ಒಂದಿಲ್ಲೊಂದು ವಿವಾದಗಳ ಮೂಲಕ ಸದಾ ಸುದ್ದಿಯಲ್ಲಿರುವ ಬಿಜೆಪಿ ಸಂಸದ, ಯುವಮೋರ್ಚಾ ರಾಷ್ಟ್ರೀಯಾಧ್ಯಕ್ಷ ತೇಜಸ್ವಿ ಸೂರ್ಯ, ಈ ಬಾರಿ ತಮಿಳುನಾಡಿನ ರೆಸ್ಟೋರೆಂಟ್ ಒಂದರ ಕುರಿತಂತೆ ತಾವು ಹಾಕಿದ ಟ್ವೀಟ್ಗೆ ಮುಜುಗರಕ್ಕೊಳಗಾಗಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತಮಿಳುನಾಡು ವಿಧಾನಸಭಾ ಚುನಾವಣೆಯ ಎನ್ಡಿಎ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಎಪ್ರಿಲ್ 2 ರಂದು ರೆಸ್ಟೋರಂಟ್ ಅಲ್ಲಿರುವ ಒಂದು ಫೋಟೋ ಹಂಚಿಕೊಂಡಿದ್ದು, ಉಪಹಾರ ಸೇವಿಸಿದ ಬಳಿಕ ನಮ್ಮಿಂದ ಹಣ ಪಡೆಯಲು ನಿರಾಕರಿಸಿದರು. ನಾವು ಒತ್ತಾಯಿಸಿದ ಬಳಿಕ ಬಿಲ್ ಪಡೆದುಕೊಂಡರು ಎಂದು ಹೇಳಿದ್ದಾರೆ.
ನಾವು ರೆಸ್ಟಾರೆಂಟಿನಲ್ಲಿ ಇವತ್ತು ಉಪಹಾರ ಸೇವಿಸಿದ ಬಳಿಕ, ಸ್ವಾಭಾವಿಕವಾಗಿ ಬಿಲ್ ಪಾವತಿಸಲು ಕ್ಯಾಷಿಯರ್ ಬಳಿ ಹೋದೆ. ಕ್ಯಾಷಿಯರ್ ಹಣವನ್ನು ಸ್ವೀಕರಿಸಲು ಹಿಂಜರಿದರು. ಬಳಿಕ ನಮ್ಮ ಒತ್ತಾಯದ ಮೇರೆಗೆ ಬಹಳ ಹಿಂಜರಿಕೆಯಿಂದ ಅವರು ಹಣಪಡೆಯಲು ಒಪ್ಪಿಕೊಂಡರು. ʼನಾವು ಬಿಜೆಪಿಯವರು. ಬಿಜೆಪಿ ಎಲ್ಲರನ್ನು ಗೌರವಿಸುವ ಮತ್ತು ಎಲ್ಲರನ್ನೂ ರಕ್ಷಿಸುವ ಪಕ್ಷ. ಸಣ್ಣ ವ್ಯಾಪರಿಗಳಿಂದಲೂ ರೋಲ್-ಕಾಲ್ ಮಾಡಲು (ನಾವು) ಡಿಎಂಕೆ ಪಕ್ಷದವರಲ್ಲವೆಂದು ಅವರ ಬಳಿ ಹೇಳಿರುವುದಾಗಿ ಸೂರ್ಯ ಟ್ವೀಟ್ ಮಾಡಿದ್ದಾರೆ.
ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಆ ರೆಸ್ಟೋರೆಂಟ್, ನಮ್ಮನ್ನು ಯಾರೂ ಉಚಿತವಾಗಿ ಕೊಡುವಂತೆ ಒತ್ತಾಯಿಸಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿಎಂಕೆ ನಮ್ಮಿಂದ ರೋಲ್ಕಾಲ್ ಮಾಡಿಲ್ಲ ಎಂದಿದೆ.
ಫೇಸ್ಬುಕ್ನಲ್ಲಿ ಶ್ರೀ ಅನ್ನಪೂರ್ಣ ಶ್ರೀ ಗೌರಿ ಶಂಕರ್ ರೆಸ್ಟೋರೆಂಟಿನ ಅಧಿಕೃತ ಖಾತೆ ಮೂಲಕ ಪ್ರತಿಕ್ರಿಯಿಸಿದ್ದು, ಆದರದ ತೇಜಸ್ವಿ ಸೂರ್ಯ, ನಮ್ಮ ರೆಸ್ಟೋರೆಂಟ್ನಲ್ಲಿ ನಿಮಗೆ ಸೇವೆ ಸಲ್ಲಿಸಿದ್ದಕ್ಕೆ ನಮಗೆ ಸಂತೋಷವಾಗಿದೆ. ಅನ್ನಪೂರ್ಣದಲ್ಲಿ ನಾವು ಎಲ್ಲರನ್ನೂ ಒಂದೇ ರೀತಿಯ ಪ್ರೀತಿ ಮತ್ತು ಕೃತಜ್ಞತೆಯಿಂದ ಸ್ವಾಗತಿಸುತ್ತೇವೆ. ಮುಖ್ಯವಾಗಿ, ಪ್ರತಿಯೊಬ್ಬರೂ ತಮ್ಮ ಬಿಲ್ಗಳನ್ನು ಪಾವತಿಸಲು ಮುಂದೆ ಬರುತ್ತಾರೆ. ನಮ್ಮನ್ನು ಯಾರೂ ಉಚಿತವಾಗಿ ಕೊಡುವಂತೆ ಇದುವರೆಗೂ ಒತ್ತಾಯಿಸಿಲ್ಲ. ಪ್ರೀತಿ ಮತ್ತು ಗೌರವದ ಸಂಕೇತವಾಗಿ ನಾವು ಕೆಲವೊಮ್ಮೆ ನಮ್ಮ ಸಮಾಜಕ್ಕಾಗಿ ಕೆಲಸ ಮಾಡುವ ಜನರಿಂದ ಹಣವನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ.
ರೆಸ್ಟೋರೆಂಟಿನ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದ್ದು, ತೇಜಸ್ವಿ ಸೂರ್ಯನ ಟ್ರಾಲ್ ಮಾಡಲು ಜಾಲತಾಣ ಬಳಕೆದಾರರು ಈ ಪೋಸ್ಟಿನ ಸ್ಕ್ರೀನ್ ಶಾಟನ್ನು ಬಳಸುತ್ತಿದ್ದಾರೆ.
ರೆಸ್ಟೋರೆಂಟಿನ ಪ್ರತಿಕ್ರಿಯೆಯೊಂದಿಗೆ ವ್ಯಾಪಕ ಟ್ರಾಲಿಗೆ ತೇಜಸ್ವಿ ಗುರಿಯಾಗುತ್ತಿದ್ದಂತೆ, ಅನ್ನಪೂರ್ಣದ ಸಮಯೋಚಿತ ಪ್ರತಿಕ್ರಿಯೆಗೆ ಸಾಕಷ್ಟು ಪ್ರಶಂಸೆಗಳು ವ್ಯಕ್ತವಾಗಿವೆ.
ಈ ಜೋಕರನ್ನು ಗೆಲ್ಲಿಸಲು ಕರ್ನಾಟಕದ ಮಂದಿ ಪ್ರಕಾಶ್ ರೈಯನ್ನು ಸೋಲಿಸಿದರು ಎಂದು ಸಾಮಾಜಿಕ ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ತೇಜಸ್ವಿ ಸೂರ್ಯರನ್ನು ʼಹೇ ಜೋಕರ್ ತೇಜಸ್ವಿ ಸೂರ್ಯʼ ಎಲ್ಲಿದ್ದೀಯಪ್ಪ ಎಂದು ಕಮೆಂಟ್ ಹಾಕಿದ್ದಾರೆ.
ಇನ್ನು ಕೆಲವರು ಸಾಮಾಜಿಕ ಅಂತರ ಕಾಪಾಡದಕ್ಕೆ ಹಾಗೂ ಮಾಸ್ಕ್ ಧರಿಸದೆ ಇರುವುದಕ್ಕೆ ಬಿಜೆಪಿಯ ಯುವ ಸಂಸದನನ್ನು ತರಾಟೆಗೆ ತೆಗೆದಿದ್ದಾರೆ.