ಸಣ್ಣ ಉಳಿತಾಯಕ್ಕೆ ಬಡ್ಡಿ ದರ ಕಡಿತಗೊಳಿಸಿ ನಂತರ ಯು-ಟರ್ನ್ ಹೊಡೆದ ಕೇಂದ್ರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಏಪ್ರಿಲ್ 1 ರಂದು ಬೆಳಿಗ್ಗೆ 7.45 ಗಂಟೆಗೆ ಟ್ವೀಟ್ ಮಾಡಿ ಸರ್ಕಾರ ಬಡ್ಡಿ ದರಗಳನ್ನು ಕಡಿತಗೊಳಿಸಿಲ್ಲ. ಬದಲಿಗೆ, ಇದು ಪ್ರಮಾದದಿಂದಾಗಿ ಆದೇಶ ಹೊರಬಿದ್ದಿದೆ ಎಂದು ಯೂ ಟರ್ನ್ ಹೊಡೆದಿದ್ದಾರೆ
ಸಣ್ಣ ಉಳಿತಾಯಕ್ಕೆ ಬಡ್ಡಿ ದರ ಕಡಿತಗೊಳಿಸಿ ನಂತರ ಯು-ಟರ್ನ್ ಹೊಡೆದ ಕೇಂದ್ರ

ದೇಶದ ಬಡವರು ಮತ್ತು ಮಧ್ಯಮ ವರ್ಗದವರು ತಮ್ಮ ಉಳಿತಾಯವನ್ನು ಮಾಡುವ ಪೋಸ್ಟ್ ಆಫೀಸ್ ಎಂಐಎಸ್, ರಾಷ್ಟ್ರೀಯ ಉಳಿತಾಯ ಪತ್ರ ಮತ್ತು ಸಾರ್ವಜನಿಕ ಪ್ರಾವಿಡೆಂಟ್ ಫಂಡ್ ಗಳ ಮೇಲಿನ ಬಡ್ಡಿ ದರವನ್ನು ಕಳೆದ 46 ವರ್ಷಗಳ ಕನಿಷ್ಟಕ್ಕೆ ಇಳಿಸಿ ಕೇಂದ್ರ ಸರ್ಕಾರ ಮಾರ್ಚ್ 31 ರಂದು ಆದೇಶ ಹೊರಡಿಸಿತ್ತು. ಆದರೆ ಈ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಿಗೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಏಪ್ರಿಲ್ 1 ರಂದು ಬೆಳಿಗ್ಗೆ 7.45 ಗಂಟೆಗೆ ಟ್ವೀಟ್ ಮಾಡಿ ಸರ್ಕಾರ ಬಡ್ಡಿ ದರಗಳನ್ನು ಕಡಿತಗೊಳಿಸಿಲ್ಲ. ಬದಲಿಗೆ, ಇದು ಪ್ರಮಾದದಿಂದಾಗಿ ಆದೇಶ ಹೊರಬಿದ್ದಿದೆ ಎಂದು ಯೂ ಟರ್ನ್ ಹೊಡೆದಿದ್ದಾರೆ.

ಅಂದ ಹಾಗೆ ದೇಶದ ಐದು ರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣಾ ಪ್ರಕ್ರಿಯೆ ನಡೆಯುತಿದ್ದು ಮಈ ಸಮಯದಲ್ಲೇ ಇಂತಹ ಪ್ರಮಾದ ಆಗಿರುವುದಕ್ಕೆ ಸರ್ಕಾರವೂ ಸಾಕಷ್ಟು ಮುಜುಗರ ಎದುರಿಸಬೇಕಾಗಿ ಬಂದಿದೆ. ಅದರಲ್ಲೂ ಚುನಾವಣೆ ನಡೆಯುತ್ತಿರವ ಪಶ್ಚಿಮ ಬಂಗಾಳವು 2000 ರಿಂದ ಆರಂಭಗೊಂಡು ಸುಮಾರು ಎರಡು ದಶಕಗಳವರೆಗೆ ಸಣ್ಣ ಉಳಿತಾಯ ಸಂಗ್ರಹಕ್ಕೆ ಹೆಚ್ಚಿನ ಕೊಡುಗೆ ನೀಡಿದೆ ಎಂದು ರಾಷ್ಟ್ರೀಯ ಉಳಿತಾಯ ಸಂಸ್ಥೆಯ ಅಂಕಿ ಅಂಶಗಳು ತೋರಿಸುತ್ತವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಡುವಿನ ಚುನಾವಣಾ ಯುದ್ಧ ಮುಂದುವರೆದಿರುವ ಸಮಯದಲ್ಲೇ ಈ ಆದೇಶವನ್ನು ಹಿಂತೆಗೆದುಕೊಳ್ಳುವ ಸರ್ಕಾರದ ನಿರ್ಧಾರವು ಪ್ರಕಟಗೊಂಡಿದೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಎಂಟು ಹಂತಗಳಲ್ಲಿ ನಡೆಯುತ್ತಿದ್ದು, ಎರಡನೇ ಹಂತದ ಮತದಾನ ಗುರುವಾರ ನಡೆಯುತ್ತಿದೆ. ನವೆಂಬರ್ 2018 ರವರೆಗೆ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಪಶ್ಚಿಮ ಬಂಗಾಳವು ಅಂಚೆ ಕಚೇರಿಗಳು ಮತ್ತು ಬ್ಯಾಂಕುಗಳ ಸಣ್ಣ ಉಳಿತಾಯ ಸಂಗ್ರಹಗಳಲ್ಲಿ ದೇಶದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶವನ್ನು ಮೀರಿಸಿದೆ ಎಂದು ತೋರಿಸುತ್ತದೆ. ರಾಷ್ಟ್ರೀಯ ಉಳಿತಾಯ ಸಂಸ್ಥೆಯು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಅಧೀನದಲ್ಲಿ ಬರುವ ಸಂಸ್ಥೆಯಾಗಿದೆ. ನವೆಂಬರ್ 2018 ರಿಂದ ಏಕೆ
ಅಂಕಿ ಅಂಶಗಳನ್ನು ದಾಖಲಿಸಿಲ್ಲ ಎಂಬುದಕ್ಕೆ ಕಾರಣ ತಿಳಿದು ಬಂದಿಲ್ಲ.ಸಣ್ಣ ಉಳಿತಾಯ ಸಂಸ್ಥೆಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಒಟ್ಟಾರೆ ರಾಷ್ಟ್ರೀಯ ಸಣ್ಣ ಉಳಿತಾಯ ಸಂಗ್ರಹಗಳಲ್ಲಿ ಪಶ್ಚಿಮ ಬಂಗಾಳದ ಸಂಗ್ರಹಗಳ ಪಾಲು ಕಳೆದ ಕೆಲವು ವರ್ಷಗಳಿಂದ ಶೇಕಡಾ 13-15ರಷ್ಟಿದೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಹಿರಿಯ ನಾಗರಿಕರ ಉಳಿತಾಯ ಯೋಜನೆ, ಅಂಚೆ ಕಚೇರಿ ಠೇವಣಿ ಯೋಜನೆಗಳು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಕಿಸಾನ್ ವಿಕಾಸ್ ಪತ್ರಗಳಂತಹ ಸಂಗ್ರಹಗಳನ್ನು ಸಣ್ಣ ಉಳಿತಾಯ ಎಂದು ಕರೆಯಲಾಗುತ್ತದೆ. ಸಣ್ಣ ಉಳಿತಾಯ ದರಗಳಲ್ಲಿನ ಕಡಿತವು ಹಿರಿಯ ನಾಗರಿಕರು, ಸಂಬಳ ಪಡೆಯುವ ವರ್ಗ ಮತ್ತು ಉಳಿತಾಯವನ್ನು ಮಾಡಲು ಸಣ್ಣ ಉಳಿತಾಯವನ್ನು ಬಳಸಿಕೊಳ್ಳುತ್ತಿರುವ ಜನಸಂಖ್ಯೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದರಿಂದ ಬಡ್ಡಿ ದರ ಕಡಿತವು ಜನಪ್ರಿಯವಲ್ಲದ ಕ್ರಮವಾಗಿದೆ.


ದೇಶದಲ್ಲಿ 2017-18ರಲ್ಲಿ ಒಟ್ಟು 5.96 ಲಕ್ಷ ಕೋಟಿ ರೂ.ಗಳ ಒಟ್ಟು ಸಣ್ಣ ಉಳಿತಾಯದಲ್ಲಿ, ಪಶ್ಚಿಮ ಬಂಗಾಳದಿಂದ ಸುಮಾರು 90,000 ಕೋಟಿ ರೂ., ಉತ್ತರಪ್ರದೇಶದಿಂದ 70,000 ಕೋಟಿ ರೂ., ಮಹಾರಾಷ್ಟ್ರ 63,000 ಕೋಟಿ ಮತ್ತು ಗುಜರಾತ್ 48,000 ಕೋಟಿ ರೂ. ಸಂಗ್ರಹವಾಗಿದೆ. ಈ ಮೊತ್ತದಲ್ಲಿ ಹಣ ಹಿಂಪಡೆಯುವಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ ಹೂಡಿಕೆಯನ್ನು ಮಾತ್ರ ಪರಿಗಣಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ, ಯೋಜನೆಗಳ ಬಡ್ಡಿದರಗಳನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಷ್ಕರಿಸಲಾಗುತ್ತದೆ ಮತ್ತು ಅವುಗಳನ್ನು ಆರ್ಥಿಕತೆಯಲ್ಲಿ ಚಾಲ್ತಿಯಲ್ಲಿರುವ ಬಡ್ಡಿದರಗಳೊಂದಿಗೆ ಹೊಂದಿಸಲಾಗುತ್ತದೆ. ಇಲ್ಲಿಯವರೆಗೆ, ಬ್ಯಾಂಕ್ ಸ್ಥಿರ ಠೇವಣಿ ದರಗಳಿಗೆ ಹೋಲಿಸಿದರೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು ಹೆಚ್ಚು ಆಕರ್ಷಕವಾಗಿವೆ.


ಹಣಕಾಸು ಸಚಿವಾಲಯವು ಮಾರ್ಚ್ 31 ರಂದು ವಾಡಿಕೆಯಂತೆ, ಏಪ್ರಿಲ್ 1 ರಿಂದ ಪ್ರಾರಂಭವಾಗುವ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳಲ್ಲಿ ಶೇ 0.4 ರಿಂದ 1.1 ರವರೆಗೆ ತೀವ್ರ ಕಡಿತವನ್ನು ಘೋಷಿಸಿತು. ಬಡ್ಡಿದರಗಳಲ್ಲಿ ತೀವ್ರ ಕಡಿತ ಕಂಡ ಯೋಜನೆಗಳಲ್ಲಿ ಹಿರಿಯ ನಾಗರಿಕ ಉಳಿತಾಯ ಯೋಜನೆ, ನಿವೃತ್ತ ಹಿರಿಯ ನಾಗರಿಕರಿಗೆ ಆದ್ಯತೆಯ ಉಳಿತಾಯ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ 90 ಬೇಸಿಸ್ ಪಾಯಿಂಟ್ಗಳ ಬಡ್ಡಿದರವನ್ನು ಶೇಕಡಾ 7.4 ರಿಂದ ಶೇ 6.5 ಕ್ಕೆ ಇಳಿಸಲಾಗಿದೆ. ತೆರಿಗೆಯನ್ನು ಉಳಿಸಲು ಸಂಬಳ ಪಡೆಯುವ ವರ್ಗ ಬಳಸುವ ಆಯ್ಕೆಯಾದ ಪಿಪಿಎಫ್ ಮೇಲಿನ ಬಡ್ಡಿದರವನ್ನು 70 ಬೇಸಿಸ್ ಪಾಯಿಂಟ್ ಕಡಿತಗೊಳಿಸಿ ಶೇಕಡಾ 7.1 ರಿಂದ 6.4 ಕ್ಕೆ ಇಳಿಸಲಾಗಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳ ಬಡ್ಡಿದರದಲ್ಲಿ 90 ಬೇಸಿಸ್ ಪಾಯಿಂಟ್ಗಳನ್ನು ಕಡಿತ ಮಾಡಿ ಶೇ 5.9 ಕ್ಕೆ ಇಳಿಸಲಾಗಿದೆ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯು 70 ಬೇಸಿಸ್ ಪಾಯಿಂಟ್ ಕಡಿಮೆ ಮಾಡಿ ಬಡ್ಡಿದರವನ್ನು ಶೇ 6.9 ಕ್ಕೆ ಇಳಿಸಿದೆ.ಆದರೆ, ಪ್ರತಿರೋಧ ಟೀಕೆಗಳ ನಂತರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಗುರುವಾರ ಬೆಳಿಗ್ಗೆ ಈ ಆದೇಶವನ್ನು ಪ್ರಮಾದ ಎಂದು ಎಂದು ಘೋಷಿಸಿದರು ಮತ್ತು ಅದನ್ನು ಹಿಂಪಡೆಯಲಾಗುವುದು ಎಂದರು. ಕಡಿತ ಮತ್ತು ನಂತರ ರೋಲ್ ಬ್ಯಾಕ್ ನಂತರ ಎರಡಕ್ಕೂ ವಿರೋಧ ಪಕ್ಷಗಳು ಮೋದಿ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದವು. ಬಡ್ಡಿ ದರ ಕಡಿತ ಆದೇಶದ ಕೂಡಲೇ ತೃಣಮೂಲ ಕಾಮಗ್ರೆಸ್ ನಾಯಕಿ ಮಹುವಾ ಮೊಯಿತ್ರ ಅವರು ಬಡ್ಡಿ ದರ ಕಡಿತದಿಂದ ಬಡ ವರ್ಗದ ಮೇಲಾಗುವ ಪರಿಣಾಮಗಳ ಬಗ್ಗೆ ಗಮನ ಸೆಳೆವ ಟ್ವೀಟ್ ಮಾಡಿದ್ದರು.

ನಂತರ ದರ ಕಡಿತ ಮಾಡದಿರುವ ಆದೇಶ ಹೊರಬಿದ್ದಾಗಲೂ ಸರ್ಕಾರದ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಟೀಕಿಸಿದರು. ಮತ್ತೊಬ್ಬ ಟಿಎಂಸಿ ಸಂಸದ ಡೆರೆಕ್ ಒ ಬ್ರಿಯಾನ್ ಅವರು ಸರ್ಕಾರದ ದರ ಕಡಿತ ಹಿಂತೆಗೆತ ಆದೇಶಕ್ಕೆ ಸರ್ಕಾರದ ಮುಖಕ್ಕೆ ಮೊಟ್ಟೆ ಎಂದು ಟೀಕಿಸಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಟ್ವೀಟ್ ಮಾಡಿ ಆದೇಶ ಹಿಂಪಡೆತ ನೀಡಿರುವ ಕಾರಣ ಪ್ರಮಾದವಲ್ಲ , ಚುನಾವಣೆಯ ಹಿನ್ನೆಲೆ ಎಂದು ಟೀಕಿಸಿದ್ದಾರೆ. ಒಟ್ಟಿನಲ್ಲಿ ಇದರಿಂದಾಗಿ ಕೇಂದ್ರ ಸರ್ಕಾರ ಸಾಕಷ್ಟು ಮುಜುಗರ ಅನುಭವಿಸಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com