ಅಸ್ಸಾಂನಲ್ಲಿ ಮತದಾರರ ಪಟ್ಟಿಯ ದುಪ್ಪಟ್ಟು ಮತದಾನ..!

ಅಸ್ಸಾಂನಲ್ಲಿ ಮತದಾರರ ಪಟ್ಟಿಯ ದುಪ್ಪಟ್ಟು ಮತದಾನ..!

ಅಸ್ಸಾಂನ ಹಾಫ್ಲೊಂಗ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮತದಾರರ ಪಟ್ಟಿಯ ದುಪ್ಪಟ್ಟು ಮಂದಿ ಮತದಾನ ಮಾಡಿರುವ ಪವಾಡ ನಡೆದಿದೆ.

ಮತಗಟ್ಟೆಯ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಕೇವಲ 90 ಮತದಾರರಿದ್ದರೂ, ಮತಗಟ್ಟೆಯೊಂದರಲ್ಲಿ 171 ಮಂದಿ ಮತದಾನ ಮಾಡಿರುವ ಪವಾಡಸದೃಶ ಘಟನೆ ಅಸ್ಸಾಂನಲ್ಲಿ ಬೆಳಕಿಗೆ ಬಂದಿದೆ.

ಏಪ್ರಿಲ್ 1ರಂದು ನಡೆದ ಅಸ್ಸಾಂ ವಿಧಾನಸಭೆ ಚುನಾವಣೆಯ ಎರಡನೇ ಹಂತದಲ್ಲಿ ಈ ಅಚ್ಚರಿಯ ಘಟನೆ ನಡೆದಿದ್ದು, ಅಲ್ಲಿನ ದಿಮಾ ಹ್ಯಾಸಾ ಜಿಲ್ಲೆಯ ಹಾಫ್ಲೊಂಗ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಇವಿಎಂ ಯಂತ್ರ ಬಳಸಿಯೂ ಇಂತಹ ವಿದ್ಯಮಾನ ನಡೆದಿದೆ. ಈ ಸಂಬಂಧ ಅಲ್ಲಿನ ಚುನಾವಣಾಧಿಕಾರಿ ಮತಗಟ್ಟೆಯ ಆರು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿ, ಇಡೀ ವಿಧಾನಸಭಾ ಕ್ಷೇತ್ರದಲ್ಲಿ ಮರು ಮತದಾನ ನಡೆಸುವುದಾಗಿ ಘೋಷಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಬಾರಿ; 2016ರ ಚುನಾವಣೆಯಲ್ಲಿಈ ಕ್ಷೇತ್ರದಿಂದ ಬಿಜೆಪಿಯ ವೀರಭದ್ರ ಹಗ್ಜೇರ್ ಗೆಲುವು ಸಾಧಿಸಿದ್ದರು. ಆ ಹಿನ್ನೆಲೆಯಲ್ಲಿ ಈ ಅಕ್ರಮದ ಬಗ್ಗೆ ಸಾಕಷ್ಟು ಅನುಮಾನಗಳು ಎದ್ದಿದ್ದು, ಅಕ್ರಮ ನಡೆದು ಮೂರ್ನಾಲ್ಕು ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿರುವ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಚುನಾವಣಾ ಆಯೋಗದ ಅಧಿಕೃತ ಮತದಾರರ ಪಟ್ಟಿಯ ಬದಲಾಗಿ, ಅಲ್ಲಿನ ಗ್ರಾಮ ಮುಖ್ಯಸ್ಥ ನೀಡಿದ ಪಟ್ಟಿಯ ಪ್ರಕಾರ ಮತದಾನ ಮಾಡಿಸಿದ್ದೇ ಈ ಯಡವಟ್ಟಿಗೆ ಕಾರಣ. ಗ್ರಾಮದ ಜನರಲ್ಲದೆ ಇತರರನ್ನು ಹೊರಗಿನಿಂದ ಕರೆತಂದು ನಕಲಿ ಮತದಾನ ಮಾಡಿಸಲಾಗಿದೆ. ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಈ ಕೃತ್ಯದಲ್ಲಿ ಪಾಲುದಾರರಾಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಆರು ಮಂದಿಯನ್ನು ಅಮಾನತು ಮಾಡಲಾಗಿದೆ.

ಅಸ್ಸಾಂನಲ್ಲಿ ಮತದಾರರ ಪಟ್ಟಿಯ ದುಪ್ಪಟ್ಟು ಮತದಾನ..!
ಅಸ್ಸಾಂ; ಬಿಜೆಪಿ ನಾಯಕನ ಕಾರಿನಲ್ಲಿ EVM ಪತ್ತೆ - ಮರುಮತದಾನಕ್ಕೆ ಆದೇಶ

ಆದರೆ, ಮುಖ್ಯ ಮತಗಟ್ಟೆಗಳಲ್ಲಿ ನೋಂದಾಯಿತರಾದ ಮತದಾರರಿಗೆ ಉಪ ಮತಗಟ್ಟೆಗಳಲ್ಲಿ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಹಾಗಾಗಿ, ಮತಗಟ್ಟೆಯ ಪಟ್ಟಿಗಿಂತ ಹೆಚ್ಚು ಮತದಾನವಾಗಿದೆ ಎಂದು ಮತಗಟ್ಟೆಯ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಸ್ಪಷ್ಟನೆ ನೀಡಿದ್ಧಾರೆ. ಆದರೆ, ಆ ಸ್ಪಷ್ಟನೆಯನ್ನು ಆಯೋಗ ಪರಿಗಣಿಸಿಲ್ಲ ಎಂಬುದು ಗಮನಾರ್ಹ.

ಈ ಹಿಂದೆ, ಮಾರ್ಚ್ 27ರಂದು ಮೊದಲ ಹಂತದ ಮತದಾನ ನಡೆದಾಗಲೂ ಅಸ್ಸಾಂನಲ್ಲಿ ಇಂತಹದ್ದೇ ಚುನಾವಣಾ ಅಕ್ರಮವೊಂದು ಬಯಲಾಗಿತ್ತು. ಆಗ ರತಾಬರಿ ಎಂಬ ವಿಧಾನಸಭಾ ಕ್ಷೇತ್ರದಲ್ಲಿ ಇವಿಎಂ ಯಂತ್ರಗಳನ್ನು ಬಿಜೆಪಿಯ ಅಧ್ಯರ್ಥಿಯ ಕಾರಿನಲ್ಲೇ ಸಾಗಣೆ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಆ ಕ್ಷೇತ್ರದಲ್ಲಿ ಮರು ಚುನಾವಣೆ ಘೋಷಿಸಿತ್ತು. ಇದೀಗ ಹಾಫ್ಲೊಂಗ್ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ದುಪ್ಪಟ್ಟು ಮಂದಿ ಮತದಾನ ಮಾಡಿರುವ ಪವಾಡ ನಡೆದಿದೆ. ಆ ಹಿನ್ನೆಲೆಯಲ್ಲಿ ಆಯೋಗ ಅಲ್ಲಿಯೂ ಮರು ಚುನಾವಣೆ ಘೋಷಿಸಿರುವುದರಿಂದ ಸದ್ಯ ಒಟ್ಟು ಎರಡು ಕ್ಷೇತ್ರಗಳಲ್ಲಿ ಮರು ಚುನಾವಣೆ ಘೋಷಿಸಿದಂತಾಗಿದೆ.

ಅಸ್ಸಾಂ ವಿಧಾನಸಭೆಯ ಒಟ್ಟು 126 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮಾರ್ಚ್.27ರಂದು ಮೊದಲ ಹಂತದಲ್ಲಿ 47 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಏಪ್ರಿಲ್.1ರಂದು ಎರಡನೇ ಹಂತದಲ್ಲಿ39 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಏಪ್ರಿಲ್ 6ರಂದು 40 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೇ 2ರಂದು ವಿಧಾನಸಭಾ ಚುನಾವಣಾ ಫಲಿತಾಂಶ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com