ಕುಟುಂಬ ಯೋಜನೆಯಲ್ಲಿ‌ ಪಾಲ್ಗೊಳ್ಳಲು ಹಿಂದೇಟು ಹಾಕುವ ಭಾರತೀಯ ಪುರುಷರು

ಭಾರತೀಯರು ಅದರಲ್ಲೂ ಪುರುಷರು ಬಹುಕಾಲದ ಅನಗತ್ಯದ ನಂಬಿಕೆಗಳನ್ನು ಮುರಿದರೆ ಕುಟುಂಬ ಯೋಜನೆಯಲ್ಲಿ ಮಹಿಳೆ ಮತ್ತು‌ ಪುರುಷರ ನಡುವಿನ ಅಂತರ ಕಡಿಮೆಯಾಗಬಹುದು.
ಕುಟುಂಬ ಯೋಜನೆಯಲ್ಲಿ‌ ಪಾಲ್ಗೊಳ್ಳಲು ಹಿಂದೇಟು ಹಾಕುವ ಭಾರತೀಯ ಪುರುಷರು

ಯೋಜಿತವಲ್ಲದ(unplanned) ಮತ್ತು ಅನಿರೀಕ್ಷಿತ ಗರ್ಭಧಾರಣೆಗಳು ಪುರುಷರಿಗಿಂತ ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. ಭಾರತ ಮತ್ತು ವಿಶ್ವಾದ್ಯಂತ ಪುರುಷರು ಗರ್ಭ ನಿರೋಧಕಗಳನ್ನು ಬಳಸಿ ಕುಟುಂಬ ಯೋಜನೆಯಲ್ಲಿ ಭಾಗವಹಿಸುವುದು ಮಹಿಳೆಯರಿಗೆ ಹೋಲಿಸಿದರೆ ತೀರಾ ಕಡಿಮೆ . ಐತಿಹಾಸಿಕವಾಗಿಯೂ ಮಹಿಳೆಯರ ಗರ್ಭನಿರೋಧಕಗಳಿಗೇ ಹೆಚ್ಚಿನ ಒತ್ತು ನೀಡಲಾಗಿದೆ ಮತ್ತು ಪುರುಷರನ್ನು ಈ ಕ್ರಿಯೆಯಲ್ಲಿ ಒಳಗೊಳ್ಳಲು ನಡೆದಿರುವ ಪ್ರಯತ್ನಗಳೂ ಕಡಿಮೆಯೇ.

ಒಂದು ಕುಟುಂಬದ ಗಾತ್ರ ಮತ್ತು ರಚನೆಯಂತಹ ಪ್ರಮುಖ ನಿರ್ಧಾರಗಳನ್ನು ಪುರುಷರೇ ತೆಗೆದುಕೊಳ್ಳುತ್ತಾರದರೂ, ಅದನ್ನು ತಮ್ಮ ಹಕ್ಕು ಎಂಬಂತೆ ನಡೆದುಕೊಳ್ಳುತ್ತಾರಾದರೂ ಭಾರತದ ಎಂಟು ಪುರುಷರಲ್ಲಿ ಮೂವರು ಗರ್ಭನಿರೋಧಕವು ಮಹಿಳೆಯರ ವ್ಯವಹಾರವೆಂದು ನಂಬುತ್ತಾರೆ ಮತ್ತು ಪುರುಷರು ಇದರ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಭಾವಿಸುತ್ತಾರೆ. ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸೆಯು ಸುರಕ್ಷಿತ, ತ್ವರಿತ ಮತ್ತು ಸುಲಭವಾಗಿದ್ದರೂ ಶಾಶ್ವತ ಸ್ತ್ರೀ ಗರ್ಭನಿರೋಧಕ ಅಥವಾ ಟ್ಯೂಬೆಕ್ಟೊಮಿಗಳ ಪ್ರಮಾಣವು 75% ನಷ್ಟಿದೆ ಮತ್ತು ವ್ಯಾಸೆಕ್ಟಮಿ ಅಥವಾ ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರ ಪ್ರಮಾಣ ಕೇವಲ 0.3%.

ಇಂತಹ ದೊಡ್ಡ ಅಂತರಕ್ಕೆ ಕಾರಣವೇನು? ಪುರುಷರು ಈ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ಭಾವಿಸಬೇಕೆ? ಸಂಶೋಧನೆಯೊಂದರ ಪ್ರಕಾರ ಭಾರತದಲ್ಲಿ ಇನ್ನೂ ಕುಟುಂಬ ಯೋಜನೆ ಒಂದು ವಿವಾದಾಸ್ಪದ ವಿಷಯವಾಗಿಯೇ ಉಳಿದಿದೆ ಮತ್ತು ದಂಪತಿಗಳ ಮಧ್ಯೆ ಈ ಬಗ್ಗೆ ಸುಲಭ ಸಂಭಾಷಣೆ ಇಂದಿಗೂ ಸಾಧ್ಯವಲ್ಲ. ಪುರುಷತ್ವ, ಮದುವೆ ಮತ್ತು ಫಲವತ್ತತೆಯ ಸುತ್ತಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಲೋಚನೆಗಳು ಮತ್ತು ಕಲ್ಪನೆಗಳು ಕುಟುಂಬ ಯೋಜನೆಯ ಮೇಲೆ ಪ್ರಭಾವ ಬೀರುತ್ತವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಲ್ಲದೆ, ಉಳಿದ ಕೆಲವು ವಿಚಾರಗಳು ಸಹ ಕುಟುಂಬ ಯೋಜನೆಯ ಮೇಲೆ ಪ್ರಭಾವ ಬೀರುತ್ತದೆ. ಸ್ತ್ರೀ ಪುರುಷರಲ್ಲಿ ಜಾಗೃತಿ ಮೂಡಿಸುವ ಹೆಚ್ಚಿನ ಕಾರ್ಯಕರ್ತೆಯರು ಮಹಿಳೆಯರು ಆದ್ದರಿಂದ ಅವರು ಈ ಬಗ್ಗೆ ಮುಕ್ತವಾಗಿ ಪುರುಷರೊಂದಿಗೆ ಚರ್ಚಿಸಲಾರರು. ಇದರ ಜೊತೆಗೆ ಸಂತಾನ ಹರಣ ಮಾಡಿಸಿಕೊಳ್ಳಲು ಪುರುಷರಿಗೆ 'ಕಾಂಡೋಮ್ ಬಳಕೆ' ಮತ್ತು 'ವ್ಯಾಸೆಕ್ಟಮಿ' ಎನ್ನುವ ಎರಡೇ ಆಯ್ಕೆಗಳಿವೆ. ಆದರೆ ಮಹಿಳೆಯರಿಗೆ ಕನಿಷ್ಠ ಆರು ಆಯ್ಕೆಗಳಿವೆ.

ಜೊತೆಗೆ ಲೈಂಗಿಕತೆ ಮತ್ತು ಸಂತಾನೋತ್ಪತ್ತಿ, ಪುರುಷತ್ವ ಕುರಿತಾಗಿ ಭಾರತೀಯ ಸಮಾಜದಲ್ಲಿನ ನಂಬಿಕೆಗಳು ಮತ್ತು ಅವು ಹುಟ್ಟುಹಾಕುವ ಆತ್ಮವಿಶ್ವಾಸದ ಕೊರತೆ, ಅವಮಾನ, ಕಳಂಕಗಳೂ‌‌ ಪುರುಷರನ್ನು ಈ ಶಸ್ತ್ರಚಿಕಿತ್ಸೆಗೆ ಒಳಗಾಗುವುದನ್ನು ತಡೆಯುತ್ತಿದೆ. ಈ ಬಗ್ಗೆ ಸಂಶೋಧನೆ‌‌ ಕೈಗೊಂಡಿರುವ ಹಲವಾರು ಅಧ್ಯಯನಗಳು 'ಪುರುಷತ್ವ ಕಳೆದುಕೊಳ್ಳುವ ಭಯದಿಂದ ಭಾರತೀಯ ಪುರುಷರು ಸಂತಾನಹರಣಕ್ಕೆ ಒಳಗಾಗುವುದಿಲ್ಲ' ಎಂದು ವರದಿ ಸಲ್ಲಿಸಿವೆ.

ಮತ್ತೊಂದೆಡೆ, ಭಾರತೀಯ ಮಹಿಳೆಯರು ತಾವು ಈಗ ಹೊಂದಿರುವ ಸಂಖ್ಯೆ (ಸರಾಸರಿ 2.2) ಗಿಂತ ಕಡಿಮೆ ಮಕ್ಕಳನ್ನು (ಸರಾಸರಿ 1.8) ಬಯಸುತ್ತಾರೆ ಎಂದು ಅಧ್ಯಯನಗಳು‌ ತಿಳಿಸಿವೆ. ಸಣ್ಣ ಕುಟುಂಬಗಳ ಬಯಕೆ ಹೆಚ್ಚಾಗಿ ಹೆಚ್ಚು ಮಕ್ಕಳನ್ನು ಹೊಂದಲೇಬೇಕು ಎನ್ನುವ ಸಾಂಪ್ರದಾಯಿಕ ಆಲೋಚನೆಗಳನ್ನು ವಿರೋಧಿಸುತ್ತದೆ. ಸೂಕ್ತವಾದ ಮತ್ತು ಪರಸ್ಪರ ಸಂವಹನಗಳಿಲ್ಲದೆ ಮಹಿಳೆಯರು ಮತ್ತು ಪುರುಷರು ಕುಟುಂಬ ಯೋಜನೆಯ ಆರೋಗ್ಯ ಮತ್ತು ಆರ್ಥಿಕ ಪ್ರಯೋಜನಗಳನ್ನು ಕಳೆದುಕೊಳ್ಳುವ ಅಪಾಯವನ್ನು ಭಾರತದಲ್ಲಿ ಅದರಲ್ಲೂ ಗ್ರಾಮೀಣ ಭಾರತದಲ್ಲಿ ಎದುರಿಸುತ್ತಿದ್ದಾರೆ.

ಯುವಕರನ್ನು ಮತ್ತು ಮಹಿಳೆಯರನ್ನು ಸಮಗ್ರ, ಸಾಕ್ಷಿ ಆಧಾರಿತ ಸಂವಹನಗಳಲ್ಲಿ ತೊಡಗಿಸುವುದರಿಂದ ಗರ್ಭನಿರೋಧಕದ ಬಳಕೆ ಮತ್ತು ಕುಟುಂಬ ಯೋಜನೆ ಕುರಿತು ತಿಳುವಳಿಕೆಯನ್ನು‌ ನೀಡಬಹುದು. ಪ್ರಾಯೋಗಿಕ ನೀತಿಗಳು ಮತ್ತು ಕಾರ್ಯಕ್ರಮಗಳು ಮತ್ತು ಗಂಡ ಹೆಂಡತಿ ಇಬ್ಬರ ನಡುವೆ ಕುಟುಂಬ ಯೋಜನೆಯ ಜವಾಬ್ದಾರಿಯನ್ನು ಸಮಾನವಾಗಿ ಹಂಚಿದರೆ ಅದು ಸಕಾರಾತ್ಮಕ ಪರಿಣಾಮ ಬೀರಬಹುದು. ಕುಟುಂಬ ಯೋಜನೆ ವಿಧಾನಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಅರಿವು ಮೂಡಿಸುವುದರಿಂದ ಗರ್ಭನಿರೋಧಕ ವಿಧಾನಗಳ ಬಳಕೆಯನ್ನು ಪ್ರೋತ್ಸಾಹಿಸಬಹುದು. ಸದೃಢ ಮತ್ತು ಆರೋಗ್ಯಕರ ಕುಟುಂಬಕ್ಕೆ ದಂಪತಿಗಳು ಪರಸ್ಪರರನ್ನು ಗೌರವಿಸುವುದು, ಪರಸ್ಪರರ ಅಗತ್ಯಗಳನ್ನು ಅರ್ಥೈಸಿಕೊಳ್ಳುವಂತೆ ಮಾಡುವುದು, ಮಹಿಳೆಯರ ಪಾತ್ರಗಳನ್ನು ನಿರ್ಬಂಧಿಸದಿರುವ ಮೂಲಕ ದಂಪತಿಗಳು ತಮ್ಮ ಕುಟುಂಬದ ಹಿತಾಸಕ್ತಿಗಳನ್ನು ರಕ್ಷಿಸಬಹುದು ಮತ್ತು ಮೂಲಭೂತ ಮಾನವ ಹಕ್ಕುಗಳನ್ನು ಪರಸ್ಪರರಿಗೆ ಅನ್ವಯಿಸಿಕೊಳ್ಳುವುದರ ಮೂಲಕ ಜಾಗೃತಿ ಮೂಡಿಸಬಹುದು.

ಭಾರತೀಯರು ಅದರಲ್ಲೂ ಪುರುಷರು ಬಹುಕಾಲದ ಅನಗತ್ಯದ ನಂಬಿಕೆಗಳನ್ನು ಮುರಿದರೆ ಕುಟುಂಬ ಯೋಜನೆಯಲ್ಲಿ ಮಹಿಳೆ ಮತ್ತು‌ ಪುರುಷರ ನಡುವಿನ ಅಂತರ ಕಡಿಮೆಯಾಗಬಹುದು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com