ದೆಹಲಿ ಗಡಿಗಳಲ್ಲಿ ರೈತರ ಹೋರಾಟ ಆರಂಭವಾಗಿ ಇಂದಿಗೆ 4 ತಿಂಗಳು, ಇಂದು ಭಾರತ್ ಬಂದ್‌

ಭಾರತ್ ಬಂದ್ ಯಶಸ್ವಿಗೊಳಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ನಿರ್ಧರಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಈಗಾಗಲೇ ದೇಶದ ಹಲವು‌ ಸಂಘಟನೆಗಳ ಬೆಂಬಲ ಕೇಳಿದೆ.
ದೆಹಲಿ ಗಡಿಗಳಲ್ಲಿ ರೈತರ ಹೋರಾಟ ಆರಂಭವಾಗಿ ಇಂದಿಗೆ 4 ತಿಂಗಳು, ಇಂದು ಭಾರತ್ ಬಂದ್‌

ಕೇಂದ್ರ ಸರ್ಕಾರ ಇತ್ತಿಚೆಗೆ ತಂದಿರುವ ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿ ಗಡಿಗಳಲ್ಲಿ ಪ್ರತಿಭಟನೆ ಆರಂಭಿಸಿ ಇಂದಿಗೆ ಬರೊಬ್ಬರಿ ನಾಲ್ಕು ತಿಂಗಳು. ಈ ನಡುವೆ ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರದ ನಡುವೆ 11 ಸುತ್ತಿನ ಮಾತುಕತೆ ಆಗಿವೆ. ಮಾತುಕತೆಗಳು ಮುರಿದುಬಿದ್ದಿವೆ. ಅದಕ್ಕೂ ಮಿಗಿಲಾಗಿ ಕೇಂದ್ರ ಸರ್ಕಾರದ ಮೇಲೆ ರೈತರಿಟ್ಟಿದ್ದ ವಿಶ್ವಾಸಕ್ಕೆ ಧಕ್ಕೆಯಾಗಿದೆ. ಕೇಂದ್ರ ಸರ್ಕಾರದ ಹಠಮಾರಿತನಕ್ಕೆ ತಕ್ಕ ಉತ್ತರ ಕೊಡಬೇಕಾದ ಅನಿವಾರ್ಯವೂ ಸೃಷ್ಟಿಯಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಇಂದು ಭಾರತ್ ಬಂದ್‌ಗೆ ಕರೆ ನೀಡಿವೆ.

ಕೇಂದ್ರ ಸರ್ಕಾರ ಮಾತುಕತೆ ವೇಳೆ ಸೂಕ್ತ ಪರಿಹಾರವಲ್ಲದ ಹಲವು ಪ್ರಸ್ತಾಪಗಳನ್ನು ಮುಂದಿಟ್ಟಿದೆ. ಆದರೆ ರೈತರ ಪಾಲಿಗೆ ಮರಣಶಾಸನದಂತಿರುವ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳಿ, ಬೇರಾವ ಮಧ್ಯಮ ಮಾರ್ಗ ಬೇಡ ಎಂದು ರೈತ ಸಂಘಟನೆಗಳು ಒಕ್ಕೊರಲಿನಿಂದ ಸ್ಪಷ್ಟವಾಗಿ ಹೇಳಿವೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 'ಯಾವ ಕಾರಣಕ್ಕೂ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಿಲ್ಲ' ಎಂದು ಪಟ್ಟುಹಿಡಿದಿದೆ. ಕೇಂದ್ರ ಸರ್ಕಾರದ ಈ ಧೋರಣೆಯಿಂದಾಗಿ ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ.

ದೆಹಲಿ ಗಡಿಗಳಲ್ಲಿ 40ಕ್ಕೂ ಹೆಚ್ಚು ರೈತ ಸಂಘಟನೆಗಳ ಜೊತೆ ಸಮನ್ವಯ ಸಾಧಿಸಿ ಪ್ರತಿಭಟನೆ ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ 2020ರ ನವೆಂಬರ್ 26ರಿಂದ ಹೋರಾಟ ಆರಂಭಿಸಿದ್ದವು. ಇದಾದ ಮೇಲೆ 2021ರ ಜನವರಿ 26ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್‌ ಮೆರವಣಿಗೆಗೆ ಕರೆ ನೀಡಿದ್ದವು. ದೆಹಲಿಯ ಟ್ರ್ಯಾಕ್ಟರ್‌ ಮೆರವಣಿಗೆ ವೇಳೆ ನಡೆದ ಕೆಲವು ಅಹಿತಕರ ಘಟನೆಗಳಿಂದ ರೈತ ಹೋರಾಟಕ್ಕೆ ಸ್ವಲ್ಪ ಹಿನ್ನಡೆಯಾಗಿತ್ತು. ಆದರೆ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೆಶ್ ಟಿಕಾಯತ್ ಅವರು ಭಾವನಾತ್ಮಕ ಭಾಷಣ ಮಾಡಿದ ನಂತರ ಮತ್ತೆ ಪ್ರತಿಭಟನೆ ಗಟ್ಟಿಗೊಂಡಿತ್ತು. ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಹರಿಯಾಣದ ರೈತರು ಮೊದಲಿಗಿಂತಲೂ‌‌ ಹೆಚ್ಚಾಗಿ ಸಂಘಟಿತರಾಗಿ ಕೇಂದ್ರ ಸರ್ಕಾರದ ವಿರುದ್ಧ ತಿರುಗಿಬಿದ್ದರು. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನಗಳ ಹಳ್ಳಿ ಹಳ್ಳಿಗಳಲ್ಲೂ ರೈತ ಮಹಾ ಪಂಚಾಯತ್‌ಗಳು ಆರಂಭವಾದವು. ರೈತ ಮಹಾಪಂಚಾಯತ್ ಗಳಿಗೆ ಲಕ್ಷಾಂತರ ರೈತರು ಸೇರಲಾರಂಭಿಸಿದರು.

ಆಗ ರೈತ ಸಂಘಟನೆಗಳು ಎರಡು ಪ್ರಮುಖ ನಿರ್ಧಾರಕ್ಕೆ ಬಂದಿದ್ದವು. ಒಂದು 'ದೆಹಲಿ ಗಡಿಗಳಲ್ಲಿ ಹೋರಾಟ ಮೊನಚು ಕಳೆದುಕೊಳ್ಳದಂತೆ ನೋಡಿಕೊಳ್ಳುವುದು. ಕೆಲ ರೈತರು ಅವರವರ ಊರುಗಳಿಗೆ ಹೋಗಿ ತಮ್ಮ ಕೆಲಸವನ್ನೂ ಮಾಡಬೇಕು. ಕೆಲವರು ಇಲ್ಲೇ ಇದ್ದು ಹೋರಾಟವನ್ನೂ ಮುಂದುವರೆಸಬೇಕು. ಒಂದು ರೀತಿಯಲ್ಲಿ 'ಶಿಫ್ಟ್'ನಲ್ಲಿ‌ ಪ್ರತಿಭಟನೆಯನ್ನು ನಡೆಸಬೇಕು' ಎಂದು. ಇನ್ನೊಂದು 'ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟವನ್ನು ದೇಶದ ಬೇರೆ ಕಡೆಗೆ ಕೂಡ ಕೊಂಡೊಯ್ಯಬೇಕು' ಎಂದು.

ಮೊದಲ ಯೋಜನೆ ಪ್ರಕಾರ ದೆಹಲಿ ಗಡಿಗಳಲ್ಲಿ ರೈತರು ಹೋರಾಟವನ್ನು ಮುಂದುವರೆಸಿದ್ದಾರೆ. ಬಿರು‌ ಬಿಸಿಲಿಗೂ ತಲೆ ಕೆಡಿಸಿಕೊಳ್ಳದೆ ಹೋರಾಟದ ಕಾವು ಹೆಚ್ಚಿಸುತ್ತಿದ್ದಾರೆ. ಮಾರ್ಚ್ 23ರಂದು ದೆಹಲಿ ಗಡಿಗಳಲ್ಲಿ ಸ್ವತಂತ್ರ ಸೇನಾನಿಗಳಾದ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರ ಹುತಾತ್ಮ ದಿನಾಚರಣೆ ಮಾಡಲಾಯಿತು. ಪ್ರತಿಭಟನಾ ಸ್ಥಳದಲ್ಲಿ ಯುವಜನರ ಬೃಹತ್ ಸಮಾವೇಶ ನಡೆಸಲಾಯಿತು. ಸಮಾವೇಶದಲ್ಲಿ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರ ವಿಚಾರಧಾರೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಮುಖ್ಯವಾಗಿ ಈ ಮೂವರು ಮಹಾನ್ ದೇಶಪ್ರೇಮಿಗಳ ಹೋರಾಟದ ಬಗ್ಗೆ ಮನನ ಮಾಡಲಾಯಿತು. ಆ ಮೂಲಕ ರೈತರ ಹೋರಾಟದಲ್ಲೂ ಯಶಸ್ವಿ ಕಾಣಲೇಬೇಕು ಎಂದು ಪಣತೊಡಗಲಾಯಿತು‌.

ಇದಲ್ಲದೆ ಇನ್ನೊಂದು ಯೋಜನೆ ಪ್ರಕಾರ ದೇಶದ ಬೇರೆ ಬೇರೆ ಭಾಗಗಳಿಗೂ ಹೋರಾಟವನ್ನು ವಿಸ್ತರಿಸಲು ನಿರ್ಧರಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಬೇರೆ ಬೇರೆ ಭಾಗಗಳಲ್ಲಿ ರೈತ ಮಹಾಪಂಚಾಯತ್ ಆಯೋಜಿಸುತ್ತಿದೆ. ಮಾರ್ಚ್ 20ರಂದು ಕರ್ನಾಟಕದ ಶಿವಮೊಗ್ಗದಲ್ಲೂ ಆಯೋಜಿಸಲಾಗಿತ್ತು. ಉತ್ತರ ಭಾರತದಲ್ಲಂತೂ ರೈತ ಮಹಾಪಂಚಾಯತ್ ಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. 'ಎರಡನೇ ಯೋಜನೆಯ' ಇನ್ನೊಂದು ಭಾಗವಾಗಿ ಸಂಯುಕ್ತ ಕಿಸಾನ್ ಮೋರ್ಚಾ ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ ನೀಡಿದೆ.

ಭಾರತ್ ಬಂದ್ ಯಶಸ್ವಿಗೊಳಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ನಿರ್ಧರಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಈಗಾಗಲೇ ದೇಶದ ಹಲವು‌ ಸಂಘಟನೆಗಳ ಬೆಂಬಲ ಕೇಳಿದೆ. 'ರೈತ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವು ಹಲವು ಅನೈತಿಕ ಮಾರ್ಗಗಳನ್ನು ಅನುಸರಿಸುತ್ತಿದೆ. ಆದುದರಿಂದ ಕೇಂದ್ರ ಸರ್ಕಾರಕ್ಕೆ ಪಾಠ ಕಲಿಸಲು ದೇಶದಾದ್ಯಂತ ಬಂದ್ ಅನ್ನು ಯಶಸ್ವಿ ಮಾಡಿ ತೋರಿಸಬೇಕಿದೆ ಎಂದು ಪ್ರಕಟಣೆಯಲ್ಲಿ‌‌ ತಿಳಿಸಿದೆ. ಕೇಂದ್ರ ಸರ್ಕಾರದ ಕಾನೂನುಗಳು ರೈತ ಸಮುದಾಯಕ್ಕೆ ಮಾತ್ರವಲ್ಲ ಎಲ್ಲಾ ವರ್ಗದವರಿಗೂ ಮಾರಕವಾಗಿವೆ. ಎಲ್ಲರು ಹೋರಾಟಕ್ಕೆ ಕೈಜೋಡಿಸಬೇಕೆಂದು ಕೇಳಿಕೊಂಡಿದೆ. ಯಾವ ರೀತಿ ನಡೆಯುತ್ತದೆ ಎಂಬುದನ್ನು ಕಾದುನೋಡಬೇಕು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com