ದೇಶದ ಒಟ್ಟು ಕೋವಿಡ್ ಪ್ರಕರಣದಲ್ಲಿ 60% ಪ್ರಕರಣಗಳು ಮಹಾರಾಷ್ಟ್ರ ಒಂದರಲ್ಲೇ ದಾಖಲಾಗುತ್ತಿದೆ. ಈ ನಡುವೆ, ಮಹಾರಾಷ್ಟ್ರದಲ್ಲಿ ಕರೋನಾ ಲಸಿಕೆಯ ಕೊರತೆ ಎದುರಾಗಿದ್ದು, ರಾಜ್ಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ರಾಜ್ಯದ ಲಸಿಕಾ ಕೇಂದ್ರಗಳಲ್ಲಿ ಇನ್ನು ಕೇವಲ ಮೂರು ದಿನಕ್ಕಾಗುವಷ್ಟು ಲಸಿಕೆ ಲಭ್ಯವಿದೆ.ರಾಜ್ಯದಲ್ಲಿ ಅತೀ ಹೆಚ್ಚು ಕರೋನಾ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಬಳಿ ಇನ್ನಷ್ಟು ಲಸಿಕೆಗಳಿಗೆ ಬೇಡಿಕೆ ಸಲ್ಲಿಸಿದ್ದೇವೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೊಪೆ ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದಿನವೊಂದಕ್ಕೆ 5 ಲಕ್ಷದಷ್ಟು ಲಸಿಕೆ ಹಾಕುತ್ತಿರುವುದರಿಂದ ಒಂದು ವಾರದಲ್ಲಿ 40 ಲಕ್ಷ ಲಸಿಕೆಗಳ ಅಗತ್ಯವಿದೆ. ಸದ್ಯ ರಾಜ್ಯದಲ್ಲಿ ಕೇವಲ 14 ಲಕ್ಷ ಲಸಿಕೆ ಇವೆ. ಇದು ಕೇವಲ ಮೂರು ದಿನಗಳಿಗೆ ಮಾತ್ರ ಸಾಕಾಗುತ್ತದೆ. ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ತಿಳಿಸಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ಹಲವು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಕೊರತೆ ಇರುವುದರಿಂದ ಅವುಗಳನ್ನು ತಾತ್ಕಾಲಿಕ ಮುಚ್ಚುತ್ತಿದ್ದೇವೆ. ಹಾಗೂ, ಲಸಿಕೆ ಇಲ್ಲದ ಕಾರಣ ಜನರನ್ನು ನಾವು ಹಿಂದಕ್ಕೆ ಕಳಿಸುತ್ತಿದ್ದೇವೆ. ನಮಗೆ ಕೇಂದ್ರ ಸರ್ಕಾರ ಲಸಿಕೆಹಗಳನ್ನು ಕಳುಹಿಸಬೇಕೆಂದು ಹರ್ಷವರ್ಧನ್ ಅವರಲ್ಲಿ ಕೇಳಿಕೊಂಡಿರುವುದಾಗಿ ರಾಜೇಶ್ ಟೊಪೆ ಹೇಳಿದ್ದಾರೆ.
ಕರೋನಾ ಲಸಿಕೆ ಕೊರತೆಯಿರುವುದನ್ನು ಧೃಡೀಕರಿಸಿರುವ ಮುಂಬೈ ಮಹಾನಗರ ಪಾಲಿಕೆ ಮೇಯರ್ ಕಿಶೋರಿ ಪೆಡ್ನೇಕರ್, ʼಮುಂಬೈಯಲ್ಲಿ ಕರೋನಾ ಲಸಿಕೆ ಮುಗಿಯುತ್ತಾ ಬಂದಿವೆ. ಬಹುತೇಕ ಲಸಿಕೆಗಳನ್ನು ನಮ್ಮ ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ. ನಮ್ಮಲ್ಲಿ ಒಂದು ಲಕ್ಷ ಚಿಲ್ಲರೆ ಲಸಿಕೆಗಳಷ್ಟೇ ಉಳಿದಿವೆ. ಈ ಕುರಿತು ರಾಜ್ಯ ಆರೋಗ್ಯ ಸಚಿವರು ಕೇಂದ್ರದೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.
"ಇಂದು ಅಥವಾ ನಾಳೆ ಮಹಾರಾಷ್ಟ್ರದ ಅನೇಕ ಜಿಲ್ಲೆಗಳಲ್ಲಿ ಲಸಿಕೆ ಸ್ಟಾಕ್ ಖಾಲಿಯಾಗುತ್ತವೆ. ಕೇಂದ್ರಕ್ಕೆ ಪರಿಸ್ಥಿತಿಯ ಬಗ್ಗೆ ತಿಳಿಸಲಾಗಿದೆ. ಈ ಕುರಿತು ಕೇಂದ್ರದೊಂದಿಗೆ ಲಿಖಿತವಾಗಿ ಕೂಡಾ ಸಂವಹನ ನಡೆಸಿದ್ದೇವೆ" ಎಂದು ಮಹಾರಾಷ್ಟ್ರದ ಆರೋಗ್ಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ವ್ಯಾಸ್ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.