‘ಪ್ರತಿಧ್ವನಿ’ಯ ಜನಪರ ದನಿ ಎಲ್ಲೆಡೆ ಅನುರಣಿಸಲಿ!
ಅಭಿಮತ

‘ಪ್ರತಿಧ್ವನಿ’ಯ ಜನಪರ ದನಿ ಎಲ್ಲೆಡೆ ಅನುರಣಿಸಲಿ!

ʼಪ್ರತಿಧ್ವನಿʼ ಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ನಮ್ಮ ವೆಬ್‌ ತಾಣದ ನಿರಂತರ ಓದುಗರೊಬ್ಬರ ಪತ್ರ

ಅನುದೀಪ್

ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿಯುತ್ತಿದ್ದ ಹೊತ್ತಿಗೆ ‘ಕೋವಿಡ್-19’ ಎಂಬ ಸಾಂಕ್ರಾಮಿಕ ಸುನಾಮಿ ಅಪ್ಪಳಿಸಿ ದೇಶದ ಜನತೆ ದಿಕ್ಕೆಟ್ಟ ಸ್ಥಿತಿಯಲ್ಲಿದ್ದಾರೆ. ಈ ಹೊತ್ತಿನಲ್ಲಿ ದಿಕ್ಕು ತೋರಿಸಬೇಕಾದ ಮುಖ್ಯವಾಹಿನಿಯ ಮಾಧ್ಯಮಗಳು ಜನರನ್ನು ಮತ್ತಷ್ಟು ದಿಕ್ಕುತಪ್ಪಿಸುವ ಪ್ರಯತ್ನವನ್ನು ಮಾಡುತ್ತಿವೆ. ಅದು ಉದ್ದೇಶಪೂರ್ವಕವಾಗಿಯೇ ಮಾಡುತ್ತಿವೆಯೋ ಅಥವಾ ಆಳುವ ವರ್ಗವನ್ನು ತುಷ್ಠೀಕರಿಸಲು ಮಾಡುತ್ತಿವೆಯೋ? ಆದರೆ, ದಿಕ್ಕು ತಪ್ಪಿಸುವ ಮೂಲಕ ದೊಡ್ಡ ತಪ್ಪನ್ನು ಮಾಡುತ್ತಿವೆ. ಆ ತಪ್ಪನ್ನು ಹೀಗೆ ಎಂದು ನಿರ್ಧಿಷ್ಟವಾಗಿ ಹೇಳಲಾಗದು. ಯಾವ ಮಾಧ್ಯಮಗಳಿಗೆ ಪ್ರಧಾನಿ ದೇಶವನ್ನುದ್ದೇಶಿಸಿ ಭಾಷಣ ಮಾಡುವುದೇ ಪ್ರಧಾನ ಸುದ್ದಿಯಾಗುತ್ತದೋ ಮತ್ತು ಯಾವ ಮಾಧ್ಯಮಗಳಿಗೆ ‘ಕೋವಿಡ್-19’ ವಿರುದ್ಧ ಸೆಣೆಸುತ್ತಿರುವ ವೈದ್ಯ ಸಿಬ್ಬಂದಿಗೆ ವೈಯಕ್ತಿಕ ಸುರಕ್ಷಿತ ಪರಿಕರಗಳ (ಪಿಪಿಇ) ಕೊರತೆಯು ಪ್ರಧಾನ ಸುದ್ದಿಯಾಗುವುದಿಲ್ಲವೋ ಅಂತಲ್ಲಿ ದೋಷ ಇರುವುದಂತೂ ನಿಶ್ಛಿತ. ಈ ದೋಷಕ್ಕೆ ಮೂಲ ಕಾರಣ ಹುಡುಕುವ ಪ್ರಯತ್ನಕ್ಕಿಳಿದರೆ, ಕಾರಣ ಸುಲಭವಾಗಿ ಮತ್ತು ಸ್ಪಷ್ಟವಾಗಿ ಗೋಚರಿಸುತ್ತದೆ. ಯಾವ ಮಾಧ್ಯಮ ಆಳುವ ವರ್ಗದ ಮೇಲೆ ತೀಷ್ಣ ನಿಗಾ ಇಟ್ಟು ತಪ್ಪು ಒಪ್ಪುಗಳನ್ನು ಎತ್ತಿ ತೋರಿಸುತ್ತಾ, ತಿದ್ದುತ್ತಾ, ಅಗತ್ಯ ಬಿದ್ದಾಗ ಮಾರ್ಗದರ್ಶನ ಮಾಡುತ್ತಾ ಅಕ್ಷರಷಃ ಪ್ರತಿಪಕ್ಷವಾಗಿ ಕೆಲಸ ಮಾಡಬೇಕಿತ್ತೊ ಅಂತಹ ಮಾಧ್ಯಮವೇ ಈಗ ‘ಪಕ್ಷಾಂತರ’ಗೊಂಡು ಆಡಳಿತ ಪಕ್ಷದ ತೆಕ್ಕೆಗೆ ಸಿಕ್ಕಿಬಿದ್ದಿದೆ. ಆಡಳಿತ ಪಕ್ಷದ ‘ಮುಖವಾಣಿ’ಯಾಗಿಯೋ ಅಥವಾ ‘ತುತ್ತೂರಿ’ಯಾಗಿಯೋ ಪರಿವರ್ತನೆಗೊಂಡಿದೆ. ಮೇಲ್ನೋಟಕ್ಕೆ ಇದು ಅಷ್ಟು ಗಂಭೀರ ಸಂಗತಿಯಲ್ಲ ಅನಿಸಿದರೂ ದೀರ್ಘಕಾಲದಲ್ಲಿ ಇದು ಪ್ರಜಾಪ್ರಭುತ್ವದ ಮೂಲ ಸಂರಚನೆಗೆ ಕೊಡಲಿಪೆಟ್ಟು ನೀಡಬಹುದಾದ ಗಂಭೀರ ಮತ್ತು ಆಘಾತಕಾರಿ ಸಂಗತಿ.

ಇಂತಹ ಹೊತ್ತಿನಲ್ಲಿ ಕಗ್ಗತ್ತಲೆಯ ನಡುವೆಲ್ಲೋ ಬೆಳಕಿನ ಕಿರಣಗಳಂತೆ ‘ಸ್ವತಂತ್ರ ಮಾಧ್ಯಮ’ ಚಿಗುರೊಡೆದು ತನ್ನ ಬೇರುಗಳನ್ನು ಬಿಡಲೆತ್ನಿಸುತ್ತಿದೆ. ಆಳುವ ವರ್ಗದ ವಿರುದ್ಧ ದನಿ ಎತ್ತುವ, ದುಷ್ಟತನ ಮತ್ತು ಭ್ರಷ್ಟತನವನ್ನು ಬಯಲಿಗೆಳೆಯುವ, ಜನಸಾಮಾನ್ಯರಿಗೆ ‘ದನಿ’ಯಾಗುವ ಜತೆಗೆ ಪ್ರಜಾಪ್ರಭುತ್ವದ ಸಂರಚನೆಯನ್ನು ಗಟ್ಟಿಗೊಳಿಸುವ ಪ್ರಮಾಣಿಕ ಪ್ರಯತ್ನವನ್ನು ಸ್ವತಂತ್ರ ಮಾಧ್ಯಮ ಮಾಡುತ್ತಿದೆ.

ಜನಸಾಮಾನ್ಯರ ಬೆರಳ ತುದಿಯಲ್ಲೇ ಇರುವ ‘ಸೋಷಿಯಲ್ ಮಿಡಿಯಾ’ವನ್ನು ತನ್ನ ‘ಏಳು’ಗಳಿಗೆ ಮತ್ತು ತನ್ನ ವಿರೋಧಿಗಳ ‘ಬೀಳು’ಗಳಿಗೆ ಆಳುವ ವರ್ಗ ಬಳಸಿಕೊಳ್ಳುತ್ತಿದೆ. ತಮಗೆ ಗೊತ್ತಿಲ್ಲದೇ ಸೋಷಿಯಲ್ ಮಿಡಿಯಾ ಬಳಸುವ ಮೂಲಕ ಆಳುವ ವರ್ಗದ ಆಯುಧವಾಗುವ ಜನಸಾಮಾನ್ಯರನ್ನೂ ಎಚ್ಚರಿಸುವ ಮತ್ತು ಸುಳ್ಳುಸುದ್ಧಿಗಳನ್ನು ಬಯಲು ಮಾಡಿ ವಸ್ತುನಿಷ್ಠ ಸುದ್ದಿ ಬಿತ್ತರಿಸುವ ‘ಸ್ವತಂತ್ರ್ಯ ಮಾಧ್ಯಮ’ವು ಪರೋಕ್ಷವಾಗಿ ‘ಜನಪರ ಮಾಧ್ಯಮ’ವೂ ಹೌದು. ಈ ಹೊತ್ತಿನಲ್ಲಿ ಸ್ವತಂತ್ರ ಮಾಧ್ಯಮದ ಪಾತ್ರ ಅತ್ಯಂತ ಪ್ರಮುಖವಾದದ್ದು.

ಸತ್ಯಾನ್ವೇಷಣೆ ಮತ್ತು ಜನಪರ ಆಶಯಗಳೊಂದಿಗೆ ರೂಪುಗೊಂಡ ಕನ್ನಡದ ಸ್ವತಂತ್ರ್ಯ ಮಾಧ್ಯಮ ‘ಪ್ರತಿಧ್ವನಿ’ಗೆ ಈಗ ವರ್ಷ ತುಂಬಿದೆ. ಮುಖ್ಯವಾಹಿನಿ ಮಾಧ್ಯಮಗಳಿಗೆ ಒಂದು ವರ್ಷದ ಹಾದಿ ಸುಧೀರ್ಘವೇನಲ್ಲ. ಆದರೆ ಸದಾ ಆಳುವವರ ಕೆಂಗಣ್ಣಿಗೆ ಗುರಿಯಾಗುವ ‘ಸ್ವತಂತ್ರ ಮಾಧ್ಯಮ’ಕ್ಕೆ ಒಂದು ವರ್ಷದ ಹಾದಿ ಸುದೀರ್ಘವೇ ಹೌದು. ಈ ಒಂದು ವರ್ಷದ ಹಾದಿಯಲ್ಲಿ ‘ಪ್ರತಿಧ್ವನಿ’ ಆಳುವ ವರ್ಗದ ಜನವಿರೋಧಿ ನೀತಿಗಳನ್ನು ವಿರೋಧಿಸುತ್ತಲೇ ಜನರಿಗೆ ಹತ್ತಿರವಾಗುತ್ತಾ ಬಂದಿದೆ. ಹಲವು ಪಟ್ಟು ಓದುಗರ ಸಂಖ್ಯೆ ವೃದ್ಧಿಸಿದೆ, ನಿತ್ಯವೂ ವೃದ್ಧಿಸುತ್ತಿದೆ.

ಸರ್ಕಾರದ ಪರವಾದ ಮುಖ್ಯವಾಹಿನಿಯ ವಿರುದ್ಧ ಸ್ಪರ್ಧಿಸುತ್ತಾ, ಆಳುವ ವರ್ಗದ ಕೆಂಗಣ್ಣಿಗೆ ಬೀಳುವ ಸ್ವತಂತ್ರ ಮಾಧ್ಯಮಗಳು ಅಸ್ವಿತ್ವ ಉಳಿಸಿಕೊಳ್ಳಲೂ ಹೋರಾಟ ಮಾಡಬೇಕಾಗಿರುವುದು ವಾಸ್ತವಿಕ ಸಂಗತಿ. ಖಚಿತ ಸುದ್ಧಿ ಮತ್ತು ಸುಲಲಿತ ವಿಶ್ಲೇಷಣೆಗಳ ಮೂಲಕವೇ ಓದುಗವರ್ಗವನ್ನು ಸಂಪಾದಿಸಿಕೊಳ್ಳುವ ಸ್ವತಂತ್ರ ಮಾಧ್ಯಮಗಳು ಸರ್ಕಾರದ ಆರ್ಥಿಕ ಬೆಂಬಲ ಇಲ್ಲದೇ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಇದೆ. ದೇಶ ಸಂದಿಗ್ಧ ಕಾಲದಲ್ಲಿರುವ ಈ ಹೊತ್ತಿನಲ್ಲಿ ಹಿಂದೆಂದಿಗಿಂತಲೂ ‘ಸ್ವತಂತ್ರ ಮಾಧ್ಯಮ’ದ ಆಗತ್ಯ ಈ ಸಮಾಜಕ್ಕೆ ಇದೆ. ಪ್ರತಿಧ್ವನಿ ಅಂತಹ ಅಗತ್ಯವನ್ನು ಆರೋಗ್ಯಕರವಾಗಿ ಪೂರೈಸುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಆಳುವ ವರ್ಗದ ಜನವಿರೋಧಿ ನಿಲವುಗಳ ವಿರುದ್ಧದ ‘ಪ್ರತಿದ್ವನಿ’ಯ ಹೋರಾಟ ಮತ್ತಷ್ಟು ದಿಟ್ಟವಾಗಿ ಮುಂದುವರೆಯಲಿ. ಪ್ರತಿಧ್ವನಿಯ ಜನಪರ ದನಿ ಎಲ್ಲೆಡೆ ಅನುರಣಿಸಲಿ!

Click here Support Free Press and Independent Journalism

Pratidhvani
www.pratidhvani.com