ಮೋದಿ ವರ್ಸಸ್ ದೀದಿ ಕಾರಣಕ್ಕೆ ದೇಶದ ಗಮನ ಸೆಳೆದ ನಂದಿಗ್ರಾಮದಲ್ಲಿ ನಾಳೆಯೇ ಮತದಾನ!

ಕಣದಲ್ಲಿರುವುದು ಸುವೇಂಧು ಅಧಿಕಾರಿ ವರ್ಸಸ್ ಮಮತಾ ಬ್ಯಾನರ್ಜಿಯಾದರೂ, ಚುನಾವಣಾ ತಂತ್ರಗಾರಿಕೆಯ ಭಾಗವಾಗಿ ಮೋದಿ ವರ್ಸಸ್ ದೀದಿ ಎಂಬ ಭಾರೀ ಪೈಪೋಟಿಯ ಕಾರಣಕ್ಕಾಗಿಯೇ ಇಡೀ ದೇಶದ ಗಮನ ಈಗ ನಂದಿಗ್ರಾಮದ ಮೇಲಿದೆ ಮತ್ತು ನಂದಿಗ್ರಾಮದ ಮತದಾರರ ಗಮನ ಸದ್ಯ ನಾಳೆಯ ಮತದಾನದ ಮತಗಟ್ಟೆಗಳ ಮೇಲೆ ನೆಟ್ಟಿದೆ!
ಮೋದಿ ವರ್ಸಸ್ ದೀದಿ ಕಾರಣಕ್ಕೆ ದೇಶದ ಗಮನ ಸೆಳೆದ ನಂದಿಗ್ರಾಮದಲ್ಲಿ ನಾಳೆಯೇ ಮತದಾನ!

ಪಶ್ಚಿಮಬಂಗಾಳ, ತಮಿಳುನಾಡು ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ದೇಶದ ಗಮನ ಸೆಳೆದಿರುವ ಕ್ಷೇತ್ರ ನಂದಿಗ್ರಾಮ. ಹದಿನಾಲ್ಕು ವರ್ಷಗಳ ಹಿಂದೆ ಭೂಸ್ವಾಧೀನ ಪ್ರಯತ್ನದ ವಿರುದ್ಧ ನಡೆದ ರೈತ ಹೋರಾಟದ ಬಳಿಕ, ನಂದಿಗ್ರಾಮ ಇದೇ ಮೊದಲ ಬಾರಿಗೆ ಭಾರೀ ಸುದ್ದಿಯ ಕೇಂದ್ರವಾಗಿದೆ.

ಅದಕ್ಕೆ ಕಾರಣ; ಪ್ರಧಾನಿ ಮೋದಿ ಟೀಕಾಕಾರರಲ್ಲಿ ಮುಂಚೂಣಿಯಲ್ಲಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಮತ್ತು ಒಂದು ಕಾಲದ ಅವರ ಆಪ್ತ ಹಾಗೂ ಹಾಲಿ ಬಿಜೆಪಿಯಿಂದ ಚುನಾವಣಾ ಕಣಕ್ಕಿಳಿದಿರುವ ಸುವೇಂಧು ಅಧಿಕಾರಿ ನಡುವಿನ ಭಾರೀ ಪೈಪೋಟಿ. ಹಾಗಾಗಿ, ತೃಣಮೂಲ ನಾಯಕಿ ಮತ್ತು ಬಿಜೆಪಿಯ ದೆಹಲಿ ನಾಯಕರಾದ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪಾಲಿಗೆ ನಂದಿಗ್ರಾಮ ಅತ್ಯಂತ ಪ್ರತಿಷ್ಠೆಯ ಕ್ಷೇತ್ರವಾಗಿದೆ. ಇಂತಹ ಮಹತ್ವದ ಕ್ಷೇತ್ರದಲ್ಲಿ ನಾಳೆ ಗುರುವಾರ ಮತದಾನ ನಡೆಯಲಿದೆ. ಆ ಮೂಲಕ ನಂದಿಗ್ರಾಮದ ಮತದಾರರು, ಕೇವಲ ತಮ್ಮ ಕ್ಷೇತ್ರದ ಪ್ರತಿನಿಧಿಯನ್ನಷ್ಟೇ ಅಲ್ಲದೆ, ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಭಾಗಶಃ ನಿರ್ಧರಿಸಲಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಏಕೆಂದರೆ; ನಂದಿಗ್ರಾಮದಲ್ಲಿ ದೀದಿ ಮಮತಾ ಬ್ಯಾನರ್ಜಿ ಗೆಲುವು ಪಡೆದು, ಅದೇ ಹೊತ್ತಿಗೆ ಅವರ ಪಕ್ಷ ತೃಣಮೂಲ ಕಾಂಗ್ರೆಸ್ ಕೂಡ ನಿರೀಕ್ಷಿತ ಬಹುಮತದೊಂದಿಗೆ ಮತ್ತೆ ಅಧಿಕಾರ ಹಿಡಿದರೆ, ಆಗ ದೀದಿಯೇ ಮುಖ್ಯಮಂತ್ರಿ ಎಂಬುದನ್ನು ತಳ್ಳಿಹಾಕಲಾಗದು. ಒಂದು ವೇಳೆ ತೃಣಮೂಲ ರಾಜ್ಯದಲ್ಲಿ ಬಹುಮತ ಪಡೆದು, ದೀದಿ ನಂದಿಗ್ರಾಮದಲ್ಲಿ ಸೋಲು ಕಂಡರೆ ಮುಖ್ಯಮಂತ್ರಿ ಗಾದಿ ಮತ್ತೊಬ್ಬರ ಪಾಲಾಗಲೂಬಹುದು. ಹಾಗೇ ಸುವೇಂಧು ಅಧಿಕಾರಿ ಗೆಲುವು ಪಡೆದು, ಅಚ್ಚರಿಯ ಫಲಿತಾಂಶದೊಂದಿಗೆ ಬಿಜೆಪಿ ಅನಿರೀಕ್ಷಿತ ಬಹುಮತ ಪಡೆದಲ್ಲಿ, ಸುವೇಂಧುಗೆ ಸಿಎಂ ಸ್ಥಾನ ಒಲಿದರೂ ಒಲಿಯಬಹುದು. ಹಾಗಾಗಿ, ನಂದಿಗ್ರಾಮದ ಮತದಾರರ ನಿರ್ಧಾರ ಫಲಿತಾಂಶದ ಬಳಿಕವೂ ಕ್ಷೇತ್ರವನ್ನು ಮೀರಿದ ಪರಿಣಾಮಗಳನ್ನು ಬೀರಲಿದೆ. ಹಾಗಾಗಿ ನಾಳೆಯ ಮತದಾನ ನಂದಿಗ್ರಾಮದ ಮಟ್ಟಿಗೆ ಮಾತ್ರವಲ್ಲದೆ, ಇಡೀ ಪಶ್ಚಿಮಬಂಗಾಳದ ಮಟ್ಟಿಗೂ ಬಹಳ ನಿರ್ಣಾಯಕ.

ಜೊತೆಗೆ, ಒಂದು ಕಾಲದ ಕಮ್ಯನಿಷ್ಟರ ಭದ್ರಕೋಟೆ ಮತ್ತು ಇತ್ತೀಚಿನ ದಶಕಗಳಲ್ಲಿ ದೀದಿಯ ಪ್ರಭಾವಲಯವಾಗಿ ಗುರುತಿಸಿಕೊಂಡಿರುವ ಪಶ್ಚಿಮಬಂಗಾಳದಲ್ಲಿ, ಅಲ್ಲಿನ ಬಂಗಾಳಿ ಅಸ್ಮಿತೆಯ ರಾಜಕಾರಣದ ರಕ್ಷಣಾ ಕವಚವನ್ನು ಬೇಧಿಸಿ, ತನ್ನ ಹಿಂದುತ್ವ ಅಜೆಂಡಾದ ಮೂಲಕ ತನ್ನ ಸಾಮ್ರಾಜ್ಯ ವಿಸ್ತರಣೆಯ ಬಿಜೆಪಿಯ ಪ್ರಯತ್ನಗಳ ಕಾರಣಕ್ಕೂ ನಂದಿಗ್ರಾಮ ಗಮನ ಸೆಳೆದಿದೆ. ಬಿಜೆಪಿ ಪಶ್ಚಿಮಬಂಗಾಳದಲ್ಲಿ ಬಹಳ ಬಿರುಸಿನಿಂದ ಪ್ರಯೋಗಿಸಿರುವ ಕಟ್ಟಾ ಹಿಂದುತ್ವ ಅಜೆಂಡಾ ಮತ್ತು ಆಪರೇಷನ್ ಕಮಲ ಎಂಬ ಪಕ್ಷಾಂತರಗಳೆರಡೂ ನಂದಿಗ್ರಾಮದಲ್ಲಿ ಏಕತ್ರಗೊಂಡು ಉಗ್ರ ಸ್ವರೂಪದಲ್ಲೇ ಪ್ರಯೋಗವಾಗಿವೆ. ಆ ಕಾರಣಕ್ಕೂ ನಂದಿಗ್ರಾಮದ ಫಲಿತಾಂಶ, ಬಿಜೆಪಿಯ ಉಗ್ರ ಹಿಂದುತ್ವದ ಮತ್ತು ಪಕ್ಷಾಂತರ ತಂತ್ರಗಳ ಪ್ರಯೋಗಕ್ಕೆ ಬಂಗಾಳಿಗರು ಹೇಗೆ ಪ್ರತಿಕ್ರಿಯಿಸಿದ್ದಾರೆ ಎಂಬುದಕ್ಕೆ ಒಂದು ಸತ್ವ ಪರೀಕ್ಷೆ.

ಶೇ.30ರಷ್ಟು ಮುಸ್ಲಿಂ ಮತದಾರರು ಇರುವ ನಂದಿಗ್ರಾಮದಲ್ಲಿ ಬಿಜೆಪಿಯ ಹಿಂದುತ್ವ ಅಜೆಂಡಾದ ಮತೀಯ ಧೃವೀಕರಣ ಮತ್ತು ಅದಕ್ಕೆ ಪೂರಕವಾಗಿ ದೀದಿ ಮಮತಾ ವಿರುದ್ಧ ಸ್ವತಃ ಅವರ ಪ್ರತಿಸ್ಪರ್ಧಿ ಸುವೇಂಧು ಅಧಿಕಾರಿ ಸೇರಿದಂತೆ ಬಿಜೆಪಿಯ ನಾಯಕರು ಪ್ರಯೋಗಿಸಿರುವ ಮುಸ್ಲಿಮರು ಮತ್ತು ರೊಹಿಂಗ್ಯಾ ಮುಸ್ಲಿಮರ ‘ಬೇಗಂ’, ಫೂಫಿ(ಸೋದರತ್ತೆ), ಖಾಲಾ(ಚಿಕ್ಕಮ್ಮ) ನಂತಹ ಪ್ರಚಾರದ ತಂತ್ರಗಳಿಗೆ ಮತ್ತು ಜೈಶ್ರೀರಾಮ್ ಘೋಷಣೆ ಮೂಲಕ ದೀದಿಯ ಪ್ರಚಾರ ಸಭೆಗಳಿಗೆ ಅಡ್ಡಿಪಡಿಸುವ ಯತ್ನಗಳು ಎಷ್ಟರಮಟ್ಟಿಗೆ ಬಂಗಾಳಿಗಳ ಮತ ಸೆಳೆಯಲಿವೆ ಎಂಬುದನ್ನು ಕಾದುನೋಡಬೇಕಿದೆ. ದೀದಿ ಕೂಡ ತಮ್ಮ ಮುರಿದ ಕಾಲನ್ನೇ ಮುಂದಿಟ್ಟುಕೊಂಡು, ಗಾಲಿಕುರ್ಚಿಯ ಮೇಲೆಯೇ ಕ್ಷೇತ್ರ ಸುತ್ತಾಡಿ ಪ್ರಚಾರ ನಡೆಸುವ ಮೂಲಕ ಮತದಾರರ ಅನುಕಂಪದ ಅನುಕೂಲ ಪಡೆಯುವ ಯತ್ನ ಮಾಡಿದ್ದಾರೆ.

ಮುಖ್ಯವಾಗಿ 2007ರ ನಂದಿಗ್ರಾಮ ರೈತ ಹೋರಾಟದ ವಿಷಯದಲ್ಲಿ ನಂದಿಗ್ರಾಮ ಚುನಾವಣಾ ಕಣದಲ್ಲಿ ತೃಣಮೂಲ ಮತ್ತು ಬಿಜೆಪಿ ನಡುವೆ ದೊಡ್ಡ ವಾಗ್ವಾದ ನಡೆದಿದೆ. ನಂದಿಗ್ರಾಮ ಹೋರಾಟ ಆರಂಭಿಸಿದ ಸುವೇಂಧು ಅಧಿಕಾರಿ, ಇಡೀ ಹೋರಾಟದ ಶ್ರೇಯಸ್ಸು ತಮ್ಮದು ಎಂದು ವಾರಸುದಾರಿಕೆ ಕ್ಲೇಮು ಮಾಡಿದರೆ, ದೀದಿ ಮಮತಾ, ತಾವಿಲ್ಲದೆ ಆ ಹೋರಾಟ ಮುಂದು ಸಾಗುತ್ತಿರಲಿಲ್ಲ. ವಾಸ್ತವವಾಗಿ ಅಂದು ಲಾಠಿ ಪ್ರಹಾರದಲ್ಲಿ ರೈತರ ಸಾವಿಗೆ ಕಾರಣವೇ ಸುವೇಂಧು ಅಧಿಕಾರಿ ಎಂದಿದ್ದಾರೆ. ಜೊತೆಗೆ ಸುವೇಂಧು ಸ್ಥಳೀಯರಾದರೂ, ಅವರು ಈಗ ಹೊರಗಿನ ಪಕ್ಷ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಬಂಗಾಳೀ ಅಸ್ಮಿತೆಯನ್ನೇ ಅಪಮಾನಿಸಿದ್ದಾರೆ ಎಂಬುದು ದೀದಿ ಪ್ರಚಾರ. ಆ ಮೂಲಕ ಪಶ್ಚಿಮಬಂಗಾಳದ ಚುನಾವಣಾ ಪ್ರಚಾರವನ್ನೇ ಬಂಗಾಳಿಗರು ವರ್ಸಸ್ ಹೊರಗಿನವರು ಎಂಬ ದಿಸೆಯಲ್ಲಿ ತಿರುಗಿಸಲು ದೀದಿ ಯತ್ನಿಸಿದ್ದರು.

ಈ ನಡುವೆ, ಸುವೇಂಧು ಸುಮಾರು ದಶಕದಿಂದ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದರೂ, ಇದೀಗ ಅವರು ಬಿಜೆಪಿಗೆ ಪಕ್ಷಾಂತರ ಮಾಡಿ ಕಣಕ್ಕಿಳಿದಿದ್ದಾರೆ. ಅವರೊಂದಿಗೆ ಅವರ ಹಿಂಬಾಲಕ ನಾಯಕರು ಕೆಲವು ಬಿಜೆಪಿಗೆ ಪಕ್ಷಾಂತರ ಮಾಡಿದ್ದರೂ, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಪಕ್ಷಾಂತರ ಮಾಡದೇ ತೃಣಮೂಲದೊಂದಿಗೇ ಉಳಿದಿದ್ದಾರೆ. ಜೊತೆಗೆ ಬಿಜೆಪಿಯ ಒಳಗೇ ನಂದಿಗ್ರಾಮದ ಕೆಲವು ನಾಯಕರು ಮತ್ತು ಸುವೇಂಧು ನಡುವೆ ಬಿರುಕಿದೆ. ಹಾಗಾಗಿ ಅವರು ತಟಸ್ಥರಾಗಿದ್ಧಾರೆ. ಹಾಗಾಗಿ, ಮೋದಿ, ಶಾ ಅವರ ತಂತ್ರಗಾರಿಕೆ, ಪ್ರಚಾರದ ಬಿರುಸುಗಳ ಹೊರತಾಗಿಯೂ ಸುವೇಂಧು ಗೆಲುವು ಸುಲಭವಿಲ್ಲ ಎನ್ನಲಾಗುತ್ತಿದೆ. ಆದರೆ, ಈ ಕೊರತೆಗಳನ್ನು ನೀಗುವ ತಂತ್ರ ಎಂಬಂತೆ ನಂದಿಗ್ರಾಮದಲ್ಲಿ ಬಿಜೆಪಿ ಉಗ್ರ ಹಿಂದುತ್ವದ ತಂತ್ರಗಳನ್ನು ಹೂಡಿದೆ. ಮುಸ್ಲಿಮರು ಮತ್ತು ರೊಹಿಂಗ್ಯಾ ಪರವಿದ್ದಾರೆ ಎಂಬುದನ್ನು ಮುಂದಿಟ್ಟುಕೊಂಡು ದೀದಿ ವಿರುದ್ಧ ಪ್ರಬಲ ವಾಗ್ದಾಳಿ ನಡೆಸುತ್ತಿದೆ. ಆ ಮೂಲಕ ಮುಸ್ಲಿಂ ಮತಗಳ ವಿರುದ್ಧ ಹಿಂದೂ ಮತಗಳನ್ನು ಧ್ರುವೀಕರಿಸುವ ಅದರ ಯತ್ನ ಫಲಿಸಿದ್ದಲ್ಲಿ ಶೇ.70ರಷ್ಟಿರುವ ಹಿಂದೂ ಮತಗಳಲ್ಲು ಬಹುಪಾಲು ಸುವೇಂಧು ಪರವಾಲಲಿವೆ. ಆಗ ದೀದಿ ಗೆಲುವಿನ ಲೆಕ್ಕಾಚಾರಗಳು ತಲೆಕೆಳಗಾಗಬಹುದು ಎನ್ನಲಾಗುತ್ತಿದೆ.

ಆದರೆ, ಬಿಜೆಪಿಯ ಈ ಮತೀಯ ವಿಭಜನೆಯ ತಂತ್ರದ ಸುಳಿವು ಪಡೆದಿರುವ ದೀದಿ, ಕೂಡ ಮೃದು ಹಿಂದುತ್ವದ ಮೊರೆ ಹೋಗಿದ್ದಾರೆ. ಸಂಸ್ಕೃತ ಶ್ಲೋಕ ಪಠಣ, ದೇವಾಲಯ ಭೇಟಿ, ತಮ್ಮ ಗೋತ್ರದ ಕುರಿತ ಹೇಳಿಕೆಗಳ ಮೂಲಕ ಅವರು ಹಿಂದೂ ಮತಗಳನ್ನೂ ಓಲೈಸುವ ಪ್ರಯತ್ನಗಳನ್ನು ನಡೆಸಿದ್ದಾರೆ. ಹಾಗಾಗಿ ಒಂದು ಕಡೆ ಬಿಜೆಪಿಯ ಮುಸ್ಲಿಂ ವಿರೋಧಿ ಪ್ರಚಾರ ಮುಸ್ಲಿಂ ಮತಗಳನ್ನು ಮಮತಾ ಪರ ಧ್ರುವೀಕರಿಸಿದರೆ, ಜೊತೆಗೆ ಸಾಕಷ್ಟು ಪ್ರಮಾಣದ ಹಿಂದೂ ಮತಗಳನ್ನೂ ದೀದಿ ಬಾಚಿಕೊಂಡರೆ, ಬ್ಯಾನರ್ಜಿ ಮತ್ತೊಮ್ಮೆ ಗೆಲುವಿ ಪತಾಕೆ ಹಾರಿಸಬಹುದು. ಆದರೆ, ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಸುವೇಂಧು ಮತ್ತು ಬಿಜೆಪಿ ಪಕ್ಷದ ವರ್ಚಸ್ಸು ಫಲಿತಾಂಶವನ್ನು ತಿರುವು ಮುರುವು ಮಾಡಿದರೂ ಅಚ್ಚರಿ ಇಲ್ಲ!

ಕಣದಲ್ಲಿರುವುದು ಸುವೇಂಧು ಅಧಿಕಾರಿ ವರ್ಸಸ್ ಮಮತಾ ಬ್ಯಾನರ್ಜಿಯಾದರೂ, ಚುನಾವಣಾ ತಂತ್ರಗಾರಿಕೆಯ ಭಾಗವಾಗಿ ಮೋದಿ ವರ್ಸಸ್ ದೀದಿ ಎಂಬ ಭಾರೀ ಪೈಪೋಟಿಯ ಕಾರಣಕ್ಕಾಗಿಯೇ ಇಡೀ ದೇಶದ ಗಮನ ಈಗ ನಂದಿಗ್ರಾಮದ ಮೇಲಿದೆ ಮತ್ತು ನಂದಿಗ್ರಾಮದ ಮತದಾರರ ಗಮನ ಸದ್ಯ ನಾಳೆಯ ಮತದಾನದ ಮತಗಟ್ಟೆಗಳ ಮೇಲೆ ನೆಟ್ಟಿದೆ!

ಮಾರ್ಚ್ 27ರಂದು ನಡೆದ ರಾಜ್ಯದ ಮೊದಲ ಸುತ್ತಿನ ಚುನಾವಣೆಯಲ್ಲಿ 30 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಈ ಬಾರಿ ಎರಡನೇ ಹಂತದಲ್ಲಿ ನಾಲ್ಕು ಜಿಲ್ಲೆಗಳ 30 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಆ ಪೈಕಿ ನಂದಿಗ್ರಾಮ ಗ್ರಾಮೀಣ ಕ್ಷೇತ್ರ ಕೂಡ ಒಂದು ಎಂಬುದು ಗಮನಾರ್ಹ!

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com