ಲಸಿಕೆ ಬಳಿಕವೂ ಸೋಂಕು: ವಾಸ್ತವಾಂಶಗಳನ್ನು ಮರೆಮಾಚಿದ್ದು ಯಾಕೆ?

ದೇಶದ ಪ್ರಧಾನಿಯನ್ನು ಒಬ್ಬ ಆಡಳಿತಗಾರನಾಗಿ, ಅಧಿಕಾರದ ಚುಕ್ಕಾಣಿ ಹಿಡಿದ ವ್ಯಕ್ತಿಯಾಗಿ ಕಾಣದೆ, ‘ಅವತಾರ ಪುರುಷ’ನಂತೆ, ‘ಪವಾಡ ಪುರುಷ’ನಂತೆ ಬಿಂಬಿಸುವ ಸರ್ಕಾರಿ ವ್ಯವಸ್ಥೆ, ಆಡಳಿತ ಪಕ್ಷ ಮತ್ತು ಅಸಹ್ಯಕರ ಮಾಧ್ಯಮಗಳ ಕಾರಣದಿಂದಾಗಿ ಜನರ ಜೀವದ ಪ್ರಶ್ನೆಯಾದ ಲಸಿಕೆಯ ಶಕ್ತಿ ಮತ್ತು ಮಿತಿಗಳ ಕುರಿತ ಸರಳ ಸಂಗತಿಗಳು ಕೂಡ ಮರೆಮಾಚಲ್ಪಟ್ಟಿವೆ.
ಲಸಿಕೆ ಬಳಿಕವೂ ಸೋಂಕು: ವಾಸ್ತವಾಂಶಗಳನ್ನು ಮರೆಮಾಚಿದ್ದು ಯಾಕೆ?

ಏರುತ್ತಿರುವ ಕರೋನಾ ಪ್ರಕರಣಗಳು ದೇಶವನ್ನು ಮತ್ತೆ ಕಂಗೆಡಿಸಿವೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಾವಿನ ಪ್ರಮಾಣ ಮತ್ತು ಹೊಸ ಪ್ರಕರಣಗಳು ಸಹಜವಾಗೇ, ವಿಜ್ಞಾನ, ವೈದ್ಯಕೀಯಕ್ಕಿಂತ ತಟ್ಟೆಲೋಟ, ಶಂಖ ಜಾಗಟೆಯಲ್ಲಿ, ದೀಪ- ಆರತಿಯಲ್ಲಿ ಹೆಚ್ಚು ನಂಬಿಕೆ ಇಟ್ಟ ಆಡಳಿತವನ್ನು ಗೊಂದಲಕ್ಕೆ ತಳ್ಳಿವೆ.

ಈ ನಡುವೆ, ಕೋವಿಡ್ ಲಸಿಕೆಯನ್ನು ಕರೋನಾಕ್ಕೆ ರಾಮಬಾಣ, ದೇಶವನ್ನು ಕಾಪಾಡಲು ಪ್ರಧಾನಿ ಮೋದಿಯವರು ಹೂಡಿದ ಈ ರಾಮಬಾಣ, ಕರೋನಾ ವೈರಸ್ಸನ್ನು ನಿರ್ಮಾಮ ಮಾಡಲಿದೆ. ‘ಮೋದಿ ಮದ್ದು’, ‘ಮೋದಿ ವ್ಯಾಕ್ಸಿನ್’ ಎಂದು ಬಿಲ್ಡ್ ಅಪ್ ಕೊಡುವ ಮೂಲಕ ಸರ್ಕಾರ, ಮೋದಿ ಭಕ್ತರು ಮತ್ತು ಮಾಧ್ಯಮಗಳು ಕೋವಿಡ್ ಲಸಿಕೆ ಕುರಿತು ಬಿತ್ತಿದ್ದ ನಂಬಿಕೆ ಕೂಡ ಈಗ ಹುಸಿಯಾಗುತ್ತಿದ್ದು, ಎರಡೆರಡು ಡೋಸ್ ಲಸಿಕೆ ಪಡೆದವರೂ ಕರೋನಾ ಸೋಂಕಿತರಾಗಿ ಚಿಕತ್ಸೆ ಪಡೆಯುತ್ತಿರುವ ಪ್ರಕರಣಗಳು ರಾಜ್ಯದ ಮೂಲೆಮೂಲೆಯಲ್ಲಿ ವರದಿಯಾಗತೊಡಗಿವೆ.

ಕರೋನಾ ಲಸಿಕೆಯ ವಿಷಯದಲ್ಲಿ ಸುಳ್ಳು ಪ್ರಚಾರ ಮತ್ತು ಭ್ರಮೆಗಳನ್ನು ಬಿತ್ತುವ ಮೂಲಕ ಜನರನ್ನು ಹೇಗೆ ದಿಕ್ಕುತಪ್ಪಿಸಲಾಗುತ್ತಿದೆ ಎಂಬುದಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿಗಳ ಪ್ರಕರಣವೇ ನಿದರ್ಶನ. ಜಿಲ್ಲಾಧಿಕಾರಿ ಡಾ ಎಂ ಆರ್ ರವಿ ಅವರು, ಕರೋನಾ ಎರಡನೇ ಲಸಿಕೆಯನ್ನು ಪಡೆದುಕೊಂಡು 28 ದಿನಗಳ ಬಳಿಕ ಅವರಿಗೆ ಕರೋನಾ ಸೋಂಕು ಧೃಢಪಟ್ಟಿದೆ. ಸದಾ ದೈಹಿಕ ಅಂತರ, ಮಾಸ್ಕ್ ಬಳಕೆ ಮತ್ತು ಕೈತೊಳೆಯುವುದು ಸೇರಿದಂತೆ ಕಟ್ಟುನಿಟ್ಟಾಗಿ ಕರೋನಾ ಸೋಂಕು ತಡೆ ಮಾರ್ಗಸೂಚಿಯಗಳನ್ನು ಪಾಲನೆ ಮಾಡುತ್ತಿದ್ದ ಜಿಲ್ಲಾಧಿಕಾರಿ, ಎಂಥಹದ್ದೇ ಸಂದರ್ಭದಲ್ಲೂ ಮುನ್ನೆಚ್ಚರಿಕೆ ಕ್ರಮಗಳ ವಿಷಯದಲ್ಲಿ ಉದಾಸೀನ ಮಾಡಿದವರೇ ಅಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಫೆಬ್ರವರಿ 8ರಂದು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದ ಅವರು, ಮಾರ್ಚ್ 8ರಂದು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದರು. ಜೊತೆಗೆ ಸೋಂಕು ತಡೆ ಮುನ್ನೆಚ್ಚರಿಕೆ ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು. ಆದಾಗ್ಯೂ ಕಳೆದ ಎರಡು ದಿನಗಳಿಂದ ಅವರಿಗೆ ನೆಗಡಿ ಮತ್ತು ಗಂಟಲು ನೋವು ಕಾಣಿಸಿಕೊಂಡಿತ್ತು. ಆ ಹಿನ್ನೆಲೆಯಲ್ಲಿ ಗಂಟಲು ದ್ರವ ಮಾದರಿಯನ್ನು ಕರೋನಾ ಪರೀಕ್ಷೆಗೆ ಕಳಿಸಲಾಗಿತ್ತು. ಭಾನುವಾರ ಪರೀಕ್ಷೆಯ ವರದಿ ಬಂದಿದ್ದು, ಕರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿರುವುದಾಗಿ ವರದಿಯಾಗಿದೆ.

ಅದೇ ರೀತಿ ಮತ್ತೊಂದು ಬೆಳವಣಿಗೆಯಲ್ಲಿ; ಬೆಂಗಳೂರಿನ ಹಲವು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಕೂಡ ಎರಡೂ ಡೋಸ್ ಲಸಿಕೆ ಪಡೆದುಕೊಂಡಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಇದೀಗ ಸೋಂಕು ಕಾಣಿಸಿಕೊಳ್ಳುತ್ತಿದೆ. ಬೆಂಗಳೂರು ಮೆಡಿಕಲ್ ಕಾಲೇಜು(ಬಿಎಂಸಿಆರ್ ಐ) ಕ್ಯಾಂಪಸ್ಸಿನಲ್ಲಿ ಕೂಡ ಸುಮಾರು ಒಂದು ಡಜನ್ ಗೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಈ ರೀತಿಯಾಗಿದೆ. ಅವರುಗಳು ಎರಡೆರಡು ಡೋಸ್ ಲಸಿಕೆ ತೆಗೆದುಕೊಂಡ ಹಲವು ದಿನಗಳ ಬಳಿಕ ಇತ್ತೀಚೆಗೆ ದಿಢೀರನೇ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆ ಹಿನ್ನೆಲೆಯಲ್ಲಿ ಪರೀಕ್ಷೆಗೊಳಪಡಿಸಿದಾಗ ಕರೋನಾ ಇರುವುದು ದೃಢಪಟ್ಟಿದೆ ಎಂದು ಕಾಲೇಜಿನ ನೋಡಲ್ ಅಧಿಕಾರಿ ಡಾ ಸ್ಮಿತಾ ಸೆಗು ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಹೇಳಿದೆ.

ಲಸಿಕೆ ಬಳಿಕವೂ ಸೋಂಕು: ವಾಸ್ತವಾಂಶಗಳನ್ನು ಮರೆಮಾಚಿದ್ದು ಯಾಕೆ?
ಕೋವಿಡ್‌ ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಭಾವಚಿತ್ರ: ಸ್ಪಷ್ಟಣೆ ಕೇಳಿದ ಚುನಾವಣಾ ಆಯೋಗ

ಆ ಪೈಕಿ ಯಾರೊಬ್ಬರೂ ಪ್ರಯಾಣ ಮಾಡಿದವರಲ್ಲ. ಆದರೂ ಅವರಲ್ಲಿ ಇದ್ದಕ್ಕಿದ್ದಂತೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಬಿಎಂಸಿಆರ್ ಐ ಹಾಸ್ಟೆಲಿನಲ್ಲಿಯೇ 13ಕ್ಕೂ ಹೆಚ್ಚು ವಿದ್ಯಾರ್ಥಿಗಳು ಲಸಿಕೆ ತೆಗೆದುಕೊಂಡ ಬಳಿಕವೂ ಸೋಂಕಿತರಾಗಿದ್ದಾರೆ. ಹಾಗೆ ನೋಡಿದರೆ, ಲಸಿಕೆ ಪಡೆದ ಬಳಿಕವೂ ಸೋಂಕು ತಗಲಿರುವುದು ಕೇವಲ ಬಿಎಂಸಿಆರ್ ಐ ನಲ್ಲಿ ಮಾತ್ರವಲ್ಲ, ಬೆಂಗಳೂರು ಮತ್ತು ರಾಜ್ಯದ ವಿವಿಧ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಿಬ್ಬಂದಿಗಳಲ್ಲೂ ಇಂತಹ ಪ್ರಕರಣಗಳು ವರದಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನಿತ್ಯ ದೃಢಪಡುತ್ತಿರುವ ಹೊಸ ಪ್ರಕರಣಗಳಲ್ಲಿ ಒಂದು ಭಾಗ ಇಂತಹ ಲಸಿಕೆ ತೆಗೆದುಕೊಂಡ ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳೇ ಇದ್ದಾರೆ. ಆದರೆ, ನಿರ್ದಿಷ್ಟವಾಗಿ ರಾಜ್ಯದಲ್ಲಿ ಹೀಗೆ ಲಸಿಕೆ ತೆಗೆದುಕೊಂಡ ಬಳಿಕವೂ ಕರೋನಾ ಸೋಂಕು ದೃಢಪಟ್ಟಿರುವ ಪ್ರಕರಣಗಳೆಷ್ಟು ಎಂಬುದರ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಿಲ್ಲ ಎಂದು ಆರೋಗ್ಯ ಇಲಾಖೆಯ ಮೂಲಗಳು ಹೇಳಿವೆ.

ಖಾಸಗೀ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂ ಒಕ್ಕೂಟ(ಫನಾ)ದ ಮಾಹಿತಿಯ ಪ್ರಕಾರ, “ರಾಜ್ಯದಲ್ಲಿ ಇಂತಹ ಹಲವು ಪ್ರಕರಣಗಳು ನಿತ್ಯ ವರದಿಯಾಗುತ್ತಿವೆ. ಆ ಹಿನ್ನೆಲೆಯಲ್ಲಿ ಲಸಿಕೆಯ ಮಿತಿಗಳ ಬಗ್ಗೆ ಆರೋಗ್ಯ ಕಾರ್ಯಕರ್ತರಿಗೆ ಸರಿಯಾದ ಮಾಹಿತಿ ನೀಡಲು ಜಾಗೃತಿ ಅಭಿಯಾನ ಆರಂಭಿಸುವಂತೆ ಶನಿವಾರವಷ್ಟೇ ಸರ್ಕಾರಕ್ಕೆ ಒಕ್ಕೂಟ ಮನವಿ ಮಾಡಿದೆ” ಎಂದು ಫನಾ ಅಧ್ಯಕ್ಷ ಡಾ ಪ್ರಸನ್ನ ಎಚ್ ಎಂ ಮಾಹಿತಿ ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಲಸಿಕೆ ಬಳಿಕವೂ ಸೋಂಕು: ವಾಸ್ತವಾಂಶಗಳನ್ನು ಮರೆಮಾಚಿದ್ದು ಯಾಕೆ?
ಕೋವಿಡ್ ಲಸಿಕೆ ಸಾವು: ಸರ್ಕಾರದ ಗುಟ್ಟು, ವಿಶ್ವಾಸಾರ್ಹತೆಗೆ ಪೆಟ್ಟು!

ಈ ನಡುವೆ, ಲಸಿಕೆಯ ಕುರಿತ ಅನಗತ್ಯ ಭ್ರಮೆ ಮತ್ತು ಹುಸಿ ನಂಬಿಕೆಯ ಕುರಿತು ವಿವರಿಸಿರುವ ವೈರಾಣು ತಜ್ಞ ಡಾ ವಿ ರವಿ, “ಮಾನವ ಬಳಕೆಗೆ ಅನುಮೋದನೆಗೊಂಡಿರುವ ಎಲ್ಲಾ ಕೋವಿಡ್ ಲಸಿಕೆಗಳು ಸೋಂಕಿನ ಗಂಭೀರ ಅಪಾಯ ಮತ್ತು ಸಾವಿನ ವಿರುದ್ಧ ಮಾನವರಿಗೆ ರಕ್ಷಣೆ ನೀಡುತ್ತವೆಯೇ ವಿನಃ, ಸೋಂಕಿನ ವಿರುದ್ಧ ಅಲ್ಲ” ಎಂದಿದ್ದಾರೆ. ಅಂದರೆ, ಲಸಿಕೆ ಪಡೆದುಕೊಳ್ಳುವುದು ಕರೋನಾ ಸೋಂಕಿನಿಂದ ಉಂಟಾಗಬಹುದಾದ ಗಂಭೀರ ಆರೋಗ್ಯ ಸಮಸ್ಯೆ ಮತ್ತು ಸಾವಿನಿಂದ ಪಾರಾಗಲು ವಿನಃ, ಸ್ವತಃ ಸೋಂಕಿನಿಂದ ಪಾರಾಗಲು ಅಲ್ಲ ಎಂಬುದು ಅವರ ಮಾತಿನ ಸಾರ.

ಆದರೆ, ಲಸಿಕೆಯ ಕುರಿತು ಅದು ರಾಮಬಾಣ, ಮೋದಿ ಮದ್ದು ಎಂದು ಎರಡು ಡೋಸ್ ಲಸಿಕೆ ಪಡೆದುಕೊಂಡರೆ ಸಾವನ್ನೇ ಗೆದ್ದಂತೆ ಎಂಬಷ್ಟರಮಟ್ಟಿಗೆ ಲಸಿಕೆಯ ಕುರಿತು ಭ್ರಮೆ ಬಿತ್ತಿದ್ದ ಸರ್ಕಾರವಾಗಲೀ, ಆರೋಗ್ಯ ಇಲಾಖೆಯಾಗಲೀ, ಕೊನೆಗೆ ಮೋದಿ ಭಜನೆಯ ಮಾಧ್ಯಮಗಳಾಗಲೀ ಲಸಿಕೆಯ ಈ ಮಿತಿಗಳ ಬಗ್ಗೆ ಈವರೆಗೆ ಜನರಿಗೆ ತಿಳಿವಳಿಕೆ ಕೊಡುವ ಕೆಲಸ ಮಾಡಿಲ್ಲ. ಜನರಿಗಿರಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೇ ಹೀಗೆ ಎರಡೆರಡು ಡೋಸು ಲಸಿಕೆ ತೆಗೆದುಕೊಂಡ ಬಳಿಕವೂ ಕರೋನಾ ಸೋಂಕು ಹೀಗೆ ಒಕ್ಕರಿಸಿಕೊಳ್ಳಬಲ್ಲದು ಎಂಬುದು ತಿಳಿದಿಲ್ಲ! ಹಾಗಾಗಿ ಜನ ಕೂಡ ಲಸಿಕೆ ಬಂತು, ಇನ್ನೇನು ಮಾಸ್ಕ್, ದೈಹಿಕ ಅಂತರ, ಕೈ ತೊಳೆಯುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಗಾಳಿಗೆ ತೂರಿದರಾಯ್ತು ಎಂಬ ಉಮೇದಿನಲ್ಲಿದ್ದಾರೆ. ಈಗಲೂ ಬಹಳಷ್ಟು ಜನರಲ್ಲಿ ಲಸಿಕೆ ಬಂದಿರುವುದರಿಂದ ಇನ್ನೇಕೆ ಮುನ್ನೆಚ್ಚರಿಕೆ ಕ್ರಮ ಎಂಬ ಭಾವನೆಯೇ ಗಟ್ಟಿಯಾಗಿದೆ. ಹಾಗಾಗಿಯೇ ಸರ್ಕಾರ ಮತ್ತು ಇಲಾಖೆಗಳ ಎಚ್ಚರಿಕೆಯ ಹೊರತಾಗಿಯೂ ನಿಯಮಗಳನ್ನು ಗಾಳಿಗೆ ತೂರುವ ಪರಿಪಾಠ ಹೆಚ್ಚಾಗಿದೆ.

ಲಸಿಕೆ ಬಳಿಕವೂ ಸೋಂಕು: ವಾಸ್ತವಾಂಶಗಳನ್ನು ಮರೆಮಾಚಿದ್ದು ಯಾಕೆ?
ಕರೋನಾ ಸೋಂಕು ಹೆಚ್ಚಳಕ್ಕೆ ಯಾರಿಗೆ ಕ್ರೆಡಿಟ್ ನೀಡಬೇಕು? ಪರೋಕ್ಷವಾಗಿ ಮೋದಿಯನ್ನು ತಿವಿದ ಸ್ವಾಮಿ

ಹಾಗೆ ನೋಡಿದರೆ, ಇಂತಹ ಯಡವಟ್ಟುಗಳ ಮೂಲ ಇರುವುದು ಸರ್ಕಾರ ಮತ್ತು ಮಾಧ್ಯಮಗಳ ಭ್ರಮೆ ಮತ್ತು ಹಸಿ ಸುಳ್ಳುಗಳಲ್ಲಿ. ದೇಶದ ಪ್ರಧಾನಿಯನ್ನು ಒಬ್ಬ ಆಡಳಿತಗಾರನಾಗಿ, ಅಧಿಕಾರದ ಚುಕ್ಕಾಣಿ ಹಿಡಿದ ವ್ಯಕ್ತಿಯಾಗಿ ಕಾಣದೆ, ‘ಅವತಾರ ಪುರುಷ’ನಂತೆ, ‘ಪವಾಡ ಪುರುಷ’ನಂತೆ ಬಿಂಬಿಸುವ ಸರ್ಕಾರಿ ವ್ಯವಸ್ಥೆ, ಆಡಳಿತ ಪಕ್ಷ ಮತ್ತು ಅಸಹ್ಯಕರ ಮಾಧ್ಯಮಗಳ ಕಾರಣದಿಂದಾಗಿ ಜನರ ಜೀವದ ಪ್ರಶ್ನೆಯಾದ ಲಸಿಕೆಯ ಶಕ್ತಿ ಮತ್ತು ಮಿತಿಗಳ ಕುರಿತ ಸರಳ ಸಂಗತಿಗಳು ಕೂಡ ಮರೆಮಾಚಲ್ಪಟ್ಟಿವೆ. ಅಂತಹ ಅವಿವೇಕತನದ ಪರಿಣಾಮ ಇಂದು ಲಸಿಕೆ ಪಡೆದುಕೊಂಡವರು ಬಹುತೇಕ ಮುನ್ನೆಚ್ಚರಿಕೆ ಕ್ರಮಗಳ ವಿಷಯದಲ್ಲಿ ಉದಾಸೀನ ತೋರತೊಡಗಿದ್ದಾರೆ. ಆ ಮೂಲಕ ಸ್ವತಃ ತಾವೂ ಸೋಂಕಿಗೊಳಗಾಗುವುದಲ್ಲದೆ, ಇತರರನ್ನೂ ಅಪಾಯಕ್ಕೆ ತಳ್ಳುತ್ತಿದ್ದಾರೆ!

ಇಷ್ಟಾಗಿಯೂ ಈ ಲಸಿಕೆಯ ಮಿತಿಗಳ ಕುರಿತು ಕೇಂದ್ರ ಆರೋಗ್ಯ ಇಲಾಖೆಯಾಗಲೀ, ರಾಜ್ಯ ಆರೋಗ್ಯ ಇಲಾಖೆಯಾಗಲೀ, ಸತ್ಯಾಂಶಗಳನ್ನು ಜನರಿಗೆ ಹೇಳಿಲ್ಲ. ಲಸಿಕೆ ತೆಗೆದುಕೊಳ್ಳುವುದು ಕೇವಲ ಸಾವಿನಿಂದ ಪಾರಾಗಲು ವಿನಃ, ಸೋಂಕಿನಿಂದ ಪಾರಾಗಲು ಅಲ್ಲ ಎಂಬ ವೈರಾಣು ತಜ್ಞ ಡಾ ರವಿ ಅವರ ಮಾತುಗಳು ಹೇಳುವ ಸತ್ಯವನ್ನು ಜನರಿಗೆ ತಿಳಿಸಲು ಸರ್ಕಾರ ಮತ್ತು ಮುಖ್ಯವಾಹಿನಿ ಮಾಧ್ಯಮಗಳ ಬಾಯಿ ಮುಚ್ಚಿಸುತ್ತಿರುವುದು ಯಾವುದು?.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com