ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ವಿರುದ್ದ ತನಿಖೆಗೆ ಸಿಬಿಐ ಯೋಜನೆ ಏನು?

ದೇಶ್‌ಮುಖ್ ವಿರುದ್ಧ ಮುಂಬೈ ಮಾಜಿ ಕಮಿಷನರ್ ಪರಮ್ ಬಿರ್ ಸಿಂಗ್ ಆರೋಪಿಸಿರುವ ಭ್ರಷ್ಟಾಚಾರದ ಆರೋಪದ ಬಗ್ಗೆ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಸಲು ಸಿಬಿಐ ಸಿದ್ದತೆ ಮಾಡಿಕೊಂಡಿದೆ
ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ವಿರುದ್ದ ತನಿಖೆಗೆ ಸಿಬಿಐ ಯೋಜನೆ ಏನು?

ಕಳೆದ ವಾರ ಮಹಾರಾಷ್ಟ್ರ ರಾಜ್ಯದಲ್ಲಿ ಭಾರೀ ತಲ್ಲಣ ಸೃಷ್ಟಿಸಿದ್ದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರು ಪೋಲೀಸ್ ಅಧಿಕಾರಿಗಳಿಂದ ತಿಂಗಳಿಗೆ ನೂರು ಕೋಟಿ ರೂಪಾಯಿ ಹಫ್ತಾ ವಸೂಲಿ ಮಾಡಿಕೊಡಬೇಕೆಂದು ಮಾಡಿರುವ ಆರೋಪವನ್ನು ನ್ಯಾಯಾಲಯವು ಕೇಂದ್ರೀಯ ತನಿಖಾ ಸಂಸ್ಥೆ ಸಿಬಿಐ ತನಿಖೆಗೆ ಒಪ್ಪಿಸಿದೆ.

ದೇಶ್‌ಮುಖ್ ವಿರುದ್ಧ ಹಿರಿಯ ಐಪಿಎಸ್ ಅಧಿಕಾರಿ ಪರಮ್ ಬಿರ್ ಸಿಂಗ್ ಆರೋಪಿಸಿರುವ ಭ್ರಷ್ಟಾಚಾರದ ಆರೋಪದ ಬಗ್ಗೆ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಸಲು ಸಿಬಿಐ ಸಿದ್ದತೆ ಮಾಡಿಕೊಂಡಿದೆ. ಈ ಅಪರೂಪದ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದ ಪ್ರಕಾರ ಮಂಗಳವಾರ ರಾತ್ರಿ ಕನಿಷ್ಠ ಆರು ಅಧಿಕಾರಿಗಳ ತಂಡವು ಮುಂಬೈ ತಲುಪುವ ನಿರೀಕ್ಷೆಯಿದೆ. ನಮ್ಮ ಪ್ರಾಥಮಿಕ ತನಿಖೆಯನ್ನು ಹದಿನೈದು ದಿನಗಳಲ್ಲಿ ವಿಚಾರಣೆಯ ಸ್ವರೂಪದಲ್ಲಿ ನಡೆಸಲು ಸಿಬಿಐ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸಿಂಗ್ ಅವರ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ತನಿಖಾಧಿಕಾರಿಗಳು ಸಹಾಯಕ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಉಪ ಆಯುಕ್ತರು ಸೇರಿದಂತೆ ಈ ವಿಷಯಕ್ಕೆ ಸಂಬಂಧಿಸಿರುವ ಎಲ್ಲರನ್ನೂ ಪ್ರಶ್ನಿಸುವ ಸಾಧ್ಯತೆಯಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಪರಮ್ ಬೀರ್ ಸಿಂಗ್ ಅವರ ಪ್ರಕಾರ, ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಮಾರ್ಚ್ 4 ರಂದು ದಕ್ಷಿಣ ಮುಂಬೈನಲ್ಲಿ ಸಚಿವ ಅನಿಲ್ ದೇಶಮುಖ್ ಅವರ ಅಧಿಕೃತ ನಿವಾಸವಾದ ಜ್ಞಾನೇಶ್ವರಕ್ಕೆ ಕರೆಸಲಾಯಿತು ಎಂದು ಆರೋಪಿಸಲಾಗಿದೆ. ನಗರದ 1,750 ಬಾರ್‌ಗಳು , ರೆಸ್ಟೋರೆಂಟ್ಗಳು ಮತ್ತು ಹೋಟೆಲ್ ಗಳಿಂದ ತಿಂಗಳಿಗೆ 40-50 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿಕೊಡುವಂತೆ ಪೋಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಎಂದು ಅರೋಪಿಸಲಾಗಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ದೇಶಮುಖ್ ತಾವು ಯಾವುದೇ ತಪ್ಪನ್ನು ಮಾಡಿಲ್ಲವೆಂದೂ ಸಿಂಗ್ ಅವರ ಆರೋಪಗಳನ್ನು ಸುಳ್ಳು ಎಂದು ಹೇಳಿದ್ದು ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ದೇಶ್‌ಮುಖ್ ಅವರು ಸೂಚನೆ ನೀಡಿದ್ದ ಇಬ್ಬರು ಅಧಿಕಾರಿಗಳ ಹೊರತಾಗಿ, ಸಿಬಿಐ ಇತರ ಅಧಿಕಾರಿಗಳ ಬಳಿಯೂ ಮಾತನಾಡಿ ಇದೇ ರೀತಿಯ ಕಾನೂನುಬಾಹಿರ ಸೂಚನೆಗಳನ್ನು ಪಡೆದಿರಬಹುದು ಅಥವಾ ಅಂತಹ ಸಭೆಗಳಿಗೆ ‘ಸಾಕ್ಷಿಗಳಾಗಿರಬಹುದು ಅಥವಾ ವಸೂಲಿ ಮಾಡಿರಬಹುದು ಎಂಬ ಕುರಿತು ಸಾಕ್ಷ್ಯ ಸಂಗ್ರಹಿಸಲಿದೆ. ಮಾಜಿ ಸಚಿವರ ಆಪ್ತ ಸಿಬ್ಬಂದಿಯ ಹೇಳೀಕೆಯನ್ನೂ ಸಹ ಪಡೆಯಬಹುದು. ಮೊದಲಿಗೆ ತನಿಖಾಧಿಕಾರಿಗಳು ಫೆಬ್ರವರಿ ಮತ್ತು ಮಾರ್ಚ್ನ ಸಚಿವರ ಮನೆಯ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ತನಿಖೆ ಆರಂಭಿಸಲಿದ್ದು ಅವರ ದೂರಿನ ಅಂಕಿ ಅಂಶಗಳು - ಮತ್ತು ಸಂದರ್ಶಕರ ಪ್ರವೇಶ- ನಿರ್ಗಮನ ದಾಖಲೆಗಳನ್ನೂ ಪರಿಶೀಲಿಸಲಿದ್ದಾರೆ.

ಸಿಬಿಐನ ಪ್ರಾಥಮಿಕ ತನಿಖೆಯು ಅದರ ‘ನಿಯಮಿತ ಪ್ರಕರಣಗಳ ತನಿಖೆಗಿಂತ ಭಿನ್ನವಾಗಿದ್ದು ಇದಕ್ಕಾಗಿ ಮೊದಲ ಮಾಹಿತಿ ವರದಿಯನ್ನು ನೋಂದಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಿಬಿಐ ಹೈಕೋರ್ಟ್ ನಿರ್ದೇಶನದ ತನಿಖೆಯ ಸಮಯದಲ್ಲಿ, ಲಭ್ಯವಿರುವ ಪುರಾವೆಗಳು ಮತ್ತು ಸಾಕ್ಷಿ ಗಳು ಕಾನೂನಿನ ಪ್ರಕಾರ ಅರಿವಿದ್ದೂ ಅಪರಾಧದ ಎಸಗಲಾಗಿದೆಯೇ ಎಂದು ಮೊದಲು ಖಚಿತಪಡಿಸಿಕೊಳ್ಳುತ್ತದೆ. ನಂತರ ಭ್ರಷ್ಟಾಚಾರದ ಆರೋಪಗಳನ್ನು ಪರಿಶೀಲಿಸಲು ಪ್ರಕರಣದ ನೋಂದಣಿ ಸೇರಿದಂತೆ ಮುಂದಿನ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಪ್ರಾಥಮಿಕ ತನಿಖೆಯ ಭಾಗವಾಗಿ, ಅಪರಾಧವನ್ನು ಎಸಗಲಾಗಿದೆಯೇ ಮತ್ತು ಸಾರ್ವಜನಿಕ ವ್ಯಕ್ತಿಗಳ ಪಾತ್ರ ಇದರಲ್ಲಿ ಇದೆಯೇ ಎಂದು ಪರಿಶೀಲಿಸಿ ಇದ್ದರೆ ಅವರನ್ನು ವಿಚಾರಣೆಗೆ ಕರೆಯಲಿದೆ. ಅವರಿಂದ ಸ್ಪಷ್ಟೀಕರಣಗಳನ್ನು ಕೋರುವುದಲ್ಲದೆ ಅಗತ್ಯವಿದ್ದರೆ, ವಿಚಾರಣೆಯನ್ನು ವೀಡಿಯೋ ರೆಕಾರ್ಡ್ ಮಾಡಿಕೊಳ್ಳಲಿದೆ.

ಅಮಾನತುಗೊಂಡಿರುವ ಮುಂಬೈನ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ವಾಜೆ ಅವರನ್ನು ದೇಶ್‌ಮುಖ್ ಅವರು ತಮ್ಮ ಅಧಿಕೃತ ನಿವಾಸಕ್ಕೆ ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಬಾರಿ ಕರೆದರು ಮತ್ತು ಹಣ ಸಂಗ್ರಹಣೆಗೆ ಸಹಾಯ ಮಾಡಲು ಪದೇ ಪದೇ ಸೂಚನೆ ನೀಡಿದ್ದಾರೆ ಎಂದು ಸಿಂಗ್ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ. ಮಾರ್ಚ್ 4 ರಂದು ಇತರ ಇಬ್ಬರು ಪೊಲೀಸ್ ಅಧಿಕಾರಿಗಳು ಸಚಿವರ ನಿವಾಸಕ್ಕೆ ಹೋಗಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ. ಸಿಂಗ್ ಅವರ ಪ್ರಕಾರ, ದೇಶಮುಖ್ ಅವರು ಸಚಿವರಾಗಿದ್ದಾಗ ಅವರ ಸಹಾಯಕರು ಇಬ್ಬರು ಅಧಿಕಾರಿಗಳಿಗೆ ಬಾರ್ ಮತ್ತು ರೆಸ್ಟೋರೆಂಟ್ಗಳಿಂದ ತಿಂಗಳಿಗೆ 40-50 ಕೋಟಿ ರೂಪಾಯಿ ಸಂಗ್ರಹಿಸಲು ಆದೇಶಿಸಿದ್ದರು. ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿ.ಎಸ್. ಕುಲಕರ್ಣಿ ಅವರ ನ್ಯಾಯಪೀಠ ಇದು ಸ್ವತಂತ್ರ ವಿಚಾರಣೆಗೆ ಅಗತ್ಯವಾದ ಪ್ರಕರಣವಾಗಿದೆ ಎಂದು ಹೇಳಿದ್ದು 52 ಪುಟಗಳ ತೀರ್ಪಿನಲ್ಲಿ, ದೇಶ್‌ಮುಖ್ ವಿರುದ್ಧ ಸಿಂಗ್ ಅವರ ಆರೋಪಗಳು ರಾಜ್ಯ ಪೊಲೀಸರ ಮೇಲೆ ನಾಗರಿಕರ ನಂಬಿಕೆಯನ್ನು ಪಣಕ್ಕಿಟ್ಟಿದೆ ಎಂದು ನ್ಯಾಯಪೀಠ ಹೇಳಿದೆ. ರಾಜ್ಯ ಗೃಹ ಸಚಿವರ ವಿರುದ್ಧ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ಇಂತಹ ಆರೋಪಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ವಿರುದ್ದ ತನಿಖೆಗೆ ಸಿಬಿಐ ಯೋಜನೆ ಏನು?
ಭ್ರಷ್ಟಾಚಾರ ಆರೋಪ: ಸಿಬಿಐ ತನಿಖೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗೃಹಸಚಿವ ರಾಜಿನಾಮೆ

ಈ ಪ್ರಕರಣದ ಸಿಬಿಐ ತನಿಖೆ ಕೋರಿ ಮೂರು ಸಾರ್ವಜನಿಕ ಹಿತಾಸಕ್ತಿ ದಾವೆಗಳು (ಪಿಐಎಲ್) ಮತ್ತು ಕ್ರಿಮಿನಲ್ ರಿಟ್ ಪೆಟಿಷನ್ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ತನ್ನ ತೀರ್ಪನ್ನು ಘೋಷಿಸಿತು. ಪಿಐಎಲ್ ಗಳಲ್ಲಿ ಒಂದನ್ನು ಸಿಂಗ್ ಸ್ವತಃ ಸಲ್ಲಿಸಿದ್ದಾರೆ, ಮತ್ತು ಉಳಿದ ಎರಡನ್ನು ವಕೀಲ ಘಣ ಶ್ಯಾಮ್ ಉಪಾಧ್ಯಾಯ ಮತ್ತು ಸ್ಥಳೀಯ ಶಿಕ್ಷಕ ಮೋಹನ್ ಭಿಡೆ ಸಲ್ಲಿಸಿದ್ದು ಕ್ರಿಮಿನಲ್ ರಿಟ್ ಅರ್ಜಿಯನ್ನು ವಕೀಲೆ ಜಯಶ್ರೀ ಪಾಟೀಲ್ ಸಲ್ಲಿಸಿದ್ದಾರೆ. ಪಾಟೀಲ್ ಅವರ ಮನವಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಿಸಿದರೆ, ಅದು ಇತರ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಿದೆ. ಕಳೆದ ತಿಂಗಳು ಸಲ್ಲಿಸಿದ್ದ ಮನವಿಯಲ್ಲಿ ದೇಶ್ಮುಖ್ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಸಿಂಗ್ ಕೋರಿದ್ದರು.

ಕಳೆದ ಫೆಬ್ರವರಿ 25 ರಂದು ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ದಕ್ಷಿಣ ಮುಂಬೈ ನಿವಾಸದ ಬಳಿ ಸ್ಫೋಟಕಗಳಿಂದ ತುಂಬಿದ ಸ್ಕಾರ್ಪಿಯೋವನ್ನು ಇರಿಸಿದ ಆರೋಪದ ಮೇಲೆ ಮಾರ್ಚ್ 13 ರಂದು ರಾಷ್ಟ್ರೀಯ ತನಿಖಾ ಸಂಸ್ಥೆ ಅವರನ್ನು ಬಂಧಿಸಿದ ನಂತರ ವಾಜೆ ಅವರನ್ನು ಅಮಾನತುಗೊಳಿಸಲಾಗಿದೆ. ಮಾರ್ಚ್ 4 ರಂದು ನಾಪತ್ತೆಯಾದ ಸ್ಕಾರ್ಪಿಯೊದ ಕೊನೆಯ ಮಾಲೀಕ, ಆಟೋಮೊಬೈಲ್ ಪರಿಕರಗಳ ವ್ಯಾಪಾರಿ ಮನ್ಸುಖ್ ಹಿರೆನ್ ಅವರ ಕೊಲೆಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ವಾಜೆ ಅವರು ಸಿಬಿಐ ತನಿಖೆ ಎದುರಿಸುತಿದ್ದಾರೆ. ಮುಂಬ್ರಾ ಕೊಲ್ಲಿಯಲ್ಲಿ ಮನ್ಸುಖ್ ಅವರ ಶವ ಪತ್ತೆಯಾಗಿತ್ತು. ಮಹಾರಾಷ್ಟ್ರ ಸರ್ಕಾರದ ವಕೀಲ ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರು ಸಿಂಗ್ ಸೇರಿದಂತೆ ಎಲ್ಲಾ ರಿಟ್ ಅರ್ಜಿಗಳನ್ನು ವಜಾಗೊಳಿಸುವಂತೆ ಹೈಕೋರ್ಟ್ಗೆ ಒತ್ತಾಯಿಸಿದ್ದರು. ವೈಯಕ್ತಿಕ ದ್ವೇಷದಿಂದ ಸಿಂಗ್ ಪಿಐಎಲ್ ಸಲ್ಲಿಸಿದ್ದಾರೆ ಎಂದು ಕುಂಭಕೋಣಿ ಹೇಳಿದ್ದಾರೆ. ಇದಲ್ಲದೆ, ಈ ಪ್ರಕರಣದಲ್ಲಿ ಯಾವುದೇ ಎಫ್ಐಆರ್ ದಾಖಲಾಗಿಲ್ಲವಾದ್ದರಿಂದ, ಸಿಬಿಐ ತನಿಖೆಗೆ ಆದೇಶಿಸಲು ಸಾಧ್ಯವಿಲ್ಲ ಎಂದು ಅವರು ಕೋರ್ಟಿನಲ್ಲಿ ವಾದಿಸಿದ್ದರು. ಆದರೆ, ಮಾರ್ಚ್ 21 ರಂದು ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ದೇಶಮುಖ್ ಮತ್ತು ಸಿಂಗ್ ಇಬ್ಬರ ವಿರುದ್ದ ದೂರು ದಾಖಲಿಸಿದ್ದಾಗಿ ವಕೀಲೆ ಜಯಶ್ರೀ ಪಾಟೀಲ್ ಗಮನಸೆಳೆದರು, ಆದರೆ ಪ್ರಾಥಮಿಕ ವಿಚಾರಣೆ ನಡೆಸಿ ಎಫ್ಐಆರ್ ದಾಖಲಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದೂ ಅವರು ಕೋರ್ಟಿನ ಗಮನಕ್ಕೆ ತಂದಿದ್ದರು.

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ವಿರುದ್ದ ತನಿಖೆಗೆ ಸಿಬಿಐ ಯೋಜನೆ ಏನು?
ಗೃಹಸಚಿವರ ಮೇಲೆ ಭ್ರಷ್ಟಾಚಾರ ಆರೋಪಿಸಿದ ಮುಂಬೈ ಮಾಜಿ ಕಮಿಷನರ್!‌

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com