ಪಂಜಾಬಿನ ಮಾಲೌಟ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರಿಗೆ ರೈತರ ಗುಂಪೊಂದು ಬಟ್ಟೆ ಹರಿದು ಥಳಿಸಿರುವ ಘಟನೆ ಮಾರ್ಚ್ 27 ರಂದು ನಡೆದಿದೆ. ಹೊಸ ಕೃಷಿಕಾನೂನುಗಳ ಸಮರ್ಥನೆ ಮತ್ತು ರೈತವಿರೋಧಿ ಹೇಳಿಕೆಗಳಿಂದ ರೈತರು ನೊಂದು ಈ ರೀತಿ ಮಾಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಕೃಷಿಕಾನೂನುಗಳ ವಿರುದ್ಧ ಪಂಜಾಬಿನಲ್ಲಿ ರೈತರು ವಿವಿಧ ಕಾರ್ಯಕ್ರಮ, ಆಂದೋಲನಗಳನ್ನು ಹಮ್ಮಿಕೊಳ್ಳುತ್ತಿದ್ದು, ಕೃಷಿಕಾನೂನುಗಳನ್ನು ಸಮರ್ಥಿಸಿಕೊಳುತ್ತಿರುವ ಮತ್ತು ರೈತವಿರೋಧಿ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರನ್ನು ಪ್ರತಿಭಟನಾ ನಿರತ ರೈತರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಹಾಗು ರಾಜ್ಯದಲ್ಲಿ ಬಿಜೆಪಿ ನಾಯಕರ ಕಾರ್ಯಕ್ರಮಕ್ಕೆ ಅಡ್ಡಿಗೊಳಿಸುತ್ತಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಾರ್ಚ್ 27 (ಶನಿವಾರ ) ಅಬೋಹರ್ನ ಬಿಜೆಪಿ ಶಾಸಕ ಅರುಣ್ ನಾರಂಗ್ ರವರು ಮಾಲೌಟಾಕ್ಕೆ ಪತ್ರಿಕಾಗೋಷ್ಟಿಗೆ ಆಗಮಿಸಿದ ವೇಳೆ ರೈತರ ಗುಂಪೊಂದು ಅವರ ಕಾರಿನ ಸುತ್ತಮುತ್ತಿ, ಅವರ ಮುಖಕ್ಕೆ ಮತ್ತು ವಾಹನಕ್ಕೆ ಕಪ್ಪು ಶಾಹಿಹಾಕಿ, ಬಟ್ಟೆ ಹರಿದು ತಳ್ಳಿಸಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವಂತಹ ಮೂರು ಕೃಷಿಕಾಯ್ದೆಗಳ ವಿರುದ್ಧ ಪಂಜಾಬ್ನಿಂದ ಆರಂಭವಾದ ಹೋರಾಟ ಇದೀಗ ದೇಶವ್ಯಾಪಿ ಹಬ್ಬಿದೆ. ನವೆಂಬರ್ನಿಂದ ಈವರೆಗೂ ಕಾನೂನುಗಳನ್ನು ಹಿಂಪಡೆಯುವಂತೆ ರೈತರು ದೆಹಲಿಯ ಗಡಿಭಾಗಗಳಲ್ಲಿ ಹೋರಾಟ ಮುಂದುವರೆಸಿದ್ದು, ಕೇಂದ್ರ ಸರ್ಕಾರ ಹೋರಾಟವನ್ನು ಹತ್ತಿಕ್ಕಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ ಹಾಗು ಪೊಲೀಸ್ ಇಲಾಖೆಯನ್ನು, ಪಕ್ಷದ ಕಾರ್ಯಕರ್ತರನ್ನು ಬಳಸಿಕೊಂಡು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಹೋರಾಟ ನಿರತ ರೈತರು ಆರೋಪಿಸುತ್ತಲೇ ಬಂದಿದ್ದಾರೆ.