ಪ್ರಚಾರಪ್ರಿಯ ರಾಜಕಾರಣಿಗಳ ಲಾಕ್‌ಡೌನ್‌ ಪ್ರಹಸನ
ಅಭಿಮತ

ಪ್ರಚಾರಪ್ರಿಯ ರಾಜಕಾರಣಿಗಳ ಲಾಕ್‌ಡೌನ್‌ ಪ್ರಹಸನ

ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಸಚಿವರೊಬ್ಬರು ಆಹಾರದ ಕಿಟ್ ಹಂಚುವ ಸಂಭ್ರಮದಲ್ಲಿ ಎಲೆಕ್ಷನ್ ಕ್ಯಾಂಪೈನ್ ಮಾಡುತ್ತಿದ್ದಾರಾ ಎಂದು ಅಂದುಕೊಳ್ಳುವ ಮಟ್ಟಕ್ಕೆ ಜನರನ್ನು ಸೇರಿಸಲಾಗಿತ್ತು.

ಕೃಷ್ಣಮಣಿ

ರಾಜ್ಯ ಸರ್ಕಾರ ಮೊದಲಿಗೆ ಬಾರ್‌ಗಳನ್ನು ಓಪನ್ ಮಾಡಿತ್ತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬಳಿಕ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಟ್ಟಿತ್ತು. ಇನ್ನೂ ಕೇಂದ್ರ ಸರ್ಕಾರದ ಸೂಚನೆಯಂತೆ ಅಂತಾರಾಜ್ಯ ಹಾಗೂ ಅಂತರ್ ಜಿಲ್ಲಾ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸೂಚನೆ ಕೊಟ್ಟಿತ್ತು. ಹಾಗಾಗಿ ಕಂಟೈನ್ಮೆಂಟ್ ಝೋನ್ಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಕಂಪನಿಗಳನ್ನು ತೆರೆಯುವಂತೆಯೂ ಸೂಚನೆ ಕೊಟ್ಟಿದ್ದರು. ಆದರೆ ಶೇಕಡ 50ರಷ್ಟು ಕಾರ್ಮಿಕರು ಮೀರದಂತೆ ಕೆಲಸ ನಿರ್ವಹಿಸಲು ಸೂಚನೆ ಕೊಡಲಾಗಿತ್ತು. ಕಂಪನಿಗಳ ಬಸ್ನಲ್ಲೇ ಸಂಚಾರ ಮಾಡುವುದಕ್ಕೂ ಸೂಚಿಸಲಾಗಿತ್ತು. ಆದರೀಗ ಎಲ್ಲವೂ ಸರ್ಕಾರದ ಕೈ ಮೀರಿ ಹೋಗುತ್ತಿರುವಂತೆ ಭಾಸವಾಗುತ್ತಿದೆ. ಸರ್ಕಾರ ಕರೋನಾ ಸೋಂಕಿನ ಮೇಲಿನ ಹಿಡತವನ್ನು ಬಿಟ್ಟುಬಿಡುವ ನಿರ್ಧಾರ ಮಾಡಿದಂತೆ ಕಾಣಿಸುತ್ತಿದೆ. ಎಲ್ಲಾ ವ್ಯವಹಾರಗಳನ್ನು ತರಾತುರಿಯಲ್ಲಿ ಆರಂಭಿಸಲು ತಯಾರಿ ನಡೆಸುತ್ತಿದೆ.

ಈ ನಡುವೆ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಭೈರತಿ ಬಸವರಾಜ್ ಅವರು ಐದು ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಆಹಾರ ಕಿಟ್ ವಿತರಣೆ ಮಾಡಿದ್ದಾರೆ. ಯಾವುದೇ ಸೋಷಿಯಲ್ ಡಿಸ್ಟೆನ್ಸ್ ಕೂಡ ಇಲ್ಲದೆ, ಮುಖಕ್ಕೆ ಮಾಸ್ಕ್ ಕೂಡ ಹಾಕಿಕೊಳ್ಳದೆ ಜನರು ಆಹಾರದ ಕಿಟ್ ತೆಗೆದುಕೊಳ್ಳಲು ಮುಗಿ ಬಿದ್ದಿದ್ದಾರೆ. ಸ್ವತಃ ಪ್ರಧಾನಿ‌ ನರೇಂದ್ರ ಮೋದಿ ಅವರೇ ಕರೋನಾ ವಿರುದ್ಧದ ಹೋರಾಟಕ್ಕೆ ಸಾಮಾಜಿಕ‌ ಅಂತರ ಮಾತ್ರವೇ ಮದ್ದು ಎಂದಿದ್ದರು.‌ ಆದರೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಸಚಿವರು ಆಹಾರದ ಕಿಟ್ ಹಂಚುವ ಸಂಭ್ರಮದಲ್ಲಿ ಎಲೆಕ್ಷನ್ ಕ್ಯಾಂಪೈನ್ ಮಾಡುತ್ತಿದ್ದಾರಾ ಎಂದು ಅಂದುಕೊಳ್ಳುವ ಮಟ್ಟಕ್ಕೆ ಜನರನ್ನು ಸೇರಿಸಲಾಗಿತ್ತು.

ಇನ್ನೊಂದು ಕಡೆ ಲಾಕ್‌ಡೌನ್‌ ಸಡಿಲಿಕೆಯಿಂದ ಸಹಜವಾಗಿಯೇ ಕರೋನಾ ಸೋಂಕು ಹೆಚ್ಚಳವಾಗಲಿದೆ ಎಂಬ ಸ್ಫೋಟಕ ಸತ್ಯವನ್ನು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೊರಹಾಕಿದ್ದಾರೆ. ಆದರೆ ಅದಕ್ಕೆ ಬೇಕಾದ ಪೂರ್ವ ತಯಾರಿಯನ್ನೂ ಮಾಡಿಕೊಂಡಿದ್ದೀವಿ. ಜನ ಆತಂಕಪಡುವ ಅಗತ್ಯತೆ ಇಲ್ಲ ಎಂದು ಜನರನ್ನು ಮೂರ್ಖರನ್ನನ್ನಾಗಿ ಮಾಡುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಭವಿಷ್ಯವಾಣಿಯನ್ನೂ ನುಡಿದಿದ್ದು ಜನ ಆತಂಕಕ್ಕೆ ಒಳಗಾಗೋದು ಬೇಡ. ಇಲ್ಲೀವರೆಗೂ ಯಾವುದೇ ವೈರಸ್ ಮನುಷ್ಯರನ್ನ ಗೆದ್ದಿಲ್ಲ. ಅಂತಿಮವಾಗಿ ಮನುಷ್ಯನೇ ಗೆದ್ದಿರೋದು ಎಂದು ಸಮಾಧಾನದ ಮಾತನ್ನಾಡಿದ್ದಾರೆ.

51 ದಿನಗಳ ಬಳಿಕ ಹಳಿಗೆ ಬರುತ್ತಿದೆ ರೈಲು ಗಾಡಿ..!

ಲಾಕ್‌ಡೌನ್‌ ಘೋಷಣೆಯಾದ ಬಳಿಕ ಸಂಚಾರ ಸ್ಥಗಿತ ಮಾಡಿದ್ದ ರೈಲುಗಳೋ ಸಂಚಾರ ಇದೀಗ ಮತ್ತೆ ಶುರುವಾಗುತ್ತಿದೆ. ದೆಹಲಿಯಿಂದ ಆರಂಭವಾಗುತ್ತಿರುವ ಈ ಸಂಚಾರ ಮುಂಬೈ, ಸಿಕಂದರಬಾದ್, ಬೆಂಗಳೂರು, ಚೆನ್ನೈ, ಅಹಮದಾಬಾದ್, ಹೌರಾ, ತಿರುವನಂತಪುರಂ, ಪಾಟ್ನಾ, ಜಮ್ಮು, ದಿಬ್ರುಘರ್, ಅಗರ್ತಲ, ಬಿಲಾಸ್ಪುರ್, ರಾಂಚಿ, ಭುವನೇಶ್ವರ್, ಮಾಡ್ಗಾಂಗೆ ರೈಲ್ವೆ ಸಂಚಾರ ಎರಡೂ ಕಡೆಯಿಂದ ಶುರುವಾಗಲಿದೆ. ಅಂದರೆ ದೆಹಲಿಯಿಂದ ಬೆಂಗಳೂರಿಗೆ ಬೆಂಗಳೂರಿನಿಂದ ದೆಹಲಿಗೆ ಏಕಕಾಲಕ್ಕೆ ಸಂಚಾರ ಶುರುವಾಗಲಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ತಿಳಿಸಿದೆ. ಕೇವಲ ಆನ್ಲೈನ್ನಲ್ಲಿ ಟಿಕೆಟ್ ಲಭ್ಯವಿದ್ದು, ಕೌಂಟರ್ ಟಿಕೆಟ್ ಹಾಗೂ ಏಜೆಂಟ್ ಟಿಕೆಟ್ ಕೂಡ ಇರುವುದಿಲ್ಲ. ಕೇವಲ IRCTC ವೆಬ್ಸೈಟ್ನಲ್ಲಿ ಮಾತ್ರ ಟಿಕೆಟ್ ಲಭ್ಯ. ಟಿಕೆಟ್ ಕನ್ಫರ್ಮ್ ಆದವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಮುಂದುವರಿದ ದಿನಗಳಲ್ಲಿ ರೈಲ್ವೆ ಇಲಾಖೆ ನಿಧಾನವಾಗಿ ಎಲ್ಲಾ ಮಾರ್ಗಗಳ ಸಂಚಾರ ಹಾಗೂ ಬೇರೆ ರೈಲುಗಳನ್ನು ಹಳಿ ಮೇಲೆ ತರಲಿದೆ ಎನ್ನಲಾಗಿದೆ.

ಈಗಾಗಲೇ 20 ಸಾವಿರ ಕೋಚ್ಗಳನ್ನು ಕೋವಿಡ್ - 19ಗೆ ಎಂದು ಮೀಸಲಿಡಲಾಗಿದೆ. ಇನ್ನು ಕೆಲವು ರೈಲುಗಳನ್ನು ಶ್ರಮಿಕ್ ರೈಲು ಎಂದು ಬಿಡುಗಡೆ ಮಾಡಿದ್ದು, ಅಂತರ ರಾಜ್ಯ ವಲಸೆ ಕಾರ್ಮಿಕರನ್ನು ಸ್ವಂತ ಊರುಗಳಿಗೆ ತೆರಳಲು ಮೀಸಲಿಡಲಾಗಿದೆ. ರೈಲಿನ ಒಳಗೂ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತದೆ ಎಂದಿದ್ದಾರೆ. ಸ್ಟೇಷನ್ಗಳಲ್ಲೂ ಜನ ಗುಂಪುಗೂಡುವುದನ್ನು ತಡೆಯುವುದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ. ಆದರೆ ಕೇವಲ ಅಂತರ ರಾಜ್ಯ ಹಾಗೂ ಅಂತರ ಜಿಲ್ಲಾ ಸಂಚಾರಕ್ಕೆ ಅನ್ವಯ ಮಾಡಿಕೊಡಲಾಗಿದೆ. ಈಗಾಗಲೇ ಕರೋನಾ ಸೋಂಕು ಹೆಚ್ಚಾಗುತ್ತಾ ಸಾಗಿದೆ. ದಿನಕ್ಕೆ ಹತ್ತಾರು ಸೋಂಕಿತರು ಪತ್ತೆಯಾಗುತ್ತಿದ್ದ ಕರ್ನಾಟಕದಲ್ಲೇ ಭಾನುವಾರ 54 ಕೇಸ್ಗಳು ಪತ್ತೆಯಾಗಿವೆ. ಒಂದು ವೇಳೆ ರೈಲುಗಳ ಸಂಚಾರ ಆರಂಭವಾದ ಬಳಿಕ ಸೋಂಕಿನ ಸಂಖ್ಯೆ ಗಗನಕ್ಕೆ ಏರಲಿದೆ ಎನ್ನುವುದು ಸಾಮಾನ್ಯ ಮನುಷ್ಯನಿಗೂ ಅರ್ಥವಾಗುತ್ತದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದು ನಿರ್ಧಾರಕ್ಕೆ ಬಂದಾಗಿದ್ದು, ಜೀವನ ಹಾಗೂ ಜೀವ ಎಂಬ ಎರಡು ಆಯ್ಕೆಗಳಲ್ಲಿ ನಾವು ಜೀವವನ್ನು ಆಯ್ಕೆ ಮಾಡಿಕೊಳ್ಳೋಣ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ ಜೀವ ಉಳಿಸಲು ಸಾಧ್ಯವಿಲ್ಲ ಮುಂದಿನ ಜೀವನ ನೋಡೋಣ ಎನ್ನುವ ನಿರ್ಧಾರಕ್ಕೆ ಬಂದಂತಾಗಿದೆ.

ಕೇಂದ್ರ ಸರ್ಕಾರ ರೈಲು ಸಂಚಾರ ಮಾಡಲು ಕಾರಣ ಆರ್ಥಿಕ ಸಂಕಷ್ಟ. ಜೊತೆಗೆ ವಲಸೆ ಕಾರ್ಮಿಕರ ಪ್ರಯಾಣದ ವೆಚ್ಚದ ಶೇಕಡ 85 ರಷ್ಟನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಘೋಷಣೆ ಮಾಡಿಕೊಂಡಿದ್ದು ಇರಬಹುದು. ಯಾಕಂದರೆ ಒಮ್ಮೆ ರೈಲುಗಳ ಸಂಚಾರ ಆರಂಭವಾದರೆ ಯಾರೂ ಕೂಡ ಕೇಂದ್ರ ಸರ್ಕಾರದ ಒಪ್ಪಿಗೆಗಾಗಿ ಕಾಯುವುದಿಲ್ಲ. ಕಷ್ಟವೋ ಸುಖವೋ ಸ್ವಂತ ಹಣದಲ್ಲೇ ಪ್ರಯಾಣ ಮಾಡುತ್ತಾರೆ. ಹಾಗಾಗಿ ಕೇಂದ್ರ ಸರ್ಕಾರಕ್ಕೂ ಹಣ ಉಳಿತಾಯ ಆಗಲಿದೆ. ಒಮ್ಮೆ ರೈಲು ಸಂಚಾರ ಶುರುವಾದ ಬಳಿಕ ಅದಕ್ಕೆ ಸಂಬಂಧಿಸಿದ ಅಂದರೆ ಬಸ್, ಕ್ಯಾಬ್, ಆಟೋ, ಮೆಟ್ರೋ ರೈಲುಗಳ ಸಂಚಾರವೂ ಶುರುವಾಗಲೇ ಬೇಕು. ಇಲ್ಲದಿದ್ದರೆ ರೈಲುಗಳಲ್ಲಿ ಬಂದಿಳಿಯುವ ಜನರು ಮನೆ ತಲುಪುವುದು ಕಷ್ಟಸಾಧ್ಯ ಆಗಲಿದೆ. ಇನ್ನು ರೈಲು ಸಂಚಾರ ಶುರುವಾದ ಬಳಿಕ ಕ್ವಾರಂಟೈನ್ ಎನ್ನುವ ಪದವೇ ಅರ್ಥ ಕಳೆದುಕೊಳ್ಳಲಿದ್ದು, ಕರೋನಾ ಸೋಂಕಿತ ಎಲ್ಲಿ ಬೇಕಾದರೂ ಸುತ್ತಬಹುದು. ಹೇಗೆ ಬೇಕಿದ್ದರೂ ಸೋಂಕನ್ನು ಹರಡಬಹುದು ಎನ್ನುವಂತಿದೆ ನಮ್ಮನ್ನಾಳುವ ನಾಯಕರು ಮಾಡುತ್ತಿರುವ ನೀತಿಗಳು.

Click here Support Free Press and Independent Journalism

Pratidhvani
www.pratidhvani.com