ಅಣ್ಣಾಮಲೈ ಮತಪ್ರಚಾರದಲ್ಲಿ ʼಅಲ್ಲಾಹು ಅಕ್ಬರ್ʼ ಘೋಷಣೆ: ಮುಸ್ಲಿಂ ಮತಕ್ಕೆ BJP ದಾಳ?

ಅರವಾಕುರಿಚಿ ಕ್ಷೇತ್ರದಲ್ಲಿ 35,000 ಮುಸ್ಲಿಂ ಮತಗಳಿದ್ದು, ಫಲಿತಾಂಶದಲ್ಲಿ ಈ ಮತಗಳು ನಿರ್ಣಾಯಕವಾಗಲಿದೆ ಎಂಬ ಅರಿವಿದ್ದೇ ಹಿಂದೂ-ಮುಸ್ಲಿಂ ಭಾಯಿ ಭಾಯಿ ಎಂಬ ದಾಳವನ್ನು ಬಿಜೆಪಿ ಹೂಡಿದೆ
ಅಣ್ಣಾಮಲೈ ಮತಪ್ರಚಾರದಲ್ಲಿ ʼಅಲ್ಲಾಹು ಅಕ್ಬರ್ʼ ಘೋಷಣೆ: ಮುಸ್ಲಿಂ ಮತಕ್ಕೆ BJP ದಾಳ?

ತಮಿಳುನಾಡು ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ʼದ್ರಾವಿಡʼ ಸಿದ್ದಾಂತದ ರಾಜಕಾರಣ ತಮಿಳರ ಮಣ್ಣಿನಲ್ಲಿ ಭದ್ರವಾಗಿ ಊರಲು ಸಾಧ್ಯವಿಲ್ಲದ ಹೊರತಾಗಿಯೂ ಬಿಜೆಪಿ ತಮಿಳುನಾಡಿನಲ್ಲಿ ತನ್ನ ಅದೃಷ್ಟ ಪರೀಕ್ಷಿಸಲು ಹೊರಟಿದೆ.

ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷರಾಗಿರುವ ಮಾಜಿ ಐಪಿಎಸ್‌ ಅಧಿಕಾರಿ ಕೆ ಅಣ್ಣಾಮಲೈ ಎನ್‌ಡಿಎ ಮೈತ್ರಿಕೂಟದಿಂದ ಸ್ಪರ್ಧಿಸುತ್ತಿದ್ದು, ಅರವಾಕುರಿಚಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅರವಾಕುರಿಚಿ ಕ್ಷೇತ್ರದಲ್ಲಿ 35,000 ಮುಸ್ಲಿಂ ಮತಗಳಿದ್ದು, ಫಲಿತಾಂಶದಲ್ಲಿ ಈ ಮತಗಳು ನಿರ್ಣಾಯಕವಾಗಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಿಸುತ್ತಾರೆ. ಹಾಗಾಗಿಯೇ ಇದುವರೆಗೂ ಕಠೋರ ʼಹಿಂದೂ ಅಸ್ಮಿತೆʼ ರಾಜಕಾರಣ ಮಾಡುತ್ತಿರುವ ಬಿಜೆಪಿ ಅರವಾಕುರಿಚಿಯಲ್ಲಿ, ಮುಸ್ಲಿಮರ ಮನಸ್ಸು ಗೆಲ್ಲಲು ʼಅಲ್ಲಾಹು ಅಕ್ಬರ್‌ʼ ಘೋಷಣೆ ಕೂಗಿದೆ.

ಅರವಾಕುರಿಚಿಗೆ ಮತಯಾಚಿಸಲು ತೆರೆದ ವಾಹನ ಮೂಲಕ ಹೋದ ಅಣ್ಣಾಮಲೈ ಪಕ್ಕದಲ್ಲಿರುವ ಮತಯಾಚಕರು ʼನಾರೇ ತಕ್ಬೀರ್‌ – ಅಲ್ಲಾಹು ಅಕ್ಬರ್‌ʼ ಎಂದು ಘೋಷಣೆ ಕೂಗಿದ್ದಾರೆ.

ಬಳಿಕ ನೆರೆದ ಸಭಿಕರನ್ನುದ್ದೇಶಿಸಿ ಮಾತನಾಡಿದ ಅಣ್ಣಾಮಲೈ, ಸಿಎಎ ಕುರಿತಂತೆ ಕಾಂಗ್ರೆಸ್‌ ಹಾಗೂ ಡಿಎಂಕೆ ತಪ್ಪು ಸಂದೇಶ ನೀಡುತ್ತಿದೆ. ಸಿಎಎಯನ್ನು ಯಾವುದೇ ಧರ್ಮದ ವಿರುದ್ಧವಾಗಿ ತಂದಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಮುಸ್ಲಿಮರ ಪರವಾಗಿರುವ ಹಲವಾರು ಯೋಜನೆಗಳನ್ನು ನರೇಂದ್ರ ಮೋದಿ ಸರ್ಕಾರ ತಂದಿದೆ. ಮುಸ್ಲಿಮರ ವಿದ್ಯಾಭ್ಯಾಸಕ್ಕಾಗಿ ಹಲವಾರು ವಿದ್ಯಾರ್ಥಿ ವೇತನವನ್ನು ಬಿಜೆಪಿ ತಂದಿದೆ, ಬಿಜೆಪಿ ಮುಸ್ಲಿಮರ ವಿರೋಧಿಯಲ್ಲ. ಬಿಜೆಪಿ ಹಿಂದೂ-ಮುಸ್ಲಿಂ ಎಂದು ವ್ಯತ್ಯಾಸ ನೋಡುವುದಿಲ್ಲ. ಮೌಲಾನ ಅಬುಲ್‌ ಕಲಾಂ ಆಝಾದ್‌, ಹಝ್ರತ್‌ ಬೇಗಂ ಮೊದಲಾದ ಹೆಸರಿನಲ್ಲಿ ವಿದ್ಯಾರ್ಥಿ ವೇತನವನ್ನು ಬಿಜೆಪಿ ಸರ್ಕಾರ ಪರಿಚಯಿಸಿದೆ. ಸರಿ ಸುಮಾರು 17 ಯೋಜನೆಗಳು ಮುಸ್ಲಿಮರಿಗಾಗಿಯೇ ಪ್ರಾರಂಭಿಸಲಾಗಿದೆ. ಮುಸ್ಲಿಮರ ಅಭಿವೃದ್ಧಿಗಾಗಿ ಸಾಚಾರ್‌ ವರದಿಯನ್ನು ಅನುಷ್ಠಾನಗೊಳಿಸಲು ನರೇಂದ್ರ ಮೋದಿ ಸರ್ಕಾರ ಹೊರಟಿದೆ. ಹಾಗಾಗಿ ಬಿಜೆಪಿ ವಿರುದ್ಧದ ಸುಳ್ಳು ಆರೋಪಗಳನ್ನು, ಪ್ರಚಾರಗಳಿಗೆ ಕಿವಿ ಕೊಡದೆ ಬಿಜೆಪಿಗೆ ಮತ ಚಲಾಯಿಸಿ ಎಂದು ಕರೆ ನೀಡಿದ್ದಾರೆ.

ಮುಸ್ಲಿಮರ ವಿರುದ್ಧ ಸತತ ಧ್ವೇಷವನ್ನೇ ಕಾರುತ್ತಿರುವ ಹಿಂದುತ್ವದ ಪ್ರತಿಪಾದಕರು ಮತಕ್ಕಾಗಿ ಎಲ್ಲರೂ ಒಂದೇ ತಾಯಿ ಗರ್ಭದಿಂದ ಬಂದವರು ಎಂದು ಹೇಳುತ್ತಿರುವುದು ಕುಚೋದ್ಯ. ಬಿಜೆಪಿ ಸಂಸದ ಅನಂತ್‌ ಕುಮಾರ್‌ ಹೆಗಡೆ ಮೊದಲಾದವರು ತಮಗೆ ಮುಸ್ಲಿಮರ ಮತವೇ ಬೇಡ ಎನ್ನುತ್ತಿದ್ದರೆ, ಅದೇ ಪಕ್ಷದ ಅಭ್ಯರ್ಥಿ ನಾವು ನೀವು ಒಂದೇ ಮಕ್ಕಳು, ನಾವು ಮುಸ್ಲಿಂ ಧ್ವೇಷಿಗಳಲ್ಲ ನಮ್ಮ ಪಕ್ಷಕ್ಕೆ ಮತಚಲಾಯಿಸಿ ಎಂದು ಮತ ಬೇಡುತ್ತಿದ್ದಾರೆ. ಇದು ಬಿಜೆಪಿಯ ಅವಕಾಶವಾದಿತನದ ರಾಜಕಾರಣವನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com