ವಾರಣಾಸಿ: ಮಸೀದಿ ಅಡಿಯಲ್ಲಿ ದೇವಾಲಯವಿದೆಯೇ ಎಂದು ಸರ್ವೇ ನಡೆಸಲು ಆದೇಶ ನೀಡಿದ ಕೋರ್ಟ್

1664 ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ ಪುರಾತನ ದೇವಾಲಯದ ಮೇಲೆ ಮಸೀದಿಯನ್ನು ನಿರ್ಮಿಸಿದ್ದಾನೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ವಾರಣಾಸಿ: ಮಸೀದಿ ಅಡಿಯಲ್ಲಿ ದೇವಾಲಯವಿದೆಯೇ ಎಂದು ಸರ್ವೇ ನಡೆಸಲು ಆದೇಶ ನೀಡಿದ ಕೋರ್ಟ್

ವಾರಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ಭೌತಿಕ ಸಮೀಕ್ಷೆ ನಡೆಸಲು ವಾರಣಾಸಿಯ ನ್ಯಾಯಾಲಯವು ಭಾರತದ ಪುರಾತತ್ವ ಇಲಾಖೆಗೆ (ASI) ಆದೇಶಿಸಿದೆ.

ಮೊಘಲ್ ಚಕ್ರವರ್ತಿ ಔರಂಗಜೇಬನು "ಭಗವಾನ್ ವಿಶ್ವೇಶ್ವರ" ಎಂಬ ಪುರಾತನ ದೇವಾಲಯವನ್ನು ನೆಲಸಮಗೊಳಿಸಿ, ಆ ದೇವಾಲಯದ ಅವಶೇಷಗಳ ಸಹಾಯದಿಂದ ಮಸೀದಿಯನ್ನು ನಿರ್ಮಿಸಿದ್ದಾನೆ ಎಂದು ಮೂರು ದಶಕಗಳ ಹಿಂದೆ ಹಾಕಿದ್ದ ಹಳೆಯ ಅರ್ಜಿಯೊಂದರಲ್ಲಿ ತೀರ್ಪು ನೀಡುವಾಗ ನ್ಯಾಯಾಲಯ ಈ ಸಮೀಕ್ಷೆಗೆ ಆದೇಶಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನ್ಯಾಯಾಲಯವು ತನ್ನ ಆದೇಶದಲ್ಲಿ, ಪುರಾತತ್ತ್ವ ಶಾಸ್ತ್ರದ ವಿಜ್ಞಾನವನ್ನು ಚೆನ್ನಾಗಿ ತಿಳಿದಿರುವ ಐವರು ಸದಸ್ಯರ ಸಮಿತಿಯನ್ನು ರಚಿಸುವಂತೆ ಸೂಚಿಸಿದ್ದು, ಹಾಗೂ, ಅದರಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಇಬ್ಬರಿಗೆ ಆದ್ಯತೆ ನೀಡುವಂತೆ ಭಾರತದ ಪುರಾತತ್ವ ಇಲಾಖೆ ಮಹಾನಿರ್ದೇಶಕರಿಗೆ ಹೇಳಿದೆ. ಅಲ್ಲದೆ, ಸಮಿತಿಯ ಮೇಲ್ವಿಚಾರಕರಾಗಿ ಒಬ್ಬ ಪ್ರಖ್ಯಾತ ವಿದ್ವಾಂಸ ಅಥವಾ ಶಿಕ್ಷಣ ತಜ್ಞರನ್ನು ನೇಮಕ ಮಾಡುವಂತೆಯೂ ನ್ಯಾಯಾಲಯ ಸೂಚಿಸಿದೆ.

ನ್ಯಾಯಾಲಯವು ತನ್ನ ಆದೇಶದಲ್ಲಿ, ವಿವಾದಿತ ಸ್ಥಳದಲ್ಲಿ ಪ್ರಸ್ತುತ ನಿಂತಿರುವ ಧಾರ್ಮಿಕ ರಚನೆಯು ಬೇರೆ ಯಾವುದೇ ಧಾರ್ಮಿಕ ರಚನೆಯ ಮೇಲಿನ ಅತಿಕ್ರಮಣ ಮಾಡಿ ರಚಿಸಲಾಗಿದೆಯೇ ಎಂದು ಕಂಡುಹಿಡಿಯುವುದು ಪುರಾತತ್ತ್ವ ಶಾಸ್ತ್ರದ ಸಮೀಕ್ಷೆಯ ಮುಖ್ಯ ಉದ್ದೇಶವೆಂದು ತಿಳಿಸಿದೆ.

ವಿವಾದಿತ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸುವ ಮೊದಲು ಅಥವಾ ಹಿಂದೂ ಸಮುದಾಯಕ್ಕೆ ಸೇರಿದ ಯಾವುದೇ ದೇವಾಲಯವು ಅಸ್ತಿತ್ವದಲ್ಲಿತ್ತೇ ಎಂಬುದನ್ನು ಸಮಿತಿಯು ಪತ್ತೆಹಚ್ಚುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣದ ಮೂಲ ಅರ್ಜಿಯನ್ನು 1991 ರಲ್ಲಿ ಸಲ್ಲಿಸಲಾಗಿದೆ. 1664 ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ ಪುರಾತನ ದೇವಾಲಯದ ಮೇಲೆ ಮಸೀದಿಯನ್ನು ನಿರ್ಮಿಸಿದ್ದಾನೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಅದಾಗ್ಯೂ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಆರ್.ಶಂಶದ್ ಅವರು, ಮೊಕದ್ದಮೆಯನ್ನು ನಿರ್ವಹಿಸಲಾಗದು ಮತ್ತು 1991 ರಲ್ಲಿ ಮಾಡಿದ ಕಾನೂನಿನ ದೃಷ್ಟಿಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

"ಈ ಮೊಕದ್ದಮೆಯನ್ನು ವಜಾಗೊಳಿಸುವಂತೆ ಕೋರಿ ಅರ್ಜಿಯನ್ನು ಸಲ್ಲಿಸಲಾಗಿದ್ದು, ಅದರ ಮೇಲೆ ಜಿಲ್ಲಾ ನ್ಯಾಯಾಲಯವು ಆದೇಶ ಹೊರಡಿಸಿದೆ. ಈಗ ಮೊಕದ್ದಮೆಯನ್ನು ಆಲಿಸಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಇಡೀ ವಿಚಾರಣೆ ಬಾಕಿ ಇದೆ. ಈ ಹಿನ್ನೆಲೆಯಲ್ಲಿ, ಅಲಹಾಬಾದ್ ಹೈಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇದೆ. ಈ ಹಂತದಲ್ಲಿ ಅಂತಹ (ಸಮೀಕ್ಷೆಗೆ ಹೊರಡಿಸಿರುವ) ಆದೇಶವನ್ನು ಅಂಗೀಕರಿಸಬಾರದು" ಎಂದು ಅವರು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com