ಕಾಂಗ್ರೆಸ್ ಪಕ್ಷ ತಮಿಳರ ಹಾಗೂ ತಮಿಳುನಾಡಿನ ಆಶಯಗಳಿಗೆ ಎಂದೂ ಧಕ್ಕೆ ತರುವುದಿಲ್ಲ ಎಂದು ರಾಹುಲ್ ಗಾಂಧಿ ಚೆನ್ನೈನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭರವಸೆ ನೀಡಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಆರ್ಎಸ್ಎಸ್ ಹಾಗೂ ಬಿಜೆಪಿಯನ್ನು ನಾವು ಉರುಳಿಸುತ್ತೇವೆ. ಈ ಚುನಾವಣೆ ಈ ಹಿಂದಿನ ಚುನಾವಣೆಗಳಿಗಿಂತ ಭಿನ್ನವಾದುದು. ಈ ಹಿಂದಿನ ಚುನಾವಣೆಗಳು ರಾಜಕೀಯ ಪಕ್ಷಗಳ ನಡುವೆ ಇದ್ದರೆ, ಈ ಬಾರಿಯ ಚುನಾವಣೆ ತಮಿಳುನಾಡು vs ಆರ್ಎಸ್ಎಸ್ ಆಗಿರಲಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಡಿಎಂಕೆ – ಕಾಂಗ್ರೆಸ್ ಮೈತ್ರಿಕೂಟದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಪ್ರಗತಿಪರ ಮೈತ್ರಿಕೂಟವಾದ ಡಿಎಂಕೆ ಹಾಗೂ ಕಾಂಗ್ರೆಸ್ ತಮಿಳುನಾಡಿನ ಜನತೆ ಜೊತೆ ನಿಲ್ಲುತ್ತದೆ. ಡಿಎಂಕೆ ಅಧ್ಯಕ್ಷ ಸ್ಟಾಲಿನ್ ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತಾರೆ. ನಾವು ಜೊತೆ ಸೇರಿ ಆರ್ಎಸ್ಎಸ್ ಹಾಗೂ ಬಿಜೆಪಿಯನ್ನು ಉರುಳಿಸುತ್ತೇವೆ. ಡಿಎಂಕೆ, ಸ್ಟಾಲಿನ್ ಹಾಗೂ ಕಾಂಗ್ರೆಸ್ ಎಂದಿಗೂ ತಮಿಳರ, ತಮಿಳುನಾಡಿನ ವಿರೋಧಿ ಸಿದ್ದಾಂತಗಳೊಂದಿಗೆ ರಾಜಿಯಾಗುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ತಮಿಳುನಾಡು ಜ್ಞಾನವುಳ್ಳ ಯುವಕರನ್ನು ಹೊಂದಿದೆ ಮತ್ತು ಇದು ಭಾರತದ ಮಾನವ ಸಂಪನ್ಮೂಲದ ರಾಜಧಾನಿಯಾಗಿದೆ. ಆದರೆ, ಒಂದು ಪಕ್ಷ ತಮಿಳುನಾಡಿನ ಅಂತರ್ಗತ ಸಾಮರ್ಥ್ಯವನ್ನು ನಾಶಮಾಡಲು ಹೊರಟಿದೆ. ಈ ಚುನಾವಣೆಯು ಇಂತಹ ದಾಳಿಯನ್ನು ಸೋಲಿಸುವುದಾಗಿದೆ
ತಮಿಳುನಾಡು ಭಾರತದ ಪರಿಕಲ್ಪನೆಯ ಪ್ರಮುಖ ಭಾಗವಾಗಿದೆ. ಅಡಿಪಾಯದ ಭಾಗವಾಗಿ ಇತರ ರಾಜ್ಯಗಳೂ ಇವೆ. ಆದರೆ ತಮಿಳುನಾಡು ಪ್ರಮುಖವಾಗಿದೆ. ಆದರೆ ಬಿಜೆಪಿಯು ಒಂದೇ ಸಂಸ್ಕೃತಿಯನ್ನು ಶ್ರೇಷ್ಟವೆನ್ನುತ್ತಿದೆ. ಇದು ನಾನು ನಂಬಿರುವ ಭಾರತದ ಪರಿಕಲ್ಪನೆಯಲ್ಲ. ಒಂದು ಭಾಷೆ ಇನ್ನೊಂದು ಭಾಷೆಗಿಂತ ಶ್ರೇಷ್ಟ ಎಂದು ನಂಬುವ ಭಾರತ ನನ್ನದಲ್ಲ ಎಂದು ರಾಹುಲ್ ಹೇಳಿದ್ದಾರೆ.
ಭವ್ಯ ಪರಂಪರೆಯುಳ್ಳ ತಮಿಳುನಾಡಿನಂತಹ ರಾಜ್ಯದ ಮುಖ್ಯಮಂತ್ರಿಯೊಬ್ಬರು ಮೋದಿ-ಷಾ ಮುಂದೆ ತಲೆ ಬಾಗುವುದನ್ನು, ಕಾಲಿಗೆರಗುವುದನ್ನು ನೋಡುವಾಗ ಬೇಸರವೆನಿಸುತ್ತದೆ. ಕಾಂಗ್ರೆಸ್ ತನ್ನ ಮಿತ್ರ ಪಕ್ಷದ ನಾಯಕರೊಂದಿಗೆ ಪರಸ್ಪರ ಗೌರವ ಕೊಟ್ಟುಕೊಂಡು ವ್ಯವಹರಿಸುತ್ತದೆ. ನೇರ ಮನುಷ್ಯ ಯಾವತ್ತೂ ಇನ್ನೊಬ್ಬರೆದುರು ತಲೆ ಬಾಗಲ್ಲ. ತಮಿಳುನಾಡಿನ ಈಗಿನ ಮುಖ್ಯಮಂತ್ರಿ ಒಬ್ಬ ಭ್ರಷ್ಟನಾಗಿರುವುದಕ್ಕೆ ಅವರ ಮುಂದೆ ತಲೆ ಬಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ನೀವು ಡಿಎಂಕೆಗೆ ಮತ ಚಲಾಯಿಸಿ ಸ್ಟಾಲಿನ್ ರನ್ನು ಮುಖ್ಯಮಂತ್ರಿಯನ್ನಾಗಿಸಿ. ತಮಿಳುನಾಡನ್ನು ತಮಿಳರು ಆಳಬೇಕೆ ಹೊರತು ತಮಿಳುನಾಡನ್ನು ದೆಹಲಿಯಿಂದ ಆಳಕೂಡದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.