ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ದ್ವೇಷದ ಮಾತು ಮತ್ತು ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಸಾಮಾಜಿಕ ಮಾಧ್ಯಮ ಸಂಸ್ಥೆ ಫೇಸ್ಬುಕ್ ಮಂಗಳವಾರ ಹೇಳಿದೆ. ಫೇಸ್ಬುಕ್ ನಿಯಮಗಳನ್ನು ಮತ್ತು ಭಾರತದ ಕಾನೂನುಗಳನ್ನು ಉಲ್ಲಂಘಿಸುವ ಪೋಸ್ಟ್ ಅನ್ನು ತೆಗೆದುಹಾಕಲು ಚುನಾವಣಾ ಅಧಿಕಾರಿಗಳೊಂದಿಗೆ ನಿಕಟವಾಗಿ ಸಂಪರ್ಕದಲ್ಲಿದೆ ಎಂದು ಯುಎಸ್ ಮೂಲದ ಕಂಪನಿ ತನ್ನ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ.
'ದ್ವೇಷ ಅಥವಾ ಹಿಂಸೆಗೆ ಪ್ರಚೋದನೆ ನೀಡುವ ಪೋಸ್ಟ್' ಎಂದು ಫೇಸ್ಬುಕ್ ಟೆಕ್ನಾಲಜಿಯು ಗುರುತಿಸುವ ಪೋಸ್ಟ್ಗಳನ್ನು ತಕ್ಷಣ ರಿಮೂವ್ ಮಾಡಲಾಗುತ್ತದೆ ಎಂದು ಫೇಸ್ಬುಕ್ ಹೇಳಿದೆ.
ಭಾರತ ಸೇರಿದಂತೆ ಹಲವು ದೇಶಗಳಲ್ಲಿ ದ್ವೇಷ ಕಟೆಂಟನ್ನು ತಡೆಯಲು ವಿಫಲವಾದ ಕಾರಣ ಫೇಸ್ಬುಕ್ ವ್ಯಾಪಕ ಟೀಕೆಗೆ ಒಳಗಾಗಿತ್ತು. ದ್ವೇಷ ಮತ್ತು ಹಿಂಸೆಗೆ ಪ್ರಚೋದಿಸುವ ಪೋಸ್ಟ್ಗಳಿದ್ದರೂ ಅದನ್ನು ರಿಮೂವ್ ಮಾಡದೆ ಕಂಪನಿಯ ನಿಯಮವನ್ನು ಉಲ್ಲಂಘಿಸಿದ್ದಲ್ಲದೆ ಭಾರತೀಯ ಜನತಾ ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪದ ಮೇಲೆ ಫೇಸ್ಬುಕ್ ಇಂಡಿಯಾದ ಸಾರ್ವಜನಿಕ ನೀತಿ ನಿರ್ದೇಶಕ ಅಂಖಿ ದಾಸ್ ಅವರು ತಮ್ಮ ಹುದ್ದೆಯಿಂದ ಕಳೆದ ಅಕ್ಟೋಬರ್ನಲ್ಲಿ ಕೆಳಗಿಳಿದಿದ್ದರು.
ಈ ಬೆಳವಣಿಗೆಯ ನಂತರ, ಫೆಬ್ರವರಿ 2020ರ ದೆಹಲಿಯ ಹಿಂಸಾಚಾರಕ್ಕೆ ಕಾರಣವಾದ ಬಿಜೆಪಿ ನಾಯಕರ ದ್ವೇಷದ ಭಾಷಣ ಫೇಸ್ಬುಕ್ನಲ್ಲಿ ವ್ಯಾಪಕವಾಗಿ ಶೇರ್ ಆಗಿರುವುದನ್ನು ತಡೆಯದೇ ಇದ್ದುದಕ್ಕೆ ಫೇಸ್ಬುಕ್ ಭಾರತದ ಉಪಾಧ್ಯಕ್ಷ ಅಜಿತ್ ಮೋಹನ್ ಅವರಿಗೆ ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸಾಮರಸ್ಯ ಸಮಿತಿಯು ನೋಟಿಸ್ ನೀಡಿತ್ತು. ಇದಾದ ಬಳಿಕ ಸುಪ್ರೀಂ ಕೋರ್ಟ್ ಅವರ ಬಳಿ ವಿವರಣೆ ಕೇಳಿತ್ತು.
ಮಂಗಳವಾರ ಪ್ರಕಟವಾದ ಬ್ಲಾಗ್ ಪೋಸ್ಟ್ನಲ್ಲಿ ತಪ್ಪು ಮಾಹಿತಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ಫೇಸ್ಬುಕ್ ಭಾರತದ ಎಂಟು ಫ್ಯಾಕ್ಟ್ ಚೆಕ್ಕರ್ಗಳೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದೆ.
"ಇಂಗ್ಲಿಷ್ನ ಜೊತೆಗೆ ಈ ಎಂಟು ಫ್ಯಾಕ್ಟ್ ಚೆಕ್ಕರ್ಸ್ ಬಂಗಾಳಿ, ತಮಿಳು, ಮಲಯಾಳಂ ಮತ್ತು ಅಸ್ಸಾಮೀಸ್ ಸೇರಿದಂತೆ 11 ಭಾರತೀಯ ಭಾಷೆಗಳಲ್ಲಿ ಸತ್ಯ-ಪರಿಶೀಲನೆ ನಡೆಸಲಿದ್ದಾರೆ" ಎಂದು ಬ್ಲಾಗ್ನಲ್ಲಿ ಹೇಳಲಾಗಿದೆ.
"ಫ್ಯಾಕ್ಟ್ ಚೆಕ್ಕರ್ಸ್ ಒಂದು ಪೋಸ್ಟನ್ನು ಸುಳ್ಳು ಸುದ್ದಿ ಎಂದು ಗುರುತಿಸಿದ ನಂತರ ನಾವು ಆ ಪೋಸ್ಟನ್ನು ಲೇಬಲ್ ಮಾಡುತ್ತೇವೆ ಮತ್ತು ಅದನ್ನು ನ್ಯೂಸ್ ಫೀಢ್ನಲ್ಲಿ ಕಡಿಮೆ ತೋರಿಸುತ್ತೇವೆ ಹಾಗೂ ವಿತರಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತೇವೆ" ಎಂದೂ ಹೇಳಿದೆ.
ಮಾತ್ರವಲ್ಲದೆ ಫೇಸ್ಬುಕ್ ಮತ್ತು ಅದರ ಇತರ ಎರಡು ಪ್ಲಾಟ್ಫಾರ್ಮ್ಗಳಾದ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಚುನಾವಣಾ ದಿನಗಳಲ್ಲಿ ಡಿಜಿಟಲ್ ಸಾಕ್ಷರತಾ ಅಭಿಯಾನದ ಭಾಗವಾಗಿ ಮತದಾರರಿಗೆ ಮತದಾನ ಮಾಡುವಂತೆ ನೆನಪಿಸಲಿದೆ ಎಂದೂ ಬ್ಲಾಗ್ನಲ್ಲಿ ಬರೆಯಲಾಗಿದೆ.