ನಕ್ಸಲರೊಂದಿಗೆ ಮುಖಾಮುಖಿ: 8 ಭದ್ರತಾ ಸಿಬ್ಬಂದಿಗಳು ಬಲಿ, 18 ಸಿಬ್ಬಂದಿ ನಾಪತ್ತೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಹುತಾತ್ಮ ಸಿಬ್ಬಂದಿಗಳಿಗೆ ಸಂತಾಪ ಸೂಚಿಸಿದ್ದು, ಅವರ ತ್ಯಾಗವನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ನಕ್ಸಲರೊಂದಿಗೆ ಮುಖಾಮುಖಿ: 8 ಭದ್ರತಾ ಸಿಬ್ಬಂದಿಗಳು ಬಲಿ, 18 ಸಿಬ್ಬಂದಿ ನಾಪತ್ತೆ

ನಕ್ಸಲ್‌ ಪ್ರಭಾವಿತ ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ನಡೆದ ಕಾರ್ಯಾಚರಣೆ ಬಳಿಕ, ಇದುವರೆಗೂ ಎಂಟು ಭದ್ರತಾ ಸಿಬ್ಬಂದಿಗಳು ನಕ್ಸಲರಿಂದ ಹತರಾಗಿದ್ದಾರೆ. 18 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ.

ಶನಿವಾರ ನಡೆದ ನಕ್ಸಲರೊಂದಿಗಿನ ಮುಖಾಮುಖಿಯಲ್ಲಿ ಐವರು ಭದ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದು, ಇಂದು ಇನ್ನೂ ಮೂವರು ಮೃತಪಟ್ಟಿರುವುದರಿಂದ ಒಟ್ಟು ಹತರಾದವರ ಸಂಖ್ಯೆ 8 ಕ್ಕೇರಿದೆ. ಹಾಗೂ 18 ಮಂದಿ ಸಿಬ್ಬಂದಿಗಳು ಇನ್ನೂ ಪತ್ತೆಯಾಗಿಲ್ಲ ಎಂದು ನಕ್ಸಲ್‌ ಕಾರ್ಯಾಚರಣೆಯ ಡಿಜಿ ಭಾನುವಾರ ಬೆಳಗ್ಗೆ ಧೃಡೀಕರಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಕ್ಸಲ್‌ ಹಿಡಿತವಿರುವ ಬಿಜಾಪುರ್‌ ಮತ್ತು ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ವಿರುದ್ಧ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ ನಡೆದಿದ್ದು, ಸುಮಾರು 2000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ನಿನ್ನೆ (ಶನಿವಾರ) ಮಧ್ಯಾಹ್ನ 12 ರ ಹೊತ್ತಿಗೆ ನಕ್ಸಲರೊಂದಿಗೆ ಮುಖಾಮುಖಿ ಏರ್ಪಟ್ಟಿದ್ದು, ಸುಮಾರು 3 ತಾಸುಗಳ ಕಾಲ ನಿರಂತರ ಗುಂಡಿನ ಕಾಳಗ ಏರ್ಪಟ್ಟಿದೆ. ಈ ವೇಳೆ ಐವರು ಭದ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದರು.

ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಛತ್ತೀಸ್‌ಗಢದ ಮುಖ್ಯಮಂತ್ರಿಯೊಂದಿಗೆ ತುರ್ತು ಚರ್ಚೆ ನಡೆಸಿದ್ದು, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಹಾಗೂ CRPF ನ ಡೈರೆಕ್ಟರ್‌ ಜನರಲ್‌ ಕುಲದೀಪ್‌ ಸಿಂಗ್‌ ಅವರಿಗೆ ಪರಿಸ್ಥಿತಿ ನಿಭಾಯಿಸಲು ನಿರ್ದೇಶಿಸಿದ್ದಾರೆ.

ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ವಿರುದ್ಧ ಹೋರಾಡುವಾಗ ಹುತಾತ್ಮರಾದ ನಮ್ಮ ಕೆಚ್ಚೆದೆಯ ಭದ್ರತಾ ಸಿಬ್ಬಂದಿಯ ತ್ಯಾಗಕ್ಕೆ ನಾನು ತಲೆಬಾಗುತ್ತೇನೆ. ರಾಷ್ಟ್ರವು ಅವರ ಶೌರ್ಯವನ್ನು ಎಂದಿಗೂ ಮರೆಯುವುದಿಲ್ಲ. ಅವರ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತೇನೆ. ಶಾಂತಿ ಮತ್ತು ಪ್ರಗತಿಯ ಈ ಶತ್ರುಗಳ ವಿರುದ್ಧ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಹುತಾತ್ಮ ಸಿಬ್ಬಂದಿಗಳಿಗೆ ಸಂತಾಪ ಸೂಚಿಸಿದ್ದು, ಅವರ ತ್ಯಾಗವನ್ನು ಎಂದೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಜ಼ೀರಾಂ ಘಾಟಿಯಲ್ಲಿ ನಡೆದ ಹತ್ಯೆಗಳ ಮುಖ್ಯ ರುವಾರಿ, ನಿಷೇಧಿತ ಸಂಘಟನೆ ಸಿಪಿಐ(ಮಾವೋವಾದ)ನ ಹಿರಿಯ ಸದಸ್ಯ ಮಾದ್ವಿ ಹಿಡ್ಮ ಇರುವ ಕುರಿತು ಕಳೆದ ಹತ್ತು ದಿನಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದ ಭದ್ರತಾ ಪಡೆ ನಿನ್ನೆ ಕಾರ್ಯಾಚರಣೆಗೆ ಇಳಿದಿತ್ತು.

2013 ರಲ್ಲಿ ಜ಼ೀರಾಂ ಘಾಟಿಯಲ್ಲಿ ನಡೆದ ಭೀಕರ ನರಮೇಧದಲ್ಲಿ ಸುಮಾರು 30 ಕ್ಕೂ ಹೆಚ್ಚು ಛತ್ತೀಸ್‌ಗಢ ಕಾಂಗ್ರೆಸ್‌ ನಾಯಕರು ಮೃತಪಟ್ಟಿದ್ದರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com