NCT ಮಸೂದೆ: ಮತ್ತೊಂದು ಸುತ್ತಿನ ಕಾನೂನು ಸಮರಕ್ಕೆ ಸಜ್ಜಾಯಿತು ವೇದಿಕೆ!

ಎನ್ ಸಿಟಿ ಕಾಯ್ದೆ ತಿದ್ದುಪಡಿ ಮಸೂದೆ ಅನುಮೋದನೆಗೆ ಕೇಂದ್ರ ತೋರಿದ ತರಾತುರಿ, ಅಂತಿಮವಾಗಿ ಆ ಮಸೂದೆಯನ್ನೇ ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸುವ ಸಾಧ್ಯತೆ ಹೆಚ್ಚಿದೆ ಮತ್ತು ರಾಜಧಾನಿಯಲ್ಲಿ ದೆಹಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಮತ್ತೊಂದು ಸುತ್ತಿನ ಕಾನೂನು ಸಮರಕ್ಕೆ ವೇದಿಕೆ ಸಜ್ಜಾಗಿದೆ.
NCT ಮಸೂದೆ: ಮತ್ತೊಂದು ಸುತ್ತಿನ ಕಾನೂನು ಸಮರಕ್ಕೆ ಸಜ್ಜಾಯಿತು ವೇದಿಕೆ!

ವಿವಾದಿತ ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರ(ಜಿಎನ್ ಸಿಟಿ) ತಿದ್ದುಪಡಿ ಮಸೂದೆ-2021ಕ್ಕೆ ಬುಧವಾರ ರಾಜ್ಯಸಭೆಯಲ್ಲೂ ಅನುಮೋದನೆ ಸಿಕ್ಕಿದೆ. ಸೋಮವಾರ ಲೋಕಸಭೆಯ ಅನುಮೋದನೆ ಪಡೆದಿದ್ದ ಮಸೂದೆ, ಇದೀಗ ರಾಷ್ಟ್ರಪತಿಗಳ ಅಂಕಿತಕ್ಕೆ ಅಣಿಯಾಗಿದೆ.

ಆದರೆ, ಮಸೂದೆಯ ಕುರಿತ ಆಕ್ಷೇಪಗಳು ಭುಗಿಲೆದ್ದಿವೆ. ಮುಖ್ಯವಾಗಿ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಬಹುತೇಕ ಪ್ರತಿಪಕ್ಷ ಮುಖಂಡರು ಮತ್ತು ಎಎಪಿ ನಾಯಕರು ಮಸೂದೆಯ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ, ಪರೋಕ್ಷವಾಗಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಚಲಾಯಿಸಲು ಮುಂದಾಗಿದೆ. ಲೆಫ್ಟಿನೆಂಟ್ ಗವರ್ನರ್ ಮೂಲಕ ಜನರಿಂದ ಆಯ್ಕೆಯಾದ ಸರ್ಕಾರದ ಮೇಲೆ ಸವಾರಿ ಮಾಡಲು ಈ ಮಸೂದೆಯನ್ನು ಹಠಕ್ಕೆ ಬಿದ್ದು ಜಾರಿಗೆ ತರಲಾಗಿದೆ ಎಂದು ಆ ನಾಯಕರು ಪ್ರತಿಕ್ರಿಯಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜೊತೆಗೆ, ದೆಹಲಿಯ ಚುನಾಯಿತ ಸರ್ಕಾರ ಮತ್ತು ಅಲ್ಲಿನ ರಾಜ್ಯಪಾಲರ ಸ್ಥಾನದಲ್ಲಿರುವ ಲೆಫ್ಟಿನೆಂಟ್ ಗವರ್ನರ್ ನಡುವಿನ ಅಧಿಕಾರದ ತಿಕ್ಕಾಟದ ಹಿನ್ನೆಲೆಯಲ್ಲಿ 2018ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಈ ನೂತನ ಮಸೂದೆ ಇದ್ದು, ಕೇಂದ್ರ ಸರ್ಕಾರದ ತರಾತುರಿಯ ಅನುಮೋದನೆಯ ಕ್ರಮ ಸರ್ವೋಚ್ಛ ನ್ಯಾಯಾಲಯದ ಆದೇಶದ ಉಲ್ಲಂಘನೆ, ನ್ಯಾಯಾಂಗ ನಿಂದನೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ದೆಹಲಿ ಸರ್ಕಾರದ ಸಚಿವ ಸಂಪುಟ ಮತ್ತು ಪ್ರತಿ ಸಚಿವರ ಪ್ರತಿ ನಿರ್ಧಾರ, ಆದೇಶಗಳೂ ಲೆಫ್ಟಿನೆಂಟ್ ಗವರ್ನರ್ ಅವರ ಪೂರ್ವಾನುಮತಿ ಮತ್ತು ಅಂಕಿತದೊಂದಿಗೇ ಜಾರಿಗೆ ಬರಬೇಕು ಎಂಬುದೂ ಸೇರಿದಂತೆ ಚುನಾಯಿತ ಸರ್ಕಾರದ ಮಹತ್ವವನ್ನು ಕುಗ್ಗಿಸಿ, ಅದರ ಸ್ವತಂತ್ರ ಕಾರ್ಯನಿರ್ವಹಣೆಗೆ ಕಡಿವಾಣ ಹಾಕಿ, ಅದೊಂದು ಲೆಫ್ಟಿನೆಂಟ್ ಗವರ್ನರ್ ಅವರ ಕೈಗೊಂಬೆಯಾಗುವಂತೆ ಮಾಡುವ ಹಲವು ನಿಯಮಗಳನ್ನು ಈ ತಿದ್ದುಪಡಿ ಮಸೂದೆ ಒಳಗೊಂಡಿದೆ. ದೆಹಲಿಯಲ್ಲಿ ಜನಾದೇಶದ ಮೂಲಕ ಅಧಿಕಾರ ಹಿಡಿಯಲು ಮತ್ತೆ ಮತ್ತೆ ವಿಫಲವಾಗುತ್ತಿರುವ ಬಿಜೆಪಿ, ಈ ತಿದ್ದುಪಡಿ ಮಸೂದೆಯ ಮೂಲಕ ಹಿಂಬಾಗಿಲಿನಿಂದ ಪರೋಕ್ಷ ಅಧಿಕಾರ ಚಲಾಯಿಸಲು ಮುಂದಾಗಿದೆ ಎಂಬುದು ಈ ಮಸೂದೆಯ ಬಗ್ಗೆ ಪ್ರಮುಖವಾಗಿ ಕೇಳಿಬರುತ್ತಿರುವ ಟೀಕೆಗಳು.

ಅರವಿಂದ್ ಕೇಜ್ರಿವಾಲ್ ಅವರಂತೂ, ಬುಧವಾರ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧ, ಸಭಾತ್ಯಾಗದ ಹೊರತಾಗಿಯೂ ಸರ್ಕಾರ ಏಕಪಕ್ಷೀಯವಾಗಿ ಮಸೂದೆಗೆ ಅನುಮೋದನೆ ಪಡೆದ ಬಳಿಕ ಪ್ರತಿಕ್ರಿಯಿಸಿ, “ದೇಶದ ಪ್ರಜಾಸತ್ತೆಯ ಪಾಲಿಗೆ ಕರಾಳ ದಿನ ಇದು. ಅದೇನೇ ಇರಲಿ, ಜನರ ಅಧಿಕಾರವನ್ನು ಅವರ ಬಳಿಯೇ ಉಳಿಸುವ ನಮ್ಮ ಯತ್ನ ಮುಂದುವರಿಯಲಿದೆ. ಇಂತಹ ಯಾವುದೇ ಅಡೆತಡೆಯೂ ನಮ್ಮನ್ನು ಆ ಪ್ರಯತ್ನದಿಂದ ಹಿಮ್ಮೆಟ್ಟಿಸಲಾರದು. ದೆಹಲಿಯಲ್ಲಿ ಜನರ ಕೆಲಸಗಳು ನಿಲ್ಲುವುದೂ ಇಲ್ಲ; ವಿಳಂಬವಾಗುವುದೂ ಇಲ್ಲ” ಎಂದಿದ್ದಾರೆ. ಹಾಗೇ ಡಿಸಿಎಂ ಮನೀಶ್ ಸಿಸೋಡಿಯಾ ಕೂಡ, “ಬಿಜೆಪಿಗೆ ಅರವಿಂದ್ ಕೇಜ್ರಿವಾಲ್ ಭಯ ಕಾಡುತ್ತಿದೆ. ಜನರಿಂದ ಆಯ್ಕೆಯಾದ ಸರ್ಕಾರದ ಹಕ್ಕುಗಳನ್ನು ಕಸಿದು, ಜನರಿಂದ ತಿರಸ್ಕರಿಸಲ್ಪಟ್ಟವರು ಪರೋಕ್ಷವಾಗಿ ಅಧಿಕಾರ ನಡೆಸಲು ಮುಂದಾಗಿದ್ದಾರೆ. ವಿಪರ್ಯಾಸವೆಂದರೆ, ಪ್ರಜಾಸತ್ತೆಯ ಮಂದಿರವಾದ ಸಂಸತ್ತಿನಲ್ಲಿಯೇ ಪ್ರಜಾಸತ್ತೆಯ ಕಗ್ಗೊಲೆ ನಡೆದಿದೆ. ಆದರೆ, ದೆಹಲಿಯ ಜನ ಈ ಅನ್ಯಾಯದ ವಿರುದ್ಧ ಹೋರಾಡಲಿದ್ದಾರೆ” ಎಂದಿದ್ದಾರೆ.

ರಾಜ್ಯಸಭೆಯ ಪ್ರತಿಪಕ್ಷ ನಾಯಕ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಂತೂ, ಲೆಫ್ಟಿನೆಂಟ್ ಗವರ್ನರ್ ಗೆ ಚುನಾಯಿತ ಸರ್ಕಾರಕ್ಕಿಂತ ಹೆಚ್ಚಿನ ಅಧಿಕಾರ ನೀಡಿ, ಬಿಜೆಪಿ ದೆಹಲಿಯಲ್ಲಿ ಹಿಂಬಾಗಿಲಿನಿಂದ ಅಧಿಕಾರ ಚಲಾಯಿಸಲು ಮುಂದಾಗಿದೆ. ಹಾಗಿದ್ದರೆ, ಅಲ್ಲಿ ಚುನಾಯಿತ ಸರ್ಕಾರದ ಅಗತ್ಯವೇಕೆ? ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಮಸೂದೆಯು ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದೆ ಮತ್ತು ಈ ಹಿಂದಿನ ಜಿಎನ್ ಸಿಟಿ ಮೂಲ ಕಾಯ್ದೆಯ ಆಶಯಕ್ಕೂ ವಿರುದ್ಧವಾಗಿದೆ. ಆ ಹಿನ್ನೆಲೆಯಲ್ಲಿ ಸದನ ಸಮಿತಿ ರಚಿಸಿ ಮಸೂದೆಯ ಅಧ್ಯಯನಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿದರೂ ಸರ್ಕಾರ ತನ್ನ ಪಟ್ಟು ಸಡಿಸಲಿಲ್ಲ. ಹಾಗಾಗಿ ನಾವು ಸರ್ಕಾರದ ಮೊಂಡುತನ ವಿರೋಧಿಸಿ ಸಭಾತ್ಯಾಗ ಮಾಡಿದೆವು. ಆದರೆ, ಸರ್ಕಾರ ತನ್ನ ಪಾಡಿಗೆ ತಾನು ಮಸೂದೆಗೆ ಅನುಮೋದನೆ ಪಡೆದುಕೊಂಡಿದೆ ಎಂದು ಖರ್ಗೆ ಹೇಳಿದ್ದಾರೆ.

ವಾಸ್ತವವಾಗಿ, ಇಷ್ಟೊಂದು ವಿರೋಧ ಮತ್ತು ಪ್ರತಿರೋಧದ ಮೂಲಕ ಭಾರೀ ವಿವಾದಕ್ಕೆ ಈಡಾಗಿರುವ ಈ ತಿದ್ದುಪಡಿ ಮಸೂದೆಯಲ್ಲಿ ಏನಿದೆ ಎಂಬುದನ್ನು ನೋಡುವುದಾದರೆ; ಮುಖ್ಯವಾಗಿ ರಾಜಧಾನಿ ದೆಹಲಿಯಲ್ಲಿ ಈವರೆಗೆ ಪೊಲೀಸ್, ಕಾನೂನು ಮತ್ತು ಸುವ್ಯವಸ್ಥೆಯನ್ನು ಲೆಫ್ಟಿನೆಂಟ್ ಗವರ್ನರ್ ಮೂಲಕ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಕೇಂದ್ರ ಸರ್ಕಾರ, ಇದೀಗ ಅಲ್ಲಿನ ಒಂಭತ್ತು ಸಚಿವರ(ಮುಖ್ಯಮಂತ್ರಿ ಸೇರಿ) ಖಾತೆಗಳು ಮತ್ತು ಆ ಖಾತೆಗಳ ವ್ಯಾಪ್ತಿಗೆ ಒಳಪಡುವ ಪ್ರತಿ ಆಡಳಿತಾತ್ಮಕ ವಿಷಯಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ಮಸೂದೆ ರಚಿಸಿದೆ. ಮುಖ್ಯವಾಗಿ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ವ್ಯಾಪ್ತಿಯಲ್ಲಿ ಇನ್ನು ‘ಸರ್ಕಾರ’ ಎಂದರೆ, ಅದು ಚುನಾಯಿತ ಸರ್ಕಾರವಲ್ಲ; ಬದಲಾಗಿ ‘ಲೆಫ್ಟಿನೆಂಟ್ ಗವರ್ನರ್’ ಎಂದರ್ಥ ಎನ್ನುವ ತಿದ್ದುಪಡಿ ಮಸೂದೆಯ ಪ್ರಮುಖ ವ್ಯಾಖ್ಯಾನದಲ್ಲೇ ಬಹುತೇಕ ಮಸೂದೆಯ ಉದ್ದೇಶ ಏನಿದೆ ಎಂಬುದಕ್ಕೆ ಉತ್ತರವಿದೆ.

1991ರ ಸಂವಿಧಾನದ 69ನೇ ತಿದ್ದುಪಡಿಯ ಮೂಲಕ ದೆಹಲಿಗೆ ಚುನಾಯಿತ ಶಾಸನಸಭೆಯನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ನೀಡಲಾಯಿತು. ಹಾಗಾಗಿ ಅದು, ಒಕ್ಕೂಟ ವ್ಯವಸ್ಥೆಯಡಿ ಲಭ್ಯವಿರುವ ಸಂಪೂರ್ಣ ಸ್ವಾಯತ್ತತೆ ಹೊಂದಿರುವ ರಾಜ್ಯವೂ ಅಲ್ಲ; ಅತ್ತ ಸಂಪೂರ್ಣ ಕೇಂದ್ರಾಡಳಿತದ ಪ್ರದೇಶವೂ ಅಲ್ಲದ ವಿಶಿಷ್ಟ ಸ್ಥಾನಮಾನ ಹೊಂದಿರುವ ಸಂಕೀರ್ಣ ರಾಜಕೀಯ ಮತ್ತು ಆಡಳಿತಾತ್ಮಕ ವ್ಯವಸ್ಥೆಯನ್ನು ಹೊಂದಿದೆ. ಸಂವಿಧಾನ ತಿದ್ದುಪಡಿಯೊಂದಿಗೇ ಸಂಸತ್ತಿನ ಅಂಗೀಕಾರ ಪಡೆದ ಜಿಎನ್ ಸಿಟಿ ಕಾಯ್ದೆ-1991ರ ಅನ್ವಯ ಅಲ್ಲಿನ ಲೆಫ್ಟಿನೆಂಟ್ ಗವರ್ನರ್, ಮುಖ್ಯಮಂತ್ರಿ ಮತ್ತು ಶಾಸನ ಸಭೆ, ಸಚಿವ ಸಂಪುಟಗಳ ಅಧಿಕಾರ ವ್ಯಾಪ್ತಿಗಳು ನಿರ್ಧರಿಸಲ್ಪಟ್ಟಿವೆ. ಆದರೆ, ಕೆಲವು ಅಧಿಕಾರಗಳ ವಿಷಯದಲ್ಲಿ ಆರಂಭದಿಂದಲೂ ರಾಜ್ಯ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ನಡುವೆ ಗೊಂದಲ, ತಿಕ್ಕಾಟಗಳು ಮುಂದುವರಿದಿದ್ದವು. ಅದರಲ್ಲೂ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ತಿಕ್ಕಾಟ ರಾಜಕೀಯ ಸಂಘರ್ಷದ ಸ್ವರೂಪ ಪಡೆದುಕೊಂಡಿತ್ತು.

ಆ ಹಿನ್ನೆಲೆಯಲ್ಲಿಯೇ 2018ರಲ್ಲಿ ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಸರ್ಕಾರದ ನಡುವಿನ ಆಡಳಿತಾತ್ಮಕ ಸಂಘರ್ಷಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಆ ಎರಡರ ನಡುವಿನ ಸಂವಿಧಾನಿಕ ಬಿಕ್ಕಟ್ಟುಗಳ ಕುರಿತು ಕೆಲವು ಸ್ಪಷ್ಟನೆಗಳನ್ನು ನೀಡಿತ್ತು. ಮುಖ್ಯವಾಗಿ ಆಡಳಿತಾತ್ಮಕ ವಿಷಯಗಳ ಪೈಕಿ, ಪೊಲೀಸ್, ಕಾನೂನು ಸುವ್ಯವಸ್ಥೆ ಮತ್ತು ಭೂಮಿಗೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ, ಉಳಿದ ವಿಷಯಗಳಲ್ಲಿ ಸರ್ಕಾರದ ನಿರ್ಧಾರಗಳೇ ಅಂತಿಮ. ಆ ವಿಷಯಗಳಲ್ಲಿ ಸರ್ಕಾರ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರ ಒಪ್ಪಿಗೆ ಅಥವಾ ಅನುಮೋದನೆ ಪಡೆಯುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ, ಆ ವಿಷಯಗಳಲ್ಲಿ ಸಂಪುಟ ತೆಗೆದುಕೊಳ್ಳುವ ತೀರ್ಮಾನಗಳನ್ನು ನಂತರ ಲೆಫ್ಟಿನೆಂಟ್ ಗವರ್ನರ್ ಅವಗಾಹನೆಗೆ ತರಬೇಕು ಎಂದಿತ್ತು. ಹಾಗೇ ಲೆಫ್ಟಿನೆಂಟ್ ಗವರ್ನರ್ ಕೂಡ ಸಚಿವರ ಸಲಹೆ ಮತ್ತು ಸಹಕಾರದ ಮೇಲೆ ಮುನ್ನಡೆಯಬೇಕು ಎಂದೂ ಹೇಳಿತ್ತು. ಆ ಮೂಲಕ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಸಂವಿಧಾನಿಕ ಗೊಂದಲಗಳನ್ನು ಪರಿಹರಿಸಿತ್ತು. ಆ ಬಳಿಕವೇ ದೆಹಲಿಯ ಎಎಪಿ ಸರ್ಕಾರ ಮತ್ತು ಕೇಂದ್ರದ ಬಿಜೆಪಿ ಆಡಳಿತದ ನಡುವಿನ ಸಂಘರ್ಷ ತಹಬದಿಗೆ ಬಂದಿತ್ತು.

ಸುಪ್ರೀಂಕೋರ್ಟಿನ ಆ ಸ್ಪಷ್ಟನೆಯ ಬಳಿಕ ಶಾಸಕಾಂಗದ ನಿರ್ಧಾರಗಳು, ಕಾರ್ಯನೀತಿಗಳು, ಕಾರ್ಯಾಂಗಕ್ಕೆ ನೀಡುವ ಆದೇಶ ಮತ್ತು ಸೂಚನೆಗಳ ಕಡತಗಳು ಲೆಫ್ಟಿನೆಂಟ್ ಗವರ್ನರ್ ಅನುಮೋದನೆಗೆ ಕಳಿಸುವುದನ್ನು ಎಎಪಿ ಸರ್ಕಾರ ನಿಲ್ಲಿಸಿತ್ತು. ಆದರೆ, ಈಗ ಸಂಸತ್ತಿನ ಉಭಯ ಸದನಗಳ ಅನುಮೋದನೆಯೊಂದಿಗೆ ರಾಷ್ಟ್ರಪತಿಗಳ ಅಂಕಿತಕ್ಕೆ ಹೋಗಿರುವ ತಿದ್ದುಪಡಿ ಮಸೂದೆಯ ಪ್ರಕಾರ, ದೆಹಲಿ ಸರ್ಕಾರ, ಸಚಿವ ಸಂಪುಟ, ಸಚಿವರು ಸೇರಿದಂತೆ ಆಡಳಿತ ವ್ಯವಸ್ಥೆ ತೆಗೆದುಕೊಳ್ಳುವ ಎಲ್ಲಾ ತೀರ್ಮಾನಗಳು, ಹೊರಡಿಸುವ ಆದೇಶಗಳು, ಸುತ್ತೋಲೆ, ಸೂಚನೆಗಳನ್ನು ಲೆಫ್ಟಿನೆಂಟ್ ಗವರ್ನರ್ ಒಪ್ಪಿಗೆ ಪಡೆದ ಬಳಿಕವೂ ಜಾರಿಗೆ ತರಬೇಕು! ಅದೂ ಸಂಪುಟ ಮತ್ತು ಸಚಿವರು ಅಂತಹ ತೀರ್ಮಾನ, ಆದೇಶ, ಸೂಚನೆಗಳನ್ನು ತೆಗೆದುಕೊಳ್ಳುವ/ ಹೊರಡಿಸುವ ಮುನ್ನವೇ ಅವರ ಒಪ್ಪಿಗೆ ಪಡೆದಿರಬೇಕು!

ಮುಖ್ಯವಾಗಿ ದೆಹಲಿಯಲ್ಲಿ ಎಎಪಿ ಸರ್ಕಾರದ ಜನಪರ ಯೋಜನೆ, ಕಾರ್ಯಕ್ರಮಗಳು ಆ ಸರ್ಕಾರದ ಜನಪ್ರಿಯತೆಗೆ ದೊಡ್ಡ ಕೊಡುವೆ ನೀಡಿವೆ. ಹಾಗಾಗಿ ನಿರಂತರ ಚುನಾವಣೆಗಳಲ್ಲಿ ಆ ಪಕ್ಷ ಜಯಭೇರಿ ಬಾರಿಸುತ್ತಿದೆ. ವರ್ಷದ ಹಿಂದೆ ಮತ್ತು ಅದಕ್ಕೂ ಹಿಂದಿನ ಚುನಾವಣೆಗಳಲ್ಲಿ ಇಡೀ ದೇಶದ ತುಂಬಾ ಮೋದಿ ಅಲೆಯ ಹವಾ ಇರುವಾಗ, ದೆಹಲಿ ಕೋಮು ಗಲಭೆಯ ಮೂಲಕ ಅಧಿಕಾರ ಹಿಡಿಯುವ ಬಿಜೆಪಿಯ ಜನಪ್ರಿಯ ತಂತ್ರಗಾರಿಕೆಯ ಹೊರತಾಗಿಯೂ ಎಎಪಿ ಮತ್ತೆ ಮತ್ತೆ ಅಧಿಕಾರ ಹಿಡಿಯುತ್ತಿರುವುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.

ಅದರಲ್ಲೂ ಇತ್ತೀಚಿನ ರೈತ ಹೋರಾಟ, ಕಳೆದ ವರ್ಷದ ಸಿಎಎ-ಎನ್ ಆರ್ ಸಿ ಹೋರಾಟದಂತಹ ಸಂದರ್ಭಗಳಲ್ಲಿ ಎಎಪಿ ಸರ್ಕಾರ ಅಂತಹ ಹೋರಾಟಗಳ ಪರ ಕೆಲಸ ಮಾಡಿದೆ. ಆ ಎಲ್ಲಾ ಹೋರಾಟಗಳು ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ವರ್ಚಸ್ಸಿಗೆ ದೇಶದ ಒಳಹೊರಗೆ ಪೆಟ್ಟು ಕೊಟ್ಟಿವೆ. ಒಂದು ವೇಳೆ ದೆಹಲಿಯ ಆಡಳಿತ ಸಂಪೂರ್ಣ ತಮ್ಮದೇ ಹಿಡಿತದಲ್ಲಿದ್ದಿದ್ದರೆ ಇಂತಹ ಹೋರಾಟಗಳನ್ನು ಬಗ್ಗುಬಡಿಯುವುದು ಸುಲಭವಿತ್ತು ಎಂಬ ಲೆಕ್ಕಾಚಾರಗಳು ಕೇಂದ್ರದ ಬಿಜೆಪಿ ಸರ್ಕಾರದ್ದು. ಹಾಗಾಗಿ ತನ್ನ ಆ ಅಜೆಂಡಾವನ್ನು ಈ ತಿದ್ದುಪಡಿ ಮಸೂದೆಯ ಮೂಲಕ ಈಡೇರಿಸಿಕೊಂಡಿದೆ ಎಂಬುದು ಪ್ರಮುಖವಾಗಿ ವಿಶ್ಲೇಷಕರ ವ್ಯಾಖ್ಯಾನ.

ಬಿಜೆಪಿ ಸರ್ಕಾರ ತಿದ್ದುಪಡಿ ಮಸೂದೆಗೆ ಉಭಯ ಸದನಗಳ ಅನುಮೋದನೆ ಪಡೆಯಲು ತೋರಿದ ಧಾವಂತ ಮತ್ತು ಏಕಪಕ್ಷೀಯ ಧೋರಣೆಯನ್ನು ಗಮನಿಸಿದರೆ, ಅಂತಹ ವ್ಯಾಖ್ಯಾನಗಳು ನಿಜ ಎನಿಸದೇ ಇರದು. ಆ ಹಿನ್ನೆಲೆಯಲ್ಲಿಯೇ ಇದೀಗ ಎಎಪಿ ಈ ಮಸೂದೆಯನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಲು ಮುಂದಾಗಿದೆ. ಹಾಗಾಗಿ, ಎನ್ ಸಿಟಿ ಕಾಯ್ದೆ ತಿದ್ದುಪಡಿ ಮಸೂದೆ ಅನುಮೋದನೆಗೆ ಕೇಂದ್ರ ತೋರಿದ ತರಾತುರಿ, ಅಂತಿಮವಾಗಿ ಆ ಮಸೂದೆಯನ್ನೇ ಕೋರ್ಟ್ ಕಟಕಟೆಯಲ್ಲಿ ನಿಲ್ಲಿಸುವ ಸಾಧ್ಯತೆ ಹೆಚ್ಚಿದೆ ಮತ್ತು ರಾಜಧಾನಿಯಲ್ಲಿ ದೆಹಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಮತ್ತೊಂದು ಸುತ್ತಿನ ಕಾನೂನು ಸಮರಕ್ಕೆ ವೇದಿಕೆ ಸಜ್ಜಾಗಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com