ಎಡದಿಂದ ಬಲಕ್ಕೆ: ಪಶ್ಚಿಮ ಬಂಗಾಳದಲ್ಲಿ ಮಾಜಿ ಕಮ್ಯುನಿಸ್ಟರ ಬಿಜೆಪಿ ವಲಸೆಗೆ ಕಾರಣಗಳೇನು?

ಸಿಪಿಎಂ ಪಕ್ಷವು ಈ ಬಾರಿಯ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಮತ್ತು ಐಎಸ್‌ಎಫ್‌ ಜತೆಗೆ ಮೈತ್ರಿ ಮಾಡಿಕೊಂಡಿದ್ದರೂ, ಅಷ್ಟು ಸುಲಭದಲ್ಲಿ ಅಧಿಕಾರ ಕೈಗೆಟಕುವ ಲಕ್ಷಣಗಳು ಕಾಣಿಸುತ್ತಿಲ್ಲ
ಎಡದಿಂದ ಬಲಕ್ಕೆ: ಪಶ್ಚಿಮ ಬಂಗಾಳದಲ್ಲಿ ಮಾಜಿ ಕಮ್ಯುನಿಸ್ಟರ ಬಿಜೆಪಿ ವಲಸೆಗೆ ಕಾರಣಗಳೇನು?

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಘೋಷಣೆಯಾಗುವುದಕ್ಕಿಂತ ಮುಂಚಿತವಾಗಿಯೇ ರಾಜಕೀಯ ನಾಯಕರ ಪಕ್ಷಾಂತರ ಕಾರ್ಯಕ್ರಮ ಜೋರಾಗಿಯೇ ನಡೆದಿತ್ತು. ಇದರಲ್ಲಿ ಬಹುಪಾಲು ನಾಯಕರುಗಳು ಆಡಳಿತರೂಢ ತೃಣಮೂಲ ಕಾಂಗ್ರೆಸ್‌, ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಪ್ರಮುಖ ನಾಯಕರು ತಮ್ಮ ಮೂಲ ಪಕ್ಷಗಳನ್ನು ಬಿಟ್ಟು ಬಿಜೆಪಿ ಸೇರಿದ್ದೇ ಹೆಚ್ಚು. ಬೆರಳೆಣಿಕೆಯಷ್ಟು ಜನರು ಮಾತ್ರ ಬಿಜೆಪಿಯಿಂದ ಇತರ ಪಕ್ಷಗಳಿಗೆ ಹಾರಿದ್ದಾರೆ.

ಸೈದ್ದಾಂತಿಕವಾಗಿ ಬಿಜೆಪಿಯಿಂದ ದೂರವೇ ಇರುವ ಎಡಪಕ್ಷಗಳ ನಾಯಕರು ಬಿಜೆಪಿಯತ್ತ ವಾಲಲು ಕಾರಣವೇನು? ಎಂಬುದು ಈಗಿರುವ ನಿಜವಾದ ಪ್ರಶ್ನೆ. ಏಕೆಂದರೆ, ಹಿಂದಿನಿಂದಲೂ ಸಂಪೂರ್ಣ ದೇಶದಲ್ಲಿ ಬಲಪಂಥೀಯತೆಯನ್ನು ಸದಾ ದೂರಿಕೊಂಡೇ ಬಂದಿರುವ ಎಡಪಕ್ಷಗಳ ನಾಯಕರು ಅಷ್ಟು ಸುಲಭದಲ್ಲಿ ತಮ್ಮ ಸೈದ್ದಾಂತಿಕ ನಿಲುವನ್ನು ಬಿಟ್ಟುಕೊಡುವುದಿಲ್ಲ. ಎಷ್ಟೇ ಕಷ್ಟವಿದ್ದರೂ, ತಮ್ಮ ನಿಲುವಿಗೆ ಬದ್ದರಾಗಿ ಇರುತ್ತಾರೆ ಎಂಬುದು ಎಡಪಕ್ಷಗಳ ನಾಯಕರ ಮೇಲೆ ಇರುವಂತಹ ನಂಬಿಕೆ. ಆದರೆ, ಈ ಬಾರಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಮಾತ್ರ ವ್ಯತಿರಿಕ್ತವಾದ ಪರಿಸ್ಥಿತಿ ಕಂಡು ಬರುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸಿಪಿಎಂ ಬಿಟ್ಟು ಬಿಜೆಪಿ ಸೇರಿದ ನಾಯಕರಲ್ಲಿ ಪ್ರಮುಖರು ಕುಮರೇಶ್‌ ಅಧಿಕಾರಿ. 18 ವರ್ಷ ತುಂಬುವುದಕ್ಕೂ ಹಿಂದೆಯೇ ಕಮ್ಯುನಿಸ್ಟ್‌ ಸಿದ್ದಾಂತಗಳತ್ತ ಒಲವು ಮೂಡಿ, ರಾಜಕೀಯ ಕಾರ್ಯಕರ್ತರಾಗಿ ದುಡಿಯಲು ಆರಂಭಿಸಿದವರು ಇವರು. ಈಗ ಅವರಿಗೆ 71 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ, ಜನರನ್ನು ಗುಂಪು ಸೇರಿಸುವ ಇವರ ವರ್ಚಸ್ಸು ಬದಲಾಗಿಲ್ಲವಾದರೂ, ಸೈದ್ದಾಂತಿಕ ನಿಲುವುಗಳಲ್ಲಿ ಭಾರಿ ಬದಲಾವಣೆಯಾಗಿದೆ.

ಸತತ ಆರು ದಶಕಗಳ ಕಾಲ ಎಡಪಕ್ಷದಲ್ಲಿದ್ದುಕೊಂಡು ಕಾರ್ಯನಿರ್ವಹಿಸಿದ್ದರೂ, ಇಂದು ಬಿಜೆಪಿ ಕಡೆ ವಾಲಿದ್ದಾರೆ. ತಾವು ಬಿಜೆಪಿ ಸೇರಿರುವ ಕುರಿತು ಮಾತನಡಿರುವ ಕಮರೇಶ್‌ ಅವರು, “ಕಮ್ಯುನಿಸ್ಟರು ಬಡವರ ಬಗ್ಗೆ ಮಾತನಾಡುತ್ತಾರೆ. ನಾನು ಕೂಡಾ ಒಬ್ಬ ಬಡವ. ಅದಕ್ಕೆ ಕಮ್ಯುನಿಸ್ಟ್‌ ಪಕ್ಷ ಸೇರಿದ್ದೆ. ಆದರೆ, ಈಗಲೂ ನಾನು ಬಡವನಾಗಿಯೇ ಉಳಿದಿದ್ದೇನೆ. ಸಿಪಿಎಂ ಯಾವುದೇ ಉದ್ಯೋಗ ಸೃಷ್ಟಿಸಲಿಲ್ಲ. ಬಡವರನ್ನು ಬಡತನದಿಂದ ಕಾಪಾಡುವ ಯಾವ ಕೆಲಸವನ್ನೂ ಮಾಡಿಲ್ಲ,” ಎಂದಿದ್ದಾರೆ.

ಸದ್ಯದ ಮಟ್ಟಿಗೆ ಎಡಪಂಥೀಯತೆಯನ್ನು ಪಕ್ಕಕ್ಕಿಟ್ಟು ಜೈ ಶ್ರೀರಾಮ್‌ ಅನ್ನುತ್ತಿರುವ ಕಮರೇಶ್‌ ಅವರು, ಟಿಎಂಸಿ ಅಧಿಕಾರಾವಧಿಯಲ್ಲಿ ಎಡಪಕ್ಷಗಳ ಮೇಲೆ ನಡೆದಿರುವ ದೌರ್ಜನ್ಯವನ್ನು ಅಂತರಾಷ್ಟ್ರೀಯ ಸುದ್ದಿಸಂಸ್ಥೆ ‘Al-Jazeera’ದೊಂದಿಗೆ ಹಂಚಿಕೊಂಡಿದ್ದಾರೆ. ಟಿಎಂಸಿ ಗೂಂಡಾಗಳು ನನ್ನನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದರು. ಸಿಪಿಎಂ ಅಧಿಕಾರ ಕಳೆದುಕೊಂಡ ನಂತರ ಅತಿ ವೇಗದಲ್ಲಿ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಾ ಹೋಯಿತು. ಇದರಿಂದಾಗಿ ನನ್ನಂತಹ ಕಾರ್ಯಕರ್ತರಿಗೆ ರಕ್ಷಣೆ ಸಿಗದಂತಾಯಿತು, ಎಂದು ಹೇಳಿದ್ದಾರೆ.

ಸಿಪಿಎಂನ ಪ್ರಮುಖ ವಿದ್ಯಾರ್ಥಿ ನಾಯಕರಾಗಿದ್ದ ಸೊಮೆನ್‌ ಘೋಷ್‌ ಅವರು ಕೂಡಾ ಬಿಜೆಪಿಯತ್ತ ವಾಲಿದ್ದಾರೆ. ಕಳೆದ ಒಂದು ವರ್ಷದಿಂದ ಇವರು 250 ಗೋವುಗಳ ಪೋಷಣೆಯಲ್ಲಿ ತೊಡಗಿದ್ದಾರೆ. “ಮುಸ್ಲಿಮರು ಗೋವುಗಳನ್ನು ಅಕ್ರಮವಾಗಿ ಸಾಗಿಸುವಾಗ ಬಿಎಸ್‌ಎಫ್‌ನವರು ಹಿಡಿದಿದ್ದರು. ಓರ್ವ ಹಿಂದು ಆಗಿ ಆ ಗೋವುಗಳನ್ನು ಸಾಕುವುದು ನನ್ನ ಕರ್ತವ್ಯ, ಎಂದು ಅವರು ಹೇಳಿದ್ದಾರೆ.

2001ರಿಂದ 2011ರವರೆಗೆ ಸಿಪಿಎಂ ನಾಯಕಿಯಾಗಿ ಗುರುತಿಸಿಕೊಂಡಿದ್ದ ರೀತಾ ಬಿಸ್ವಾಸ್‌ ಅವರು, ತಾವೊಬ್ಬ ಗೌರವಯುತ ರಾಜಕಾರಣಿಯಾಗಬೇಕು ಎಂಬ ಆಕಾಂಕ್ಷೆಯೊಂದಿಗೆ ಬಿಜೆಪಿ ಸೇರಿದ್ದಾರೆ. “ಸಿಪಿಎಂನಲ್ಲಿ ವೈಯಕ್ತಿಕವಾಗಿ ಏನೂ ಆಶಿಸದೇ ಕಲಸ ಮಾಡಲು ಹೇಳುತ್ತಾರೆ. ನಮ್ಮ ಬಗ್ಗೆ ಯೋಚಿಸುವುದರಲ್ಲಿ ತಪ್ಪೇನಿದೆ,” ಎಂದು ಅವರು ಪ್ರಶ್ನಿಸಿದ್ದಾರೆ.

ಕೃಷ್ಣಗಂಜ್‌ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರ ಸ್ವಸಹಾಯ ಸಂಘಟನೆಯನ್ನು ನಡೆಸುತ್ತಿರುವ ರೀತಾ ಅವರು, ಟಿಎಂಸಿ ಬೆಂಬಲಿಗರ ದಾಳಿಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ಸೇರುತ್ತಿದ್ದೇವೆ ಎಂದೂ ಹೇಳಿದ್ದಾರೆ. ನನ್ನ ಪತಿ ವಲಸೆ ಕಾರ್ಮಿಕರಾಗಿದ್ದು, ಬಹುಪಾಲು ಸಮಯ ಕುಟುಂಬದಿಂದ ದೂರ ಇರುತ್ತಾರೆ. ನನ್ನ ಮತ್ತು ನನ್ನ ಕುಟುಂಬದ ರಕ್ಷಣೆಯನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದೇ, ಎಂದಿದ್ದಾರೆ.

ನಂದಿಗ್ರಾಮ ಚಳವಳಿ: ಎಡಪಕ್ಷಗಳ ಅಂತ್ಯದ ಆರಂಭ

ಪಶ್ಚಿಮ ಬಂಗಾಳದ ಜನತೆ ಎಡಪಕ್ಷಗಳ ವಿರುದ್ದ ಬೇಸರ ವ್ಯಕ್ತಪಡಿಸಲು ಆರಂಭಿಸಿದ್ದು 2007ರಲ್ಲಿ. ಅಂದಿನ ಮುಖ್ಯಮಂತ್ರಿಯಾಗಿದ್ದ ಬುದ್ದದೇವ ಭಟ್ಟಾಚಾರ್ಯ ಅವರು ವಿಶೇಷ ಆರ್ಥಿಕ ವಲಯದ (Special Economic Zone) ರಚನೆಗಾಗಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸಿದ್ದರು.

ಈ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸಹಾಯದಿಂದ ರೈತರು ರಾಜ್ಯ ಸರ್ಕಾರದ ಈ ನೀತಿಯನ್ನು ಪ್ರಬಲವಾಗಿ ವಿರೋಧಿಸಿದ್ದರು. ಈ ಪ್ರತಿಭಟನೆಯನ್ನು ಹತ್ತಿಕ್ಕಲು ಎಡಪಕ್ಷಗಳ ಕಾರ್ಯಕರ್ತರು ಪ್ರತಿಭಟನಾ ನಿರತರ ಮೇಲೆ ದಾಳಿ ನಡೆಸಿದ ಆರೋಪವೂ ಇದೆ. ಅಧಿಕೃತ ದಾಖಲೆಗಳ ಪ್ರಕಾರ ಈ ಘಟನೆಯಲ್ಲಿ 14 ಜನರು ಸಾವನ್ನಪ್ಪಿದ್ದರು. ನೂರಕ್ಕೂ ಹೆಚ್ಚು ಜನರು ನಾಪತ್ತೆಯಾಗಿ ಹೋಗಿದ್ದರು.

ಇದಾದ ಬಳಿಕ 2014ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ ಕೇವಲ 2 ಸ್ಥಾನಗಳನ್ನು ಸಿಪಿಎಂ ಪಡೆದುಕೊಂಡಿತು. 2019ರಲ್ಲಿ ದೊಡ್ಡದಾದ ಸೊನ್ನೆ ಸುತ್ತಿತು.

ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಭದ್ರಕೋಟೆ ಅನ್ನಿಸಿಕೊಂಡಿದ್ದ ಜಂಗಲ್‌ಮಹಲ್‌ ಪ್ರದೇಶ ಇಂದು ಎಡಪಕ್ಷಗಳ ಕೈತಪ್ಪಿ ಹೋಗಿದೆ. ಆರು ಜಿಲ್ಲೆಗಳ ಈ ಪ್ರದೇಶವು, ಅತೀ ಹಿಂದುಳಿದ ಪ್ರದೇಶವಾಗಿ ಇಂದಿಗೂ ಗುರುತಿಸಲ್ಪಡುತ್ತಿದೆ. ಒರಿಸ್ಸಾ ಹಾಗೂ ಝಾರ್ಖಂಡ್‌ನೊಂದಿಗೆ ಗಡಿಗಳನ್ನು ಹಂಚಿಕೊಳ್ಳುವ ಈ ಜಂಗಲ್‌ಮಹಲ್‌ ಪ್ರದೇಶದ ಬಹುತೇಕ ಮತದಾರರು ಆದಿವಾಸಿಗಳು. ಇಂದು ಅವರ ಮತಗಳನ್ನೇ ಕಳೆದುಕೊಂಡು ಸಿಪಿಎಂ ಕೈಚೆಲ್ಲಿ ಕುಳಿತಿದೆ.

ಸಿಪಿಎಂ ನಾಯಕರ ಬಿಜೆಪಿ ಸೇರ್ಪಡೆಯ ಕುರಿತು ಮಾತನಾಡಿರುವ ಸಿಪಿಎಂ ನಾಯಕಿ ಆಯೆಷಾ ಖಾತುನ್‌ ಅವರು, ಈಗ ಬಿಜೆಪಿ ಸೇರಿ ಮತಗಳನ್ನು ಪಡೆದು, ಟಿಎಂಸಿಯನ್ನು ಅಧಿಕಾರದಿಂದ ಇಳಿಸಿ ವಾಪಾಸ್‌ ಸಿಪಿಎಂ ಕಡೆ ಮುಖ ಮಾಡುವ ಆಲೋಚನೆ ಇವರದ್ದಾಗಿದೆ. ಆದರೆ, ಅದು ಹಾಗಾಗುವುದಿಲ್ಲ, ಎಂದಿದ್ದಾರೆ.

ಇನ್ನು ಎಡಪಕ್ಷದ ನಾಯಕರ ಪಕ್ಷಾಂತರ ನಿರ್ಧಾರವನ್ನು ನಿರ್ಧಾರವನ್ನು ಸ್ವಾಗತಿಸಿರುವ ಬಿಜೆಪಿ ವಕ್ತಾರ ಕಾಲಿಚರಣ್‌ ಶಾ ಅವರು, ಇಲ್ಲಿ ಸೈದ್ದಾಂತಿಕ ವಿಚಾರಗಳ ಪ್ರಶ್ನೆಯಲ್ಲ. ಏಕೆಂದರೆ, ನಗರ ಪ್ರದೇಶದಲ್ಲಿರುವ ಉತ್ತಮ ಜೀವನಮಟ್ಟವನ್ನು ಹೊಂದಿರುವ ಜನರು ಸೈದ್ದಾಂತಿಕವಾಗಿ ಸಿಪಿಎಂ ಅನ್ನು ಬೆಂಬಲಿಸುತ್ತಾರೆ. ಅವರು ಈಗಲೂ ಸಿಪಿಎಂಗೇ ಮತ ನೀಡುತ್ತಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಬೇರೆಯೇ ರೀತಿ ಇದೆ. ಅಲ್ಲಿ ಯಾರು ನಮ್ಮನ್ನು ಪ್ರತಿನಿಧಿಸುತ್ತಾರೆ ಎಂಬುದು ಮುಖ್ಯವಾಗುತ್ತದೆ, ಎಂದು ಅಭಿಪ್ರಾಯಪಟ್ಟಿದ್ದಾರೆ.

“ಪಶ್ಚಿಮ ಬಂಗಾಳವನ್ನು ಎಡಪಕ್ಷಗಳು 34 ವರ್ಷಗಳ ಕಾಲ ಆಳಿದ್ದಾರೆ. ಆದರೆ, ಆ ಪಕ್ಷದಲ್ಲಿದ್ದ ಮೇಲ್ವರ್ಗದವರು ಹೆಚ್ಚಾಗಿ ನಾಯಕರಾಗಿದ್ದರು. ಪಕ್ಷವನ್ನು ಬೆಂಬಲಿಸಿದ್ದ ಹಿಂದುಳಿದ ವರ್ಗಗಳ ಜನರ ಬೆಳವಣಿಗೆಗಾಗಿ ಅವರು ಏನೂ ಮಾಡಲಿಲ್ಲ. ಆ ಮತಗಳೇ ನಮ್ಮ ಪ್ರಮುಖ ಮತಗಳಾಗಲಿವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಸುಭದ್ರ ತಳಪಾಯ ಹೊಂದಿದ್ದ ಎಡಪಕ್ಷ ಇಂದು ಪ್ರತಿಯೊಂದು ಮತಕ್ಕಾಗಿ ಬೆವರು ಸುರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಬಾರಿಯ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಮತ್ತು ಐಎಸ್‌ಎಫ್‌ ಜತೆಗೆ ಮೈತ್ರಿ ಮಾಡಿಕೊಂಡಿದ್ದರೂ, ಅಷ್ಟು ಸುಲಭದಲ್ಲಿ ಅಧಿಕಾರ ಕೈಗೆಟಕುವ ಲಕ್ಷಣಗಳು ಕಾಣಿಸುತ್ತಿಲ್ಲ. ಸಮೀಕ್ಷೆಗಳು ಕೂಡಾ ಇದರ ಸಾಧ್ಯತೆಗಳನ್ನು ಅಲ್ಲಗೆಳೆದಿವೆ. ಆದರೆ, ಚುನಾವಣೆಯ ಫಲಿತಾಂಶದವರೆಗೂ ಏನನ್ನೂ ನಿಖರವಾಗಿ ಹೇಳಲು ಸಾಧ್ಯವಿಲ್ಲ.

(Al-Jazeera ವರದಿಯ ಅನುವಾದ)

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com