ದ್ರಾವಿಡ ನೆಲದಲ್ಲಿ ಕಾವೇರಿದ ಚುನಾವಣೆ: ಈಗಲೂ ಬಿಜೆಪಿ ಊಟದ ಜೊತೆ ಉಪ್ಪಿನಕಾಯಿ!

ಬಿಜೆಪಿಗೆ ತಮಿಳುನಾಡಿನ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಪಾರುಪಥ್ಯ ವಿಸ್ತರಿಸಲು ಮತ್ತು ಆ ಮೂಲಕ ದೇಶದ ದಕ್ಷಿಣ ಭಾಗದಲ್ಲಿ ತನ್ನ ವರ್ಚಸ್ಸು ಇನ್ನೂ ಏರುಗತಿಯಲ್ಲೇ ಇದೆ ಎಂಬುದನ್ನು ಸಾಬೀತು ಮಾಡಲು ಈ ಚುನಾವಣೆ ಎಷ್ಟು ಮುಖ್ಯವೋ, ಅಷ್ಟೇ ಎಂ ಕೆ ಸ್ಟಾಲಿನ್ ಮತ್ತು ಪಳನಿಸ್ವಾಮಿಗೆ ತಮ್ಮ ನಾಯಕತ್ವ ಮತ್ತು ಪಕ್ಷದ ವಾರಸುದಾರಿಕೆಯನ್ನು ಸಾಬೀತು ಮಾಡಲು ಕೂಡ ಈ ಚುನಾವಣೆ ನಿರ್ಣಾಯಕ
ದ್ರಾವಿಡ ನೆಲದಲ್ಲಿ ಕಾವೇರಿದ ಚುನಾವಣೆ: ಈಗಲೂ ಬಿಜೆಪಿ ಊಟದ ಜೊತೆ ಉಪ್ಪಿನಕಾಯಿ!

ಪಶ್ಚಿಮಬಂಗಾಳ ಹೊರತುಪಡಿಸಿ ಇದೀಗ ನಡೆಯುತ್ತಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಕುತೂಹಲ ಕೆರಳಿಸಿರುವುದು ತಮಿಳುನಾಡು ಚುನಾವಣೆ. ಕೇರಳ, ಪುದುಚೇರಿ, ಅಸ್ಸಾಂ ರಾಜ್ಯಗಳ ಚುನಾವಣೆಗಿಂತ ದ್ರಾವಿಡ ನೆಲದ ರಾಜಕೀಯ ಆಯ್ಕೆ ದೇಶದ ಗಮನ ಸೆಳೆಯಲು ಹಲವು ಕಾರಣಗಳಿವೆ.

ಅಂತಹ ಕಾರಣಗಳಲ್ಲಿ, ದೇಶದಾದ್ಯಂತ ಪ್ರತಿ ರಾಜ್ಯದಲ್ಲೂ ತನ್ನದೇ ಸರ್ಕಾರ ಸ್ಥಾಪಿಸಬೇಕು ಎಂಬ ಬಿಜೆಪಿಯ ಮಹತ್ವಾಕಾಂಕ್ಷೆಗೆ ದೊಡ್ಡ ಸವಾಲಾಗಿರುವ ತಮಿಳುನಾಡಿನಲ್ಲಿ ಈ ಬಾರಿ ಮೈತ್ರಿ ಮೂಲಕವಾದರೂ ಅಧಿಕಾರ ಹಿಡಿಯಲು ಆ ಪಕ್ಷ ನಡೆಸಿರುವ ಕಸರತ್ತು ಮುಖ್ಯವಾದುದು. ಕಾಂಗ್ರೆಸ್ ನಾಯಕಿ ಖುಷ್ಬೂ, ಐಪಿಎಸ್ ಅಧಿಕಾರಿ ಅಣ್ಣಾ ಮಲೈ ಅವರಂಥವರನ್ನು ಸೆಳೆದು ಪಕ್ಷದ ವರ್ಚಸ್ಸು ವೃದ್ಧಿಯ ಮೂಲಕ ಬಿಜೆಪಿ ನಡೆಸಿರುವ ಚುನಾವಣಾ ತಯಾರಿಗಳು ಕಳೆದ ಒಂದು ವರ್ಷದಿಂದಲೇ ದೇಶದ ಗಮನ ಸೆಳೆದಿದ್ದವು.

ಹಾಗೇ ಈಗ ಕಣದಲ್ಲಿರುವ ಮತ್ತು ಮುಖ್ಯಮಂತ್ರಿ ಅಭ್ಯರ್ಥಿಗಳಾಗಿ ಎರಡು ಮೈತ್ರಿ ಬಣಗಳನ್ನು ಮುನ್ನಡೆಸುತ್ತಿರುವ ಎಂ ಕೆ ಸ್ಟಾಲಿನ್ ಮತ್ತು ಎಡಪ್ಪಾಡಿ ಕೆ ಪಳನಿಸ್ವಾಮಿ ಅವರುಗಳಿಗೂ ಇದು ತಮ್ಮ ಪಕ್ಷದ ಹೊಣೆಗಾರಿಕೆ ಹೊತ್ತು ಎದುರಿಸುತ್ತಿರುವ ಮೊದಲ ಚುನಾವಣೆ. ಹಾಗೇ ಸುಮಾರು ಎರಡು ದಶಕದ ಬಳಿಕ ಸತತ ಎರಡು ಬಾರಿ ಅಧಿಕಾರಕ್ಕೇರಿದ ಎಐಎಡಿಎಂಕೆಗೆ, ಮೂರನೇ ಬಾರಿಯೂ ಅಧಿಕಾರ ಉಳಿಸಿಕೊಂಡು, ಪಕ್ಷದ ಸ್ಥಾಪಕ ಎಂ ಜಿ ರಾಮಚಂದ್ರನ್ ಅವರ ದಾಖಲೆ ಸರಿಗಟ್ಟುವ ಅವಕಾಶ ದೊರೆಯುವುದೇ ಎಂಬ ಕಾರಣಕ್ಕೂ ಈ ಚುನಾವಣೆ ಗಮನ ಸೆಳೆದಿದೆ.

ಆದರೆ, ಜನಸಾಮಾನ್ಯರ ಇಂತಹ ಕುತೂಹಲಗಳನ್ನು ಮೀರಿ ದ್ರಾವಿಡ ನೆಲದ ಮತದಾರ ಯೋಚಿಸುತ್ತಿದ್ದಾನೆ ಎಂಬುದು ಇತ್ತೀಚಿನ ಚುನಾವಣಾ ಪೂರ್ವ ಸಮೀಕ್ಷೆಗಳು ಸಾರುತ್ತಿರುವ ಸಂಗತಿ. ಹಾಗೆ ನೋಡಿದರೆ, ತಮಿಳುನಾಡು ಚುನಾವಣೆಯ ವಿಷಯದಲ್ಲಿ ಈ ಬಾರಿಯ ಬಹುತೇಕ ಸಮೀಕ್ಷೆಗಳು ಆರಂಭದಿಂದಲೂ ಡಿಎಂಕೆ ನೇತೃತ್ವದ ಯುಪಿಎ ಮೈತ್ರಿಗೆ ನಿಚ್ಛಳ ಬಹುಮತದ ಭವಿಷ್ಯ ನುಡಿದಿವೆ. ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಕಳೆದ ಬಾರಿ ಪಡೆದ ಸ್ಥಾನಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಪಡೆಯುವುದು ಕೂಡ ಪ್ರಾಯಾಸಕರ ಎಂಬುದು ಬಹುತೇಕ ಸಮೀಕ್ಷೆಗಳ ಸಾರ.

ಅದರಲ್ಲೂ ತೀರಾ ಇತ್ತೀಚಿನ ಟೈಮ್ಸ್ ನೌ ಮತ್ತು ಸಿ ವೋಟರ್ ಸಮೀಕ್ಷೆಯಂತೂ ಮತದಾನಕ್ಕೆ ಕೆಲವೇ ದಿನಗಳ ಮುನ್ನ ಮತದಾರರ ಮನದಿಂಗಿತದ ಮೇಲೆ ಬೆಳಕು ಚೆಲ್ಲಿದೆ. ಹಾಗಾಗಿ ಸಹಜವಾಗೇ ಈ ಸಮೀಕ್ಷೆ ಚುನಾವಣಾ ಕಣದ ಚಿತ್ರಣದ ಸಮೀಪ ದರ್ಶನವೆನ್ನಲಾಗುತ್ತಿದೆ. ಆ ಸಮೀಕ್ಷೆಯ ಪ್ರಕಾರ, 234 ಸ್ಥಾನ ಬಲದ ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 6ರಂದು ನಡೆಯಲಿರುವ ಚುನಾವಣೆಯಲ್ಲಿ ಎಂ ಕೆ ಸ್ಟಾಲಿನ್ ನೇತೃತ್ವದ ಯುಪಿಎ 177 ಸ್ಥಾನಗಳನ್ನು ಪಡೆಯಲಿದೆ. ಕಳೆದ ಬಾರಿ, 2016ರ ವಿಧಾನಸಭಾ ಚುನಾವಣೆಯಲ್ಲಿ 98 ಸ್ಥಾನಗಳನ್ನು ಪಡೆದು ಎಐಎಡಿಎಂಕೆ ಎದುರು ಸತತ ಎರಡನೇ ಬಾರಿ ಸೋಲು ಕಂಡಿದ್ದ ಡಿಎಂಕೆ, ಈ ಬಾರಿ 79 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆಯುವ ಮೂಲಕ ಅಧಿಕಾರದ ಗದ್ದುಗೆಗೇರಲಿದೆ ಎಂದು ಸಮೀಕ್ಷೆ ಹೇಳಿದೆ.

ಅದೇ ಹೊತ್ತಿಗೆ, 2011 (150 ಸ್ಥಾನ) ಮತ್ತು 2016ರಲ್ಲಿ(136 ಸ್ಥಾನ) ಸತತ ಗೆಲುವು ಸಾಧಿಸುವ ಮೂಲಕ, 1984ರ ಬಳಿಕ ಮತ್ತೆ ನಿರಂತರ ಅಧಿಕಾರಕ್ಕೆ ಬಂದಿದ್ದ ಎಐಎಡಿಎಂಕೆ, ಈ ಬಾರಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿಯುವ ಮೂಲಕ ಎಂ ಜಿಆರ್ ಕಾಲದ ಇತಿಹಾಸವನ್ನು(1977, 1980 ಮತ್ತು 1984) ಪುನರ್ ನಿರ್ಮಿಸುವ ಅವಕಾಶ ಪಡೆದಿತ್ತು. ಆದರೆ, ತಮಿಳುನಾಡಿನ ಮತದಾರ, ಎಐಎಡಿಎಂಕೆಯ ಎರಡು ಅವಧಿಯ ಆಡಳಿತದಿಂದ ಬೇಸತ್ತಿದ್ದು, ಪ್ರಬಲ ಆಡಳಿತ ವಿರೋಧಿ ಅಲೆ ರಾಜ್ಯಾದ್ಯಂತ ಎದ್ದು ಕಾಣುತ್ತಿದೆ. ಹಾಗಾಗಿ, ಅಂತಹ ಅವಕಾಶವಂಚಿತವಾಗಿ ಪ್ರತಿಪಕ್ಷ ಸ್ಥಾನದಲ್ಲಿ ಕೂರುವ ಸಾಧ್ಯತೆಗಳೇ ಹೆಚ್ಚಿವೆ. ಕಳೆದ ಚುನಾವಣೆಯಲ್ಲಿ 136 ಸ್ಥಾನದೊಂದಿಗೆ ಅಧಿಕಾರ ಉಳಿಸಿಕೊಂಡಿದ್ದ ಎಐಎಡಿಎಂಕೆ ನೇತೃತ್ವದ ಎನ್ ಡಿಎ ಮೈತ್ರಿಕೂಟ, ಈ ಬಾರಿ ಕೇವಲ 49 ಸ್ಥಾನಗಳಿಗೆ ಕುಸಿಯುವ ಸಾಧ್ಯತೆ ಇದೆ. ಅಂದರೆ, ಬರೋಬ್ಬರಿ 87 ಸ್ಥಾನಗಳನ್ನು ಕಳೆದುಕೊಳ್ಳುವ ಆ ಮೈತ್ರಿಗೆ ಆಡಳಿತ ವಿರೋಧಿ ಅಲೆಯೇ ದೊಡ್ಡ ಶಾಪವಾಗಿದೆ ಎಂಬುದು ಸಮೀಕ್ಷೆಯ ಮಾಹಿತಿ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದ್ರಾವಿಡ ನಾಡಲ್ಲಿ ಬಿಜೆಪಿ ತನ್ನ ಅಧಿಪತ್ಯ ಸ್ಥಾಪಿಸಲು ಇನ್ನಿಲ್ಲದ ಸಾಹಸ ಮಾಡುತ್ತಿದ್ದರೂ, ಅಲ್ಲಿ ಅಂತಿಮವಾಗಿ ಜನಸಾಮಾನ್ಯರ ಪಾಲಿಗೆ ಚುನಾವಣೆ ಎಂಬುದು ಎರಡು ದ್ರಾವಿಡ ಪಕ್ಷಗಳ ನಡುವೆಯೇ. ಅದು ದ್ರಾವಿಡ ಮುನೇತ್ರ ಕಳಗಂ(ಡಿಎಂಕೆ) ಮತ್ತು ಅಖಿಲ ಭಾರತ ಅಣ್ಣಾ ದ್ರಾವಿಡ ಮುನೇತ್ರ ಕಳಗಂ(ಎಐಎಡಿಎಂಕೆ) ನಡುವಿನ ಸಮರವಷ್ಟೇ. ಈಗಲೂ ಅಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ. ಹಾಗಾಗಿಯೇ ಚುನಾವಣಾ ಲೆಕ್ಕಾಚಾರಗಳು ಡಿಎಂಕೆ ಮತ್ತು ಎಐಎಡಿಎಂಕೆ ಹೆಸರಲ್ಲೇ ನಡೆಯುತ್ತವೆ. ಈ ಬಾರಿ ವಿಶೇಷವೆಂದರೆ; ಬರೋಬ್ಬರಿ ಅರ್ಧ ಶತಮಾನದ ಬಳಿಕ ಡಿಎಂಕೆ, ತನ್ನ ಮೇರು ನಾಯಕ ಎಂ ಕರುಣಾನಿಧಿಯವರ ಅನುಪಸ್ಥಿತಿಯಲ್ಲಿ ಚುನಾವಣೆ ಎದುರಿಸುತ್ತಿದ್ದರೆ, ಅದೇ ಹೊತ್ತಿಗೆ ಎಐಎಡಿಎಂಕೆ ಕೂಡ ಬರೋಬ್ಬರಿ ಮೂರು ದಶಕದ ಬಳಿಕ ಅದರ ಪ್ರಭಾವಿ ನಾಯಕಿ ಜೆ ಜಯಲಲಿತಾ ಇಲ್ಲದೆ ಚುನಾವಣೆಗೆ ಎದುರಾಗಿದೆ. ಅಂದರೆ; ಪಕ್ಷವನ್ನು ಕಟ್ಟಿ ಬೆಳೆಸಿದ ಇಬ್ಬರು ಮೇರು ನಾಯಕರ ಅನುಪಸ್ಥಿತಿಯಲ್ಲಿ, ಅವರ ವಾರಸುದಾರರು ಮೊಟ್ಟಮೊದಲ ಬಾರಿಗೆ ತಮ್ಮ ಬಣಗಳನ್ನು ಮುನ್ನಡೆಸುತ್ತಿದ್ದಾರೆ.

ಹಾಗಾಗಿ, ಬಿಜೆಪಿಗೆ ತಮಿಳುನಾಡಿನ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಪಾರುಪಥ್ಯ ವಿಸ್ತರಿಸಲು ಮತ್ತು ಆ ಮೂಲಕ ದೇಶದ ದಕ್ಷಿಣ ಭಾಗದಲ್ಲಿ ತನ್ನ ವರ್ಚಸ್ಸು ಇನ್ನೂ ಏರುಗತಿಯಲ್ಲೇ ಇದೆ ಎಂಬುದನ್ನು ಸಾಬೀತು ಮಾಡಲು ಈ ಚುನಾವಣೆ ಎಷ್ಟು ಮುಖ್ಯವೋ, ಅಷ್ಟೇ ಎಂ ಕೆ ಸ್ಟಾಲಿನ್ ಮತ್ತು ಪಳನಿಸ್ವಾಮಿಗೆ ತಮ್ಮ ನಾಯಕತ್ವ ಮತ್ತು ಪಕ್ಷದ ವಾರಸುದಾರಿಕೆಯನ್ನು ಸಾಬೀತು ಮಾಡಲು ಕೂಡ ಈ ಚುನಾವಣೆ ನಿರ್ಣಾಯಕ.

ಹಾಗಂತ, ಈ ಬಾರಿಯ ಚುನಾವಣೆ ಕೇವಲ ಡಿಎಂಕೆ, ಎಐಎಡಿಎಂಕೆ ಮತ್ತು ಅವುಗಳ ಮೈತ್ರಿಯ ಕಾಂಗ್ರೆಸ್ ಮತ್ತು ಬಿಜೆಪಿಗೆ ಮಾತ್ರ ಸೀಮಿತವಾಗಿಲ್ಲ. ಎಐಎಡಿಎಂಕೆಯಿಂದ ಸಿಡಿದುಹೋಗಿ ಪ್ರತ್ಯೇಕ ಪಕ್ಷ ಕಟ್ಟಿರುವ ಮತ್ತು ಪ್ರಭಾವಿ ನಾಯಕಿ ಶಶಿಕಲಾ ನಟರಾಜನ್ ಅವರ ಆಪ್ತ ಟಿಟಿವಿ ದಿನಕರನ್ ಅವರ ಅಮ್ಮಾ ಮಕ್ಕಳ್ ಮುನೇತ್ರ ಕಳಗಂ(ಎಎಂಎಂಕೆ) ಮತ್ತು ನಟ ಕಮಲ್ ಹಾಸನ್ ಅವರ ಮಕ್ಕಳ್ ನೀತಿ ಮಯ್ಯಂ(ಎಂಎನ್ ಎಂ) ಪಕ್ಷಗಳೂ ಸಾಕಷ್ಟು ಸುದ್ದಿ ಮಾಡುತ್ತಿವೆ. ಡಿಎಂಕೆಯ ಕಾಂಗ್ರೆಸ್ ಸೇರಿದಂತೆ 12 ಪಕ್ಷಗಳ ಮೈತ್ರಿಕೂಟ ಮತ್ತು ಎಐಎಡಿಎಂಕೆಯ ಬಿಜೆಪಿ ಸೇರಿದಂತೆ 9 ಪಕ್ಷಗಳ ಮೈತ್ರಿಕೂಟಗಳ ಮುಂದೆ ಈ ವ್ಯಕ್ತಿಕೇಂದ್ರಿತ ಪಕ್ಷಗಳು ದೊಡ್ಡ ಸಾಧನೆಯನ್ನೇನೂ ಮಾಡಲಾರವು ಎಂಬುದನ್ನು ಸಮೀಕ್ಷೆಗಳು ಹೇಳುತ್ತಿದ್ದರೂ, ವ್ಯಕ್ತಿಕೇಂದ್ರಿತ ರಾಜಕಾರಣದಲ್ಲೇ ಹೆಚ್ಚು ನಂಬಿಕೆ ಇಟ್ಟಿರುವ ತಮಿಳುನಾಡಿನಲ್ಲಿ ಈ ಪಕ್ಷಗಳೇ ಪ್ರಭಾವಿ ಮೈತ್ರಿಕೂಟಗಳ ಮತ ವಿಭಜನೆ ಮಾಡಿ, ದೊಡ್ಡ ಮಟ್ಟದ ವ್ಯತ್ಯಾಸಗಳಿಗೆ ಕಾರಣವಾಗಬಹುದು ಎಂಬುದನ್ನೂ ಆ ಸಮೀಕ್ಷೆಗಳು ಹೇಳುವುದನ್ನು ಮರೆತಿಲ್ಲ.

ಹಾಗಾಗಿ, ಚುನಾವಣಾ ಕಣ ರಂಗೇರುತ್ತಿದ್ದಂತೆ, ಪಕ್ಷಗಳ ಬಲಾಬಲದ ಲೆಕ್ಕಾಚಾರಗಳೂ ಗರಿಗೆದರಿವೆ. ಸ್ಟಾಲಿನ್ ಮತ್ತು ಪಳನಿಸ್ವಾಮಿ ನಡುವಿನ ಪೈಪೋಟಿಯಲ್ಲಿ ಯಾರು ಎಷ್ಟು ಬಲದ ಮೇಲೆ ಗೆಲ್ಲುತ್ತಾರೆ. ಎಷ್ಟು ಸ್ಥಾನದ ಮೇಲೆ ಸೋಲುತ್ತಾರೆ ಎಂಬ ಚರ್ಚೆ ಬಿಸಿಯೇರಿದೆ. ಹಾಗಾಗಿ ಯಾರೆಷ್ಟೇ ಹೇಳಿದರೂ, ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ರಾಷ್ಟ್ರೀಯ ಪಕ್ಷಗಳ ಸ್ಥಾನ ಸದ್ಯಕ್ಕಂತೂ ದ್ರಾವಿಡ ನೆಲದಲ್ಲಿ ಊಟದ ಜೊತೆಗಿನ ಉಪ್ಪಿನಕಾಯಿ ಎಂಬಷ್ಟಕ್ಕೇ ಸೀಮಿತ!

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com