ಪಶ್ಚಿಮ ಬಂಗಾಳದ ಎಂಟು ಸುತ್ತಿನ ಸುದೀರ್ಘ ಚುನಾವಣೆಯು ದಿನಕ್ಕೊಂದು ಅಚ್ಚರಿಯ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಕಳೆದ ವಾರ ಅಸ್ಸಾಂನಲ್ಲಿ ಬಿಜೆಪಿ ಮುಖಂಡನ ಕಾರಿನಲ್ಲಿ EVMಗಳನ್ನು ಸಾಗಿಸುತ್ತಿರುವುದು ಬಹಿರಂಗಗೊಂಡ ನಂತರ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಈಗ ಇಂತಹುದೇ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಚುನಾವಣಾ ಅಧಿಕಾರಿಯೊಬ್ಬರು ತಮ್ಮ ಸಂಬಂಧಿಕರೊಬ್ಬರ ಮನೆಯಲ್ಲಿ ಮತದಾನ ಯಂತ್ರ (ಇವಿಎಂ) ನೊಂದಿಗೆ ರಾತ್ರಿ ಬೀಡುಬಿಟ್ಟಿದ್ದರು. ಆ ಸಂಬಂಧಿಕರು ಟಿಎಂಸಿ ಮುಖಂಡರೂ ಆಗಿದ್ದರಿಂದ ಈಗ ಅವರ ಕೆಲಸಕ್ಕೇ ಕುತ್ತು ಬಂದಿದೆ. ಟಿಎಂಸಿ ಮುಖಂಡರ ಮನೆಯಲ್ಲಿ EVMಯಂತ್ರದೊಂದಿಗೆ ವಾಸ್ತವ್ಯ ಇದ್ದ ಕಾರಣಕ್ಕೆ ಚುನಾವಣಾ ಆಯೋಗ ಆ ಅಧಿಕಾರಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಚುನಾವಣೆಯಲ್ಲಿ ಈ ಮತದಾನಯಂತ್ರ ಮತ್ತು ವಿವಿಪ್ಯಾಟ್ ಬಳಸಲಾಗುವುದಿಲ್ಲ ಎಂದು ಆಯೋಗ ತಿಳಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತಪನ್ ಸರ್ಕಾರ್ ಎಂಬುವವರು ಅಮಾನತುಗೊಂಡ ಅಧಿಕಾರಿ. ಹೌರಾ ಸೆಕ್ಟರ್ 17ರ ಎ. ಸಿ 177 ಉಲುಬೇರಿಯಾ ಉತ್ತರ ಮತಗಟ್ಟೆಯ ಅಧಿಕಾರಿಯಾಗಿ ತಪನ್ ಸರ್ಕಾರ್ ನಿಯೋಜಿತರಾಗಿದ್ದರು. ಇವರು ತಮ್ಮ ಸಂಬಂಧಿಕರ ಮನೆಯಲ್ಲಿ ರಾತ್ರಿ ವಾಸ್ತವ್ಯ ಹೂಡಲು ಹೊರಟ ವೇಳೆ ತಮ್ಮೊಂದಿಗೆ EVM ಯಂತ್ರವನ್ನು ಕೂಡಾ ತೆಗೆದುಕೊಂಡು ಹೋಗಿದ್ದರು. ಈ ಪ್ರಮಾದಕ್ಕೆ ತಪನ್ ಅವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಹಾಗೂ ಇವರೊಂದಿಗೆ ನೇಮಿಸಲಾದ ಪೊಲೀಸ್ ಅಧಿಕಾರಿಗಳ ವಿರುದ್ದವೂ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಇದು ಭಾರತೀಯ ಚುನಾವಣಾ ಆಯೋಗದ ನಿಯಮದ ಉಲ್ಲಂಘನೆಯಾಗಿದ್ದು, ಈ ಸಂಬಂಧ ಚುನಾವಣಾ ವಲಯಾಧಿಕಾರಿಗಳನ್ನು ಅಮಾನತುಗೊಳಿಸಿದೆ. ಹಾಗು ಸೆಕ್ಟರ್ ಪೊಲೀಸರನ್ನು ಕೂಡಾ ಅಮಾನತುಗೊಳಿಸುವಂತೆ ಆಯೋಗ ಪ್ರಕಟಣೆಯಲ್ಲಿ ನಿರ್ದೇಶಿಸಿದೆ.
ಚುನಾವಣೆಯ ಮುಖ್ಯ ವೀಕ್ಷಣಾಧಿಕಾರಿಯಾದ ನೀರಜ್ ಪವನ್ ಅವರು ಇವಿಎಂ ನ ಎಲ್ಲಾ ಮುದ್ರೆಗಳನ್ನು ಪರಿಶೀಲಿಸಿದ್ದಾರೆ. ಅವುಗಳನ್ನು ಈಗ ಭದ್ರತೆಯೊಂದಿಗೆ ಪ್ರತ್ಯೇಕ ಕೋಣೆಯಲ್ಲಿರಿಸಲಾಗಿದೆ ಎಂದು ಆಯೋಗ ತಿಳಿಸಿದೆ.
ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಪ್ರತಿಕ್ರಿಯಿಸಿ, ಇದು ಗಂಭೀರವಾದ ವಿಚಾರವಾಗಿದ್ದು, ಮನೆಯಲ್ಲಿ ಕಂಡುಬಂದ ವಿವಿಪ್ಯಾಟ್ ಮತ್ತು ಮತಯಂತ್ರ (ಇವಿಎಂ) ಕುರಿತ ಘಟನೆಯ ಬಗ್ಗೆ ತನಿಖೆ ನಡೆಸಿ ಸಂಪೂರ್ಣ ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿರುಸಿನ ಮತದಾನದ ನಡುವೆಯೇ ಈ ಘಟನೆ ನಡೆದಿದ್ದು, ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಅನುಕೂಲಕ್ಕೆ ತಕ್ಕಂತೆ ಕುಶಲತೆಯಿಂದ ಚುನಾವಣೆಯನ್ನು ಎದುರಿಸಲು ಪಣ ತೊಡುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.