press and Independent Journalism

Pratidhvani
www.pratidhvani.com