ದುಡಿವ ಜನರ ಹೊಟ್ಟೆ ಮೇಲೆ ದಬ್ಬಾಳಿಕೆಯ ರೈಲು ಹರಿವುದು ಇನ್ನು ವಾಡಿಕೆ!
ಅಭಿಮತ

ದುಡಿವ ಜನರ ಹೊಟ್ಟೆ ಮೇಲೆ ದಬ್ಬಾಳಿಕೆಯ ರೈಲು ಹರಿವುದು ಇನ್ನು ವಾಡಿಕೆ!

ಭಾರತ ದಶಕಗಳಿಂದ ಹೊಂಚುತ್ತಿದ್ದ ದುಡಿಯುವ ಜನರನ್ನು ಉಳ್ಳವರ ಅಡಿಯಾಳು ಮಾಡುವ ಹುನ್ನಾರಕ್ಕೆ ಕರೋನಾ ಸೋಂಕು ದೊಡ್ಡ ಅವಕಾಶ ಒದಗಿಸಿಕೊಟ್ಟಿದೆ. ಜನಕಲ್ಯಾಣ ರಾಜ್ಯದ(ವೆಲ್ ಫೇರ್ ಸ್ಟೇಟ್) ಕನಸುಗಳನ್ನು ಪುಡಿಗಟ್ಟಿ ಬಂಡವಾಳಶಾಹಿ, ಕಾರ್ಪರೇಟ್ ಪ್ರಭುತ್ವವಾಗಿ ದೇಶವನ್ನು ಬದಲಾಯಿಸಲು ಕೋವಿಡ್-19 ಸುವರ್ಣಾವಕಾಶವಾಗಿ ಒದಗಿಬಂದಿದೆ. ಕಾರ್ಮಿಕ ಕಾನೂನುಗಳು ಗಾಳಿಗೆ ತೂರಿವೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಕೋವಿಡ್ 19ರ ನಿಜವಾದ ಅನಾಹುತಗಳು ಈಗ ಶುರುವಾಗಿವೆ. ಒಂದು ಕಡೆ ನಿಯಂತ್ರಣಕ್ಕೆ ಸಿಗದೆ ಏರುತ್ತಿರುವ ಸೋಂಕು ಮತ್ತು ಸಾವಿನ ಪ್ರಮಾಣ. ಮತ್ತೊಂದು ಕಡೆ ದುಡಿವ ಜನ ಹಾದಿಬೀದಿ ಹೆಣಗಾಗಿ, ಮಾಲೀಕರ ಜೀತ ತೊತ್ತಾಗಿ ಅಂತ್ಯ ಕಾಣುತ್ತಿದ್ದಾರೆ. ಇದು ಲಾಕ್ ಡೌನ್ ಸಡಿಲಿಕೆಯ ಬಳಿಕದ ಹೊಸ ವಿದ್ಯಮಾನ.

ಕರೋನಾ ಸೋಂಕು ತಡೆಯ ಕ್ರಮವಾಗಿ ಸರ್ಕಾರ ಹೇರಿದ ದಿಢೀರ್ ಲಾಕ್ ಡೌನ್ ನಿಂದಾಗಿ ದೇಶದ ಉದ್ದಗಲಕ್ಕೆ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು ಕಂಗಾಲಾಗಿದ್ದು, ದುಡಿಮೆ, ಬದುಕು ಕಳೆದುಕೊಂಡು ಬರಿಗೈಯಲ್ಲಿ ತಮ್ಮ ಮೂಲ ನೆಲಗಳತ್ತ ಮರುವಲಸೆ ಹೊರಟ್ಟಿದ್ದು, ವಲಸೆಯುದ್ದಕ್ಕೂ ಸಾವು-ನೋವಿಗೆ, ಪೊಲೀಸರ ಅಟ್ಟಹಾಸಕ್ಕೆ, ಉಳ್ಳವರ ದೌರ್ಜನ್ಯಕ್ಕೆ ಈಡಾಗಿದ್ದು ಈಗ ಇತಿಹಾಸ.

ಆದರೆ, ಅದೇ ಇತಿಹಾಸ ಕೇವಲ ಒಂದು ತಿಂಗಳಲ್ಲೇ ಮತ್ತೆ ಮರುಕಳಿಸಿದೆ. ಲಾಕ್ ಡೌನ್ ಸಡಿಲಗೊಳಿಸುತ್ತಲೇ ನಗರಗಳಲ್ಲಿ ಸಿಲುಕಿದ್ದ ಮತ್ತಷ್ಟು ಮಂದಿ ಇದೀಗ ಮತ್ತೆ ತಮ್ಮ ಊರುಗಳತ್ತ ಮುಖಮಾಡಿದ್ದಾರೆ. ಆರಂಭದಲ್ಲಿ ಆ ಕಾರ್ಮಿಕರಿಗೆ ರೈಲು, ಬಸ್ ವ್ಯವಸ್ಥೆ ಮಾಡಿದ್ದ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು, ರಿಯಲ್ ಎಸ್ಟೇಟ್, ವಿವಿಧ ಉತ್ಪಾದನಾ ಕಂಪನಿಗಳ ಮಾಲೀಕರ ಲಾಬಿಗೆ ಮಣಿದು ಯೂ ಟರ್ನ್ ಹೊಡೆದಿವೆ. ಹಾಗಾಗಿ ಬೆಂಗಳೂರು, ಮಂಗಳೂರು ಸೇರಿದಂತೆ ದೇಶದ ಮೂಲೆಮೂಲೆಯಲ್ಲಿ ರೈಲು- ಬಸ್ ನಿಲ್ದಾಣಗಳಲ್ಲಿ ಜಮಾಯಿಸಿದ್ದ ವಲಸೆ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಲಕ್ಷಾಂತರ ಮಂದಿ ನಡೆದುಕೊಂಡೇ ದೂರದ ಬಿಹಾರ, ಉತ್ತರಪ್ರದೇಶ, ಛತ್ತೀಸಗಢ, ಜಾರ್ಖಂಡ್ ನಂತಹ ತಮ್ಮ ತಾಯ್ನಾಡಿನತ್ತ ಹೆಜ್ಜೆ ಹಾಕಿದ್ದಾರೆ. ಹಾಗೆ ಹೋದವರಲ್ಲಿ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ರೈಲು ಹರಿದು 16 ಮಂದಿ ವಲಸಿಗರು ಜೀವ ಕಳೆದುಕೊಂಡ ದಾರುಣ ಘಟನೆ ನಡೆದಿದೆ.

ಹಾಗೆ ನೋಡಿದರೆ, ಈ ಔರಂಗಾಬಾದ್ ಘಟನೆ, ಕರೋನಾ ಕಾಲದಲ್ಲಿ ದೇಶದ ಬಡವರು, ನಿರ್ಗತಿಕರು, ಕಾರ್ಮಿಕರು ಎದುರಿಸುತ್ತಿರುವ ಹೀನಾಯ ಪರಿಸ್ಥಿತಿಯ ರೂಪಕದಂತೆ ಭಾಸವಾಗುತ್ತಿದೆ. ಕೆಲಸ ಕಳೆದುಕೊಂಡು, ಹೊಟ್ಟೆಗೆ ಹಿಟ್ಟಿಲ್ಲದೆ ಒಂದು ಕಡೆ ರೋಗ ಭೀತಿ, ಮತ್ತೊಂದು ಕಡೆ ನಾಳೆಯ ಬದುಕಿನ ಅನಿಶ್ಚಿತತೆಯ ಭೀತಿಯ ನಡುವೆ ಕಾಯಬೇಕಾದ ಸರ್ಕಾರವಾಗಲೀ, ವ್ಯವಸ್ಥೆಯಾಗಲೀ ಕಾಯಲಾರದೆ, ದುಡಿಸಿಕೊಂಡ ಮಾಲೀಕರೂ ಕಣ್ಣೆತ್ತಿ ನೋಡದೆ, ಮಹಲುಗಳ ಕಟ್ಟಿದ ಜನರ ಕಣ್ಣೀರಿಗೆ ತುತ್ತು ಅನ್ನ ನೀಡುವ ಕನಿಷ್ಠ ಮನುಷ್ಯತ್ವವನ್ನೂ ಮರೆತ ಸಮಾಜದ ನಡುವೆ ಅನಾಥರಾಗಿ ರೈಲು ಹಳಿಗಳ ನಡುವೆ ಮಲಗಿದವರ ಮೇಲೆ ಸಾವೆಂಬ ರೈಲು ನಿರ್ದಯವಾಗಿ ಹರಿದುಹೋಗಿದೆ. ನಾಡ ಕಟ್ಟಿದವರ ರಕ್ತ ಕಾಲದ ಕಂಬಿಯ ಮೇಲೆ ಹೆಪ್ಪುಗಟ್ಟಿದೆ.

ಇಂತಹ ಹೀನಾಯ ಸ್ಥಿತಿ ಬಹುಶಃ ಭಾರತೀಯ ದುಡಿವ ಜನರ ದಾಖಲಾಗದ ಚರಿತ್ರೆಯಲ್ಲೇ ಹಿಂದೆಂದೂ ಇರಲಾರದು. ದೇಶದ ಪ್ರಧಾನಿಯಾದವರು ಕಾರ್ಮಿಕರು, ಬಡವರು, ನಿರ್ಗತಿಕರು ಎದುರಿಸುತ್ತಿರುವ ಈ ಸಂಕಷ್ಟಕ್ಕೆ ಬಹುತೇಕ ಕುರುಡಾಗಿರುವ ಹೊತ್ತಿನಲ್ಲಿ, ಉದ್ಯಮ ಲಾಬಿಗಳು ಗರಿಗೆದರಿವೆ. ಕೆಲಸವಿಲ್ಲದೆ ನಾಳೆಯ ದಿನಗಳ ಹಸಿವಿನ ಸಾವುಗಳ ದುಃಸ್ವಪ್ನದಲ್ಲಿ ಬೇಯುತ್ತಿರುವ ಕಾರ್ಮಿಕರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಅವರ ಜೀತಕ್ಕೆ ಹಚ್ಚಲು ಗಡಿಬಿಡಯಲ್ಲಿ ಸಜ್ಜಾಗಿವೆ. ದುಡಿಯುವ ಕೈಗಳಿಗೆ ಕನಿಷ್ಟ ಭದ್ರತೆ ನೀಡುತ್ತಿದ್ದ ಕಾರ್ಮಿಕ ಕಾನೂನುಗಳನ್ನು ಕಿತ್ತು ಹಾಕಲು ದಶಕಗಳಿಂದ ನಡೆಸುತ್ತಿದ್ದ ಲಾಬಿಗೆ ಕರೋನಾ ಸಂಕಷ್ಟ ದೊಡ್ಡ ವರವಾಗಿ ಪರಿಣಮಿಸಿದೆ. ಕಾರ್ಮಿಕರ ಸೇವಾ ಭದ್ರತೆ, ಕೆಲಸದ ಸ್ಥಳದ ಸುರಕ್ಷತೆ, ಸೌಲಭ್ಯ, ದುಡಿಮೆಯ ಅವಧಿ, ಕನಿಷ್ಟ ವೇತನ, ಆರೋಗ್ಯ ಸೌಲಭ್ಯ ಮುಂತಾದ ಕನಿಷ್ಠ ಸೌಲಭ್ಯ ಮತ್ತು ಖಾತ್ರಿಗಳನ್ನು ಕೂಡ ಗಾಳಿಗೆ ತೂರಿ, ಕಾರ್ಮಿಕರನ್ನು ಅಕ್ಷರಶಃ ಜೀತಕ್ಕಿಟ್ಟುಕೊಳ್ಳುವ ಉದ್ಯಮ ಮಾಲೀಕರ ಲಾಬಿಗೆ ಬಹುತೇಕ ರಾಜ್ಯ ಸರ್ಕಾರಗಳು ಜೈ ಎಂದಿವೆ.

ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ, ಗುಜರಾತ್, ಹಿಮಾಚಲಪ್ರದೇಶ, ಪಂಜಾಬ್ ಸೇರಿದಂತೆ ಬಹುತೇಕ ಉತ್ತರಭಾರತದ ರಾಜ್ಯಗಳು ಈಗಾಗಲೇ ಹಲವು ಕಾರ್ಮಿಕ ಕಾನೂನುಗಳನ್ನು, ಉದ್ಯಮ ಸಂಬಂಧಿತ ಕಾಯ್ದೆಗಳನ್ನು ರದ್ದು ಮಾಡಿವೆ. ದಕ್ಷಿಣ ರಾಜ್ಯಗಳಿಂದ ವಾಪಸು ತಮ್ಮ ನೆಲೆಗಳಿಗೆ ಮರಳಿರುವ ಕಾರ್ಮಿಕರು ಮತ್ತು ಮೂಲತಃ ಸ್ಥಳೀಯವಾಗಿ ಲಭ್ಯವಿರುವ ಕಾರ್ಮಿಕರಿಂದಾಗಿ ಕೆಲಸದ ಬೇಡಿಕೆಯಲ್ಲಿ ದಿಢೀರ್ ಹೆಚ್ಚಳವಾಗಿದೆ. ಕೆಲಸವಿಲ್ಲದ ಕಾರ್ಮಿಕರ ಸಂಖ್ಯೆ ಹತ್ತಾರು ಪಟ್ಟು ಹೆಚ್ಚಾಗಿದೆ. ಹಾಗಾಗಿ ಕಾರ್ಮಿಕರ ಈ ಹೆಚ್ಚಳವನ್ನೇ ಗುರಿಯಾಗಿಟ್ಟುಕೊಂಡು ಮಾಲೀಕರಿಗೆ ಅನುಕೂಲಕರ ಕಾನೂನುಗಳನ್ನು ಉಳಿಸಿಕೊಂಡು, ಉಳಿದಂತೆ ಕಾರ್ಮಿಕ ಪರವಾದ ಎಲ್ಲಾ ಕಾನೂನುಗಳನ್ನು ಅಧಿಕೃತವಾಗಿ ರದ್ದು ಮಾಡಲಾಗಿದೆ.

ಒಂದು ಕಡೆ ಕಾರ್ಮಿಕರಿಗೆ ಸಂಬಳ ಕಡಿತ ಮಾಡಬಾರದು, ಕೆಲಸದಿಂದ ತೆಗೆದುಹಾಕಬಾರದು ಎಂಬಂತಹ ಹಲವು ಕಾರ್ಮಿಕ ಪರ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸುವ ಕೇಂದ್ರ ಸರ್ಕಾರ, ಅದೇ ಹೊತ್ತಿಗೆ ತನ್ನದೇ ಬಿಜೆಪಿ ಪಕ್ಷ ಅಧಿಕಾರದಲ್ಲಿರುವ ಉತ್ತರಪ್ರದೇಶ, ಮಧ್ಯಪ್ರದೇಶದಂತಹ ಕಡೆ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಅಧಿಕಾರದಲ್ಲಿರುವ ಪಂಜಾಬ್ ಮತ್ತು ರಾಜಸ್ತಾನದಂತಹ ಕಡೆ ಜಾರಿಗೆ ಬರುತ್ತಿರುವ ಜೀತಪದ್ಥತಿ ಪ್ರೋತ್ಸಾಹಕ ನೀತಿಗಳ ಬಗ್ಗೆ ಜಾಣ ಮೌನ ವಹಿಸಿದೆ.

ಸದಾ ದರ್ಬುಲರ ವಿರೋಧಿ ನೀತಿಗಳಿಂದಲೇ ಸುದ್ದಿಯಲ್ಲಿರುವ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ, ಬಾಲಕಾರ್ಮಿಕ ನಿಷೇಧದಂತಹ ಒಂದೆರಡು ಕಾರ್ಮಿಕ ಪರ ಕಾನೂನು ಹೊರತುಪಡಿಸಿ ಉಳಿದೆಲ್ಲಾ ಕಾರ್ಮಿಕ ಕಾನೂನುಗಳನ್ನೂ ಸಾರಾಸಗಟಾಗಿ ಮೂರು ವರ್ಷಗಳ ಕಾಲ ರದ್ದುಪಡಿಸಿದೆ. ಎಷ್ಟರಮಟ್ಟಿಗೆ ಎಂದರೆ ಅಲ್ಲಿ ಈಗ ಕಾರ್ಮಿಕ ಸಂಘಟನೆಗಳಿಗೆ ಅವಕಾಶವಿಲ್ಲ; ಕಾರ್ಮಿಕರ ಹಿತರಕ್ಷಣೆಗೆ ಯಾವೆಲ್ಲಾ ಕ್ರಮಕೈಗೊಳ್ಳಲಾಗಿದೆ? ಅವರಿಗೆ ಸಂಬಳ ನೀಡಲಾಗುತ್ತಿದೆಯೇ? ಇಲ್ಲವೆ? ಅವರನ್ನು ಎಷ್ಟು ಗಂಟೆ ದುಡಿಸಿಕೊಳ್ಳಲಾಗುತ್ತಿದೆ? ಕೆಲಸದ ಸ್ಥಳದ ಸ್ಥಿತಿಗತಿ ಹೇಗಿದೆ ಎಂದು ನೋಡಲು ಕೂಡ ಯಾವುದೇ ಅಧಿಕಾರಿ, ಪ್ರಾಧಿಕಾರಗಳಿಗೆ ಹಕ್ಕು ಇಲ್ಲ! ಜೊತೆಗೆ ಕಾರ್ಮಿಕರ ದಿನದ ಕನಿಷ್ಟ ದುಡಿಮೆಯ ಅವಧಿಯನ್ನು 8ರಿಂದ 12 ಗಂಟೆಗೆ ಹೆಚ್ಚಿಸಲಾಗಿದೆ!

ಅದೇ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಅವರ ಸರ್ಕಾರ ಇರುವ ಮಧ್ಯಪ್ರದೇಶದಲ್ಲಿ ಕೂಡ ಬಹುತೇಕ ಉತ್ತರಪ್ರದೇಶದ ಮಾದರಿಯನ್ನೇ ಅನುಸರಿಸಲಾಗಿದೆ. ಅಲ್ಲಿಯೂ ಕಾರ್ಮಿಕರ ದುಡಿಮೆಯ ಅವಧಿಯನ್ನು 8ರಿಂದ 12 ಗಂಟೆಗೆ ಹೆಚ್ಚಿಸಲಾಗಿದೆ. ಜೊತೆಗೆ ವಾರದ ರಜೆ, ಊಟ-ತಿಂಡಿಯ ಬಿಡುವು, ಕುಡಿಯುವ ನೀರು, ಶೌಚಾಲಯ, ಗಾಳಿ-ಬೆಳಕಿನ ವ್ಯವಸ್ಥೆ ಸೇರಿದಂತೆ ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ಒದಗಿಸಬೇಕಾದ ಸೌಲಭ್ಯಗಳಿಂದ ವಿನಾಯ್ತಿ ನೀಡಲಾಗಿದೆ. ಕಾರ್ಮಿಕರ ಸ್ಥಿತಿಗತಿ ಬಗ್ಗ್ಎ ತಿಳಿಯಲು ದಿಢೀರ್ ದಾಳಿ ನಡೆಸುವ, ಪರಿಶೀಲನೆ ನಡೆಸುವ ಕಾರ್ಮಿಕ ಅಧಿಕಾರಿಗಳು, ಸಂಘಟನೆಗಳು ಅಧಿಕಾರವನ್ನೂ ರದ್ದುಪಡಿಸಲಾಗಿದೆ. ಕಾರ್ಮಿಕರ ವಿರುದ್ಧ ಮಾಲೀಕರು ಯಾವುದೇ ಕ್ರಮಕೈಗೊಂಡರೂ ಅದನ್ನು ಕಾರ್ಮಿಕ ನ್ಯಾಯಾಲಯ ಅಥವಾ ಇಲಾಖೆಗಳು ಪ್ರಶ್ನಿಸುವಂತಿಲ್ಲ!

ರಾಜಸ್ತಾನದ ಅಶೋಕ್ ಗೆಲ್ಹೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೂಡ ಕಾರ್ಮಿಕ ವಿರೋಧಿ ನೀತಿಯಲ್ಲಿ ಹಿಂದೆ ಬಿದ್ದಿಲ್ಲ. ಅಲ್ಲಿಯೂ ಕನಿಷ್ಟ ದಿನದ ದುಡಿಮೆಯ ಅವಧಿಯನ್ನು 8ರಿಂದ 12ತಾಸಿಗೆ ಏರಿಸಲಾಗಿದೆ ಮತ್ತು ಕಾರ್ಮಿಕ ಸಂಘಟನೆ ರಚನೆಗೆ ಅಗತ್ಯ ಕಾರ್ಮಿಕ ಸದಸ್ಯರ ಶೇಕಡವಾರು ಪ್ರಮಾಣವನ್ನು ಹೆಚ್ಚಿಲಾಗಿದೆ. ಲೇಆಫ್ ನಿಯಮ ಸಡಿಸಲಾಗಿದೆ. ಆ ಮೂಲಕ ಕಾರ್ಮಿಕರನ್ನು ಜೀತಕ್ಕಿಟ್ಟುಕೊಳ್ಳಲು ಮಾಲೀಕರಿಗೆ ಬೇಕಾದ ಅನುಕೂಲಗಳನ್ನು ಮಾಡಿಕೊಡಲಾಗಿದೆ.

ಪಂಜಾಬ್, ಹಿಮಾಚಲಪ್ರದೇಶ, ಗುಜರಾತಿನಲ್ಲಿ ಕೂಡ ಪರಿಸ್ಥಿತಿ ತೀರಾ ಭಿನ್ನವಾಗಿಲ್ಲ. ಕಾರ್ಮಿಕರ ಕನಿಷ್ಟ ದಿನದ ದುಡಿಮೆಯ ಅವಧಿಯನ್ನು ಎಲ್ಲಾ ಕಡೆ ಈ ಹಿಂದಿನ 8ಗಂಟೆಯಿಂದ 12 ಗಂಟೆಗೆ ಹೆಚ್ಚಿಲಾಗಿದೆ. ಸೌಲಭ್ಯ, ಹಕ್ಕುಗಳ ವಿಷಯದಲ್ಲಿ ಬಹುತೇಕ ಕಾನೂನುಗಳಲ್ಲಿ ಮೂರು ತಿಂಗಳ ಕಾಲ ರದ್ದು ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಕೂಡ ಉದ್ದಿಮೆಗಳ ಮಾಲೀಕರಿಗೆ ಕಾರ್ಮಿಕರ ವಿಷಯದಲ್ಲಿ ಹಲವು ರಿಯಾಯ್ತಿಗಳನ್ನು ನೀಡಲಾಗಿದೆ.

ಉದ್ದಿಮೆದಾರರಿಗೆ ಮತ್ತು ಉದ್ಯಮ ವಲಯಕ್ಕೆ ಲಾಕ್ ಡೌನ್ ನಿಂದಾಗಿ ಆಗಿರುವ ಭಾರೀ ನಷ್ಟದ ಹಿನ್ನೆಲೆಯಲ್ಲಿ ಕಾರ್ಮಿಕರ ದುಡಿಮೆಯ ಅವಧಿಯನ್ನು ಹೆಚ್ಚಿಸುವಂತೆ ಮತ್ತು ಕಾರ್ಮಿಕ ಪರ ಕಾನೂನುಗಳನ್ನು ಸಡಿಲಿಕೆ ಮಾಡುವಂತೆ ಉದ್ಯಮಿಗಳ ಕಡೆಯಿಂದ ಒತ್ತಡವಿತ್ತು. ರಾಜ್ಯದ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಮತ್ತು ಚೇತರಿಕೆ ನೀಡಲು ಅವರ ಅಂತಹ ಬೇಡಿಕೆಗೆ ಅನುಗುಣವಾಗಿ ಕಾರ್ಮಿಕ ಕಾನೂನುಗಳನ್ನು ಬದಲಾಯಿಸುವುದು ಅನಿವಾರ್ಯವಿತ್ತು ಎಂದು ಮಧ್ಯಪ್ರದೇಶ ಸಿಎಂ ಚೌಹಾಣ್ ಹೇಳಿದ್ದಾರೆ ಎಂದು ವರದಿಯಾಗಿದೆ.

ಅಂದರೆ; ದೇಶದ ಆರ್ಥಿಕತೆಯ ಎಂಜಿನ್ ಆಗಿ ದುಡಿಯುವ ಬಹುಸಂಖ್ಯಾತ ಕಾರ್ಮಿಕ ವರ್ಗದ ಕನಿಷ್ಠ ಹಿತಾಸಕ್ತಿಯನ್ನು ಬಲಿಕೊಟ್ಟು, ಬಂಡವಾಳಶಾಹಿಗಳ ಹಿತ ಕಾಯುವುದು ಈಗಿನ ಸರ್ಕಾರಗಳ ಆದ್ಯತೆ ಎಂಬುದು ಮತ್ತೆ ಸಾಬೀತಾಗಿದೆ. ಕೇವಲ ನಾಲ್ಕು ತಾಸು ಸಮಯಾವಕಾಶ ನೀಡಿ ದಿಢೀರ್ ಲಾಕ್ ಡೌನ್ ಹೇರುವಾಗ ದೇಶದ ಜನರ ರಕ್ಷಣೆಯ ಚೌಕಿದಾರ ತಾನೆಂದು ಹೇಳಿದ ಪ್ರಧಾನಿ ಮೋದಿಯವರಿಗೆ ಕೂಡ ದೇಶದ ದುಡಿಯುವ ಜನರು ಕಾಣಿಸಲಿಲ್ಲ. ಅವರು ಎದುರಿಸಬಹುದಾದ ಭೀಕರ ಸಂಕಷ್ಟದ ಚಿತ್ರಣ ಮೂಡಲಿಲ್ಲ. ಬಳಿಕ ಸುಮಾರು 45 ದಿನಗಳ ಕಾಲ ಆ ಕಾರ್ಮಿಕರು ಹೊತ್ತಿನ ಊಟಕ್ಕೆ ಗತಿಯಿಲ್ಲದೆ ಬೀದಿಗೆ ಬಿದ್ದಾಗ ಅವರ ದುಡಿಮೆಯಲ್ಲಿ ಸಂಪತ್ತು ಕ್ರೋಡೀಕರಿಸಿದ ಮಾಲೀಕರಿಗೂ ಅವರು ನೆನಪಾಗಲಿಲ್ಲ. ಇದೀಗ ನೆಲಕಚ್ಚಿರುವ ಆರ್ಥಿಕತೆಯನ್ನು ಮೇಲೆತ್ತುವ ಮಾತುಗಳನ್ನು ಆಡುತ್ತಿರುವ ರಾಜ್ಯ ಸರ್ಕಾರಗಳಿಗೂ ಆರ್ಥಿಕತೆಯ ಚಕ್ರಗಳಾದ ಕಾರ್ಮಿಕರ ಹಿತಕ್ಕಿಂತ ಮಾಲೀಕರೇ ಮುಖ್ಯವಾಗಿದ್ದಾರೆ.

ಅಂದರೆ; ಭಾರತ ದಶಕಗಳಿಂದ ಹೊಂಚುತ್ತಿದ್ದ ದುಡಿಯುವ ಜನರನ್ನು ಉಳ್ಳವರ ಅಡಿಯಾಳು ಮಾಡುವ ಹುನ್ನಾರಕ್ಕೆ ಕರೋನಾ ಸೋಂಕು ದೊಡ್ಡ ಅವಕಾಶ ಒದಗಿಸಿಕೊಟ್ಟಿದೆ. ಜನಕಲ್ಯಾಣ ರಾಜ್ಯದ(ವೆಲ್ ಫೇರ್ ಸ್ಟೇಟ್) ಕನಸುಗಳನ್ನು ಕುಟ್ಟಿಪುಡಿಗಟ್ಟಿ ಬಂಡವಾಳಶಾಹಿ, ಕಾರ್ಪರೇಟ್ ಪ್ರಭುತ್ವವಾಗಿ ದೇಶವನ್ನು ಬದಲಾಯಿಸಲು ಕೋವಿಡ್-19 ಸುವರ್ಣಾವಕಾಶವಾಗಿ ಒದಗಿಬಂದಿದೆ. ಜನರ ಅಸಹಾಕತೆಯ ಮೇಲೆ ಉದ್ಯಮಿಗಳ ಬಂಡವಾಳ ಕೊಬ್ಬಿಸಲು ಪ್ರಭುತ್ವಗಳೇ ಟೊಂಕಕಟ್ಟಿ ನಿಂತಿವೆ. ಹಾಗಾಗಿ ದುಡಿಯುವ ಜನರ ಹೊಟ್ಟೆಯ ಮೇಲೆ ನಿಷ್ಕರುಣೆಯ, ಅನ್ಯಾಯದ, ದಬ್ಬಾಳಿಕೆಯ ರೈಲು ಗಾಡಿ ಹಾಯುವುದು ಇನ್ನು ಆಘಾತಕಾರಿಯೇನಲ್ಲ!

Click here Support Free Press and Independent Journalism

Pratidhvani
www.pratidhvani.com