ಮೀಸಲಾತಿಗಷ್ಟೆ ಮೀಸಲಾಗಬಾರದು ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ
ಅಭಿಮತ

ಮೀಸಲಾತಿಗಷ್ಟೆ ಮೀಸಲಾಗಬಾರದು ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ

ಮಹಿಳಾ ಸಬಲೀಕರಣ ಮತ್ತು ಸಮಾನತೆಯ ವಿಚಾರ ಬಂದಾಗ, ಮಹಿಳೆಯರು ಯಾವ ಕ್ಷೇತ್ರದಲ್ಲಿ ಇಲ್ಲ ಹೇಳಿ.. ? ಎನ್ನುತ್ತಾ ಉದ್ದನೆ ಲಿಸ್ಟನ್ನು ಹೇಳುತ್ತೇವೆ. ಮಹಿಳಾ ಎಲ್ಲಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾಳೆ ಎಂಬ ಮಾತ್ರಕ್ಕೆ ಮಹಿಳಾ ಸಬಲೀಕರಣ ಆಗಿದೆ, ಮಹಿಳಾ ಸಮಾನತೆ ಸಾಧ್ಯವಾಗಿದೆ ಎಂಬ ಅರ್ಥವಲ್ಲ.

ಚೈತ್ರಿಕಾ ನಾಯ್ಕ ಹರ್ಗಿ

ರಾಜಕೀಯದಲ್ಲಿ ಮಹಿಳೆಯರ ‘ಭಾಗವಹಿಸುವಿಕೆ’ ಎಂದರೆ ಮಹಿಳೆಯರು ಮತದಾನದ ಮಾಡುವುದು ಎಂಬರ್ಥಕ್ಕಷ್ಟೆ ಸೀಮಿತವಲ್ಲ. ಮಹಿಳೆಯರು ರಾಜಕೀಯ ನಿರ್ಣಯಗಳನ್ನು ಪ್ರಭಾವಿಸುವುದು, ಚುನಾವಣೆಯಲ್ಲಿ ಅಭ್ಯರ್ಥಿಯಾಗುವುದು, ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳುವುದು, ರಾಜಕೀಯ ಚಳುವಳಿಯಲ್ಲಿ ಭಾಗವಹಿಸುವುದು ಇತರೆ.

ಮತದಾನದ ಹಕ್ಕನ್ನು ಭಾರತ ಸ್ವಾತಂತ್ರ್ಯಗೊಂಡ ಮೇಲೆ ಸಂವಿಧಾನ ಬದ್ಧವಾಗಿ ಎಲ್ಲಾ ಭಾರತೀಯ ಪ್ರಜೆಗಳಿಗೂ ನೀಡಿದೆಯಾದ್ದರಿಂದ ಸಾಂವಿಧಾನಿಕವಾಗಿ ಮತದಾನದ ಹಕ್ಕಿಗಾಗಿ ಮಹಿಳೆಯರು ಭಾರತದಲ್ಲಿ ಹೋರಾಟ ಮಾಡುವ ಸಂದರ್ಭ ಒದಗಿಬಂದಿಲ್ಲ. ಆದರೆ 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರು ಮತದಾನ ಪಟ್ಟಿಯಲ್ಲಿ ನೋಂದಾವಣಿ ಗೊಂಡಿದ್ದಾರೆಯೆ ? ಮತ್ತು ಮಹಿಳೆಯ ರಾಜಕೀಯ ಪಾತಿನಿಧ್ಯ ಭಾರತದಲ್ಲಿ ಮಹಿಳೆಯರ ಸಂಖ್ಯೆಗೆ ಅನುಗುಣವಾಗಿ ಇದೆಯೆ ? ಎಂದು ನೋಡಿದರೆ ಉತ್ತರ ತುಂಬಾ ನೀರಸವಾಗಿದೆ.

ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿರಬಹುದು ಆದರೆ ಅವಕಾಶ ವಂಚಿತ ಕೆಳ ಸ್ಥರದ ಮಹಿಳೆಯರ ಪರಿಸ್ಥಿತಿ ಇನ್ನು ಹಾಗೆಯೆ ಇದೆ. ದೇಶ ಮಹಿಳಾ ಪ್ರಧಾನಿ, ರಾಷ್ಟ್ರಪತಿ ಯನ್ನು ಕಂಡಿರಬಹುದು ಆದರೆ ಅವರೆಲ್ಲ ಶಿಕ್ಷಣ ವಂಚಿತರಾದ ಸಮಾಜದ ಅಂಚಿನ ಮಹಿಳೆಯ ಗುಂಪಿಗೆ ಸೇರಿದವರಲ್ಲ ಎಂಬುದು ಪ್ರಮುಖ ಅಂಶ. ಮಹಿಳೆ ಎಂದ ಮೇಲೆ ಎಲ್ಲ ಮಹಿಳೆಯರೂ ಒಂದೇ ಎಂಬ ಪರಿಕಲ್ಪನೆ ಸರಿ. ಆದರೆ ಇಲ್ಲಿ ಸಾಂವಿಧಾನಿಕವಾದ ಅಭಿವ್ಯಕ್ತಿ ಮತ್ತು ಹಕ್ಕುಗಳನ್ನು ಅರಿಯದ ಮಹಿಳೆಯರ ವರ್ಗಕ್ಕೆ ಈ ಹಕ್ಕುಗಳ ಕುರಿತು ಅರಿವು ಮೂಡಿಸಿ ಅವರ ಹಕ್ಕನ್ನು ಅವರಿಗೆ ನೀಡಬೇಕಾಗಿರುವುದು ಅಗತ್ಯ. ಅವರ ಧ್ವನಿ ಸಂಸತ್ತಿಗೆ ತಲುಪಬೇಕಾದರೆ ಎಲ್ಲಾ ವರ್ಗದ ಮಹಿಳೆಯರಿಗೆ ಹಕ್ಕು ಸಿಗಬೇಕಾಗಿರುವುದು ಅಗತ್ಯ.

ಇಂದಿನವರೆಗೆ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ನೋಡಿದರೆ ಎಲೈಟ್ ವರ್ಗದ ಮಹಿಳೆಗೆ ಪ್ರಾತಿನಿಧ್ಯ ಸಿಕ್ಕಿರುವುದೇ ಹೆಚ್ಚು. ಅಂಚಿನ ವರ್ಗದ ಮಹಿಳೆಯ ಧ್ವನಿಯನ್ನು ಕೇಳಬೇಕು ಅಥವಾ ಅಂತೀಮ ವರ್ಗದ ಮಹಿಳೆಗೆ ರಾಜಕೀಯ ಅವಕಾಶ ನಾವು ನೀಡಬೇಕು ಎಂದರೆ ಮಹಿಳಾ ಮೀಸಲಾತಿಯನ್ನು ಕ್ರಮಬದ್ಧವಾಗಿ ಎಲ್ಲಾ ವರ್ಗದ ಮಹಿಳೆಯರನ್ನೂ ಆಧರಿಸಿ ತರುವುದು. ಸಮಾನ ರಾಜಕೀಯ ಹಕ್ಕು ಮಹಿಳೆಗೆ ಸಹಜವಾಗಿ ಸಿಗದಿದ್ದಾಗ ಸಾಂವಿಧಾನಿಕವಾಗಿ ಪಡೆದುಕೊಳ್ಳುವ ಪ್ರಯತ್ನ ಮಾಡಬೇಕಾಗುತ್ತದೆ.

1994 ರಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಮೂಲಕ ಸ್ಥಳೀಯ ಆಡಳಿತದಲ್ಲಿ ಅಂದರೆ ಪಂಚಾಯತ್ ರಾಜ್ ಆಡಳಿತದಲ್ಲಿ ಮಹಿಳೆಯರಿಗೆ 33% ಮೀಸಲಾತಿ ತರಲಾಯಿತು. ನಂತರ ಸಂವಿಧಾನದ 108 ನೇ ತಿದ್ದುಪಡಿಯ ಮೂಲಕ ಲೋಕಸಭೆ ಮತ್ತು ರಾಜ್ಯ ಸಭೆಗೆ 33% ಮಹಿಳೆಯರ ಮೀಸಲಾತಿ ಸದನದಲ್ಲಿ ಮಂಡಿಸಲ್ಪಟ್ಟರೂ ಸದನದ ಒಪ್ಪಿಗೆ ಪಡೆದು ಪಾಸಾಗಲಿಲ್ಲ. 2014-19 ರ ಅವಧಿಯಲ್ಲಿ 543 ರಲ್ಲಿ 66 ಮಹಿಳಾ ಸಂಸದರಿದ್ದರು. ಅಂದರೆ 11% ಮಾತ್ರ. 10 ಪುರುಷ ಸಂಸದರಲ್ಲಿ ಒಬ್ಬಳು ಮಾತ್ರ ಮಹಿಳಾ ಸಂಸದೆ.

ದೇಶದಲ್ಲಿ ಇದು 17 ನೇ ಲೋಕಸಭಾ ಚುನಾವಣೆ. ಈ ಬಾರಿ ಮಹಿಳೆಯರಿಗೆ ಸೀಟು ಹಂಚಿಕೆ ನೋಡಿದರೆ, ಮಹಿಳೆಯರಿಗೆ ಮಮತಾ ಬ್ಯಾನರ್ಜಿ (ಟಿಎಂಸಿ) ಒಟ್ಟು ಸೀಟಿನ41%, ನವೀನ್ ಪಟ್ನಾಯಕ್ (ಬಿಜೆಡಿ) 33%, ಬಿಜೆಪಿ 12% ಕಾಂಗ್ರೆಸ್ 13.7% ನೀಡಿವೆ. ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ 2014ರ ಪ್ರಣಾಳಿಕೆಯಲ್ಲಿ ಲೋಕಸಭೆ ಕೇಂದ್ರ ಸರ್ಕಾರದ ಉದ್ಯೋಗದಲ್ಲಿ 33% ಮೀಸಲಾತಿ ಬಿಲ್ ಪಾಸ್ ಮಾಡುತ್ತೇವೆ ಎಂದು ಹೇಳಿದ್ದರು. ಬಿಜೆಪಿಗೆ ಬಹುಮತ ಬಂದಾಗ್ಯೂ ಬಿಲ್ ಪಾಸ್ ಆಗಲಿಲ್ಲ. ಕಾಂಗ್ರೆಸ್ ಈ ಬಾರಿ ಮತ್ತೆ ಮೀಸಲಾತಿಯನ್ನು ಪ್ರಮುಖ ವಿಷಯವಾಗಿಟ್ಟುಕೊಂಡು ಚುನಾವಣೆಗಿಳಿದಿದೆ. ತೃಣಮೂಲ ಕಾಂಗ್ರೆಸ್ (ಟಿ.ಎಂ.ಸಿ) 41% ಮತ್ತು ಬಿಜು ಜನತಾದಲ್ (ಬಿಜೆಡಿ) ಮಾತ್ರ 33% ವನ್ನು ನೀಡಿದ್ದು ಉತ್ತಮ ಸಂಗತಿ.

ಇನ್ನು ಮಹಿಳಾ ಮತದಾನದ ಹಕ್ಕು ನೋಡುವುದಾರೆ, ಈ ಬಾರಿ 18 ವರ್ಷ ಮೆಲ್ಪಟ್ಟ ಮಹಿಳೆಯರ ಸಂಖ್ಯೆ ಹೆಚ್ಚಿದೆ ಆದರೆ ಮತದಾನಕ್ಕೆ ನೋಂದಾಯಿತಗೊಂಡ ಮಹಿಳಾ ಮತದಾರರ ಸಂಖ್ಯೆ ಕಡಿಮೆಯಿದೆ ಎಂದು ‘ದಿ ವರ್ಡಿಕ್ಟ್’ ಕೃತಿಯಲ್ಲಿ ಪ್ರಣಾಯ್ ರಾಯ್ ಮತ್ತು ದೋರಬ್ ಸೋಪಾರಿವಾಲಾ ಹೇಳಿದ್ದಾರೆ. 45.1 ಕೋಟಿ ಮಹಿಳೆಯರು ಮತದಾನಕ್ಕೆ ಅರ್ಹರಾಗಿದ್ದು, ಆದರೆ 43 ಕೋಟಿ ಮಹಿಳೆಯರು ಮಾತ್ರ ಮತದಾನ ಪಟ್ಟಿಯಲ್ಲಿದ್ದಾರೆ. ಪುರುಷ ಮತದಾರ ಮತ್ತು ಮಹಿಳಾ ಮತದಾರರ ಅನುಪಾತ ನೋಡಿದರೆ. ಅರ್ಹ ಮಹಿಳಾ ಮತದಾರರು 97.2%. ಆದರೆ ಇದರಲ್ಲ ಆದರೆ ಇದರಲ್ಲಿ 92.7% ಮಾತ್ರ ಮತದಾನ ನೋಂದಾವಣಿ ಹೊಂದಿದ್ದಾರೆ. ಅಂದರೆ ಮಹಿಳೆಯರು ರಾಜಕೀಯದಲ್ಲಿ ಪಾಲ್ಗೊಳ್ಳುವಿಕೆ ಪುರುಷರಿಗಿಂತ ಕಡಿಮೆ. ಅಂದಾಜು 21 ಮಿಲಿಯನ್ ಮಹಿಳೆಯರು ಮತದಾನದ ಹಕ್ಕಿನಿಂದ ಹೊರಗಿದ್ದಾರೆ ಎಂದು ಚುನಾವಣೆ ವಿಶ್ಲೇಷಣಕಾರರಾದ ಪ್ರಣಾಯ್ ರಾಯ್ ಮತ್ತು ದೋರಬ್ ಸೋಪಾರಿವಾಲಾ ಹೇಳಿದ್ದಾರೆ.

ಸ್ವಾತಂತ್ರ್ಯ ಬಂದು 7 ದಶಕಗಳಾದರೂ ಮಹಿಳೆಯರು ರಾಜಕೀಯ ಭಾಗವಹಿಸುವಿಕೆ ಪ್ರಮಾಣ ಕಡಿಮೆಯಿದೆ. ಆದರೆ ಈ ಬಾರಿ ಪುರುಷರಿಗಿಂತ ಮಹಿಳೆಯರ ಮತದಾನ ಹೆಚ್ಚಿದೆ ಎಂದು ಭಾರತೀಯ ಚುನಾವಣಾ ಆಯೋಗ ಮೊದಲ ಹಂತ ಮತ್ತು ಎರಡನೇ ಹಂತದ ಚುನಾವಣೆ ಆಧರಿಸಿ ಹೇಳಿದೆ.

ಈ ಬಾರಿ ಲೋಕಸಭೆಗೆ ಕರ್ನಾಟಕದಿಂದ ಸೀಟು ಹಂಚಿಕೆ ನೋಡಿದರೆ. ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಇಷ್ಟು ಕಡಿಮೆ ಪ್ರಾತಿನಿಧ್ಯವನ್ನು ನೀಡಿದೆ. 2014 ರ ಚುನಾವಣೆಯಲ್ಲಿ 20 ಮಹಿಳೆಯರು ಚುನಾವಣಾ ಕಣದಲ್ಲಿದ್ದರು. ಗೆದ್ದಿದ್ದು ಶೋಭಾ ಕರಂದ್ಲಾಜೆ ಮಾತ್ರ. ಈ ಬಾರಿ ಕಾಂಗ್ರೆಸ್ ನಿಂದ ವೀಣಾ ಕಾಶಪ್ಪನವರ್, ಬಿಜೆಪಿ ಶೋಭಾ ಕರಂದ್ಲಾಜೆ ಮತ್ತು ಜೆಡಿಎಸ್ ಸುನಿತಾ ಚೌಹಾಣ್ ಗೆ ಟಿಕೇಟ್ ನೀಡಲಾಗಿದೆ.

ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಸ್ವತಂತ್ರ್ಯ ಬಂದು 70 ದಶಕಗಳಾದರೂ ಮಹಿಳೆ ತನ್ನ ರಾಜಕೀಯ ಹಕ್ಕುಗಳಿಂದ ವಂಚಿತಳಾಗುತ್ತಲೇ ಇದ್ದಾಳೆ. ರಾಜಕೀಯ ಮೀಸಲಾತಿ ವಿಷಯದಲ್ಲಿ ನಮ್ಮ ಸಂಸತ್ತು ಕೂಡ ಪುರುಷ ಪ್ರಧಾನ ವ್ಯವಸ್ಥೆಯ ಮುಖದ ಭಾಗವಾಗೆ ಈ ವರೆಗೂ ವರ್ತಿಸಿದೆ. ಮಹಿಳೆಯರ ಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯ ಮತ್ತು ಎಲ್ಲಾ ಸ್ಥರದ ಮಹಿಳೆಯರಿಗೂ ರಾಜಕೀಯ ಪ್ರಾತಿನಿಧ್ಯ ಮತ್ತು ಭಾಗವಹಿಸುವಿಕೆ ಮೀಸಲಾತಿ ಹಾಗೂ ಸರ್ಕಾರ ತನ್ನ ಕರ್ತವ್ಯ ಪರಿಪಾಲನೆ ಮೂಲಕ ಮಾಡಬೇಕಾಗಿದೆ.

Click here Support Free Press and Independent Journalism

Pratidhvani
www.pratidhvani.com