ಪತ್ರಕರ್ತನೊಬ್ಬನ ದೊಡ್ಡ ಶಕ್ತಿಯೇ ಆತನ ನೈತಿಕ ಸ್ಥೈರ್ಯ
ಅಭಿಮತ

ಪತ್ರಕರ್ತನೊಬ್ಬನ ದೊಡ್ಡ ಶಕ್ತಿಯೇ ಆತನ ನೈತಿಕ ಸ್ಥೈರ್ಯ

ಕರೋನಾದಂತಹ ಮಹಾಮಾರಿ ಕೂಡ ಭಾರತೀಯ ಪತ್ರಿಕೋದ್ಯಮ ತಲುಪಿರುವ ಅಧೋಗತಿಯ ದರ್ಶನ ಮಾಡಿಸಿದೆ. ಈ ಹೊತ್ತಲ್ಲಿ, ಪತ್ರಕರ್ತ ಮತ್ತು ಪತ್ರಿಕಾವೃತ್ತಿ ಕುರಿತ ‘ದ ಕ್ಯಾರವಾನ್’ ಪ್ರಕಟಿಸಿರುವ ವಿನೋದ್ ಕೆ ಜೋಸ್ ಅವರ ಲೇಖನ ಸರಣಿಯ ಆಯ್ದ ಭಾಗದ ಎರಡನೇ ಲೇಖನ ಇಲ್ಲಿದೆ.

ಶಶಿ ಸಂಪಳ್ಳಿ

ಶಶಿ ಸಂಪಳ್ಳಿ

ಪತ್ರಕರ್ತರಾಗುವುದೆಂದರೆ, ಒಬ್ಬ ಕಲಾವಿದೆ, ಒಬ್ಬ ಚಿಂತಕ, ಒಬ್ಬ ಸಾಹಿತಿ ಅಥವಾ ಸಾರ್ವಜನಿಕ ಹಿತಾಸಕ್ತಿಯ ವಕೀಲರಷ್ಟೇ ಸಾಮಾಜಿಕ ಹೊಣೆಗಾರಿಕೆಗೆ ಹೆಗಲಾಗುವುದು. ಹಾಗಾಗಿ ಪತ್ರಕರ್ತ ಉದ್ಯಮಿಯಲ್ಲ; ದಲ್ಲಾಳಿಯಲ್ಲ; ವ್ಯಾಪಾರಿಯಲ್ಲ, ರಾಜಕಾರಣಿಯಲ್ಲ. ಲಾಭನಷ್ಟದ ಮೇಲೆ ಕಣ್ಣಿಟ್ಟು ಕೆಲಸ ಮಾಡುವ ವೃತ್ತಿ ಪತ್ರಕರ್ತನದ್ದಲ್ಲ.

ಸುದ್ದಿ ಗ್ರಹಿಕೆ ಮನಸ್ಥಿತಿ ಎಂಬುದು ಪತ್ರಕರ್ತನಲ್ಲಿ ಮಾತ್ರವೇ ಇರುವ ಸಂಗತಿಯೇನಲ್ಲ. ಪ್ರತಿಯೊಬ್ಬರಿಗೂ ಆ ಕುರಿತ ಒಂದು ಮಟ್ಟದ ಗ್ರಹಿಕೆ ಇದ್ದೇ ಇರುತ್ತದೆ. ಸುದ್ದಿ ಸಂಸ್ಥೆಯಲ್ಲಿ ಕೂಡ ಪ್ರತಿಯೊಬ್ಬರಿಗೂ, ಯಾವುದು ಸುದ್ದಿ, ಯಾವುದು ಸುದ್ದಿ ಅಲ್ಲ ಎಂಬ ಬಗ್ಗೆ ತಮ್ಮದೇ ಆದ ಗ್ರಹಿಕೆಗಳಿರುತ್ತವೆ. ಮಾಲೀಕರಿಗೆ, ಲಾಭದ ಉದ್ದೇಶದಿಂದ ಹಣ ಹೂಡಿರುವುದರಿಂದ ತನ್ನದೇ ಆದ ಸುದ್ದಿಗ್ರಹಿಕೆ ಇರುತ್ತದೆ. ತೈಲವ್ಯಾಪಾರಿ, ಟೆಲಿಕಾಂ ಉದ್ಯಮಿ, ಸಿಮೆಂಟ್ ವ್ಯಾಪಾರಿ, ಗಣಿ ಧಣಿ, ಲೇವಾದೇವಿಗಾರ, ರಕ್ಷಣಾಸಾಮಗ್ರಿ ದಲ್ಲಾಳಿ, ರಾಜಕಾರಣಿಗಳು ಇಂದು, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಆಧುನಿಕ ಮಾಧ್ಯಮಗಳ ಮಾಲೀಕರು. ಈ ಜನಗಳು ತಮ್ಮ ಮುಖ್ಯ ವ್ಯವಹಾರಗಳ ಲಾಭದ ಹಣವನ್ನು ಮಾಧ್ಯಮ ವಿಭಾಗಗಳಿಗೆ ಹಾಯಿಸುತ್ತಾರೆ ಅಥವಾ ತಮ್ಮ ಕೋಟ್ಯಂತರ ರೂ. ವ್ಯವಹಾರದ ಲಾಭವನ್ನು ಹತ್ತಾರು ಪಟ್ಟು ಬೆಳೆಸಲು ಮಾಧ್ಯಮವನ್ನು ಬಳಸಿಕೊಳ್ಳುತ್ತಾರೆ.

ಅಂತಹ ವ್ಯಕ್ತಿಗಳಿಗೆ ಯಾವುದೇ ಸಾರ್ವಜನಿಕ ಒಳಿತಿನ ಗೊತ್ತುಗುರಿಗಳಿರುವುದಿಲ್ಲ. ಮಾಧ್ಯಮವೆಂಬ ಕಾರಣಕ್ಕೆ ಸಾರ್ವಜನಿಕ ಹೊಣೆಗಾರಿಕೆ ಎಂಬುದನ್ನು ದಾಳವಾಗಿ ಬಳಸಿಕೊಂಡರೂ ಆತನ ಉದ್ಯಮ, ಆತನ ಹಣಕಾಸು ಮತ್ತು ರಾಜಕೀಯ ಆತಂಕಗಳು, ಉದ್ಯಮದ ಏರಿಳಿತಗಳೇ ಅಂತಿಮವಾಗಿ ಆತನ ಹಿತಾಸಕ್ತಿಗಳಾಗಿರುತ್ತವೆ. ಈ ಹಿನ್ನೆಲೆಯಲ್ಲೇ ಜೋಸೆಫ್ ಪುಲಿಟ್ಜರ್ ವೃತ್ತಿಪರ ತರಬೇತಿ ಪಡೆದ ಪತ್ರಕರ್ತರ ಬಗ್ಗೆ ಹೆಚ್ಚಿನ ಭರವಸೆ ಹೊಂದಿದ್ದರು. ಆದರೆ, ಅವರ ಅಂತಹ ನಿರೀಕ್ಷೆ ಸುಳ್ಳು ಎಂಬುದನ್ನು ಕಾಲ ಇದೀಗ ತೋರಿಸಿಕೊಟ್ಟಿದೆ.

1904ರಲ್ಲಿ ಪುಲಿಟ್ಜರ್, ವೃತ್ತಿಪರವಾಗಿ ತರಬೇತಿ ಹೊಂದಿದ ಪತ್ರಕರ್ತರು ತಮ್ಮ ವೃತ್ತಿಬದ್ಧತೆಗೆ ಅಂಟಿಕೊಂಡಿರುತ್ತಾರೆ ಮತ್ತು ಆ ವೃತ್ತಿಬದ್ಧತೆಯನ್ನು ಸಮಾಜದ ಒಳಿತಿಗಾಗಿ ಬಳಸುತ್ತಾರೆ ಎಂದಿದ್ದರು. ಏಕೆಂದರೆ, ಭಾರತದಲ್ಲಿ ನಮ್ಮ ತೈಲವ್ಯಾಪಾರಿ, ಟೆಲಿಕಾಂ ಉದ್ಯಮಿ, ಸಿಮೆಂಟ್ ವ್ಯಾಪಾರಿ, ಗಣಿ ಧಣಿ, ಲೇವಾದೇವಿಗಾರ, ರಕ್ಷಣಾಸಾಮಗ್ರಿ ದಲ್ಲಾಳಿಗಳು ಹೀಗೆ ವೃತ್ತಿಪರ ತರಬೇತಿ ಹೊಂದಿದ ಪತ್ರಕರ್ತರನ್ನೆಲ್ಲಾ ಕಸದ ಬುಟ್ಟಿಗೆ ಎಸೆದಿದ್ದಾರೆ. ಅವರ ವೃತ್ತಿಪರ ಆಕ್ಷೇಪಗಳನ್ನು ಮೂಲೆಗೊತ್ತಿದ್ದಾರೆ. ಆದಾಗ್ಯೂ ಅವರ ಸಂಸ್ಥೆಗಳಿಗೆ ಸೇರಲು ತುದಿಗಾಲಲ್ಲಿ ನಿಂತಿರುವ ವೃತ್ತಿಪರ ತರಬೇತಿ ಹೊಂದಿದ ಪತ್ರಕರ್ತರ ಸಂಖ್ಯೆ ಏರುತ್ತಲೇ ಇದೆ. ಅವರ ಸ್ವ ಹಿತಾಸಕ್ತಿಯ ಮಾಧ್ಯಮಗಳನ್ನು(ಪತ್ರಿಕೆ ಮತ್ತು ಟಿವಿ ವಾಹಿನಿ) ನಡೆಸಲು ಹಿಂಜರಿಯದೆ ಮುಂದುವರಿಯುವ ಪತ್ರಕರ್ತರ ಸಂಖ್ಯೆ ಸಾಕಷ್ಟಿದೆ. ಹಾಗಾಗಿ ಸುದ್ದಿ ಗ್ರಹಿಕೆ ಎಂಬುದನ್ನು ಹೇಗೆ ಬೆಳೆಸಬಹುದು ಮತ್ತು ಹೇಗೆ ವ್ಯಾಪಾರಿ ಸರಕಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಈ ಬೆಳವಣಿಗೆ ನಿದರ್ಶನ.

ಪತ್ರಕರ್ತನಿಗೆ ಇರಬೇಕಾದ ಎರಡನೇ ಅಂಶ ಖಚಿತ ತೀರ್ಮಾನ ಕೈಗೊಳ್ಳುವ ಶಕ್ತಿ; ಅಂದರೆ ವಿವೇಚನಾ ಶಕ್ತಿ. ಇದು ಪತ್ರಕರ್ತನ ಸುದ್ದಿಗ್ರಹಿಕೆ ಮತ್ತು ಆತನ ನೈತಿಕ ಸ್ಥೈರ್ಯದ ನಡುವೆ ಇರುವಂತಹದ್ದು.

ಕೊಲಂಬಿಯಾ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗ ಆರಂಭಿಸಲು ಮುಂದಾದಾಗ ಜೋಸೆಫ್ ಪುಲಿಟ್ಜರ್ ದೊಡ್ಡ ಮೊತ್ತದ ದೇಣಿಗೆ ನೀಡಿದ- ಒಂದು ಶತಮಾನದ ಬಳಿಕ ಅದೇ ಸಂಸ್ಥೆಯಲ್ಲಿ ಅಧ್ಯಯನ ಮಾಡುವ ಅವಕಾಶ ನನ್ನದಾಗಿತ್ತು. ಆದರೆ, ಪುಲಿಟ್ಜರ್ ದೇಣಿಗೆ ನೀಡುವಾಗ ಹಲವರು, ಪತ್ರಿಕಾವೃತ್ತಿಯನ್ನು ಅಧ್ಯಯನ ಮಾಡುವ ಅಗತ್ಯವೇನಿದೆ? ಎಂದು ಪ್ರಶ್ನಿಸಿದರು, ಸವಾಲೆಸೆದರು. ಆದರೆ, ಪುಲಿಟ್ಜರ್ ನಂಬಿಕೆ ಬೇರೆಯೇ ಆಗಿತ್ತು. ಪತ್ರಿಕಾವೃತ್ತಿಯನ್ನು ಒಂದು ಅಧ್ಯಯನ ವಿಷಯವಾಗಿ ಕಲಿಯುವುದರಿಂದ ವಿವೇಚನಾ ಶಕ್ತಿ, ನೈತಿಕ ಸ್ಥೈರ್ಯ ಮತ್ತು ತರಬೇತಿ ಮತ್ತು ಅನುಭವದ ವಿಷಯದಲ್ಲಿ ಪತ್ರಕರ್ತನಿಗೆ ಸ್ಪಷ್ಟತೆ ಮೂಡುತ್ತದೆ ಎಂಬುದು ಅವರ ವಿಶ್ವಾಸವಾಗಿತ್ತು. ಅದೇ ವಿಶ್ವಾಸದಲ್ಲೇ ಅವರು ಕೊಲಂಬಿಯಾ ಜರ್ನಲಿಸಂ ಸ್ಕೂಲ್ ಕಟ್ಟಿದರು.

ಒಂದು ಘಟನೆ- ವಿಷಯದ ಕುರಿತು ಅದು ಸುದ್ದಿಯೇ? ಅಲ್ಲವೇ? ಎಂಬುದನ್ನು ನಿರ್ಧರಿಸಲು ಪತ್ರಕರ್ತರಿಗೆ ಅಗತ್ಯವಾಗಿ ಬೇಕಾಗಿರುವುದು ಸುದ್ದಿ ಕುರಿತ ನಿಖರ ತೀರ್ಮಾನ ಕೈಗೊಳ್ಳುವ ವಿವೇಚನೆ. ಈ ವಿವೇಚನಾಶಕ್ತಿ ದಕ್ಕಿದ ಮೇಲೆ ಪತ್ರಕರ್ತ ತನ್ನ ಇಡೀ ವ್ಯಕ್ತಿತ್ವವನ್ನೇ ಅದಕ್ಕೆ ಮೀಸಲಿಡುತ್ತಾನೆ. ಹೀಗೆ ತನ್ನ ವ್ಯಕ್ತಿತ್ವವನ್ನೇ ಧಾರೆ ಎರೆದು ಪತ್ರಕರ್ತ ತನ್ನ ವಿವೇಚನೆಯ ಮೇಲೆ ಒಂದು ವರದಿಯನ್ನು ಸಿದ್ಧಪಡಿಸಿದರೆ, ಪತ್ರಿಕಾ ಕಾರ್ಯಾಲಯದ ಮಾಹಿತಿ ಪರಿಶೀಲನೆ, ಸಂಪಾದನೆ, ಕಾನೂನು ಸಲಹೆಯಂತಹ ಎಲ್ಲಾ ಪ್ರಕ್ರಿಯೆಗಳ ಬಳಿಕವೂ ಆ ವರದಿಯನ್ನು ಭೂಮಿ ಮೇಲಿನ ಯಾವ ಶಕ್ತಿಯೂ ತಡೆಯಲಾಗದು. ಆ ಮೂಲಕ ಪತ್ರಕರ್ತ ತನ್ನ ಸಾರ್ವಜನಿಕ ಹೊಣೆಗಾರಿಕೆಯನ್ನು ಕೂಡ ನಿಭಾಯಿಸಿದಂತೆಯೇ. ಅಂತಿಮವಾಗಿ ವರದಿ ಪ್ರಕಟವಾಗಲೇಬೇಕು. ಅದು ಆ ಪತ್ರಕರ್ತನ ವಿವೇಚನಾಶಕ್ತಿಯ ಸಾಮರ್ಥ್ಯ. ಇಂತಹ ಸುದ್ದಿಯ ಕುರಿತ ವಿವೇಚನೆಯನ್ನು ರೂಢಿಸಿಕೊಳ್ಳಬೇಕಾಗುತ್ತದೆ ಮತ್ತು ಬೆಳೆಸಬೇಕಾಗುತ್ತದೆ.

ಈ ವಿವೇಚನಾ ಶಕ್ತಿಯೇ ಪತ್ರಕರ್ತನಿಗೆ ನೈತಿಕ ಸ್ಥೈರ್ಯವನ್ನೂ ಕೊಡುತ್ತದೆ. ನೈತಿಕ ಸ್ಥೈರ್ಯವಿಲ್ಲದ ಪತ್ರಕರ್ತ-ವರದಿಗಾರನಿರಲಿ, ಸಂಪಾದಕನಿರಲಿ- ವ್ಯರ್ಥ. ವ್ಯಕ್ತಿಯ ನೈತಿಕ ಸ್ಥೈರ್ಯದ ವಿಷಯದಲ್ಲಿ ಆತ ಹುಟ್ಟಿಬೆಳೆದ ಪರಿಸರ ಮತ್ತು ಸಾಮಾಜಿಕ ವಾತಾವರಣ ಹೆಚ್ಚು ಪ್ರಭಾವ ಬೀರುತ್ತದೆ ಎಂಬುದು ಕೆಲವು ಚಿಂತಕರ ಅಭಿಪ್ರಾಯ. ಪತ್ರಿಕಾವೃತ್ತಿ ಕೂಡ ಸಂಸ್ಕೃತಿಯ ಭಾಗವೇ ಆದ್ದರಿಂದ ಈ ಅಭಿಪ್ರಾಯದಿಂದ ಅದು ಕೂಡ ಹೊರತಲ್ಲ. ಕೆಲವು ದೇಶಗಳಲ್ಲಿ ಅಧಿಕಾರದಲ್ಲಿರುವ ಎಲ್ಲರನ್ನು ಪ್ರಶ್ನಿಸುವುದು ಪತ್ರಿಕಾವೃತ್ತಿಯ ಸರಿಯಾದ ಮಾರ್ಗ. ಇನ್ನೂ ಕೆಲವು ದೇಶಗಳಲ್ಲಿ ಅಧಿಕಾರದಲ್ಲಿರುವ ಯಾರನ್ನೂ ಪ್ರಶ್ನಿಸಲು ಪತ್ರಕರ್ತರಿಗೆ ಅವಕಾಶವಿಲ್ಲ. ಮತ್ತೆ ಕೆಲವು ಕಡೆ ಕೆಲವು ಹಿತಾಸಕ್ತ ಗುಂಪುಗಳನ್ನು ಹೊರತುಪಡಿಸಿ ಉಳಿದವರನ್ನು ಪ್ರಶ್ನಿಸಬಹುದು. ಇದು ಆಯಾ ದೇಶಗಳಲ್ಲಿ ಇರುವ ರಾಜಕೀಯ ವ್ಯವಸ್ಥೆಯ ಮಾದರಿ ಪ್ರತಿಫಲ ಮತ್ತು ಅಲ್ಲಿನ ಪತ್ರಕರ್ತರು ಎಷ್ಟರಮಟ್ಟಿಗೆ ನೈತಿಕ ಸ್ಥೈರ್ಯ ಹೊಂದಿದ್ದಾರೆ ಎಂಬುದರ ಮೇಲೆಯೂ ಅವಲಂಬಿತ ಸಂಗತಿ.

ಆದರೆ, ಇದು ಸರಿಯಲ್ಲ. ಜಗತ್ತಿನ ಕೆಲವು ದೇಶಗಳಲ್ಲಿ ಅಧಿಕಾರದಲ್ಲಿರುವ ಯಾರನ್ನು ಬೇಕಾದರೂ ಪ್ರಶ್ನಿಸಬಹುದು, ಆದರೆ ಕೆಲವು ಕಡೆ ಅಂತಹ ಯಾರನ್ನೂ ಪ್ರಶ್ನಿಸುವಂತಿಲ್ಲ ಎಂಬ ವ್ಯವಸ್ಥೆ ಸರಿಯಲ್ಲ.

ಈ ವೃತ್ತಿಯ ಮಾನದಂಡಗಳನ್ನು ನಿಗದಿ ಮಾಡಿದ ಮೇರು ವ್ಯಕ್ತಿತ್ವಗಳು ಈ ಬಗ್ಗೆ ಏನು ಹೇಳಿದ್ದಾರೆ ಎಂದು ಗಮನಿಸಿದರೆ, ನಾವು ಮತ್ತೆ ಪುಲಿಟ್ಜರ್ ಮಾತುಗಳನ್ನೇ ನೋಡಬೇಕಾಗುತ್ತದೆ.

ಮಾಹಿತಿ, ಜ್ಞಾನ, ಸುದ್ದಿ, ಸುದ್ದಿ ಶೋಧಿಸುವ ಜಾಣ್ಮೆಗಳನ್ನೆಲ್ಲಾ ಮೀರಿ, ಅಂತಿಮವಾಗಿ ಒಂದು ಪತ್ರಿಕೆಯ ಆತ್ಮ ಮತ್ತು ಚೈತನ್ಯ ನಿಂತಿರುವುದು ಅದರ ನೈತಿಕ ಪ್ರಜ್ಞೆಯ ಮೇಲೆ, ಅದರ ನೈತಿಕ ಸ್ಥೈರ್ಯದ ಮೇಲೆ, ಅದರ ವಿಶ್ವಾಸಾರ್ಹತೆಯ ಮೇಲೆ, ಅದು ಮಾನವೀಯತೆಯ ಮೇಲೆ, ಶೋಷಿತರ ಪರ ಅದರ ಅನುಕಂಪದ ಮೇಲೆ, ಅದರ ಸ್ವಾತಂತ್ರ್ಯದ ಮೇಲೆ, ಸಾರ್ವಜನಿಕ ಹಿತದ ಕುರಿತ ಅದರ ಬದ್ಧತೆಯ ಮೇಲೆ, ಸಾರ್ವಜನಿಕ ಸೇವೆಯ ಕುರಿತ ಅದರ ಕಾಳಜಿಯ ಮೇಲೆ ಎಂಬ ಪುಲಿಟ್ಜರ್ ಮಾತುಗಳಲ್ಲಿ, ಪ್ರತಿ ಶಬ್ದವೂ ಸತ್ಯವೇ.

ಆದರೆ, ಈ ಹೊತ್ತಿನ ಭಾರತದಲ್ಲಿ; ಅಧಿಕಾರ ಸ್ಥಾನದಲ್ಲಿರುವ ಮಂದಿ, ಪತ್ರಿಕೋದ್ಯಮ ಎಂಬುದು ಈ ನೈತಿಕ ಸ್ಥೈರ್ಯದಿಂದ ಸಂಪೂರ್ಣ ಹೊರತಾಗಿ ಇರಬೇಕೆಂದೇ ಬಯಸುತ್ತಾರೆ. ನಾನು ಯಾವುದೇ ಒಂದು ಪಕ್ಷ ಅಥವಾ ಸಿದ್ಧಾಂತದ ಜನರ ಬಗ್ಗೆ ಮಾತನಾಡುತ್ತಿಲ್ಲ, ಅಥವಾ ಯಾವುದೇ ಕಾರ್ಪೊರೇಟ್ ಕುಳದ ಬಗ್ಗೆಯೂ ಮಾತನಾಡುತ್ತಿಲ್ಲ, ಅಥವಾ ಅವರ ಲಾಬಿಕೋರರ- ಇವರುಗಳು ಹಲವು ಬಾರಿ ಈ ವಿಷಯದಲ್ಲಿ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದರೂ ಕೂಡ- ಬಗ್ಗೆಯೂ ಮಾತನಾಡುತ್ತಿಲ್ಲ. ಬಹಳ ಉದಾರವಾದಿಗಳು ಎಂದುಕೊಂಡವರು ಕೂಡ, ಅವರಲ್ಲಿ ಹಲವರು ಬುದ್ದಿಜೀವಿಗಳೂ ಇದ್ದಾರೆ; ನನಗೆ ವೈಯಕ್ತಿಕ ಕರೆ ಮಾಡಿ ಉಪದೇಶ ನೀಡುವ ವರಸೆಯಲ್ಲಿ, ನಮ್ಮ ವರದಿಗಾರರು ದೊಡ್ಡ ಮಟ್ಟದ ನೈತಿಕ ಸ್ಥೈರ್ಯದೊಂದಿಗೆ ಸಿದ್ಧಪಡಿಸಿದ ವರದಿಗಳ ವಿಷಯದಲ್ಲಿ ಬುದ್ಧಿವಾದ ಹೇಳುವ ಪ್ರಯತ್ನ ಮಾಡಿದ್ದಾರೆ. ಆ ವರದಿಗಳು ವಿಶೇಷವಾಗಿ ರಾಜಕಾರಣ, ಕಾರ್ಪೊರೇಟ್ ಲಾಬಿ ಮತ್ತು ಮಾಧ್ಯಮ ಲಾಬಿಗಳ ಕುರಿತೇ ಆಗಿದ್ದವು ಎಂಬುದು ವಿಶೇಷ. ಅದರಲ್ಲೂ ಸಾರ್ವಜನಿಕ ಕಣ್ಣಲ್ಲಿ ಗಣ್ಯರೆನಿಸಿಕೊಂಡವರ ನಿಜ ಬಣ್ಣ ಬಯಲು ಮಾಡುವ ವರದಿಗಳ ವಿಷಯದಲ್ಲಿ ಇಂತಹ ಉಪದೇಶಗಳು ಹೆಚ್ಚು. ನೀವು ಅಂಥ ಗಣ್ಯರಿಗೆ ಕೇಳಲೇಬೇಕಾದ ಪ್ರಶ್ನೆಯನ್ನೇ ಕೇಳಿದ್ದರೂ, ಅವರ ಹಿತಾಸಕ್ತಿ ಸಂಘರ್ಷದ ಬಗ್ಗೆ ಸಕಾರಣ ವರದಿಯನ್ನೇ ಮಾಡಿದ್ದರೂ, ಈ ಬುದ್ದಿಜೀವಿಗಳು ನಿಮಗೆ ಅಂತಹ ವಿಷಯದಲ್ಲಿ ‘ನೈತಿಕ’ ಮಾನದಂಡ ಬಳಸದಂತೆ ಸಲಹೆ ನೀಡುತ್ತಾರೆ! ಇವತ್ತಿನ ಭಾರತದ ಸ್ಥಿತಿಯಲ್ಲಿ ನೋಡಿದರೆ, ಯಥಾ ಸ್ಥಿತಿ ಕಾಯ್ದುಕೊಂಡು ಹೋಗುವುದರಲ್ಲಿ ಆಸಕ್ತರಾದ ಗುಂಪಿನ ಜನಗಳಿಗೆ, ಆತ್ಮಸಾಕ್ಷಿ ಮತ್ತು ನೈತಿಕ ಸ್ಥೈರ್ಯ ಹೊರತಾದ ಪತ್ರಿಕೋದ್ಯಮವೇ ಬೇಕಾಗಿದೆ.

ಇಂತಹ ಸ್ಥಿತಿಯಲ್ಲಿ ಒಬ್ಬ ಸಾಮಾನ್ಯ ಪತ್ರಕರ್ತ ಎಷ್ಟು ದುರ್ಬಲನಾಗಿರುತ್ತಾನೆ ಎಂದರೆ ಪಕ್ಕದಲ್ಲೇ ಇರುವವನೊಬ್ಬ ತುಸು ತಳ್ಳಿದರೂ ಕುಸಿದು ನೆಲಕಚ್ಚುವಷ್ಟು. ಯಾಕೆಂದರೆ, ಪತ್ರಕರ್ತರಲ್ಲಿ ಬಹುತೇಕರಿಗೆ ಪ್ರತಿಷ್ಠಿತ ಸಾಮಾಜಿಕ ಬಂಡವಾಳ(ಜಾತಿ, ಪ್ರಭಾವ) ಇರದು. ಹಾಗಾಗಿ ಪ್ರಭಾವಿ ಶಕ್ತಿಗಳು ವಿರುದ್ಧ ತಿರುಗಿಬಿದ್ದಾಗ ಅಂತಹ ಪತ್ರಕರ್ತರ ಬೆನ್ನಿಗೆ ಯಾರೂ ನಿಲ್ಲಲಾರರು. ಅದರಲ್ಲೂ ಅಂತಹ ಪತ್ರಕರ್ತರು ತಾರತಮ್ಯಕ್ಕೊಳಗಾದ ಜಾತಿ, ಸಮುದಾಯ, ಲಿಂಗತ್ವ ಮತ್ತು ಪ್ರಾದೇಶಿಕ ಹಿನ್ನೆಲೆಯಿಂದ ಬಂದವರಾದರೆ ಅಂತಹ ಅಪಾಯ ದುಪ್ಪಟ್ಟು. ಮಹಾನಗರದಲ್ಲಿ ಅಂತಹ ಪತ್ರಕರ್ತ ಯಾರೂ ಅಲ್ಲದೆ ಇರಬಹುದು. ಆದರೆ, ಅಂತಹ ವ್ಯತಿರಿಕ್ತ ಸಂಗತಿಗಳೆಲ್ಲದರ ಹೊರತಾಗಿಯೂ ಆತನೊಳಗೆ ನೈತಿಕ ಸ್ಥೈರ್ಯವೆಂಬುದು ಇದ್ದರೆ, ಯಾವುದೂ ಆತನನ್ನು ತಡೆಯಲಾಗದು. ದೇಶದ ಪ್ರಧಾನಿ, ರಾಷ್ಟ್ರಪತಿ, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ, ಭೂಮಿ ಮೇಲಿನ ಅತ್ಯಂತ ಶ್ರೀಮಂತ ಕುಬೇರ ಸೇರಿದಂತೆ ನೆಲದ ಭಾರೀ ಶಕ್ತಿಶಾಲಿಗಳ ವಿರುದ್ಧ ಬೇಕಾದರೂ ಆತನ ವರದಿಗಳು ಎದೆ ಸೆಟೆಸಿ ನಿಲ್ಲಬಹುದು. ಆ ಪತ್ರಕರ್ತನ ಕೈಯಲ್ಲಿ ಒಂದು ಒಳ್ಳೆಯ ವರದಿ, ಎದೆಯಲ್ಲಿ ಅಸೀಮ ನೈತಿಕ ಸ್ಥೈರ್ಯ ಇದ್ದರೆ ಇಡೀ ಜಗತ್ತೇ ಆತನದ್ದು!

ಅಂತಹ ಪತ್ರಕರ್ತನ ಬಲವೇ ಆತನ ಬಳಿ ಇರುವ ಮಾಹಿತಿ. ನೈಜ ಮಾಹಿತಿ ಎಂದರೆ ಅದು ಸತ್ಯ, ವಾಸ್ತವದ ಬಲ. ಪ್ರಭಾವಿ ವ್ಯಕ್ತಿಗಳು ಅಥವಾ ಅವರ ಚೇಲಾಗಳು ಅಂತಹ ಪತ್ರಕರ್ತರನ್ನು ನಿರ್ಲಕ್ಷಿಸಬಹುದು. ಅಂಥವರನ್ನು ಮೂರ್ಖರಂತೆ ಬಿಂಬಿಸಲು ಪ್ರಯತ್ನಿಸಬಹುದು. ಅಂಥವರ ವರದಿಗಳು ಮೇಲ್ನೋಟಕ್ಕೆ ಎದ್ದುಕಾಣುವಂತ ಪರಿಣಾಮ ಬೀರದೇ ಇರಬಹುದು. ಎಲ್ಲವೂ ಹಿಂದಿನಂತೆಯೇ ಮುಂದುವರಿಯಬಹುದು. ಆದರೆ, ವರದಿ ಮಾಡುವ ಮೂಲಕ ತನ್ನ ಕರ್ತವ್ಯವನ್ನು ಆತ ಮಾಡಿದ್ದಾನೆ. ತನ್ನ ಕೆಲಸದ ಮೂಲಕ ನೈತಿಕ ಸ್ಥೈರ್ಯ ತೋರಿದರೆ ಅಲ್ಲಿಗೆ ಪತ್ರಕರ್ತನ ಸಾರ್ವಜನಿಕ ಹೊಣೆಗಾರಿಕೆ ಮುಗಿಯಿತು. ಉಳಿದದ್ದು ಸಮಾಜ ಮತ್ತು ಅದರ ಆತ್ಮಸಾಕ್ಷಿಗೆ ಬಿಟ್ಟದ್ದು.

(ಕೃಪೆ: ದಿ ಕ್ಯಾರವಾನ್) (ಮುಂದುವರಿಯುವುದು)

Click here Support Free Press and Independent Journalism

Pratidhvani
www.pratidhvani.com