ಅಶೋಕ ವಿ.ವಿ ಅಧ್ಯಾಪಕರ ರಾಜೀನಾಮೆಗಳು ಕೇವಲ ಖಾಸಗಿ ನಿರ್ಧಾರಗಳೇ?

ಪ್ರತಾಪ್ ಭಾನು ಮೆಹ್ತಾ ಮತ್ತು ಅರವಿಂದ್ ಸುಬ್ರಮಣಿಯನ್ ಪ್ರಸಕ್ತ ಸರ್ಕಾರದ ನೀತಿಗಳ ಕಟು ಟೀಕಾಕಾರರಾಗಿರುವುದರಿಂದ ಇಬ್ಬರ ರಾಜಿನಾಮೆಯನ್ನು 'ಕಾಕತಾಳೀಯ' ಎಂದು ಮತ್ತು 'ಖಾಸಗಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ಖಾಸಗಿ ನಿರ್ಧಾರ' ಎಂದು ಸುಮ್ಮನಾಗಲು ಸಾಧ್ಯವಿಲ್ಲ
ಅಶೋಕ ವಿ.ವಿ ಅಧ್ಯಾಪಕರ ರಾಜೀನಾಮೆಗಳು ಕೇವಲ ಖಾಸಗಿ ನಿರ್ಧಾರಗಳೇ?

"ವಿಶ್ವ ವಿದ್ಯಾಲಯದೊಂದಿಗಿನ ತಮ್ಮ ಒಡನಾಟವನ್ನು ರಾಜಕೀಯ ಹೊಣೆಗಾರಿಕೆ ಎಂದು ಪರಿಗಣಿಸಬಹುದು" ಎಂದು ಪತ್ರ ಬರೆದು ಪ್ರತಾಪ್ ಭಾನು ಮೆಹ್ತಾ ಅವರು 'ಅಶೋಕ ಯುನಿವರ್ಸಿಟಿ'ಗೆ ರಾಜಿನಾಮೆ ಸಲ್ಲಿಸಿದ ಬೆನ್ನಲ್ಲೇ 'ಶೈಕ್ಷಣಿಕ ಅಭಿವ್ಯಕ್ತಿ ಮತ್ತು ಸ್ವಾತಂತ್ರ್ಯ ಒದಗಿಸಲಾರದು' ಎನ್ನುವ ಕಾರಣವೊಡ್ಡಿ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಕೂಡ ರಾಜೀನಾಮೆ ನೀಡಿದ್ದಾರೆ. ಇವರಿಬ್ಬರೂ ಪ್ರಸಕ್ತ ಸರ್ಕಾರದ ನೀತಿಗಳ ಕಟು ಟೀಕಾಕಾರರಾಗಿರುವುದರಿಂದ ಇಬ್ಬರ ರಾಜಿನಾಮೆಯನ್ನು 'ಕಾಕತಾಳೀಯ' ಎಂದು ಮತ್ತು 'ಖಾಸಗಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ಖಾಸಗಿ ನಿರ್ಧಾರ' ಎಂದು ಸುಮ್ಮನಾಗಲು ಸಾಧ್ಯವಿಲ್ಲ.

ಸುಬ್ರಮಣಿಯನ್ ಕಳೆದ ವರ್ಷ ಜುಲೈನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ವಿಶ್ವವಿದ್ಯಾಲಯಕ್ಕೆ ಸೇರಿದ್ದರು. ಅವರು 'ಅಶೋಕ ಸೆಂಟರ್ ಫಾರ್ ಎಕನಾಮಿಕ್ ಪಾಲಿಸಿ'ಯ ಸ್ಥಾಪಕ ನಿರ್ದೇಶಕರೂ ಆಗಿದ್ದರು. ವಿಶ್ವವಿದ್ಯಾನಿಲಯವು " ಈ ಸೆಂಟರ್ ಭಾರತ ಮತ್ತು ಜಾಗತಿಕ ಅಭಿವೃದ್ಧಿಗೆ ಸಂಬಂಧಿಸಿದ ನೀತಿ ವಿಷಯಗಳ ಬಗ್ಗೆ ಸಂಶೋಧನೆ ಮತ್ತು ವಿಶ್ಲೇಷಣೆ ಮಾಡಲು ಮೀಸಲಿಡಲಾಗುವುದು" ಎಂದು ಹೇಳಿಕೊಂಡಿತ್ತು. ಇಂಡಿಯನ್ ಎಕ್ಸ್‌ಪ್ರೆಸ್‌ ಪ್ರಕಾರ, ಅವರ ರಾಜೀನಾಮೆ ಈ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಜಾರಿಗೆ ಬರಲಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಶೋಕ ಯುನಿವರ್ಸಿಟಿಯ ವೈಸ್ ಛಾನ್ಸ್‌ಲರ್ ಆಗಿದ್ದ ಪ್ರತಾಪ್ ಭಾನು ಮೆಹ್ತಾ, ಯೂನಿವರ್ಸಿಟಿಯ ಸಂಸ್ಥಾಪಕರೊಂದಿಗಿನ ಸಂಭಾಷಣೆಯನ್ನು ಉಲ್ಲೇಖಿಸಿ "ಸ್ವಾತಂತ್ರ್ಯದ ಸಾಂವಿಧಾನಿಕ ಮೌಲ್ಯಗಳನ್ನು ಮತ್ತು ಎಲ್ಲಾ ನಾಗರಿಕರಿಗೆ ಸಮಾನ ಗೌರವವನ್ನು ಗೌರವಿಸಲು ಪ್ರಯತ್ನಿಸುವ ರಾಜಕೀಯವನ್ನು ಬೆಂಬಲಿಸುವ ನನ್ನ ಸಾರ್ವಜನಿಕ ಬರವಣಿಗೆ ವಿಶ್ವವಿದ್ಯಾನಿಲಯಕ್ಕೆ ಅಪಾಯಗಳನ್ನುಂಟುಮಾಡುತ್ತದೆ" ಎಂದು ತಮ್ಮ ರಾಜೀನಾಮೆ ಪತ್ರವನ್ನು ಉಪಕುಲಪತಿ ಮಲಬಿಕಾ ಸರ್ಕಾರ್ ಅವರಿಗೆ ಕಳುಹಿಸಿದ್ದಾರೆ. ಇವರಿಬ್ಬರ ರಾಜಿನಾಮೆಯ ಜೊತೆಗೆ ಸಂಸ್ಥೆಯ ಇತರ ಕೆಲವು ಪ್ರಾಧ್ಯಾಪಕರೂ ರಾಜಿನಾಮೆ ಸಲ್ಲಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಅಶೋಕಾದಂತಹ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿರುವ ಯುನಿವರ್ಸಿಟಿಯಲ್ಲಿ ಸಲ್ಲಿಕೆಯಾಗುತ್ತಿರುವ ಸರಣಿ ರಾಜಿನಾಮೆ ಭಾರತದ ಯುನಿವರ್ಸಿಟಿಗಳಲ್ಲಿ‌ ಪಾಲಿಸಿಕೊಂಡು ಬರಲಾಗುತ್ತಿರುವ ಶೈಕ್ಷಣಿಕ ಸ್ವಾತಂತ್ರ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಕ್ಯಾಂಪಸ್ ವಿಸ್ತರಿಸಿಕೊಳ್ಳಲು ಭೂಮಿಯನ್ನು ಸುಗಮವಾಗಿ ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ ಈ ರಾಜೀನಾಮೆಗಳು ಸಂಬಂಧ ಹೊಂದಿವೆ ಎಂಬ ಆರೋಪಗಳಿವೆ. ಮೆಹ್ತಾ ರಾಜಿನಾಮೆ ಪತ್ರದಲ್ಲಿ ನಿಖರ ಕಾರಣಗಳನ್ನು ತಿಳಿಸದೇ ಇದ್ದರೂ ಅವರ ಸಾರ್ವಜನಿಕ ಬರಹಗಳು ಮತ್ತು ಭಾಷಣಗಳೊಂದಿಗೆ ಈ ರಾಜಿನಾಮೆ ನಿಖರ ಸಂಬಂಧ ಹೊಂದಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು.

ಅಶೋಕ ವಿಶ್ವವಿದ್ಯಾಲಯವು ಅನೇಕ ಜನರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಅನೇಕ ಸಂಸ್ಥಾಪಕರು ವಿಶ್ವವಿದ್ಯಾಲಯಕ್ಕೆ ಧನಸಹಾಯ ನೀಡುತ್ತಾರೆ. ಈ ಸಂಸ್ಥಾಪಕರಲ್ಲಿ ಕೆಲವರು ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯ ಭಾಗವಾಗಿದ್ದಾರೆ ಮತ್ತು ಸಂಸ್ಥೆಯ ಆಡಳಿತದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಾರೆ. ಪ್ರಾಧ್ಯಾಪಕ ಮೆಹ್ತಾ ಅವರ ರಾಜೀನಾಮೆ ಪತ್ರವು ಸ್ಪಷ್ಟಪಡಿಸಿದಂತೆ, ಅವರ ನಿರ್ಧಾರವು ಕೆಲವು ಸಂಸ್ಥಾಪಕರೊಂದಿಗಿನ ಚರ್ಚೆಯ ನೇರ ಫಲಿತಾಂಶವಾಗಿದೆ. ಶೈಕ್ಷಣಿಕ ಮತ್ತು ಪ್ರಾಧ್ಯಾಪಕರ ವಿಚಾರದಲ್ಲಿ ಅವರು ಸಂಸ್ಥಾಪಕರೇ ಆಗಿದ್ದರೂ ಈ ಮಟ್ಟಿಗಿನ ಹಸ್ತಕ್ಷೇಪ ಸ್ವೀಕಾರಾರ್ಹವಲ್ಲ. ಸಂಸ್ಥಾಪಕ ಮಂಡಳಿ ರಚನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲು ವಿಶ್ವವಿದ್ಯಾನಿಲಯಗಳು ಕಾರ್ಪೋರೆಟ್ ಸಂಸ್ಥೆಗಳಲ್ಲ. ಅಲ್ಲಿನ ಮುಖ್ಯ ನಿರ್ಧಾರಗಳನ್ನು ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದ ತೆಗೆದುಕೊಳ್ಳಬೇಕಾಗುತ್ತದೆ. ಹೀಗೆ ಸಂಸ್ಥಾಪಕ ಮಂಡಳಿ ನಿರ್ಧಾರ ಕೈಗೊಳ್ಳುವುದು ಶೈಕ್ಷಣಿಕ ಸ್ವಾತಂತ್ರ್ಯದ ಮೇಲಿನ ಆಕಗರಮಣವಾಗುತ್ತದೆ.

ಈಗಾಗಲೇ ವಿದ್ಯಾರ್ಥಿಗಳು ಇಬ್ಬರ ರಾಜಿನಾಮೆ ಪಡೆದುಕೊಳ್ಳಬಾರದು ಎಂದು ಪ್ರತಿಭಟನೆ ಪ್ರಾರಂಭಿಸಿದ್ದಾರೆ ಮತ್ತು ಅಧ್ಯಾಪಕರು ಅವರಿಬ್ಬರು ವಾಪಾಸು ಕರೆಸಿಕೊಳ್ಳಬೇಕು ಎಂದು ಸಂಸ್ಥೆಯ ಟ್ರಸ್ಟಿಗಳನ್ನು ಆಗ್ರಹಿಸಿದ್ದಾರೆ.

'ಅಶೋಕಾ'ದಲ್ಲಿ ನಡೆಯುತ್ತಿರುವ ಘಟನೆಗಳು ಇದೀಗ ವಿಶ್ವದ ಗಮನ ಸೆಳೆದಿದ್ದು, ಕಳೆದ ತನ್ನ ಸಂಗ್ರಹದಲ್ಲಿದ್ದ ಎಲ್ಲ ಪುಸ್ತಕಗಳನ್ನು ಅಶೋಕಾ ಯುನಿವರ್ಸಿಟಿಗೆ ದಾನ ಮಾಡಿದ್ದ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಸಿದ್ಧ ವಿದ್ವಾಂಸ ಶೆಲ್ಡನ್ ಪೊಲಾಕ್ ಅವರು "ವಿಶ್ವವಿದ್ಯಾನಿಲಯದ ಅಗ್ರಗಣ್ಯ ವಿದ್ವಾಂಸ ಮತ್ತು ಬುದ್ಧಿಜೀವಿ ಪ್ರೊ. ಮೆಹ್ತಾ ಅವರ ರಾಜೀನಾಮೆಯೊಂದಿಗೆ, ಸಂಸ್ಥೆಯ ಬಗ್ಗೆ ನನಗಿದ್ದ ಗೌರವವನ್ನು ಗಂಭೀರವಾಗಿ ಪರೀಕ್ಷಿಸಲಾಗಿದೆ" ಎಂದಿದ್ದಾರೆ.

ವಿಶ್ವವಿದ್ಯಾನಿಲಯಗಳ ಗುಣಮಟ್ಟವನ್ನು ಅಲ್ಲಿ ಪಾಠ ಮಾಡುವ ಅಧ್ಯಾಪಕರ ಆಧಾರದ ಮೇಲೆ ಅಳೆಯಲಾಗುತ್ತದೆ. 'ಅಶೋಕ'ವು ಅಧ್ಯಾಪಕರಿಲ್ಲದೆ ಏನೂ‌ ಅಲ್ಲ. ಅದನ್ನು ವಿಶ್ವವ್ಯಾಪಿ ಹೆಸರುವಾಗಿಸಿದ್ದೇ ಮೆಹ್ತಾ ಮತ್ತು ಸುಬ್ರಮಣಿಯನ್ ಅಂತಹ ಪ್ರೊಫೆಸರ್‌ಗಳು. ಸರ್ಕಾರವನ್ನು, ಅದರ ನೀತಿಗಳನ್ನು‌ ಪ್ರಶ್ನಿಸಿದರು ಎನ್ನುವ ಕಾರಣಕ್ಕೆ ಈಗ ಯುನಿವರ್ಸಿಟಿ ಅವರನ್ನೇ ಹೊರಹಾಕಲು ನಿರ್ಧರಿಸಿದೆ.

ಆಡಳಿತ ನಡೆಸುವವರು ಕಾಲೇಜಿನ ಟ್ರಸ್ಟಿಗಳಿಗೆ ಸರ್ಕಾರದ ವಿರುದ್ದ ಸಾರ್ವಜನಿಕರ ಪರವಾಗಿ‌ ಪ್ರವರ್ತಿಸುವವರನ್ನು ಶಿಕ್ಷಣ ಸಂಸ್ಥೆಗಳಿಂದ ದೂರವಿಡಬೇಕು ಅಥವಾ ಶಿಕ್ಷಣ ಸಂಸ್ಥೆಗಳ ಉನ್ನತ ಸ್ಥಾನದಲ್ಲಿರುವವರು ಸರ್ಕಾರದ ವಿರುದ್ಧ ಮಾತನಾಡಬಾರದು ಎಂದು ಸೂಚಿಸಿರಬಹುದು. ಆದರೆ ನಮ್ಮ ಘನತೆಯ ಮೇಲೆ ಸವಾರಿ ಮಾಡುವವರನ್ನು ಆಡಳಿತದ ಗದ್ದುಗೆಯ ಮೇಲೆ ಕೂರಿಸಿದ್ದು ನಾವೇ. ಹಾಗಾಗಿ ಈ ರಾಜಿನಾಮೆಗಳನ್ನು‌ ಖಾಸಗಿ ವಿಚಾರಗಳೆಂಬಂತೆ ಒಪ್ಪಿಕೊಳ್ಳಲು‌ ಸಾಧ್ಯವಾಗಬಾರದು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com