ತಮಿಳುನಾಡು ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ, ರಾಜಕೀಯ ನಾಯಕರ ಮಾತುಗಳೂ ಹರಿತವಾಗುತ್ತಿವೆ. ಈ ಹರಿತ ಮಾತುಗಳ ಗುಂಗಿನಲ್ಲಿ ಡಿಎಂಕೆ ನಾಯಕ ಎ ರಾಜಾ ನೀಡಿರುವ ಹೇಳಿಕೆಯಿಂದ, ಮುಂದಿನ 48 ಗಂಟೆಗಳ ಕಾಲ ಚುನಾವಣಾ ಪ್ರಚಾರದಿಂದ ನಿಷೇಧ ಹೇರಿ ಚುನಾವಣಾ ಆಯೋಗ ಆದೇಶ ನೀಡಿದೆ.
ಉದಯಾನಿಧಿ ಸ್ಟಾಲಿನ್ ಪರ ಚೆಪಾಕ್ನಲ್ಲಿ ಪ್ರಚಾಋ ಸಭೆ ನಡೆಸುತ್ತಿದ್ದ ರಾಜಾ ಅವರು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ತಾಯಿಯ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಪಳನಿಸ್ವಾಮಿ ಅವರ ಜನನವೇ ಅಕ್ರಮವಾದದ್ದು ಎಂಬ ಹೇಳಿಕೆ ಈಗ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಪಳನಿಸ್ವಾಮಿ ಯಾರು ಎಂದು ಅವರು ಸಿಎಂ ಆಗುವ ಮುಂಚೆ ಯಾರಿಗೂ ತಿಳಿದಿರಲಿಲ್ಲ. ಪಕ್ಷವನ್ನು ಬೆಳೆಸದೇ ಸಿಎಂ ಪದವಿಗೆ ಬಂದಿದ್ದಾರೆ. ಅವರ ಜನನವೇ ಅಕ್ರಮ ಮತ್ತು ಅಕಾಲಿಕ,” ಎಂದು ರಾಜಾ ಹೇಳಿದ್ದು, ಚುನಾವಣಾ ಆಯೋಗದ ತನಿಖೆಯ ವೇಳೆ ಸಾಬೀತಾಗಿದೆ. ಹಾಗಾಗಿ ಮುಂದಿನ 48 ಗಂಟೆಗಳ ಕಾಲ ಅವರು ಪ್ರಚಾರ ನಡೆಸದಂತೆ ನಿಷೇಧ ಹೇರುವ ನಿರ್ಧಾರವನ್ನು ಆಯೋಗವು ಪ್ರಕಟಿಸಿದೆ.
ತಮ್ಮ ಮಾತುಗಳ ಕುರಿತು ವಿಷಾದ ವ್ಯಕ್ತಪಡಿಸಿರುವ ರಾಜಾ ಅವರು, ನನ್ನ ಹೇಳಿಕೆ ಸಾರ್ವಜನಿಕ ಜೀವನದಲ್ಲಿರುವ ಇಬ್ಬರು ವ್ಯಕ್ತಿಗಳ ಹೋಲಿಕೆಯಷ್ಟೇ ಹೊರತು, ವೈಯಕ್ತಿಕ ಟೀಕೆ ಅಲ್ಲ ಎಂದು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.
“ರಾಜಕೀಯ ಕಾರಣಗಳನ್ನು ಬಿಟ್ಟು, ವೈಯಕ್ತಿಕವಾಗಿ ಪಳನಿಸ್ವಾಮಿ ಅವರಿಗೆ ನೋವುಂಟಾಗಿದ್ದರೆ ನಾನು ಅವರಲ್ಲಿ ಕ್ಷಮೆ ಯಾಚಿಸುತ್ತೇನೆ,” ಎಂದು ರಾಜ ಹೇಳಿದ್ದಾರೆ.