ಜಾತಿಗೆ ಸೀಮಿತವಾದ ಮನುಕುಲದ ಮೇರು ವ್ಯಕ್ತಿ ಬಸವಣ್ಣ
ಅಭಿಮತ

ಜಾತಿಗೆ ಸೀಮಿತವಾದ ಮನುಕುಲದ ಮೇರು ವ್ಯಕ್ತಿ ಬಸವಣ್ಣ

ಬಸವಣ್ಣ ಕನ್ನಡ ನೆಲದಲ್ಲಿ ಹುಟ್ಟಿ ಸಮಾನತೆಯ ಬೀಜಗಳನ್ನು ಬಿತ್ತಿ ಶತಮಾನಗಳೇ ಕಳೆದಿವೆ. ನಾವು ಎಷ್ಟರಮಟ್ಟಿಗೆ ಬಸವಣ್ಣನ ತತ್ವಗಳನ್ನು ಮೈಗೂಡಿಸಿಕೊಂಡಿರುವೆವು ಎಂದು ನಮಗೆ ನಾವೇ ಪ್ರಶ್ನೆ ಹಾಕಿಕೊಂಡಾಗ ನಿರಾಶೆಯಾಗುತ್ತದೆ.

ಶೃತಿ ಎಚ್‌ ಎಂ

ಶೃತಿ ಎಚ್‌ ಎಂ

ಜಗತ್ತು ಕಂಡ ವಿಸ್ಮಯ ಬಸವಣ್ಣನವರು. ಎಲ್ಲ ಕಾಲಕ್ಕೂ ಪ್ರಸ್ತುತವಾಗುವಂತಹ ವ್ಯಕ್ತಿತ್ವ. ದನಿಯಿಲ್ಲದವರಿಗೆ ದನಿಯಾಗಿ, ಮಾತಿಲ್ಲದವರಿಗೆ ನಾಲಿಗೆಯಾಗಿ ಬಂದ ಮಹಾಮಾನವತಾವಾದಿ. ‘ದಯೆಯೇ ಧರ್ಮದ ಮೂಲ’ವೆಂದು ಕಂಡುಕೊಂಡ ದಾರ್ಶನಿಕರು. ಆಚರಣೆ, ಸಂಪ್ರದಾಯದ ನೆಪದಲ್ಲಿ ಜನಸಾಮಾನ್ಯರ, ದೀನರ, ಕೆಳವರ್ಗದವರ, ಸ್ತ್ರೀಯರ ಮೇಲಾಗುತ್ತಿದ್ದ ಶೋಷಣೆ, ಮೌಢ್ಯಾಚರಣೆ, ತಾರತಮ್ಯಗಳು ಬಸವಣ್ಣನನ್ನು ಎಳವೆಯಿಂದಲೇ ಕಾಡಿದ್ದವು. ತನಗೆ ಮಾಡಿದ ಯಜ್ಞೋಪವೀತ ಶಾಸ್ತ್ರವನ್ನುತನ್ನ ಅಕ್ಕ ನಾಗಲಾಂಬಿಕೆಗೆ ಮಾಡದಿದ್ದುದನ್ನು ಪ್ರಶ್ನಿಸುತ್ತಾನೆ. ಹಿರಿಯರಿಂದ ತಾರ್ಕಿಕ ಉತ್ತರ ದೊರೆಯದಿದ್ದಾಗ ತನ್ನ ಯಜ್ಞೋಪವೀತವನ್ನು ಕಿತ್ತೊಗೆದು ಮನೆಯಿಂದ ಹೊರನಡೆಯುತ್ತಾನೆ. ಇದು ಬಸವಣ್ಣನ ಕ್ರಾಂತಿಯ ಮೊದಲ ಕಿಡಿಯಾಗಿತ್ತು.

ಸಂಗಮೇಶ್ವರದಲ್ಲಿ ವಿದ್ಯಾಭ್ಯಾಸ ಮುಗಿಸಿ, ಮದುವೆಯಾಗಿ ಬಿಜ್ಜಳನ ಆಸ್ಥಾನದಲ್ಲಿ ಮೊದಲು ಕರಣಿಕನಾಗಿ, ನಂತರ ಮಂತ್ರಿಯೂ ಆಗುತ್ತಾನೆ. ವೈಯಕ್ತಿಕ ಜೀವನದಲ್ಲಾಗುತ್ತಿದ್ದ ಬದಲಾವಣೆಗಳು ಅಣ್ಣನ ಚಿಂತನೆಗಳ ಮೇಲೆ ಪ್ರಭಾವ ಬೀರಲಿಲ್ಲ. ಬೆಂಕಿಯನ್ನು ಪೂಜಿಸುವುದು, ತಿನ್ನಬೇಕಾದ ಹಾಲು-ತುಪ್ಪಗಳನ್ನು ಅದಕ್ಕೆ ಸುರಿಯುವುದು , ಇವೆಲ್ಲ ಎಂತಹ ಪೂಜೆಗಳು ಎನಿಸುತ್ತದೆ. ಹುಟ್ಟಿನಿಂದ ಬ್ರಾಹ್ಮಣನಿಗೂ ಶೂದ್ರನಿಗೂ ಯಾವ ವ್ಯತ್ಯಾಸವೂ ಇಲ್ಲ. ಗುಣದಿಂದ ಅಳೆಯಬೇಕು ಎನ್ನುವುದು ಬಸವಣ್ಣನ ನಿಲುವು. ಹೆಜ್ಜೆಹೆಜ್ಜೆಗೂ ಬಂಧಿಸಿದ ಕರ್ಮದ ಕಾಲ್ತೊಡಕನ್ನು ಕಂಡು ಆತನ ಮನಸ್ಸು ಜಿಗುಪ್ಸೆಗೊಂಡಿತ್ತು. ಕರಣಿಕ, ಮಂತ್ರಿಯಾಗಿ ಸಮಾಜದ ಎಲ್ಲ ಸ್ತರದ ಜನರನ್ನೂ ನೋಡುತ್ತಿದ್ದನು. ರೇಷ್ಮಯುಡಿಗೆ ತೊಟ್ಟ ಸೊಗಸುಗಾರರು, ದಿನವೆಲ್ಲ ದುಡಿದು ಹಣ್ಣಾಗಿ ಸಂಜೆಗೇನೆಂದು ಯೋಚಿಸುತ್ತ ಹೋಗುವ ಶ್ರಮಜೀವಿಗಳು, ದುಡಿಯಲಾರದ ಆಲಸಿಗಳು, ದಿನವಿಡೀ ದುಡಿದರೂ ಹೊಟ್ಟೆ ತುಂಬಿಸಿಕೊಳ್ಳಲಾರದ ಕೆಲಸಗಾರರು-ಹೀಗೆ ಒಂದೇ ನೋಟದಲ್ಲಿ ಸಮಾಜದ ಎಲ್ಲ ಹಂತಗಳನ್ನು ಕಂಡ ಬಸವಣ್ಣನ ಮನಸ್ಸಿನಲ್ಲಿ ದುಡಿಮೆಯ ಕುರಿತು ಹುಟ್ಟಿದ ಆಲೋಚನೆಗಳು ಅದ್ಭುತ- “ಎಲ್ಲ ವೃತ್ತಿಗಳೂ ಸಮಾಜದ ಸ್ವಯಂಪೂರ್ಣತೆಗೆ ಅವಶ್ಯಕ. ಆಯಾ ವೃತ್ತಿಯಲ್ಲಿ ಪರಿಣತಿ ಪಡೆಯಲು ಅವು ಅನುವಂಶಿಕವಾಗಿ ಬೆಳೆದು ಬರುವುದೂ ಸಹಜವೇ. ಆದರೆ ಅದು ಮಾನವತೆಯನ್ನು ವಿಭಜಿಸುವ ಸಾಧನವಾಗಬಾರದು. ಮಾನವತೆಯ ಮೂಲಭೂತ ಅವಶ್ಯಕತೆಗಳ ವಿಚಾರದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿರಬೇಕು. ಕಲಿಯುವ ಆಸಕ್ತಿಯಿದ್ದರೆ ಅವರ ಕುಲ, ಜಾತಿ, ಉದ್ಯೋಗಗಳು ತಡೆಯಾಗಬಾರದು. ಇಂತಹ ಸಮಾಜ ರಚನೆ ಸಾಧ್ಯವೇ ಎಂದು ಯೋಚಿಸುವನು. ವೃತ್ತಿಗೌರವ ಸಾರ್ವತ್ರಿಕವಾದಾಗ ಮಾತ್ರ ಇದು ಸಾಧ್ಯ ಎಂದು ಕಂಡುಕೊಳ್ಳುತ್ತಾನೆ.

ಇನ್ನು ದೇವರು, ಗುಡಿ, ಧಾರ್ಮಿಕತೆಯನ್ನು ಕುರಿತು ಬಸವಣ್ಣ ಪ್ರತಿಪಾದಿಸಿದ ವಿಚಾರಗಳಂತೂ ಕ್ರಾಂತಿಕಾರಿಯಾಗಿವೆ. ಪ್ರಧಾನಮಂತ್ರಿಯಾಗಿ ಕೆಲಸ ಮಾಡುವಾಗ ಗುಡಿ-ಗುಂಡಾರಗಳ ವೆಚ್ಚವನ್ನು ಕಡಿಮೆ ಮಾಡಿಸಿ, ಶೋಷಿತ ವರ್ಗದವರಿಗೆ ನೀರು-ಸೂರು ಕಲ್ಪಿಸಲು ಬಳಸುತ್ತಾನೆ. ದೇವರು-ಆಚರಣೆಗಳ ನೆಪದಲ್ಲಿ, ಶೂದ್ರರನ್ನು ಗುಡಿಯ ಹೊರಗಿಡುವುದನ್ನು ಬಸವಣ್ಣ ಸಹಿಸಲಿಲ್ಲ. ಇನ್ನು ಕರ್ಮ, ಪಿಂಡಕಾರ್ಯಗಳ ನೆವದಲ್ಲಿ ಪುರೋಹಿತಶಾಹಿಗಳು ಬಡವರಿಂದ ಹಣ ಪೀಕುವುದನ್ನ ನೋಡಿದ ಬಸವಣ್ಣ ಶೋಷಿತರ ಅಂಗೈಗೆ ಲಿಂಗವನ್ನಿಡುತ್ತಾನೆ. ದೇವರು ಮತ್ತು ಭಕ್ತನ ನಡುವೆ ಮೂರನೆಯವನ ಅವಶ್ಯಕತೆಯಿಲ್ಲ, ತಾನಿರುವಲ್ಲೇ ಭಕ್ತಿಯಿಂದ ಲಿಂಗಪೂಜೆ ಮಾಡಿದರೆ ಶಿವನೊಪ್ಪುವನು ಎಂದು ಜನರಿಗೆ ತಿಳಿಸುತ್ತಾನೆ. ಈ ವಿಚಾರದಲ್ಲಿ ಬಸವಣ್ಣನ ಈ ವಚನ ಎಂದಿಗೂ ಪ್ರಸ್ತುತವೆನಿಸುತ್ತದೆ.

“ಉಳ್ಳವರು ಶಿವಾಲಯವ ಮಾಡುವರು

ನಾನೇನು ಮಾಡಲಿ ಬಡವನಯ್ಯ?

ಎನ್ನ ಕಾಲೇ ಕಂಬ ದೇಹವೆ ದೇಗುಲ

ಶಿರವೇ ಹೊನ್ನ ಕಳಸವಯ್ಯ!

ಕೂಡಲಸಂಗಮ ದೇವ ಕೇಳಯ್ಯ

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ!”

ತನ್ನ ದೇವರ ಭಕ್ತಿಯ ಅಭಿವ್ಯಕ್ತಿಗೆ ಮತ್ತೊಬ್ಬ ದೇವರ ಗುಡಿಯೊಡೆದು, ಚಿನ್ನದ ತೇರ ಮಾಡಿಸುವ ಇಂದಿನ ಸಂದರ್ಭದಲ್ಲಿ 900 ವರುಷಗಳ ಹಿಂದಿನ ಬಸವಣ್ಣನ ಈ ವಚನ ಎಂದಿಗೂ ಆಧುನಿಕವೆನಿಸಿಕೊಳ್ಳುತ್ತದೆ.

ಇನ್ನು ’ಕಾಯಕವೇ ಕೈಲಾಸ’ ಎಂದು ಹೇಳುವ ಬಸವಣ್ಣನ ಕಾಯಕತತ್ವ ಹೇಳಿದಷ್ಟು ಸರಳವಾಗಿಲ್ಲ.ಕೇವಲ ಸ್ವಾರ್ಥಕ್ಕಾಗಿ ನಾವು ದುಡಿದರೆ ಅದು ಕಾಯಕವಲ್ಲ ಎನ್ನುತ್ತಾನೆ ಬಸವಣ್ಣ. ದುಡಿಮೆಯ ಸ್ವಲ್ಪ ಭಾಗವಾದರೂ ಲೋಕಹಿತಕ್ಕಾಗಿ ವಿನಿಯೋಗವಾದಾಗಅದು ಕಾಯಕವೆನಿಸಿಕೊಳ್ಳುತ್ತದೆ. ದುಡಿಮೆಯ ಒಂದು ಭಾಗದಿಂದ ಗುರು ಲಿಂಗ ಜಂಗಮರ ಸೇವೆಗೈಯುವುದರಿಂದಲೇ ದುಡಿಮೆಕಾಯಕವಾಗುವುದು.

ಸಮಾಜದ ಎಲ್ಲ ವರ್ಗದ ಜನರ ಸಮಸ್ಯೆ, ಚಿಂತನೆಗಳಿಗೆ ಸಮಾನ ಅವಕಾಶ ಮಾಡಿಕೊಡಬೇಕೆಂದು ಅನುಭವ ಮಂಟಪವೆಂಬ ಒಂದು ವೇದಿಕೆ ಕಟ್ಟುತ್ತಾನೆ. ಸಮಾನತೆ, ಕಾಯಕ, ದಾಸೋಹ, ಪ್ರಜಾತಾಂತ್ರಿಕತೆ, ಸಮಪಾಲು-ಸಮಬಾಳು , ಮಹಿಳಾ ಪ್ರಾತಿನಿಧ್ಯ, ಮೌಢ್ಯ, ಅಸ್ಪೃಶ್ಯತೆ, ಜಾತಿಪದ್ದತಿ - ಹೀಗೆ ಅಲ್ಲಿ ಚರ್ಚಿಸುವ ವಿಷಯಗಳಿಗೆ ಎಲ್ಲೆ ಇರುತ್ತಿರಲಿಲ್ಲ. ಮಾದಾರ ಚೆನ್ನಯ್ಯ, ಡೋಹರಕಕ್ಕಯ್ಯ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಮಾರಯ್ಯ, ಚಮ್ಮಾರ ಹರಳಯ್ಯ, ಮಡಿವಾಳ ಮಾಚಿದೇವ, ಸೂಳೆ ಸಂಕವ್ವ, ಕದಿರಕಾಳವ್ವ, ಗೌಳಗಿತ್ತಿ ಗೌರವ್ವ - ಹೀಗೆ ಎಲ್ಲ ವರ್ಗದ, ಕಾಯಕದ ಶರಣರು ಪಾಲ್ಗೊಂಡು ಅಭಿಪ್ರಾಯ ಮಂಡಿಸುತ್ತಿದ್ದರು, ತರ್ಕ ಮಾಡುತ್ತಿದ್ದರು ಮತ್ತು ವಚನಗಳನ್ನು ಕಟ್ಟುತ್ತಿದ್ದರು. ದಿನದಲ್ಲಿ ಕಾಯಕ ಮಾಡಿ, ದುಡಿದ ಒಂದು ಭಾಗವನ್ನು ದಾಸೋಹಕ್ಕೆ ಮುಡಿಪಾಗಿಸಿ ನಂತರ ಅನುಭವ ಮಂಟಪದ ಚರ್ಚೆಗಳಲ್ಲಿ ಪಾಲ್ಗೊಂಡು ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಶರಣರ ದಿನಚರಿ. ಸಾಮಾಜಿಕ ಸಮಸ್ಯೆಗಳಿಗಷ್ಟೇ ಅಲ್ಲದೇ, ದೇವರು, ಭಕ್ತಿ, ಆಧ್ಯಾತ್ಮ ಕುರಿತ ಚರ್ಚೆಗಳಿಗೂ ಅವಕಾಶವಿತ್ತು. ಹೀಗೆ ನಡೆಯುತ್ತಿದ್ದ ಕಲ್ಯಾಣದ ಶರಣರ ಕ್ರಾಂತಿಯ ಸುದ್ದಿ ಕೇಳಿ ಅನೇಕರು ಕಲ್ಯಾಣಕ್ಕೆ ಬಂದರು. ಅಲ್ಲಮ ಪ್ರಭು, ಮರುಳಸಿದ್ದರು, ಅಕ್ಕಮಹಾದೇವಿಯರು ಬಸವಣ್ಣನ ಸಾಮಾಜಿಕ ಕ್ರಾಂತಿಯನ್ನು ಕಂಡು ಬೆರಗಾದರು. ಬಸವಣ್ಣನ ಕೀರ್ತಿ ದೇಶ-ವಿದೇಶಗಳನ್ನುಮುಟ್ಟಿತು. ಕಾಶ್ಮೀರ, ಮದ್ಯಪ್ರಾಚ್ಯಗಳಿಂದಲೂ ಅನೇಕರು ಬಂದರು, ಬಸವಣ್ಣನೊಂದಿಗೇ ಉಳಿದು ಕನ್ನಡದಲ್ಲಿಯೇ ವಚನಗಳನ್ನುಕಟ್ಟಿದರು. 900 ವರ್ಷಗಳ ಹಿಂದೆ ಹೀಗೆ ಬಸವಣ್ಣ ಕಟ್ಟಿದ ವೇದಿಕೆಯೇ ಪ್ರಪಂಚದ ಮೊದಲ ಪ್ರಜಾಪ್ರಭುತ್ವ ಸಭೆಯಾಗಿ ಗುರುತಿಸಿಕೊಳ್ಳುತ್ತದೆ.

ಜಾತಿಪದ್ದತಿಯ ಅನಿಷ್ಟವನ್ನು ಬಸವಣ್ಣ ಬಹಳ ಗಟ್ಟಿಯಾಗಿ ವಿರೋಧಿಸುತ್ತಾನೆ. ಬ್ರಾಹ್ಮಣಕುಲದ ಮಧುವರಸ ಮತ್ತು ಶೂದ್ರ ಹರಳಯ್ಯರು ಸಮಾನರಾಗಿದ್ದು ಬಸವಣ್ಣನ ಚಿಂತನೆಗಳನ್ನು ಒಪ್ಪಿ ಅನುಭವ ಮಂಟಪಕ್ಕೆ ಬಂದಾಗ. ಮಧುವರಸರ ಮಗಳು ಮತ್ತುಹರಳಯ್ಯರ ಮಗಪರಸ್ಪರ ಮೆಚ್ಚಿಕೊಂಡು ಮದುವೆಯಾಗುವುದಾಗಿ ಹಿರಿಯರಿಗೆ ತಿಳಿಸುತ್ತಾರೆ. ಬಸವಣ್ಣ ಇವರಮದುವೆಮಾಡಿಸಲು ಮುಂದಾಗುತ್ತಾನೆ. ಬ್ರಾಹ್ಮಣಕುಲದ ಹುಡುಗಿಯನ್ನು ಶೂದ್ರಕುಲದ ಹುಡುಗನೊಬ್ಬ ಮದುವೆಯಾಗುವುದನ್ನುಇಪ್ಪತ್ತೊಂದನೆಯ ಶತಮಾನದಲ್ಲಿಯೂ ಊಹಿಸಿಕೊಳ್ಳಲು ಕಷ್ಟವೆನಿಸುವ ಮಾತು. ಹನ್ನೆರಡನೆಯ ಶತಮಾನದಲ್ಲಿಯೇ ಇದನ್ನುನೆರವೇರಿಸಿದ ಬಸವಣ್ಣನ ನಡೆ ಎಷ್ಟು ಕ್ರಾಂತಿಕಾರಿಯಾಗಿರಬಹುದು!! ಬಹುಶಃ ಭಾರತದ ಇತಿಹಾಸದಲ್ಲೇ ಮೊದಲ ಅಂತರ್ಜಾತಿಮದುವೆ ಇದಾಗಿರಬಹುದು. ಈ ಮದುವೆಯ ನಂತರದ ಘಟನೆಗಳು ಶರಣರ ಚಳುವಳಿಗೆ ತೊಡರೊಡ್ಡಿ ಚಳುವಳಿ ಕುಸಿದಿದ್ದು ಈಗಇತಿಹಾಸ.

ಬಸವಣ್ಣ ಕನ್ನಡ ನೆಲದಲ್ಲಿ ಹುಟ್ಟಿ ಸಮಾನತೆಯ ಬೀಜಗಳನ್ನು ಬಿತ್ತಿ ಶತಮಾನಗಳೇ ಕಳೆದಿವೆ. ನಾವು ಎಷ್ಟರಮಟ್ಟಿಗೆ ಬಸವಣ್ಣನತತ್ವಗಳನ್ನು ಮೈಗೂಡಿಸಿಕೊಂಡಿರುವೆವು ಎಂದು ನಮಗೆ ನಾವೇ ಪ್ರಶ್ನೆ ಹಾಕಿಕೊಂಡಾಗ ನಿರಾಶೆಯಾಗುತ್ತದೆ. ಪ್ರತಿನಿತ್ಯ ಪತ್ರಿಕೆಗಳಲ್ಲಿ, ಟಿವಿ ವಾಹಿನಿಗಳಲ್ಲಿ ಶೋಷಣೆಯ, ಅಸಮಾನತೆಯ, ಮೌಢ್ಯದ ಸುದ್ದಿಗಳನ್ನು ಓದಿದಾಗ ಬಸವಣ್ಣ ಮತ್ತೆ ಹುಟ್ಟಿಬರಬೇಕೆನಿಸುತ್ತದೆ. ಕಾರ್ಲ್ ಮಾರ್ಕ್ಸ್, ಮಾರ್ಟಿನ್ ಲೂಥರ್ ಕಿಂಗ್ ರಂತಹ ಹೊರಗಿನ ಸುಧಾರಕರ ಮೊರೆಹೋಗುವ ನಮ್ಮ ಯುವಜನೆತೆಗೆ ನಮ್ಮದೇ ನೆಲದ ಈ ಕ್ರಾಂತಿಕಾರಿ ಕಣ್ಣಿಗೆ ಬೀಳದಿರುವುದು ಶೋಚನೀಯ.

ಬಸವಣ್ಣನ ವಿಶ್ವಸಂದೇಶದಲ್ಲಿ ಜಾತಿ-ಮತಗಳ ಜಂಜಾಟವಿಲ್ಲ; ಪಂಥ-ಪಂಗಡಗಳ ಪ್ರಶ್ನೆ ಇಲ್ಲ; ಮೇಲು-ಕೀಳುಗಳ ಮಡಿವಂತಿಕೆ ಇಲ್ಲ; ವರ್ಣ-ವರ್ಗಗಳ ಭೇದವಿಲ್ಲ. ಪೂಜಾರಿ-ಪುರೋಹಿತರ ಪಾರುಪತ್ಯೆಯಿಲ್ಲ. ಹೆದರಿಕೆ-ಬೆದರಿಕೆಗಳ ಹಿಂಸೆಯಿಲ್ಲ; ಗುಡಿ-ಗುಂಡಾರಗಳ ಗ್ರಹಣವಿಲ್ಲ, ಶಾಸ್ತ್ರ-ಸಂಪ್ರದಾಯಗಳ ಸಂಕೋಲೆಯಿಲ್ಲ; ಪೂರ್ವಾಗ್ರಹ ಪೀಡೆಯಿಲ್ಲ. ಅದು ಪೂರ್ಣ ಮುಕ್ತ; ಪಾರದರ್ಶಕ; ಪ್ರಜಾಸತ್ತಾತ್ಮಕ!

ಬಸವಣ್ಣನ ಅನುಯಾಯಿಗಳು ಎಂದು ಹೇಳಿಕೊಳ್ಳುವವರು ಇಂದು ಬಹುತೇಕ ಮೌಢ್ಯಾಚರಣೆ ಮಾಡುತ್ತ, ಮೇಲು-ಕೀಳೆಂಬ ತಾರತಮ್ಯಗಳನ್ನು ದೊಡ್ಡದು ಮಾಡುತ್ತ ಬಸವಣ್ಣನ ತತ್ವಗಳಿಗೆ ವಿರುದ್ಧವಾಗಿ ಬದುಕುತ್ತ, ಇಡೀ ಜೀವಸಂಕುಲಕ್ಕೆ ಸಮರ್ಪಿತವಾಗಿದ್ದ ಮನುಕುಲದ ಮೇರು ವ್ಯಕ್ತಿಯನ್ನು ಒಂದು ಜಾತಿಯ ಸಂಕೇತವಾಗಿ ಸೀಮಿತಗೊಳಿಸಿದ್ದು ಮಾತ್ರ ದುರಂತವೇ ಸರಿ.

Click here Support Free Press and Independent Journalism

Pratidhvani
www.pratidhvani.com