DHFL ಹಗರಣ: ಪ್ರಧಾನಿ ಕಣ್ಣಳತೆಯಲ್ಲೇ ನಡೆಯಿತು ಬಹುಕೋಟಿ ಲೂಟಿ!

ಬರೋಬ್ಬರಿ 14 ಸಾವಿರ ಕೋಟಿ ರೂಪಾಯಿಗಳಷ್ಟು ಬಹುಕೋಟಿ ವಂಚನೆಯ ಈ ಪ್ರಕರಣದ ವಿಷಯದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಯಾಕೆ ಈವರೆಗೆ ಮುಗುಮ್ಮಾಗಿ ಉಳಿದಿತ್ತು ಎಂಬುದು ಈಗಿರುವ ಪ್ರಶ್ನೆ!
DHFL ಹಗರಣ: ಪ್ರಧಾನಿ ಕಣ್ಣಳತೆಯಲ್ಲೇ ನಡೆಯಿತು ಬಹುಕೋಟಿ ಲೂಟಿ!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2014ರ ಲೋಕಸಭಾ ಚುನಾವಣೆಗೆ ಮುನ್ನ ‘ತಾವೂ ತಿನ್ನುವುದಿಲ್ಲ; ತಿನ್ನುವವರಿಗೂ ಬಿಡುವುದಿಲ್ಲ’ ಎನ್ನುವ ಮೂಲಕ ತಾವು ಅಧಿಕಾರಕ್ಕೆ ಬಂದರೆ, ಭ್ರಷ್ಟಾಚಾರಮುಕ್ತ ಆಡಳಿತ ನೀಡುವುದಾಗಿ ಹೇಳಿದ್ದರು.

ಇದೀಗ ಅವರ ಮೊದಲ ಅಧಿಕಾರವಧಿ ಮುಗಿದು ಎರಡನೇ ಅವಧಿಯ ಅರ್ಧ ಸಮಯವೂ ಕಳೆದಿದೆ. ಈ ಏಳು ವರ್ಷಗಳಲ್ಲಿ ಪಿಎಂಸಿ, ಯೆಸ್ ಬ್ಯಾಂಕ್ ಸೇರಿದಂತೆ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಹಲವು ಬಹುಕೋಟಿ ಹಗರಣಗಳು ಬೆಳಕಿಗೆ ಬಂದಿವೆ. ಅಂತಹ ಹಗರಣಗಳಲ್ಲಿ ಸಾರ್ವಜನಿಕ ಹಣವನ್ನು ಕೊಳ್ಳೆ ಹೊಡೆದವರೆಲ್ಲಾ ಬಹುತೇಕ ಮೋದಿಯವರ ತವರು ರಾಜ್ಯ ಗುಜರಾತಿನವರೇ ಎಂಬುದು ಕೂಡ ಗುಟ್ಟೇನಲ್ಲ. ಆ ಪೈಕಿ ಹಲವರು ಮೋದಿಯವರ ಕಣ್ಣಳತೆಯಲ್ಲೇ ಇದ್ದವರು ಮತ್ತು ಕಣ್ಗಾವಲಿನಲ್ಲೇ ದೇಶ ಬಿಟ್ಟು ಪರಾರಿಯಾಗಿದ್ದಾರೆ!

ಇದೀಗ ಹಾಗೆ ಹಾಡಹಗಲೇ ಉಂಡೆದ್ದು ಹೋದವರ ಸಾಲಿಗೆ ಡಿಎಚ್ ಎಫ್ ಎಲ್ ಎಂಬ ಹೌಸಿಂಗ್ ಮತ್ತು ರಿಯಲ್ ಎಸ್ಟೇಟ್ ಕಂಪನಿ ಹೊಸ ಸೇರ್ಪಡೆ. ಅದರಲ್ಲೂ ಪ್ರಧಾನಮಂತ್ರಿ ಆವಾಸ್ ಯೋಜನೆ(ಪಿಎಂಎವೈ)ಯಲ್ಲೇ ಈ ಸಂಸ್ಥೆ ಸುಮಾರು 14 ಸಾವಿರ ಕೋಟಿಯಷ್ಟು ಭಾರೀ ಹಣಕಾಸು ವಂಚನೆ ಎಸಗಿದ್ದು, ಆ ಪೈಕಿ ಸುಮಾರು 11 ಸಾವಿರ ಕೋಟಿಯಷ್ಟು ಮೊತ್ತವನ್ನು ಬಾಂದ್ರಾ ಬುಕ್ ಫರ್ಮ್ಸ್ ಎಂಬ ನಕಲಿ ಕಂಪನಿಯ ಮೂಲಕ ಗುಳುಂ ಮಾಡಲಾಗಿರುವ ಬಹುಕೋಟಿ ಹಗರಣ ಬೆಳಕಿಗೆ ಬಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪಿಎಂಎವೈ ಯೋಜನೆಯ ಈ ಅಕ್ರಮದ ಬಗ್ಗೆ ತನಿಖೆ ನಡೆಸಿರುವ ಸಿಬಿಐ, ಈಗಾಗಲೇ ಡಿಎಚ್ ಎಫ್ ಎಲ್ ನಡೆಸಿರುವ ಈ ಭಾರೀ ವಂಚನೆಯ ಹಿನ್ನೆಲೆಯಲ್ಲಿ, ಅದರ ಮಾಲೀಕರಾದ ಕಪಿಲ್ ವಾಧವಾನ್ ಮತ್ತು ಧೀರಜ್ ವಾಧವಾನ್ ಎಂಬ ವಂಚಕ ಸಹೋದರರ ವಿರುದ್ಧ ಎಫ್ ಐಆರ್ ದಾಖಲಿಸಿದೆ. ಈ ಇಬ್ಬರು ವಂಚಕರು, ಈಗಾಗಲೇ ಯೆಸ್ ಬ್ಯಾಂಕ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಕಂಬಿ ಎಣಿಸುತ್ತಿದ್ದಾರೆ ಎಂಬುದು ಗಮನಾರ್ಹ.

ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ನಿರ್ಮಾಣ ಯೋಜನೆಯಾದ ಪಿಎಂಎಸ್ ವೈ ಯೋಜನೆಯ ಸಹಾಯಧನ ಲಪಟಾಯಿಸುವ ಉದ್ದೇಶದಿಂದಲೇ ಈ ಸಹೋದರರ ಜೋಡಿ, ಸುಮಾರು 2.60 ಲಕ್ಷ ನಕಲಿ ಗೃಹ ಸಾಲ ಖಾತೆಗಳನ್ನು ಸೃಷ್ಟಿಸಿ, ಬಡ್ಡಿ ಸಹಾಯಧನವನ್ನು ಲೂಟಿ ಹೊಡೆದಿದ್ದಾರೆ ಎಂಬುದನ್ನು ಸಿಬಿಐ ದಾಖಲಿಸಿರುವ ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಬಡವರಿಗೆ ತಲೆ ಮೇಲೊಂದು ಸೂರು ಕಲ್ಪಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಬಹಳ ಮಹತ್ವಕಾಂಕ್ಷೆಯಿಂದ, ಭಾರೀ ಪ್ರಚಾರದೊಂದಿಗೆ ಆರಂಭಿಸಿದ ಈ ಪಿಎಂಎಸ್ ವೈ ಯೋಜನೆ, 2015ರಿಂದ ಜಾರಿಗೆ ಬಂದಿತ್ತು. ಕೊಳಗೇರಿ ನಿವಾಸಿಗಳು ಸೇರಿದಂತೆ ನಗರ ವಾಸಿ ಬಡವರ ಗೃಹ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ ನೀಡುವುದು ಯೋಜನೆಯ ಉದ್ದೇಶ. 2022ರ ಒಳಗೆ ದೇಶದ ಎಲ್ಲಾ ನಗರವಾಸಿ ವಸತಿರಹಿತರಿಗೆ ವಸತಿ ಕಲ್ಪಿಸಲಾಗುವುದು ಎಂದು ಮೋದಿಯವರು ಆಗ ಘೋಷಿಸಿದ್ದರು. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಅಡಿ ಜಾರಿಗೆ ಬಂದಿದ್ದ ಆ ಯೋಜನೆಯಲ್ಲಿ ಬರೋಬ್ಬರಿ ಹದಿನಾಲ್ಕು ಸಾವಿರ ಕೋಟಿಯಷ್ಟು ಭಾರೀ ಭ್ರಷ್ಟಾಚಾರ ಹಗರಣ ಇದೀಗ ಬಯಲಿಗೆ ಬಂದಿದ್ದು, ‘ತಾವೂ ತಿನ್ನುವುದಿಲ್ಲ; ತಿನ್ನುವವರಿಗೂ ಬಿಡುವುದಿಲ್ಲ’ ಎನ್ನುವ ಮೂಲಕ ತಮ್ಮ ಪ್ರಾಮಾಣಿಕತೆಯನ್ನು ಮತ್ತು ತಮ್ಮ ಭ್ರಷ್ಟಾಚಾರ, ಹಗರಣರಹಿತ ಸರ್ಕಾರ ನೀಡುವ ಭರವಸೆಯನ್ನೇ ಮುಂದಿಟ್ಟುಕೊಂಡು ಮತ ಯಾಚಿಸಿದ್ದ ಮೋದಿಯವರ ಕಣ್ಣಳೆತೆಯಲ್ಲೇ ಈ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ಬಯಲಾಗಿದೆ.

ಬಡ ವಸತಿರಹಿತ ನಗರವಾಸಿಗಳಿಗೆ ಮನೆ ನಿರ್ಮಾಣಕ್ಕೆ ಹೌಸಿಂಗ್ ಫೈನಾನ್ಸಿಂಗ್ ಸಂಸ್ಥೆಗಳ ಮೂಲಕ ಸಾಲ ಕೊಡಿಸುವುದು ಮತ್ತು ಆ ಸಾಲದ ಆಧಾರದ ಮೇಲೆ ಬಡ್ಡಿ ಸಹಾಯಧನ ನೀಡುವುದು ಯೋಜನೆಯ ಜಾರಿಯ ವ್ಯವಸ್ಥೆ. ಮನೆ ನಿರ್ಮಾಣಕ್ಕೆ ಸಾಲ ನೀಡಿದ ಹಣಕಾಸು ಸಂಸ್ಥೆಗಳು, ಆ ಸಾಲದ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ನೇರವಾಗಿ ಬಡ್ಡಿ ಸಹಾಯಧನ ಪಡೆದುಕೊಳ್ಳುವ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಂಡಿರುವ ಗೃಹ ನಿರ್ಮಾಣ ಹಣಕಾಸು ಸಂಸ್ಥೆ ಡಿಎಸ್ ಎಫ್ ಎಲ್, ವಾಸ್ತವವಾಗಿ ಗೃಹ ಸಾಲ ನೀಡದೇ, ದಾಖಲೆಗಳಲ್ಲಿ ಮಾತ್ರ ಗೃಹ ಸಾಲ ನೀಡಿದಂತೆ ನಕಲಿ ಖಾತೆಗಳನ್ನು ಸೃಷ್ಟಿಸಿ ಬರೋಬ್ಬರಿ 1887 ಕೋಟಿ ರೂ. ಬಡ್ಡಿ ಸಹಾಯಧನವನ್ನು ಪಡೆದು ನುಂಗಿ ಹಾಕಿದೆ./

ಸಿಬಿಐ ದಾಖಲಿಸಿರುವ ಎಫ್ ಐಆರ್ ವಿವರಗಳ ಪ್ರಕಾರ, ಬಹುಕೋಟಿ ವಂಚನೆಯ ಈ ಸ್ಕೀಮಿನಲ್ಲಿ ಡಿಎಚ್ ಎಫ್ ಎಲ್ 2018ರ ಡಿಸೆಂಬರ್ ವರೆಗೆ ಪಿಎಂಎಸ್ ವೈ ಯೋಜನೆಯಡಿ 88,651 ಮಂದಿಗೆ ಸಾಲ ವಿತರಿಸಿರುವುದಾಗಿ ದಾಖಲೆ ಸೃಷ್ಟಿಸಿದೆ ಮತ್ತು ಆ ಸಾಲಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಬಡ್ಡಿ ಸಹಾಯಧನದ ಬಾಬ್ತು ರೂ.539.40 ಕೋಟಿಯನ್ನು ಪಡೆದುಕೊಂಡಿದ್ದು, ಇನ್ನೂ ರೂ.1,347.80 ಕೋಟಿಯಷ್ಟು ಸಹಾಯಧನ ಪಾವತಿಗೆ ಬಾಕಿ ಉಳಿದಿದೆ. ಹೀಗೆ ಸಾವಿರಾರು ಕೋಟಿ ಮೊತ್ತದ ಸರ್ಕಾರದ ಸಹಾಯಧನವನ್ನು ದೋಚಲು ಕಪಿಲ್ ಮತ್ತು ಧೀರಜ್ ವಾಧವಾನ್ ಸಹೋದರರು, 2.60 ಲಕ್ಷ ನಕಲಿ ಸಾಲದ ಖಾತೆಗಳನ್ನು ಮಾತ್ರವಲ್ಲದೆ, ತಮ್ಮ ಸಂಸ್ಥೆಯಲ್ಲಿ ಅಸ್ತಿತ್ವದಲ್ಲೇ ಇರದ ಒಂದು ಶಾಖೆಯನ್ನೂ ದಾಖಲೆಗಳಲ್ಲಿ ಸೃಷ್ಟಿಸಿದ್ದರು. ಮುಂಬೈನ ಬಾಂದ್ರಾದ ತಮ್ಮ ಶಾಖೆಯ ಮೂಲಕ ಸುಮಾರು 14 ಸಾವಿರ ಕೋಟಿ ರೂಗಳಷ್ಟು ಬೃಹತ್ ಮೊತ್ತದ ಗೃಹ ಸಾಲ ನೀಡಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸಿಬಿಐ ಹೇಳಿದೆ.

“ಡಿ ಎಚ್ ಎಫ್ ಎಲ್ ನೇಮಕ ಮಾಡಿಕೊಂಡಿದ್ದ ಗ್ರಾಂಟ್ ಥಾಮ್ಟನ್ ಎಂಬ ಲೆಕ್ಕ ಪರಿಶೋಧನಾ ಸಂಸ್ಥೆ ನೀಡಿದ ವರದಿಯನ್ನು ಪರಿಶೀಲಿಸಿದಾಗ, ಕಪಿಲ್ ಮತ್ತು ಆತನ ಸಹೋದರ ಧೀರಜ್ ವಾಧವಾನ್ ಸರ್ಕಾರಿ ಬಡ್ಡಿ ಸಹಾಯಧನವನ್ನು ಲಪಟಾಯಿಸುವ ಉದ್ದೇಶದಿಂದಲೇ ತಮ್ಮ ಸಂಸ್ಥೆ ಬಾಂದ್ರಾದಲ್ಲಿ ಶಾಖೆ ಹೊಂದಿರುವುದಾಗಿಯೂ, ಆ ಶಾಖೆಯ ಮೂಲಕ ಸಾವಿರಾರು ಜನರಿಗೆ ಗೃಹ ನಿರ್ಮಾಣ ಸಾಲ ನೀಡಿರುವುದಾಗಿಯೂ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಅಂತಹ ನಕಲಿ ಶಾಖೆ ಮತ್ತು ನಕಲಿ ಖಾತೆಗಳನ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ಸುಮಾರು ಎರಡು ಸಾವಿರ ಕೋಟಿಯಷ್ಟು ಸರ್ಕಾರದ ಹಣವನ್ನು ಲೂಟಿ ಹೊಡೆಯಲಾಗಿದೆ” ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಿರುವುದಾಗಿ ‘ದ ಟೆಲಿಗ್ರಾಫ್’ ವರದಿ ಹೇಳಿದೆ.

ಯೋಜನೆಯ ಮಾರ್ಗಸೂಚಿಗಳ ಪ್ರಕಾರ, ಒಬ್ಬ ಫಲಾನುಭವಿಗೆ ಗರಿಷ್ಠವೆಂದರೆ, 24 ಲಕ್ಷ ರೂ.ಗಳ ಸಾಲ ನೀಡಲು ಅವಕಾಶವಿದೆ. ಆ ಸಾಲದ ಬಡ್ಡಿಗೆ ಸಂಬಂಧಿಸಿದ ಸಹಾಯಧನವನ್ನು ಸಾಲ ನೀಡಿದ ಹಣಕಾಸು ಸಂಸ್ಥೆಯೇ ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಮೂಲಕ ಪಡೆದುಕೊಳ್ಳಬೇಕು. ನ್ಯಾಷನಲ್ ಹೌಸಿಂಗ್ ಬ್ಯಾಂಕಿಗೆ ಕೇಂದ್ರ ಸರ್ಕಾರ, ತನ್ನ ಆಯಾ ವರ್ಷದ ಬಜೆಟ್ ಅನುದಾನ ಹಂಚಿಕೆಯ ಆಧಾರದ ಮೇಲೆ ವಾರ್ಷಿಕ ಸಹಾಯಧನ ಮೊತ್ತವನ್ನು ಬಿಡುಗಡೆ ಮಾಡುತ್ತದೆ. ಸಾಲಗಾರರ ಯಾವ ವರ್ಗಕ್ಕೆ ಸೇರಿದ್ದಾರೆ ಎಂಬುದರ ಮೇಲೆ ಅವರಿಗೆ ಶೇ.3ರಿಂದ 6.5ರವರೆಗೆ ಬಡ್ಡಿ ಸಹಾಯಧನ ನೀಡಲಾಗುತ್ತದೆ. ಅದರ ಪ್ರಕಾರ, 2,30,156 ರೂಗಳಿಂದ, 2,67,280 ರೂ.ಗಳವರೆಗೆ ಪ್ರತಿ ಫಲಾನುಭವಿಯ ಲೆಕ್ಕದಲ್ಲಿ ಹಣಕಾಸು ಸಂಸ್ಥೆಗೆ ಬಡ್ಡಿ ಸಹಾಯಧನ ಸಂದಾಯವಾಗುತ್ತದೆ.

ಆಧಾರ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿಯಂತಹ ದಾಖಲೆಗಳು ಮತ್ತು ಜಾಗದ ದಾಖಲೆಗಳ ಸಹಿತ ಸಂಪೂರ್ಣ ದಾಖಲೆ ಮತ್ತು ವಿವರ ಸಲ್ಲಿಸಿ ನ್ಯಾಷನಲ್ ಹೌಸಿಂಗ್ ಬ್ಯಾಂಕಿನಿಂದ ಈ ಸಹಾಯಧನ ಪಡೆಯುವುದು ಮಾರ್ಗಸೂಚಿ ಪ್ರಕಾರ ಕಡ್ಡಾಯ. ಹಾಗಿದ್ದರೂ, ಡಿ ಎಚ್ ಎಫ್ ಎಲ್ ಸಂಸ್ಥೆ, ನಕಲಿ ಶಾಖೆ, ಲಕ್ಷಾಂತರ ನಕಲಿ ಸಾಲದ ಖಾತೆಗಳ ದಾಖಲೆ ಸೃಷ್ಟಿಸಿ, 14 ಸಾವಿರ ಕೋಟಿಯಷ್ಟು ಹಣಕಾಸು ವಂಚನೆ ಎಸಗಿದೆ. ಜೊತೆಗೆ ಎರಡು ಸಾವಿರ ಕೋಟಿಗೂ ಅಧಿಕ ಮೊತ್ತದ ಸರ್ಕಾರಿ ಬಡ್ಡಿ ಸಹಾಯಧನ ಗುಳುಂ ಮಾಡಿದ ಎಂದರೆ, ಈ ಭಾರೀ ಹಗರಣದಲ್ಲಿ ಕೇವಲ ಡಿಎಚ್ ಎಫ್ ಎಲ್ ನ ಮಾಲೀಕರು ಮತ್ತು ಸಿಬ್ಬಂದಿಯಷ್ಟೇ ಅಲ್ಲದೆ, ಸರ್ಕಾರದ ನ್ಯಾಷನಲ್ ಹೌಸಿಂಗ್ ಬ್ಯಾಂಕಿನ ಅಧಿಕಾರಿ ವರ್ಗ ಮತ್ತು ಸರ್ಕಾರದ ಉನ್ನತ ವ್ಯಕ್ತಿಗಳೂ ಕೈಜೋಡಿಸಿದ್ಧಾರೆ. ಇಲ್ಲವಾದಲ್ಲಿ ಹೀಗೆ ನಕಲಿ ದಾಖಲೆಗಳ ಆಧಾರದ ಮೇಲೆ ನಕಲಿ ಸಾಲದ ಖಾತೆಗಳನ್ನು ಸೃಷ್ಟಿಸಿ ಸರ್ಕಾರದ ಖಜಾನೆ ಕೊಳ್ಳೆ ಹೊಡೆಯುವುದು ಸಾಧ್ಯವೇ ಇಲ್ಲ ಎಂಬುದು ಹಣಕಾಸು ವಲಯದಲ್ಲಿ ಕೇಳಿಬರುತ್ತಿರುವ ಮಾತು. ಸಿಬಿಐ ದಾಖಲಿಸಿರುವ ಎಫ್ ಐಆರ್ ನಲ್ಲಿ ಕೂಡ, ಹಣಕಾಸು ಸಂಸ್ಥೆಯೊಂದಿಗೆ ಸರ್ಕಾರದ ಮಟ್ಟದಲ್ಲಿಯೂ ಕೆಲವರು ಸಹಕಾರ ವಿಲ್ಲದೆ ಇಷ್ಟು ಬೃಹತ್ ವಂಚನೆ ಸಾಧ್ಯವಿಲ್ಲ ಎಂಬುದನ್ನು ಉಲ್ಲೇಖಿಸಲಾಗಿದೆ.

ಹಾಗಾಗಿ ಈಗ ಎದ್ದಿರುವ ಪ್ರಶ್ನೆ, ಬರೋಬ್ಬರಿ 14 ಸಾವಿರ ಕೋಟಿ ರೂಪಾಯಿಗಳಷ್ಟು ಬಹುಕೋಟಿ ವಂಚನೆಯ ಈ ಪ್ರಕರಣದ ವಿಷಯದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಯಾಕೆ ಈವರೆಗೆ ಮುಗುಮ್ಮಾಗಿ ಉಳಿದಿತ್ತು. ಸಿಬಿಐ ತನ್ನ ಎಫ್ ಐಆರ್ ನಲ್ಲಿ ಉಲ್ಲೇಖಿಸಿರುವಂತೆ, ಈ ಬೃಹತ್ ವಂಚನೆಗೆ ನೆರವಾದ ಸರ್ಕಾರದ ಉನ್ನತ ವ್ಯಕ್ತಿಗಳು ಯಾರು? ಪಶ್ಚಿಮಬಂಗಾಳದ ಚುನಾವಣೆಯಲ್ಲಿ ಭ್ರಷ್ಟಾಚಾರರಹಿತ ಆಡಳಿತದ ಭರವಸೆ ನೀಡುತ್ತಿರುವ ಮೋದಿಯವರು, ತಮ್ಮ ಮೂಗಿನಡಿಯೇ ನಡೆದಿರುವ ಈ ಬಹುಕೋಟಿ ಹಗರಣದ ಕುರಿತು ಯಾಕೆ ಮೌನ ವಹಿಸಿದ್ದಾರೆ? ಎಂಬುದು ಪ್ರಬಲವಾಗಿ ಕೇಳಿಬರುತ್ತಿರುವ ಪ್ರಶ್ನೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com