ಕೋವಿಡ್ ಪ್ರಕರಣದ ಏರುಗತಿಯ ನಡುವೆ ಲಸಿಕೆ ಕೊರತೆಯ ಆತಂಕ

ತೆಲಂಗಾಣ, ಒಡಿಶಾ, ಛತ್ತೀಸಗಢ, ಹರ್ಯಾಣದಂತಹ ರಾಜ್ಯಗಳು, ತೀವ್ರ ಲಸಿಕೆ ಕೊರತೆಯಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಹೆಚ್ಚುವರಿ ಲಸಿಕೆ ದೊರೆಯದೇ ಇದ್ದಲ್ಲಿ, ಲಸಿಕೆ ಅಭಿಯಾನವನ್ನೇ ನಿಲ್ಲಿಸಬೇಕಾಗಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆಗೆ ತಿಳಿಸಿವೆ.
ಕೋವಿಡ್ ಪ್ರಕರಣದ ಏರುಗತಿಯ ನಡುವೆ ಲಸಿಕೆ ಕೊರತೆಯ ಆತಂಕ

ದೇಶದ ಕೋವಿಡ್ ಎರಡನೇ ಅಲೆ ಅತಿ ವೇಗವಾಗಿ ಹರಡುತ್ತಿದ್ದು, ಮುಂದಿನ ನಾಲ್ಕು ವಾರಗಳ ಕಾಲ ಜನತೆ ಅತಿ ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಅದರ ಬೆನ್ನಲ್ಲೇ ದೇಶದ ದೈನಂದಿನ ಹೊಸ ಕೋವಿಡ್ ಪ್ರಕರಣಗಳು ಒಂದು ಲಕ್ಷದ ಗಡಿ ದಾಟಿವೆ.

ಈ ನಡುವೆ, ಒಂದು ಕಡೆ ಲಸಿಕೆ ಅಭಿಯಾನವನ್ನು ಚುರುಕು ಮಾಡಲು ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳಿಗೆ ಸೂಚಿಸಿದ್ದರೆ, ಮತ್ತೊಂದು ಕಡೆ ಲಸಿಕೆಗಳು ಕೊರತೆ ಉಂಟಾಗುತ್ತಿದೆ ಎಂದು ಒಂದೊಂದೇ ರಾಜ್ಯಗಳು ಕೇಂದ್ರದ ಮುಂದೆ ಮೊರೆ ಇಡತೊಡಗಿವೆ. ಹಾಗಾಗಿ, ಎರಡೆರಡು ಡೋಸ್ ಲಸಿಕೆ ಪಡೆದುಕೊಂಡವರಿಗೂ ಕೋವಿಡ್ ಸೋಂಕು ಕಾಣಿಸಿಕೊಂಡಿದೆ ಎಂಬ ಗೊಂದಲದ ನಡುವೆ, ಲಸಿಕೆ ಪಡೆದುಕೊಳ್ಳಲು ಜನ ನಿರೀಕ್ಷಿತ ಮಟ್ಟದಲ್ಲಿ ಮುಂದೆ ಬರುತ್ತಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಆ ಹಿನ್ನೆಲೆಯಲ್ಲೇ ಕೇಂದ್ರ ಸರ್ಕಾರ, 45 ವರ್ಷ ಮೇಲ್ಪಟ್ಟ ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಕಡ್ಡಾಯವಾಗಿ ಲಸಿಕೆ ತೆಗೆದುಕೊಳ್ಳಬೇಕು ಎಂಬ ಹೊಸ ಸುತ್ತೋಲೆ ಹೊರಡಿಸಿದೆ!

ಆದರೆ, ಒಂದು ಕಡೆ ಕೇಂದ್ರ ಸರ್ಕಾರ ಲಸಿಕೆ ತೆಗೆದುಕೊಳ್ಳುವಂತೆ ದೇಶದ ಜನರಿಗೆ ಮನವರಿಕೆ ಮಾಡುವ, ಕಡ್ಡಾಯ ಮಾಡುವ ಯತ್ನಗಳನ್ನು ಮುಂದುವರಿಸಿದ್ದರೆ ಮತ್ತೊಂದು ಕಡೆ, ಜನ ಲಸಿಕೆ ತೆಗೆದುಕೊಳ್ಳಲು ಮುಂದಾದರೂ ಸಕಾಲದಲ್ಲಿ ಲಸಿಕೆ ಲಭ್ಯವಿಲ್ಲ ಎಂದು ಹಲವು ರಾಜ್ಯಗಳು ಕೇಂದ್ರದ ಮುಂದೆ ಅಲವತ್ತುಕೊಂಡಿವೆ.

ಕರ್ನಾಟಕದಲ್ಲಿ ಲಸಿಕೆ ಕೊರತೆ ಅಷ್ಟಾಗಿ ವರದಿಯಾಗದೇ ಇದ್ದರೂ, ಕೆಲವು ಖಾಸಗೀ ಆಸ್ಪತ್ರೆಗಳಲ್ಲಿ ಲಸಿಕೆಯ ಹೆಸರಿನಲ್ಲಿ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಪ್ರಕರಣಗಳು ಸಾಕಷ್ಟಿವೆ ಎಂಬುದನ್ನು ತಳ್ಳಿಹಾಕಲಾಗದು. ಈ ನಡುವೆ ರಾಜ್ಯ ಆರೋಗ್ಯ ಸಚಿವರು ರಾಜ್ಯದಲ್ಲಿ ಲಸಿಕೆಯ ಯಾವುದೇ ಕೊರತೆ ಇಲ್ಲ ಎಂದಿದ್ದಾರೆ.

SAAKSHA MEDIA

ಆದರೆ, ತೆಲಂಗಾಣ, ಒಡಿಶಾ, ಛತ್ತೀಸಗಢ, ಹರ್ಯಾಣದಂತಹ ರಾಜ್ಯಗಳು, ತೀವ್ರ ಲಸಿಕೆ ಕೊರತೆಯಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಹೆಚ್ಚುವರಿ ಲಸಿಕೆ ದೊರೆಯದೇ ಇದ್ದಲ್ಲಿ, ಲಸಿಕೆ ಅಭಿಯಾನವನ್ನೇ ನಿಲ್ಲಿಸಬೇಕಾಗಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆಗೆ ತಿಳಿಸಿವೆ.

ಪ್ರತಿದಿನ ಸುಮಾರು 2 ಲಕ್ಷ ಜನರಿಗೆ ರಾಜ್ಯದಲ್ಲಿ ಸದ್ಯ ಲಸಿಕೆ ನೀಡಲಾಗುತ್ತಿದೆ. ಆದರೆ, ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಭಾರೀ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಾಗುತ್ತಿದೆ. ಈಗಿರುವ ಲಸಿಕೆಯ ಪ್ರಮಾಣದ ಲೆಕ್ಕದಲ್ಲಿ ಇನ್ನೆರಡು ದಿನ ಮಾತ್ರ ಲಸಿಕೆ ನೀಡಬಹುದು. ಮೂರನೇ ದಿನದ ಹೊತ್ತಿಗೆ ಹೆಚ್ಚುವರಿ ಲಸಿಕೆ ತಲುಪದೇ ಹೋದರೆ, ರಾಜ್ಯದಲ್ಲಿ ‘ಲಸಿಕೆ ಶೂನ್ಯ ದಿನ’ ಘೋಷಿಸಬೇಕಾಗಬಹುದು ಎಂದು ಛತ್ತೀಸಗಢ ಆರೋಗ್ಯ ಸಚಿವ ಟಿ ಎಸ್ ಸಿಂಗ್ ಹೇಳಿರುವುದಾಗಿ ‘ಬ್ಯುಸಿನೆಸ್ ಇನ್ ಸೈಡರ್’ ಸೋಮವಾರ ವರದಿ ಮಾಡಿದೆ.

ತೆಲಂಗಾಣದಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಅಲ್ಲಿನ ಆರೋಗ್ಯ ಸಚಿವ ಏಟಾಲಾ ರಾಜೇಂದ್ರ ಪ್ರಕಾರ, ಮೂರು ದಿನಗಳಿಗೆ ಆಗುವಷ್ಟು ಲಸಿಕೆಗಳು ಮಾತ್ರ ಸದ್ಯ ದಾಸ್ತಾನಿವೆ. ಮೂರು ದಿನಗಳಲ್ಲಿ ಹೆಚ್ಚುವರಿ ಲಸಿಕೆ ಬರದೇ ಇದ್ದಲ್ಲಿ ಲಸಿಕೆ ಅಭಿಮಾನ ತಾತ್ಕಾಲಿಕ ಸ್ಥಗಿತ ಮಾಡುವುದು ಅನಿವಾರ್ಯವಾಗಲಿದೆ. ಸದ್ಯದ ದಿನವೊಂದಕ್ಕೆ 10 ಲಕ್ಷ ಮಂದಿಗೆ ಲಸಿಕೆ ನೀಡುವ ಸಾಮರ್ಥ್ಯ ರಾಜ್ಯಕ್ಕಿದ್ದರೂ ಲಸಿಕೆ ಕೊರತೆಯಿಂದಾಗಿ ಕೇವಲ 60-70 ಸಾವಿರ ಮಂದಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ.

ಹಾಗೇ ಒಡಿಶಾದಲ್ಲಿ ಕೂಡ ಲಸಿಕೆ ಕೊರತೆ ಇದ್ದು, ಕೂಡಲೇ ಹೆಚ್ಚುವರಿ ಲಸಿಕೆ ಕಳಿಸಿಕೊಡುವಂತೆ ಅಲ್ಲಿನ ಮುಖ್ಯ ಕಾರ್ಯದರ್ಶಿ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಮೂರು ದಿನಗಳಿಗೆ ಆಗುವಷ್ಟು ಮಾತ್ರ ದಾಸ್ತಾನಿದ್ದು, ಆದಷ್ಟು ಶೀಘ್ರ ಲಸಿಕೆ ಕಳಿಸಿಕೊಡಿ ಎಂಬುದಾಗಿ ತಾವು ಪತ್ರ ಬರೆದಿರುವುದಾಗಿ ಮುಖ್ಯ ಕಾರ್ಯದರ್ಶಿ ಪಿ ಕೆ ಮಹಾಪಾತ್ರ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೇ ಹರ್ಯಾಣದಲ್ಲಿ ಕೂಡ ಲಸಿಕೆಯ ಕೊರತೆ ಎದುರಾಗಿದ್ದು, ಅಲ್ಲಿ ಸುಮಾರು 5 ಲಕ್ಷ ಕೋವಿಶೀಲ್ಡ್ ಲಸಿಕೆಗಳು ದಾಸ್ತಾನಿದ್ದರೂ, ಕೋವಾಕ್ಸಿನ್ ಲಸಿಕೆಯ ಕೊರತೆ ಇದೆ. ಸದ್ಯ ರಾಜ್ಯದಲ್ಲಿ ಕೇವಲ 53 ಸಾವಿರ ಕೋವಾಕ್ಸಿನ್ ಲಸಿಕೆ ಮಾತ್ರ ಲಭ್ಯವಿದ್ದು, ಹೆಚ್ಚುವರಿ ಲಸಿಕೆ ಬೇಕಾಗಿದೆ ಎಂದು ಅಧಿಕಾರಿಗಳು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಅಲ್ಲಿನ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೀವ್ ಅರೋರಾ ಈ ಬಗ್ಗೆ ಪ್ರತಿಕ್ರಿಯಿಸಿ, “ದಿನವೊಂದಕ್ಕೆ ರಾಜ್ಯದಲ್ಲಿ ಒಂದು ಲಕ್ಷ ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಆ ಲೆಕ್ಕದಲ್ಲಿ ಇನ್ನು ನಾಲ್ಕು ದಿನಗಳಿಗೆ ಆಗುವಷ್ಟು ಲಸಿಕೆ ಲಭ್ಯವಿದೆ. ಹಾಗಾಗಿ ಈಗಾಗಲೇ ಕೇಂದ್ರಕ್ಕೆ ಲಸಿಕೆ ಕೋರಿ ಪತ್ರ ಬರೆಯಲಾಗಿದೆ” ಎಂದಿದ್ದಾರೆ.

ಶನಿವಾರ ತಾನೇ ಕೇಂದ್ರ ಆರೋಗ್ಯ ಸಚಿವಾಲಯದ ಐಸಿಎಂಆರ್ ನ್ಯಾಷನಲ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ಡಾ ಎನ್ ಕೆ ಅರೋರಾ, ಟ್ವೀಟ್ ಮಾಡಿ, ದೇಶದಲ್ಲಿ ಕೋವಿಡ್ ಲಸಿಕೆ ಕೊರತೆ ಇದೆ ಎಂಬ ವದಂತಿ ಹಬ್ಬಿದೆ. ಆದರೆ ಅಂತಹ ವದಂತಿಗಳಿಗೆ ಜನ ಕಿವಿಗೊಡಬಾರದು. ಈ ಕ್ಷಣದವರೆಗೆ ದೇಶದಲ್ಲಿ ಲಸಿಕೆಯ ಕೊರತೆ ತಲೆದೋರಿಲ್ಲ ಮತ್ತು ಮುಂದೆಯೂ ಅಂತಹ ಪರಿಸ್ಥಿತಿ ಉದ್ಭವಿಸುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದ್ದರು. ಆದರೆ, ಅವರ ಆ ಟ್ವೀಟ್ ಮಾರನೇ ದಿನವೇ ದೇಶದ ಪ್ರಮುಖ ರಾಜ್ಯಗಳಲ್ಲೇ ಲಸಿಕೆ ಕೊರತೆಯ ಕುರಿತು ಆಯಾ ರಾಜ್ಯಗಳ ಮುಖ್ಯಕಾರ್ಯದರ್ಶಿಗಳು, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿರುವ ಮಾಹಿತಿ ಹೊರಬಿದ್ದಿದೆ.

ಈ ನಡುವೆ, ಜಗತ್ತಿನ ಅತಿ ದೊಡ್ಡ ಕೋವಿಡ್ ಲಸಿಕೆ ಉತ್ಪಾದನಾ ರಾಷ್ಟ್ರವಾಗಿ ಹೊರಹೊಮ್ಮಿದ್ದ ಭಾರತ, ತನ್ನ ಬಳಕೆಗೆ ಅಗತ್ಯ ಪ್ರಮಾಣದ ಲಸಿಕೆ ದಾಸ್ತಾನಿಗೆ ಮುನ್ನವೇ ಜಗತ್ತಿನ ಹಲವು ರಾಷ್ಟ್ರಗಳಿಗೆ ಲಸಿಕೆ ರಫ್ತು ಮಾಡಿತ್ತು. ಈಗಾಗಲೇ ಜರ್ಮನಿ, ಮಾಲ್ಡೀವ್ಸ್, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳಿಗೆ ಲಸಿಕೆ ರಫ್ತು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನ ಸೇರಿದಂತೆ ಇನ್ನೂ ಹಲವು ರಾಷ್ಟ್ರಗಳಿಗೆ ಲಸಿಕೆ ಕಳಿಸಿಕೊಡುವ ಬಗ್ಗೆ ಈಗಾಗಲೇ ಪ್ರಧಾನಿ ಮೋದಿಯವರ ಸರ್ಕಾರ ಘೋಷಣೆ ಮಾಡಿದೆ. ಆದರೆ, ದೇಶದ ಲಸಿಕೆ ಉತ್ಪಾದನೆಯ ಅತಿದೊಡ್ಡ ಸಂಸ್ಥೆ ಸೀರಂ ಇನ್ ಸ್ಟೀಟ್ಯೂಟ್ ಆಫ್ ಇಂಡಿಯಾ, ಕಚ್ಛಾವಸ್ತು ಕೊರತೆಯಿಂದಾಗಿ ಲಸಿಕೆ ಉತ್ಪಾದನೆಗೆ ಹಿನ್ನಡೆಯಾಗಬಹುದು ಎಂದು ಎಚ್ಚರಿಸಿದ ಹಿನ್ನೆಲೆಯಲ್ಲಿ ಸದ್ಯಕ್ಕೆ ಲಸಿಕೆ ರಫ್ತನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಆದರೆ, ವಿದೇಶಗಳಿಗೆ ಈಗಾಗಲೇ ಕೋಟ್ಯಂತರ ಲಸಿಕೆ ಕಳಿಸಿಕೊಡಲಾಗಿದೆ ಮತ್ತು ಸದ್ಯ ಭಾರತದ ಒಳಗೇ ಹಲವು ರಾಜ್ಯಗಳಲ್ಲಿ ದೈನಂದಿನ ಲಸಿಕೆ ನೀಡಲು ಕೂಡ ಲಸಿಕೆಯ ಕೊರತೆ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ ಎಂಬುದು ವಾಸ್ತವ. ಈ ವಿಪರ್ಯಾಸ, ಸದ್ಯದ ಕರೋನಾ ಕಾಲದ ಭಾರತದ ವೈರುಧ್ಯಗಳ ಸರಣಿಗೆ ಮತ್ತೊಂದು ಸೇರ್ಪಡೆಯಷ್ಟೇ..!

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com