ಮಹಾರಾಷ್ಟ್ರ ಸರ್ಕಾರಕ್ಕೆ ಸಂಕಟ ಪ್ರಾಯವಾಗಿರುವ 'ಗೃಹ ಸಚಿವರ ಭ್ರಷ್ಟಾಚಾರದ ವಿಚಾರ'

ಅನಿಲ್ ದೇಶ್ಮುಖ್ ರಾಜೀನಾಮೆ ಪಡೆದರೆ ಎನ್ ಸಿಪಿ ಮುನಿಯುವ ಸಾಧ್ಯತೆ ಇದೆ.‌ ರಾಜೀನಾಮೆ ಪಡೆಯದೇ ಇದ್ದರೆ ಬಿಜೆಪಿ ಇನ್ನಷ್ಟು ಹೋರಾಟ ಮಾಡುತ್ತದೆ. ಆಗ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗಲಿದೆ.
ಮಹಾರಾಷ್ಟ್ರ ಸರ್ಕಾರಕ್ಕೆ ಸಂಕಟ ಪ್ರಾಯವಾಗಿರುವ 'ಗೃಹ ಸಚಿವರ ಭ್ರಷ್ಟಾಚಾರದ ವಿಚಾರ'

ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಪ್ರತಿ ತಿಂಗಳು ತಮಗೆ ಹೊಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಗಳಿಂದ 100 ಕೋಟಿ ರೂಪಾಯಿ ವಸೂಲಿ ಮಾಡಿಕೊಡುವಂತೆ ಪೊಲೀಸರನ್ನು ಒತ್ತಾಯ ಮಾಡಿದ್ದಾರೆ ಎಂದು ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಮಾಡಿರುವ ಆರೋಪ ಮಹಾರಾಷ್ಟ್ರದ 'ಮಹಾ ವಿಕಾಸ್ ಅಘಾಡಿ' ಸರ್ಕಾರದಲ್ಲಿ ಭಾರೀ ಸಂಚಲನ ಮೂಡಿಸಿದೆ. ವಿರೋಧ ಪಕ್ಷ ಬಿಜೆಪಿ ಇದೇ ಪ್ರಕರಣವನ್ನು ಇಟ್ಟುಕೊಂಡು ಸರ್ಕಾರವನ್ನು ಅಲುಗಾಡಿಸುತ್ತಿದ್ದರೆ ಇತ್ತ ಸರ್ಕಾರದ ಮಿತ್ರಪಕ್ಷಗಳಾದ ಎನ್‌ಸಿಪಿ-ಶಿವಸೇನೆ ಮತ್ತು ಕಾಂಗ್ರೆಸ್ ನಡುವೆ ಒಮ್ಮತ ಮೂಡದೆ 'ಯಾವುದೇ ಕ್ಷಣದಲ್ಲಿ ಏನುಬೇಕಾದರೂ ಆಗಬಹುದು' ಎಂಬ' ಪರಿಸ್ಥಿತಿ ನಿರ್ಮಾಣವಾಗಿದೆ.

ಅವಕಾಶಕ್ಕಾಗಿ ಕಾದಿದ್ದ ಬಿಜೆಪಿ

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಜೊತೆಯಾಗಿ‌ ವಿಧಾನಸಭಾ ಚುನಾವಣೆ ಎದುರಿಸಿ ಆನಂತರ ಮುಖ್ಯಮಂತ್ರಿ ಹುದ್ದೆ ಪಡೆಯುವ ವಿಚಾರದಲ್ಲಿ ಬೇರೆ ಬೇರೆಯಾಗಿದ್ದವು. ಬಿಜೆಪಿ ಬೆನ್ನಿಗೆ ಇರಿದ ಶಿವಸೇನೆ ಸೈದ್ಧಾಂತಿಕ ಭಿನ್ನಮತವನ್ನು ಬದಿಗೆ ಸರಿಸಿ ಕಾಂಗ್ರೆಸ್ ಮತ್ತು ಎನ್ ಸಿಪಿ ಜೊತೆ ಕೈ‌ ಜೋಡಿಸಿ 'ಮಹಾ ವಿಕಾಸ್ ಅಘಾಡಿ' ಸರ್ಕಾರ ರಚಿಸಿತು. ಇದಲ್ಲದೆ ಎನ್ ಸಿಪಿ ಬೆಂಬಲ ಪಡೆದು ರಾತ್ರೋರಾತ್ರಿ ಬಿಜೆಪಿ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ ಸ್ವೀಕರಿಸಿದ್ದರು. ಆನಂತರ ಎನ್ ಸಿಪಿ ಸದನದಲ್ಲಿ ಬೆಂಬಲ ನೀಡದೆ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಈ‌ ಘಟನೆಗಳಿಂದ ಬಿಜೆಪಿ‌ ರಾಷ್ಟ್ರ ಮಟ್ಟದಲ್ಲಿ ಕೂಡ ತೀವ್ರ ಮುಖಭಂಗ ಅನುಭವಿಸಿತ್ತು. ಅಂದಿನಿಂದಲೂ ಬಿಜೆಪಿ ಹೇಗಾದರೂ ಮಾಡಿ 'ಮಹಾ ವಿಕಾಸ್ ಅಘಾಡಿ' ಸರ್ಕಾರವನ್ನು ಕೆಡವಬೇಕೆಂದು ಇನ್ನಿಲ್ಲದ ಪ್ರಯತ್ನ ಮಾಡಿತ್ತು. ಯಾವ ಪ್ರಯತ್ನವೂ ಫಲಿಸಿರಲಿಲ್ಲ. ಈಗ ಭ್ರಷ್ಟಾಚಾರದ ವಿಚಾರ ಇಟ್ಟುಕೊಂಡು ಸರ್ಕಾರವನ್ನು ಬಲಿ ಪಡೆಯಲು ಪ್ರಯತ್ನಿಸುತ್ತಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಾಲಿವುಟ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ,‌ ನಟಿ ಕಂಗನಾ ರಣಾವತ್ ಅವರ ಅಕ್ರಮ ಕಟ್ಟಡ ನೆಲಸಮದ ಪ್ರಕರಣದಿಂದ ಹಿಡಿದು ಮಹಾ ವಿಕಾಸ್ ಅಘಾಡಿ ಸರ್ಕಾರದ ಸಣ್ಣ ಹುಳುಕುಗಳನ್ನು ಬಿಜೆಪಿ‌ ದೊಡ್ಡದಾಗಿ ಬಿಂಬಿಸಲು ಪ್ರಯತ್ನಿಸಿತು. ಈಗ 'ಗೃಹ ಸಚಿವರಿಂದ ಭ್ರಷ್ಟಾಚಾರಕ್ಕೆ ಬೇಡಿಕೆ‌' ಎಂಬ ಅಸಲಿ ವಿಚಾರದೊಂದಿಗೆ ಅಖಾಡಕ್ಕಿಳಿದಿದೆ. ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದೇ ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ದೆಹಲಿಗೆ ದೌಡಾಯಿಸಿ ಪತ್ರಿಕಾಗೋಷ್ಠಿ ನಡೆಸಿದರು. ಇಂದು ಬಿಜೆಪಿಯ ನಿಯೋಗ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿಯಾಗಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ರಾಜೀನಾಮೆಗೆ ಒತ್ತಾಯಿಸಲಿದೆ. ಆಡಳಿತಾರೂಢ ಮಿತ್ರಪಕ್ಷಗಳಲ್ಲಿ ಭಿನ್ನರಾಗ ಶುರುವಾಗಿರುವುದು ಬಿಜೆಪಿಯ ಹೋರಾಟಕ್ಕೆ ಬಲ‌ ಒದಗಿಸಿದೆ.

ಮಹಾರಾಷ್ಟ್ರ ಸರ್ಕಾರಕ್ಕೆ ಸಂಕಟ ಪ್ರಾಯವಾಗಿರುವ 'ಗೃಹ ಸಚಿವರ ಭ್ರಷ್ಟಾಚಾರದ ವಿಚಾರ'
ಗೃಹಸಚಿವರ ಮೇಲೆ ಭ್ರಷ್ಟಾಚಾರ ಆರೋಪಿಸಿದ ಮುಂಬೈ ಮಾಜಿ ಕಮಿಷನರ್!‌

ಮೂರು ಪಕ್ಷಗಳು ಮೂರು ರಾಗ

ದೇಶದ 'ವಾಣಿಜ್ಯ ರಾಜಧಾನಿ' ಎಂದೇ ಖ್ಯಾತವಾಗಿರುವ ಮುಂಬೈ ನಗರದ ಮಾಜಿ‌ ಪೊಲೀಸ್ ಕಮಿಷನರ್ ಒಬ್ಬರ ಆರೋಪವನ್ನು ಅದೂ ನೇರವಾಗಿ ಮುಖ್ಯಮಂತ್ರಿಗೆ ಎಂಟು ಪುಟಗಳ ಪತ್ರಬರೆದು ಮಾಡಿರುವ ಆರೋಪವನ್ನು ಎನ್ ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಮೈತ್ರಿಕೂಟ ಲಘುವಾಗಿ ಪರಿಗಣಿಸಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ದಿಟ್ಟ ಹೋರಾಟ ನಡೆಸುವ ಸುಳಿವು ನೀಡಿರುವುದರಿಂದ ಎನ್ ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಗಟ್ಟಿಯಾಗಿ ಒಟ್ಟಿಗೆ ನಿಂತು ಬಿಜೆಪಿಗೆ ತಿರುಗೇಟು ನೀಡಬೇಕಿತ್ತು. ಆದರೆ ಅಂಥ ನಿಲುವುಗಳು ಕಂಡುಬರುತ್ತಿಲ್ಲ. ಮೂರು‌ ಪಕ್ಷಗಳು ಮೂರು ರಾಗಗಳಲ್ಲಿ ಹಾಡತೊಡಗಿವೆ.

ಪಕ್ಷದ ಅಗ್ರ ನಾಯಕ ಶರದ್ ಪವಾರ್ ನೇತೃತ್ವದಲ್ಲಿ ಹಲವು ಸುತ್ತಿನ‌ ಸಭೆ ನಡೆಸಿದ ಎನ್ ಸಿಪಿ ಮುಖಂಡರು 'ರಾಜೀನಾಮೆಯ ಅಗತ್ಯ ಇಲ್ಲ' ಎಂದಿದ್ದಾರೆ. ಇದಕ್ಕೂ ಮೊದಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ‌ನಿರ್ಧರಿಸುತ್ತಾರೆ ಎಂದು ಹೇಳಿ ವಿವಾದದ ಚೆಂಡನ್ನು ಶರದ್ ಪವಾರ್ ಶಿವಸೇನೆ ಅಂಗಳಕ್ಕೆ ಒದ್ದಿದ್ದರು. ಶರದ್ ಪವಾರ್ ಹೇಳದೆ ರಾಜೀನಾಮೆ ಪಡೆಯುವುದು ಸಾಧ್ಯವಿಲ್ಲ ಎಂಬುದು ಚೆನ್ನಾಗಿ ಗೊತ್ತಿರುವುದರಿಂದ 'ಇತ್ತ ರಾಜೀನಾಮೆ ಪಡೆಯಲೂ ಆಗದೆ,‌ ಪ್ರಕರಣವನ್ನು‌ ಸಮರ್ಥಿಸಿಕೊಳ್ಳಲೂ ಆಗದೆ' ಪರಿತಪಿಸುತ್ತಿದೆ. ಶಿವಸೇನೆ ವಕ್ತಾರ ಸಂಜಯ್ ರಾವತ್ 'ಇದು ಸರ್ಕಾರದ ಮಿತ್ರಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಲು ಸಕಾಲ' ಎಂದು ಹೇಳುವ ಮೂಲಕ 'ಒಂದೆಡೆ ಎಚ್ಚರಿಕೆ ನೀಡಿದಂತೆ ಮಾಡಿ ಇನ್ನೊಂದೆಡೆ ತಾವು ರಾಜೀನಾಮೆ ಪರವಾಗಿಲ್ಲ' ಎಂಬ ಸಂದೇಶ ರವಾನಿಸಿದ್ದಾರೆ. ಕಾಂಗ್ರೆಸ್ 'ರಾಜೀನಾಮೆ ಪಡೆಯುವ ಅಗತ್ಯ ಇಲ್ಲ, ಆದರೆ ಭ್ರಷ್ಟಾಚಾರದ ಆರೋಪದ ವಿರುದ್ಧ ತನಿಖೆ ಆಗಲಿ' ಎಂಬ 'ಅಡ್ಡಗೋಡೆ ಮೇಲೆ ದೀಪ ಇಟ್ಟಿದೆ'.

ಶರದ್ ಪವಾರ್ ಇವತ್ತು ಮತ್ತೊಂದು ವಿಷಯ ಹೇಳಿದ್ದಾರೆ. ಪರಮ್ ಬೀರ್ ಸಿಂಗ್ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿರುವುದು ಫೆಬ್ರವರಿ ಮಧ್ಯದಲ್ಲಿ. ಆದರೆ ಫೆಬ್ರವರಿ 6ರಿಂದ 16ರವರೆಗೆ ಕೊರೋನಾ ಪಾಸಿಟಿವ್ ಆಗಿ ಅನಿಲ್ ದೇಶ್ಮುಖ್ ಆಸ್ಪತ್ರೆಗೆ ದಾಖಲಾಗಿದ್ದರು. ಆದುದರಿಂದ ಅವರ ರಾಜೀನಾಮೆ ಪಡೆಯುವ ಅಗತ್ಯ ಇಲ್ಲ ಎಂದು ಇನ್ನಷ್ಟು ಸ್ಪಷ್ಟವಾಗಿ ಹೇಳಿದ್ದಾರೆ. ಈ ನಡುವೆ ಇಂದು ಎನ್ ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ನಾಯಕರ ನಡುವೆ ಸಭೆ ಇದೆ. ಸಭೆಯಲ್ಲಿ ಯಾವ ತೀರ್ಮಾನ ಹೊರಬೀಳುತ್ತದೆ ಎಂಬುದನ್ನು ಕಾದುನೋಡಬೇಕು.‌

ಆದರೆ, ಏನೇ ನಿರ್ಧಾರವಾದರೂ ಸರ್ಕಾರಕ್ಕೆ ಇದರ ಬಿಸಿ ಮುಟ್ಟದೆ ಇರದು. ಅನಿಲ್ ದೇಶ್ಮುಖ್ ರಾಜೀನಾಮೆ ಪಡೆದರೆ ಎನ್ ಸಿಪಿ ಮುನಿಯುವ ಸಾಧ್ಯತೆ ಇದೆ.‌ ರಾಜೀನಾಮೆ ಪಡೆಯದೇ ಇದ್ದರೆ ಬಿಜೆಪಿ ಇನ್ನಷ್ಟು ಹೋರಾಟ ಮಾಡುತ್ತದೆ. ಆಗ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗಲಿದೆ. ಈ‌ ರೀತಿಯಾಗಿ 'ಗೃಹ ಸಚಿವರ ಭ್ರಷ್ಟಾಚಾರದ ವಿಚಾರ' ಈಗ ಸರ್ಕಾರದಲ್ಲಿ ಸಂಕಟ ಸೃಷ್ಟಿಸಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com