ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಇರುವಂತೆಯೇ ಪ್ರತಿಪಕ್ಷಗಳ ನಾಯಕರ ಮೇಲೆ ಸರಣಿ ಐಟಿ ದಾಳಿ ನಡೆದಿದೆ. ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅಳಿಯನ ಮೇಲೆ ನಡೆದಿರುವ ದಾಳಿಯನ್ನು ಸ್ಟಾಲಿನ್ ಸೇರಿದಂತೆ ಡಿಎಂಕೆ ಖಂಡಿಸಿದೆ.
AIADMK-BJP ಸರ್ಕಾರವನ್ನು ಉಳಿಸಲು ಐಟಿ ಇಲಾಖೆ ತಮ್ಮ ಕರ್ತವ್ಯ ʼಮೀರಿʼ ಪ್ರಯತ್ನಿಸುತ್ತಿದೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ. ಹಾಗೂ ಐಟಿ ಇಲಾಖೆಯನ್ನು ನಿಯಂತ್ರಿಸುವಂತೆ ಚುನಾವಣಾ ಆಯೋಗಕ್ಕೆ ಪ್ರತಿಪಕ್ಷ ಆಗ್ರಹಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಡಿಎಂಕೆಯ ಚುನಾವಣಾ ತಂತ್ರಜ್ಞರಲ್ಲೊಬ್ಬರಾದ ಸಬರೀಸನ್ (ಸ್ಟಾಲಿನ್ ಅಳಿಯ) ಮೇಲೆ ನಡೆದ ದಾಳಿ ಡಿಎಂಕೆ ಆತಂಕಕ್ಕೆ ಕಾರಣವಾಗಿದೆ. ಈ ದಾಳಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ವಿರುದ್ಧ ದನಿಯೆತ್ತಿರುವ ಸ್ಟಾಲಿನ್, ನಾವು ನಿಮ್ಮ ಐಟಿ ದಾಳಿಗೆ ಹೆದರುವುದಿಲ್ಲ ಎಂದು ಸವಾಲು ಹಾಕಿದ್ದಾರೆ.
ನಾನು ಎಂಕೆ ಸ್ಟಾಲಿನ್, ಈ ಸ್ಟಾಲಿನ್ ತುರ್ತು ಪರಿಸ್ಥಿತಿಯನ್ನು ಎದುರಿಸಿದ್ದಾನೆ. ನನ್ನನ್ನು ನಿಮ್ಮ ಐಟಿ ದಾಳಿಗಳು ಭಯಭೀತಗೊಳಿಸುವುದಿಲ್ಲ. ನರೇಂದ್ರ ಮೋದಿ ಒಂದು ನೆನಪಿಟ್ಟುಕೊಳ್ಳಬೇಕು, ನಾವು ಡಿಎಂಕೆ ಪಕ್ಷದವರು, ಎಡಿಎಂಕೆ ಪಕ್ಷದವರಲ್ಲ. ನಾವು ಎದೆಗುಂದುವವರಲ್ಲ ಎಂದು ಸ್ಟಾಲಿನ್ ಎಚ್ಚರಿಸಿದ್ದಾರೆ.
ಪೆರಂಬೂರಿನ ಚುನಾವಣಾ ಮೆರವಣಿಗೆಯೊಂದನ್ನು ಉದ್ದೇಶಿಸಿ ಮಾತನಾಡಿದ ಸ್ಟಾಲಿನ್, ಇವತ್ತು ಬೆಳಿಗ್ಗೆ ಚೆನ್ನೈಯಿಂದ ತಿರುಚಿಗೆ ಬರುವಾಗ ನನ್ನ ಮಗಳ ಮನೆಯ ಮೇಲೆ ಐಟಿ ದಾಳಿ ಆಗಿರುವ ಕುರಿತು ಸುದ್ದಿ ಲಭಿಸಿತು. ಕೇಂದ್ರ ಸರ್ಕಾರ ತಮಿಳುನಾಡಿನಲ್ಲಿ AIADMK ಸರ್ಕಾರವನ್ನು ಉಳಿಸಲು ಯತ್ನಿಸುತ್ತಿದೆ. ಮೋದಿ ಒಂದು ನೆನಪಿಟ್ಟುಕೊಳ್ಳಬೇಕು. ನಾನು ಕಲೈಗ್ಞಾರ್ (ಕರುಣಾನಿಧಿ) ಅವರ ಮಗ. ಇದಕ್ಕೆಲ್ಲಾ ನಾನು ಭಯಪಡುವುದಿಲ್ಲ ಎಂದು ಹೇಳಿದ್ದಾರೆ.