ಮ್ಯಾನ್ಮಾರ್ ಸೇನೆಯೊಂದಿಗೆ ವಹಿವಾಟು: ಬಯಲಾಯ್ತು ಅದಾನಿ ಸಮೂಹದ ಹಕೀಕತ್ತು!

ಅಂತಹ ಎಚ್ಚರಿಕೆಗಳಿಗೆ, ತಾನು ಅಂತಹ ಯಾವುದೇ ವಹಿವಾಟು, ವ್ಯಾವಹಾರಿಕ ಸಂಬಂಧ ಹೊಂದಿಲ್ಲ ಎಂಬ ಸ್ಪಷ್ಟನೆ ನೀಡಿದ್ದ, ಅದಾನಿ ಸಮೂಹದ ಅಸಲೀ ಬಣ್ಣ ಇದೀಗ, ಎಬಿಸಿ ನ್ಯೂಸ್ ಮೂಲಕ ಬಯಲಾಗಿದೆ.
ಮ್ಯಾನ್ಮಾರ್ ಸೇನೆಯೊಂದಿಗೆ ವಹಿವಾಟು: ಬಯಲಾಯ್ತು ಅದಾನಿ ಸಮೂಹದ ಹಕೀಕತ್ತು!

ಮ್ಯಾನ್ಮಾರ್ ನಲ್ಲಿ ಸೇನಾ ದಂಗೆ ಮತ್ತು ಆಂಗ್ ಸಾನ್ ಸೂಕಿ ಸೇರಿದಂತೆ ಪ್ರಮುಖರ ಬಂಧನದ ಬಿಕ್ಕಟ್ಟು ತೀವ್ರವಾಗಿರುವ ಹೊತ್ತಿನಲ್ಲೇ ಅಲ್ಲಿ ಬಂದರು ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿರುವ ಅದಾನಿ ಸಮೂಹ, ಆ ಉದ್ದೇಶಕ್ಕಾಗಿ ಅಲ್ಲಿನ ಸೇನೆಗೆ ಸೇರಿದ ಮ್ಯಾನ್ಮಾರ್ ಎಕಾನಮಿಕ್ ಕಾರ್ಪರೇಷನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಅದಾನಿ ಸಮೂಹ ಬರೋಬ್ಬರಿ 30 ಮಿಲಿಯನ್ ಡಾಲರ್(220 ಕೋಟಿ ರೂ. ಪಾವತಿಸಿ, ಸೇನಾ ಕಂಪನಿಯೊಂದಿಗೆ ಬಂದರು ನಿರ್ಮಾಣಕ್ಕಾಗಿ ಭೂಮಿ ಗುತ್ತಿಗೆ ಪಡೆದಿದೆ. ಮ್ಯಾನ್ಮಾರ್ ನ ಪ್ರಮುಖ ನಗರ ಯಂಗೋನ್ ನಲ್ಲಿ ಈ ಬಂದರು ನಿರ್ಮಾಣಕ್ಕೆ ಅದಾನಿ ಕಂಪನಿ ಮುಂದಾಗಿದ್ದು, ಸೇನಾ ದಂಗೆಯ ಹಿನ್ನೆಲೆಯಲ್ಲಿ ಸದ್ಯ ವಿದೇಶಿ ಕಂಪನಿಗಳ ಮೇಲೆ ಭಾರೀ ಒತ್ತಡ ನಿರ್ಮಾಣವಾಗಿದೆ. ಅಂತಹ ಪರಿಸ್ಥಿತಿಯಲ್ಲಿಯೂ, ಅದಾನಿ ಕಂಪನಿ ಅಲ್ಲಿನ ಸೇನಾ ದಂಗೆಯ ಹಿಂದಿನ ಸೇನಾ ವ್ಯವಸ್ಥೆಯೊಂದಿಗೆ ಈ ಒಪ್ಪಂದ ಮಾಡಿಕೊಂಡು, ಭಾರೀ ವ್ಯವಹಾರ ಕುದುರಿಸಿರುವುದು ಈಗ ಕುತೂಹಲ ಕೆರಳಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ, ಕಳೆದ ತಿಂಗಳು ಈ ಬಗ್ಗೆ ಎದ್ದ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದ ಅದಾನಿ ಕಂಪನಿ, ಮ್ಯಾನ್ಮಾರ್ ನ ಸೇನಾ ವ್ಯವಸ್ಥೆಯೊಂದಿಗೆ ತಾನು ಯಾವುದೇ ವ್ಯಾವಹಾರಿಕ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಇದೀಗ ಎಬಿಸಿ ನ್ಯೂಸ್ ಎಂಬ ಸುದ್ದಿವಾಹಿನಿ ದಾಖಲೆ ಸಹಿತ ಬಹಿರಂಗಪಡಿಸಿರುವ ವಿವರಗಳು, ಕಂಪನಿಯ ಆ ಸ್ಪಷ್ಟನೆಗೆ ಸಂಪೂರ್ಣ ವ್ಯತಿರಿಕ್ತವಾಗಿದ್ದು, ಅದಾನಿ ಪೋರ್ಟ್ಸ್ ಮುಖ್ಯ ಕಾರ್ಯನಿರ್ಹಣಾಧಿಕಾರಿ ಕರಣ್ ಅದಾನಿ, 2019ರ ಜುಲೈನಲ್ಲಿ ಈಗ ಮ್ಯಾನ್ಮಾರ್ ಸೇನಾ ದಂಗೆಯ ಸೂತ್ರಧಾರ ಮತ್ತು ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮತ್ತು ಅಂದಿನ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ಮಿನ್ ಆಂಗ್ ಲಯಾಂಗ್ ಅವರನ್ನು ಭೇಟಿ ಮಾಡಿ, ಡೀಲ್ ಕುದುರಿಸಿದ್ದರು ಎಂಬುದನ್ನು ಸುದ್ದಿವಾಹಿನಿ ವೀಡಿಯೋ, ಫೋಟೋ ಸಹಿತ ಬಹಿರಂಗಪಡಿಸಿದೆ.

ಆ ಹೊತ್ತಿಗಾಗಲೇ, ಜನರಲ್ ಮಿನ್ ಸೇರಿದಂತೆ ಮ್ಯಾನ್ಮಾರ್ ಸೇನೆಯ ಹಲವು ಜನರಲ್ ಗಳು ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಸಿದ ಹಿಂಸಾಚಾರದ ಹಿನ್ನೆಲೆಯಲ್ಲಿ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ಆರ್ಥಿಕ ದಿಗ್ಬಂಧನಕ್ಕೆ ಗುರಿಯಾಗಿದ್ದರು. ಆದರೂ, ಅದಾನಿ ಕಂಪನಿ ಅಂಥ ನಿಷೇಧಿತ ನಾಯಕರೊಂದಿಗೆ ವ್ಯಾವಹಾರಿಕ ಡೀಲ್ ಕುದುರಿಸಿರುವುದು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಮ್ಯಾನ್ಮಾರ್ ಸೇನೆಯೊಂದಿಗೆ ವಹಿವಾಟು: ಬಯಲಾಯ್ತು ಅದಾನಿ ಸಮೂಹದ ಹಕೀಕತ್ತು!
ಮ್ಯಾನ್ಮಾರ್ ‌ನೊಂದಿಗೆ ವ್ಯಾಪಾರ ಒಪ್ಪಂದ ಸ್ಥಗಿತಗೊಳಿಸಿದ ಯುಎಸ್

ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿರುವ, ಜನಾಂಗೀಯ ಹತ್ಯಾಕಾಂಡದಂತಹ ಗಂಭೀರ ಕೃತ್ಯದ ಆರೋಪಿತನಾಗಿರುವ ಮ್ಯಾನ್ಮಾರ್ ಸೇನೆ ಮತ್ತು ಅದರ ಮುಖ್ಯಸ್ಥರ ಪಾಲುದಾರಿಕೆಯ ಸಂಸ್ಥೆಯೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿರುವ ಎಲ್ಲಾ ಉದ್ಯಮ ಸಂಸ್ಥೆಗಳಿಗೆ ಈಗಾಗಲೇ ಅಂತಾರಾಷ್ಟ್ರೀಯ ಸಮುದಾಯ ಮತ್ತು ಅಮೆರಿಕ ಸರ್ಕಾರ ಎಚ್ಚರಿಕೆ ನೀಡಿದೆ. ಅದಾನಿ ಕಂಪನಿಗೂ ಕೂಡ ಈ ಬಗ್ಗೆ ವಿಶ್ವಸಂಸ್ಥೆ ಕೂಡಟ 2019ರಲ್ಲೇ ಎಚ್ಚರಿಕೆ ನೀಡಿತ್ತು. ಮಾನವ ಹಕ್ಕು ಉಲ್ಲಂಘನೆ, ಜನಾಂಗೀಯ ಹತ್ಯೆಯಂತಹ ಹೇಯ ಕೃತ್ಯದಲ್ಲಿ ತೊಡಗಿರುವ ಮ್ಯಾನ್ಮಾರ್ ಸೇನಾ ವ್ಯವಸ್ಥೆಯೊಂದಿಗೆ ಯಾವುದೇ ರೀತಿಯ ಸಂಬಂಧ ಹೊಂದುವುದು ತರವಲ್ಲ ಎಂದು ಎಚ್ಚರಿಸಲಾಗಿತ್ತು. ಅಲ್ಲದೆ, ಅದಾನಿ ಸಮೂಹದ ಆಸ್ಟ್ರೇಲಿಯಾ ಅಂಗಸಂಸ್ಥೆಗಳ ಮೂಲಕ ಮ್ಯಾನ್ಮಾರ್ ನಲ್ಲಿ ನಡೆಸುವ ವಹಿವಾಟುಗಳ ಬಗ್ಗೆಯೂ ಅಂತಾರಾಷ್ಟ್ರೀಯ ಸಮುದಾಯ ಎಚ್ಚರಿಕೆ ನೀಡಿತ್ತು.

ಆದರೆ, ಅಂತಹ ಎಚ್ಚರಿಕೆಗಳಿಗೆ, ತಾನು ಅಂತಹ ಯಾವುದೇ ವಹಿವಾಟು, ವ್ಯಾವಹಾರಿಕ ಸಂಬಂಧ ಹೊಂದಿಲ್ಲ ಎಂಬ ಸ್ಪಷ್ಟನೆ ನೀಡಿದ್ದ, ಅದಾನಿ ಸಮೂಹದ ಅಸಲೀ ಬಣ್ಣ ಇದೀಗ, ಎಬಿಸಿ ನ್ಯೂಸ್ ಮೂಲಕ ಬಯಲಾಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com