ಮಣ್ಣಿನಿಂದ ಹೊನ್ನು, ಹೊನ್ನಿನಿಂದ ಮಣ್ಣಿನೆಡೆಗೆ ಬಳ್ಳಾರಿ!
ಅಭಿಮತ

ಮಣ್ಣಿನಿಂದ ಹೊನ್ನು, ಹೊನ್ನಿನಿಂದ ಮಣ್ಣಿನೆಡೆಗೆ ಬಳ್ಳಾರಿ!

ಪ್ರಸ್ತುತ ಬಳ್ಳಾರಿ ನಾಗರಿಕರ ವೈಯಕ್ತಿಕ ಬದುಕು ಹದಗೆಟ್ಟಿದೆ ಇಡೀ ನಗರ ಶಿಥಿಲಾವಸ್ಥೆಯಲ್ಲಿದೆ. ಈಕುರಿತು ಹಿರಿಯ ಪತ್ರಕರ್ತ ಮತ್ತು ಲೇಖಕರಾದ ಸುಗತ ಶ್ರೀನಿವಾಸ ರಾಜು ಅವರು ನೈಜ ಚಿತ್ರಣವನ್ನುಕಟ್ಟಿಕೊಟ್ಟಿದ್ದಾರೆ. ಲೇಖನದ ಮೊದಲ ಭಾಗ ಇಲ್ಲಿದೆ.

ಪ್ರತಿಧ್ವನಿ ವರದಿ

ಆಂಧ್ರಪ್ರದೇಶ ಮತ್ತು ಕರ್ನಾಟಕದ ಸಂಸ್ಕೃತಿಯನ್ನು ಹಾಸು ಹೊಕ್ಕಾಗಿಸಿಕೊಂಡಿರುವ ಬಳ್ಳಾರಿ ನಗರದ ಬಗ್ಗೆ ಒಂದು ಗಾದೆ ಇದೆ. ಅದೆಂದರೆ, ಜೀವನ ಬಳ್ಳಾರಿ ಬಸ್ ಸ್ಟ್ಯಾಂಡ್ ಆದಂತೆ ಆಗಿದೆ ಎಂದು. ಪ್ರಸ್ತುತ ಬಳ್ಳಾರಿ ನಾಗರಿಕರ ವೈಯಕ್ತಿಕ ಬದುಕು ಹದಗೆಟ್ಟಿದೆ, ಜೀವನವೇ ವ್ಯರ್ಥವಾದಂತಾಗಿದೆ ಮತ್ತು ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದೇ ಹೇಳಬಹುದು. ಈ ನಗರ ಶಿಥಿಲವಾದ ವ್ಯವಸ್ಥೆಯಲ್ಲಿದೆ ಎಂಬಂತಾಗಿದೆ.

ಆದರೆ, ಅತ್ಯಂತ ಕಡಿಮೆ ಅವಧಿಗಾಗಿ ಬಳ್ಳಾರಿ ಅಭೂತಪೂರ್ವವಾದ ಅಭಿವೃದ್ಧಿಯನ್ನು ಕಂಡಿತ್ತು. 2006 ದಿಂದ 2011 ರವರೆಗೆ ಈ ನಗರ ಬಹುಬೇಗನೇ ಅಭಿವೃದ್ಧಿಯಲ್ಲಿ ಬಹಳಷ್ಟು ಬೇಗ ರೂಪಾಂತರಗೊಂಡಿತ್ತು. ನಾವೆಲ್ಲಾ ಮರೆತ್ತಿದ್ದ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಮತ್ತೆ ನೆನಪಿಸುವಂತೆ ಮಾಡುವ ರೀತಿಯಲ್ಲಿತ್ತು. ರಾತ್ರೋರಾತ್ರಿ ಇಲ್ಲಿ ಕೆಲವು ವ್ಯಕ್ತಿಗಳು ರಾಜರಾಗಿ ಮೆರೆದರು. ಆದರೆ, ಆ ವ್ಯಕ್ತಿಗಳು ಅಂದರೆ ಗಣಿಗಾರಿಕೆಯ ಕುಳ ಮತ್ತು ರಾಜಕಾರಣಿ ಗಾಲಿ ಜನಾರ್ದನ ರೆಡ್ಡಿಯ ನೇತೃತ್ವದ ಜನರು ಯಾವಾಗ ಗಣಿಯ ಧೂಳನ್ನು ಅಪ್ಪಿಕೊಂಡರೋ ಆಗ ನಗರದ ಕನಸು ಮುಗಿದಂತಾಯಿತು.

ನಾವೀಗ 2020 ರ ಹೊಸ್ತಿಲಲ್ಲಿ ಬಂದು ನಿಂತಿದ್ದೇವೆ. ಅನಿಶ್ಚತತೆಯ ಆರ್ಥಿಕ ಪ್ರಗತಿಯ ಈ ಸಂದರ್ಭದಲ್ಲಿ ನಗರಗಳ ಗುಣಮಟ್ಟದ ಪ್ರಗತಿಗೆ ಅಡ್ಡಿಯಾಗಿದೆ. ಭಾರತದ ಯಾವುದೇ ನಗರಕ್ಕಿಂತಲೂ ಹೆಚ್ಚಾಗಿ ಬಳ್ಳಾರಿ ನಗರವು ತಪ್ಪಿನ ಒಂದು ಸಂಕೇತವಾಗಿ ಭಾಸವಾಗುತ್ತಿದೆ. ಹಲವಾರು ಎರಡನೇ ಹಂತದ ನಗರಗಳು ಕಾಣುತ್ತಿದ್ದ ಕನಸುಗಳು ಎಂದಿಗೋ ನುಚ್ಚು ನೂರಾಗಿ ಹೋದವು. ಬಳ್ಳಾರಿ ವಿಚಾರದಲ್ಲಿಯೂ ಅದೇ ಆಗಿದೆ. ಇಲ್ಲಿ ಕೇವಲ ಒಬ್ಬ ವ್ಯಕ್ತಿ ಮತ್ತು ಆತನ ಪಟಾಲಂನಿಂದಾಗಿ ಈ ಕನಸುಗಳು ಕುಸಿದು ಬಿದ್ದವು.

ರೆಡ್ಡಿ ರಿಪಬ್ಲಿಕ್

ಬಳ್ಳಾರಿಯನ್ನು ಮಾಧ್ಯಮ ದಶಕಗಳಿಗೂ ಹೆಚ್ಚು ಕಾಲ ರೆಡ್ಡಿ ಸಾಮ್ರಾಜ್ಯ ಎಂದೇ ಬಿಂಬಿಸಿತ್ತು. ಬಳ್ಳಾರಿ ಎಂಬುದು ಕೇವಲ ನಗರವಾಗಿರಲಿಲ್ಲ ಅಥವಾ ಜಿಲ್ಲೆಯಾಗಿರಲಿಲ್ಲ. ಅದು ರೆಡ್ಡಿ ರಿಪಬ್ಲಿಕ್ ಆಗಿತ್ತು! ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವು 2008 ರಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ರೆಡ್ಡಿ ಮೂಲಸೌಕರ್ಯ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರು. ಅವರ ಹಿರಿಯ ಸಹೋದರ ಬಳ್ಳಾರಿ ಲೋಕಸಭಾ ಕ್ಷೇತ್ರದ ಪ್ರತಿನಿಧಿಯಾಗಿದ್ದರು. ಕಿರಿಯ ಸೋದರ ಬಳ್ಳಾರಿಯ ಮೊದಲ ಮೇಯರ್ ಆಗಿದ್ದರೆ, ಪರಮಾಪ್ತ ಆರೋಗ್ಯ ಸಚಿವರಾಗಿದ್ದರು. ಇದೇ ರೆಡ್ಡಿಗಳು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ನೆರವಾಗಿದ್ದರು ಮತ್ತು ಸರ್ಕಾರದ ಮೇಲೆ ಹಿಡಿತ ಸಾಧಿಸಿದ್ದರು. ಇದೇ ರಾಜಕೀಯ ಪ್ರಭಾವವದಿಂದ ನಗರ ಅಭಿವೃದ್ಧಿಯಾಗುತ್ತದೆ ಎಂಬ ಮಹತ್ವಾಕಾಂಕ್ಷೆಯನ್ನು ಹೊಂದಲಾಗಿತ್ತು.

2009 ರ ಆರಂಭದಲ್ಲಿ ವಿಧಾನಪರಿಷತ್ತಿನಲ್ಲಿ ರೆಡ್ಡಿ ಒಂದು ಮಾತು ಹೇಳಿದ್ದರು. ಅದೆಂದರೆ:- ``ಬಳ್ಳಾರಿ ನಮಗೆ ಸೇರಿದ್ದು’’. ವಿಚಿತ್ರವೆಂದರೆ ಹೀಗೆ ಧೈರ್ಯದಿಂದ ನಗರ ನನ್ನದೇ ಎಂದು ಹೇಳಿದ್ದ ಇದೇ ವ್ಯಕ್ತಿಗೆ ಬಳ್ಳಾರಿ ನಗರವನ್ನು ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ 2015 ರಲ್ಲಿ ನಿಷೇಧ ಹೇರಿತ್ತು. ಇದೇ ವ್ಯಕ್ತಿ ಅಕ್ರಮ ಗಣಿಗಾರಿಕೆ ಆರೋಪದಲ್ಲಿ 2011 ರಿಂದ ಸುಮಾರು ಮೂರು ವರ್ಷಗಳ ಕಾಲ ಜೈಲುವಾಸ ಅನುಭವಿಸಬೇಕಾಯಿತು. ಜಾಮೀನು ಸಿಕ್ಕ ನಂತರವೂ ಈ ರೆಡ್ಡಿಗೆ ಬಳ್ಳಾರಿ ಪುರ ಪ್ರವೇಶದ ಭಾಗ್ಯವೇ ಸಿಗಲಿಲ್ಲ.

ರೆಡ್ಡಿ ಮತ್ತು ಆತನ ಸಂಗಡಿಗರು ಬಳ್ಳಾರಿ ನಗರದ ಬಗ್ಗೆ ಏನು ಕನಸು ಕಂಡಿದ್ದರು ಎಂಬುದನ್ನು ನೋಡುವುದಾದರೆ, ನಗರ ನಾಶದ ಅಂಚಿಗೆ ತಲುಪಿರುವ ಈಗಿನ ಸ್ಥಿತಿಯನ್ನು ಅವಲೋಕಿಸಬೇಕಾಗುತ್ತದೆ. ಆಂಧ್ರಪ್ರದೇಶದ ಅನಂತಪುರದಿಂದ ಬಳ್ಳಾರಿಯನ್ನು ಪ್ರವೇಶಿಸಿದರೆ ಆಗಿರುವ ಬದಲಾವಣೆಯನ್ನು ನೀವು ಒಪ್ಪುವುದಿಲ್ಲ. ಅಂತಾರಾಜ್ಯ ಗಡಿಯಿಂದ ಕೇವಲ 25 ಕಿಲೋಮೀಟರ್ ದೂರದಲ್ಲಿರುವ ಈ ನಗರವನ್ನು ಪ್ರವೇಶಿಸುತ್ತಿದ್ದಂತೆಯೇ ಏನು ಪರಿವರ್ತನೆಯಾಗಿದೆ ಎಂಬುದನ್ನು ನೀವು ತಿಳಿಯುತ್ತೀರಿ. ಉತ್ತಮವಾದ ರಸ್ತೆಗಳು, ಹಚ್ಚ ಹಸಿರಿನಿಂದ ಕಂಗೊಳಿಸುವ ನೀರಾವರಿ ಜಮೀನುಗಳು, ನೂರಾರು ಎಕರೆಗಳಲ್ಲಿ ಬೆಳೆದು ನಿಂತಿರುವ ಸೂರ್ಯಕಾಂತಿ ಪೈರು, ಮುಗಿಲೆತ್ತರದಲ್ಲಿ ತಿರುಗುತ್ತಿರುವ ಹತ್ತಾರು ಪವನ ವಿದ್ಯುತ್ ಘಟಕಗಳ ಫ್ಯಾನ್ ಗಳನ್ನು ಕಾಣುತ್ತೀರಿ.

<a href="http://truthprofoundationindia.com/">http://truthprofoundationindia.com/</a>

ನೀವು ಬಳ್ಳಾರಿ-ಕೃಷ್ಣಪಟ್ಟಣಂ ಬಂದರು ರಸ್ತೆಯಲ್ಲಿ ಸಾಗುತ್ತಾ ಹೋದರೆ ನಗರದ ಕನಸಿನ ವೇಗವು ನಿಮಗೆ ಸ್ಪಷ್ಟವಾಗುತ್ತದೆ. ಈ ಹಿಂದೆ ಅಸ್ತಿತ್ವದಲ್ಲಿದ್ದಿದ್ದಕ್ಕಿಂತ ಹೆಚ್ಚು ಧೂಳನ್ನು ಸ್ಥಗಿತಗೊಂಡಿದ್ದ ರಾಜ್ಯ ಹೆದ್ದಾರಿಯ ವಿಸ್ತರಣಾ ಯೋಜನೆ ಎಬ್ಬಿಸುತ್ತಿದೆ. ಕಿತ್ತು ಹೋಗಿರುವ ಮತ್ತು ಅರೆ ಬರೆ ಕಿತ್ತು ಹೋಗಿರುವ ರಸ್ತೆಗಳ ಮೇಲ್ಮೈಗಳು ಬಳ್ಳಾರಿಯ ಈಗಿನ ಕತೆಯನ್ನು ಹೇಳಲು ನಿಂತಿರುವಂತೆ ಕಾಣುತ್ತವೆ. ಇನ್ನು ಇಲ್ಲಿರುವ ಹಲವು ಬಗೆಯ ಕಟ್ಟಡಗಳು ಅಥವಾ ಕಾಮಗಾರಿಗಳು ಅರ್ಧಕ್ಕೇ ನಿಂತು ಸೊರಗುತ್ತಿವೆ. ಮೊನಚಾದ ರಾಡುಗಳೊಂದಿಗೆ ಅರೆ-ಬರೆ ನಿರ್ಮಾಣವಾಗಿ ನಿಂತಿರುವ ಕಂಬಗಳು ಒಂದು ರೀತಿಯಲ್ಲಿ ತುಕ್ಕು ಹಿಡಿದಿರುವ ಕಿರೀಟವನ್ನು ನೆನಪಿಸುತ್ತವೆ. ಈ ಕಂಬಗಳನ್ನು ಯಾವ ಯೋಜನೆಗಾಗಿ ನಿರ್ಮಿಸಲಾಗಿದೆ ಎಂಬ ನೆನಪನ್ನೇ ಇಲ್ಲಿನ ಜನರು ಕಳೆದುಕೊಂಡಿದ್ದಾರೆ.

ಜೋಳದ ರಾಶಿ ಗ್ರಾಮದ ಸಂಗಣ್ಣ ಅವರು ಈ ಕಂಬಗಳ ವಿಚಾರವನ್ನು ಪ್ರಸ್ತಾಪಿಸಿದ್ದು ಹೀಗೆ:- ``ಇಲ್ಲಿ ಕಂಬಗಳನ್ನು ಏಕೆ ಹಾಕಿದ್ದಾರೆ ಎಂಬುದು ನಮಗಂತೂ ಗೊತ್ತೇ ಇಲ್ಲ. ಆದರೆ, ಇವುಗಳನ್ನು ಪೋಸ್ಟರ್ ಅಂಟಿಸಲು ಬಳಸಲಾಗುತ್ತಿದೆ. ನಮ್ಮ ಹಸುಗಳು ಬೆನ್ನು ಉಜ್ಜಿಕೊಳ್ಳಲು ಈ ಕಂಬಗಳನ್ನು ಬಳಸುತ್ತಿವೆ. ಇನ್ನು ನಮ್ಮ ನಾಯಿಗಳಿಗೆ ತಮ್ಮ ವ್ಯಾಪ್ತಿಯನ್ನು ಗುರುತಿಸಿಕೊಳ್ಳುವ ಹೊಸ ಜಾಗದಂತಾಗಿದೆ’’.

ಇನ್ನೂ ಮುಂದುವರಿದು ನೋಡಿದರೆ ಅರ್ಧಕ್ಕೇ ನಿಂತು ಸೊರಗುತ್ತಿರುವ ಒಂದು ಅಂಡರ್ ಪಾಸ್ ಕಾಣುತ್ತದೆ. ಸಾಮಾನ್ಯವಾಗಿ ಕರ್ನಾಟಕದಲ್ಲಿ ಕರೆಯಲ್ಪಡುವ `ಬಳ್ಳಾರಿ ಜಾಲಿ’ ಬೆಳೆದು ಈ ಅಂಡರ್ ಪಾಸ್ ಅನ್ನು ಇತಿಹಾಸದ ಪುಟಗಳನ್ನು ಸೇರುವಂತೆ ಮಾಡಿದೆ.

ಬಳ್ಳಾರಿ ನಗರವನ್ನು ಕಕ್ಕೆಬೇವಿನಹಳ್ಳಿಯಿಂದ ಪ್ರವೇಶಿಸಿದರೆ ಅಲ್ಲೊಂದು ಹಿರಿಯ ಪ್ರಾಥಮಿಕ ಶಾಲೆ ಕಾಣಸಿಗುತ್ತದೆ. ಅದರ ಮುಂಭಾಗವೊಂದು ಗ್ರಾನೈಟ್ ಶಿಲೆಯಿದೆ. ಅದರಲ್ಲಿ ``ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ & ನೈರ್ಮಲ್ಯ ಸೌಲಭ್ಯಗಳನ್ನು ಬಿಎಂಡಬ್ಲ್ಯೂ ಪ್ರಾಯೋಜಿಸಿದೆ’’ ಎಂದು ಬರೆದಿದೆ. ಅದರಲ್ಲಿ 20 ಡಿಸೆಂಬರ್ 2011 ಎಂಬ ದಿನಾಂಕವಿದೆ. ಮಹಾತ್ವಾಕಾಂಕ್ಷೆಗಳು ಸಾಯುವ ಕೆಲವೇ ದಿನಗಳ ಹಿಂದೆ ಬರೆಯಲಾಗಿದೆ.

<a href="http://truthprofoundationindia.com/">http://truthprofoundationindia.com/</a>

ಈ ವಿಚಾರದಲ್ಲಿ ನಗರದ ಕೇಂದ್ರ ಭಾಗ ಮತ್ತು ಹೊರಗಿನ ಭಾಗವನ್ನು ಪ್ರತ್ಯೇಕಿಸಲಾಗುವುದಿಲ್ಲ. ಇಲ್ಲಿ ಅಸಮರ್ಪಕವಾಗಿ ನಿರ್ವಹಣೆ ಮಾಡುತ್ತಿರುವ ದ್ವಿಪಥ ರಸ್ತೆಗಳಿವೆ. ಈ ರಸ್ತೆಗಳಲ್ಲಿ ಅಲ್ಲಲ್ಲಿಯೇ ಬಿಡಾಡಿ ಹಸುಗಳು ನಮ್ಮ ಚಾಲನಾ ವೇಗಕ್ಕೆ ಬ್ರೇಕ್ ಹಾಕುವ ರೀತಿಯಲ್ಲಿ ನಿಂತಿರುತ್ತವೆ. ಸ್ಥಳೀಯರು ಹೇಳುವಂತೆ 2008-09 ರ ಅವಧಿಯಲ್ಲಿ ಬಳ್ಳಾರಿ ಉಸ್ತುವಾರಿ ಮಂತ್ರಿಯೂ ಆಗಿದ್ದ ರೆಡ್ಡಿ ಕೆಲವೊಂದು ರಸ್ತೆಗಳನ್ನು ದ್ವಿಪಥ ರಸ್ತೆಗಳನ್ನಾಗಿ ವಿಸ್ತರಣೆ ಮಾಡಲು ಮತ್ತು ಕೆಲವು ಹೊಸ ರಸ್ತೆಗಳ ನಿರ್ಮಾಣ ಮಾಡಲು ನಿರ್ಧರಿಸಿದ್ದರು. ಇದು ನಿದ್ದೆಯಲ್ಲಿದ್ದ ನಗರವನ್ನು ಆತುರಾತುರವಾಗಿ ಅಭಿವೃದ್ಧಿ ಮಾಡಲು ಹೊರಟಂತಿತ್ತು.

ಎಲ್ಲಾ ರಸ್ತೆಗಳೂ ರೆಡ್ಡಿ ಮತ್ತವರ ಸಂಗಡಿಗರ ಆಸ್ತಿಗಳಿಗೆ ಸಂಪರ್ಕದ ಕೊಂಡಿ

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಈ ಎಲ್ಲಾ ದ್ವಿಪಥದ ರಸ್ತೆಗಳು ರೆಡ್ಡಿ ಮತ್ತು ಅವರ ಸಂಗಡಿಗರು ಹೊಸದಾಗಿ ಖರೀದಿಸಿ ಆಸ್ತಿಗಳಿಗೆ ಸಂಪರ್ಕ ಕಲ್ಪಿಸಲೆಂದೇ ನಿರ್ಮಾಣ ಮಾಡಿದಂತಿವೆ. ಈ ಅಭಿವೃದ್ಧಿಯ ಹಿಂದೆ ಜನೋಪಕಾರಕ್ಕಿಂತ ರಿಯಲ್ ಎಸ್ಟೇಟ್ ಗೆ ಹೆಚ್ಚು ಆದ್ಯತೆ ನೀಡುವಂತೆ ಇದೆ ಎಂಬ ಶಂಕೆ ಸ್ಥಳೀಯರದ್ದಾಗಿತ್ತು.

ಹೊಟೇಲ್ ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುವ ಮನೋಹರ್ ಅವರು ಈ ಬಗ್ಗೆ ಮಾತನಾಡಿ, ``ಹೊಸ ರಸ್ತೆಗಳು ಹೊಸ ವ್ಯವಹಾರಗಳಿಗೆ ಪೂರಕವಾಗಿರಬೇಕು. ಆದರೆ, ಆ ತರಹದ್ದು ಏನೂ ಆಗಿಲ್ಲ. ಭೂಮಿಯ ಬೆಲೆಯನ್ನು ಕೃತಕವಾಗಿ ಹೆಚ್ಚಿಸುವುದು ಇದರ ಉದ್ದೇಶವಾಗಿತ್ತು. ಇಂದಿಗೂ ಯಾವುದೇ ಅಭಿವೃದ್ಧಿಯಾಗದಿದ್ದರೂ ಭೂಮಿಯ ಬೆಲೆ ಮಾತ್ರ ಇಳಿದಿಲ್ಲ. ಎಲ್ಲವೂ ಆತುರದಲ್ಲಿ ಮತ್ತು ಯೋಜನಾರಹಿತವಾಗಿ ಆಗಿದ್ದು. ಅಂದು ರೆಡ್ಡಿ ಬ್ರದರ್ಸ್ ಆಡಳಿತವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡರು. ಅದರ ವಿರುದ್ಧ ಯಾರೂ ಧ್ವನಿ ಎತ್ತಲಿಲ್ಲ’’ ಎಂದು ಹೇಳಿದ್ದಾರೆ.

ಇಲ್ಲಿನ ಕ್ರೀಡಾ ಸಂಕೀರ್ಣ ಅಭಿವೃದ್ಧಿ ಕಾಣದೇ ಮಕಾಡೆ ಮಲಗಿದಂತಹ ಸ್ಥಿತಿಯಲ್ಲಿದೆ. ಈ ಬಗ್ಗೆ ಸ್ಥಳೀಯ ಪತ್ರಕರ್ತರಾದ ನರಸಿಂಹ ಮೂರ್ತಿ ಅವರು ಹೇಳುವುದು ಹೀಗೆ:- ``ರೆಡ್ಡಿ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಸಲುವಾಗಿ ಕ್ರೀಡಾಂಗಣದ ಬಹುತೇಕ ಭಾಗವನ್ನು ಒಡೆದು ಹಾಕಲಾಯಿತು. ಆದರೆ, ಅದನ್ನು ಸರಿಯಾದ ಸಮಯಕ್ಕೆ ಪುನರ್ ನಿರ್ಮಾಣ ಮಾಡಲೇ ಇಲ್ಲ. ಬಳಕೆಯಾಗದ ಬಾಸ್ಕೆಟ್ ಬಾಲ್ ಕೋರ್ಟ್ ಸೇರಿದಂತೆ ಇನ್ನಿತರೆ ವ್ಯರ್ಥವಾದ ಕಾರ್ಯಗಳು ನಗರದೆಲ್ಲೆಡೆ ಕಂಡು ಬರುವ ಅರೆ-ಬರೆ ಕಾಮಗಾರಿಗಳು ಮತ್ತು ಯೋಜನೆಗಳಿಗೆ ಹಿಡಿದ ಕನ್ನಡಿಯಂತಿವೆ. ಇಂತಹ ಸ್ಥಿತಿಯನ್ನು ನಗರಾದ್ಯಂತ ಕಾಣಬಹುದಾಗಿದೆ. ಈ ಕ್ರೀಡಾ ಸಮುಚ್ಚಯದ ಸುತ್ತಮುತ್ತ ಹಲವಾರು ಶೈಕ್ಷಣಿಕ, ಚಾರಿಟಬಲ್ ಮತ್ತು ವಸತಿ ಯೋಜನೆಗಳನ್ನು ರೆಡ್ಡಿ ಅನುಷ್ಠಾನಗೊಳಿಸಲು ಮುಂದಾಗಿದ್ದರಾದರೂ ಅವುಗಳೆಲ್ಲವೂ ಆರಂಭಿಕ ಹಂತದಲ್ಲಿಯೇ ಸೊರಗಿ ಕೊನೆಯುಸಿರೆಳೆಯುವ ಹಂತಕ್ಕೆ ತಲುಪಿವೆ. ಇಲ್ಲಿ ಕೇವಲ ರೆಡ್ಡಿ ಜಾರಿಗೊಳಿಸಿದ ಯೋಜನೆಗಳು ಮಾತ್ರವಲ್ಲ, ಸರ್ಕಾರಿ ಯೋಜನೆಗಳೂ ಸಹ ಇನ್ನೂ ಟೇಕಾಫ್ ಆಗಿಯೇ ಇಲ್ಲ. ತ್ಯಾಜ್ಯ ವಿಂಗಡಣೆ ಕಾರ್ಯವಂತೂ ಕಾರ್ಯನಿರ್ವಹಿಸುತ್ತಿಲ್ಲ. ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಲಾಯಿತಾದರೂ ಅದರ ಕಾಮಗಾರಿ ಅಪೂರ್ಣವಾಗಿದೆ. ತುಂಗಾಭದ್ರಾ ಜಲಾಶಯ 60 ಕಿಲೋಮೀಟರ್ ದೂರದಲ್ಲಿದ್ದರೂ ನಗರಕ್ಕೆ 15 ದಿನಗಳಿಗೊಮ್ಮೆ ಕುಡಿಯುವ ನೀರು ಬರುವ ಸ್ಥಿತಿ ಇದೆ. ನಗರದ ಪ್ರತಿಯೊಂದು ಭಾಗದ ಯೋಜನೆಗಳೆಲ್ಲವೂ ನಿರ್ಮಾಣ ಹಂತದಲ್ಲಿಯೇ ಇವೆ. ಅಭಿವೃದ್ಧಿ ಯೋಜನೆಯೆಂಬ ಕನಸಿನ ಗೋಪುರವನ್ನು ನಿರ್ಮಿಸಲಾಯಿತೇ ಹೊರತು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಸಂಪೂರ್ಣ ವಿಫಲವಾದಂತಾಗಿದೆ. ಹೀಗಾಗಿ, ಬಳ್ಳಾರಿ ನಗರ ಅಭಿವೃದ್ಧಿ ಕಾಣುವುದರ ಬದಲಾಗಿ ಹಿಮ್ಮುಖವಾಗಿ ಚಲಿಸುವಂತೆ ಮಾಡಿದೆ’’ ಎಂದು ಬಳ್ಳಾರಿ ಚಿತ್ರಣವನ್ನು ವಿವರಿಸಿದ್ದಾರೆ.

(ಮುಂದುವರಿಯುವುದು).

ಕೃಪೆ: ಲೈವ್ ಮಿಂಟ್

Click here to follow us on Facebook , Twitter, YouTube, Telegram

Pratidhvani
www.pratidhvani.com