ಭಾರತ: ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ಈಗ ವ್ಯಕ್ತಿ ಆರಾಧನೆಯ ಕೇಂದ್ರ

ಭಾರತದ ಆರ್ಥಿಕತೆ ಸಮಾಧಿಯಾಗಿದೆ. ಸ್ವಾತಂತ್ರ್ಯ ಕಡಿಮೆಯಾಗುತ್ತಿದೆ. ಪಂಥೀಯತೆಯ ಹಗೆತನಗಳು ಹೆಚ್ಚಾಗುತ್ತಿವೆ. ಒಂದು ತಲೆಮಾರಿನ ಭವಿಷ್ಯವೇ ವೈರಸ್‌ನ ದೆಸೆಯಿಂದ ನಲುಗಿ ಹೋಗಿದೆ. ಆದರೆ, ದೇಶದ ಒಬ್ಬ ವ್ಯಕ್ತಿಯ ವೈಯಕ್ತಿಕ ಆರಾಧನೆಗೆ ಯಾವುದೇ ಧಕ್ಕೆ ಉಂಟಾಗಿಲ್ಲ.
ಭಾರತ: ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ಈಗ ವ್ಯಕ್ತಿ ಆರಾಧನೆಯ ಕೇಂದ್ರ

ಪ್ರಪಂಚದಲ್ಲಿ ಪ್ರಧಾನಿ ಮೋದಿ ಅವರ ದೈವಿಕ ವರ್ಚಸ್ಸಿಗೆ ಸರಿ ಸಮಾನಾದ ಇನ್ನೊಬ್ಬರು ಇರುವರೇ? ಕಳೆದ ತಿಂಗಳಲ್ಲಿಯೇ ನಡೆದ ಘಟನೆಗಳನ್ನು ನೋಡೋಣ, ಫೆಬ್ರುವರಿ 24ರಂದು ಪ್ರಪಂಚದ ಅತೀ ದೊಡ್ಡ ಕ್ರಿಕೆಟ್‌ ಸ್ಟೇಡಿಯಂನ ಹೆಸರು ಬದಲಾಯಿಸಲಾಯಿತು. 10 ಕೋಟಿ ಡಾಲರ್‌ಗೂ ಹೆಚ್ಚು ಮೊತ್ತ ಖರ್ಚು ಮಾಡಿ ನಿರ್ಮಿಸಲಾದ ಸ್ಟೇಡಿಯಂನ ಹೆಸರನ್ನು ಭಾರತ ನಿರ್ಮಾಣದ ಮೂಲಸ್ಥಂಬಗಳಲ್ಲಿ ಒಬ್ಬರಾದ ಸರ್ದಾರ್‌ ಪಟೇಲರ ಹೆಸರಿನಿಂದ ಯಾವುದೇ ನಾಚಿಕೆಯಿಲ್ಲದೇ, ನರೇಂದ್ರ ಮೋದಿ ಎಂಬ ಹೆಸರಿನೊಂದಿಗೆ ಮರು ನಾಮಕರಣ ಮಾಡಲಾಯಿತು. ಅದಾಗಿ ನಾಲ್ಕು ದಿನಗಳಲ್ಲಿ, ದೇಶದ ಬಾಹ್ಯಾಕಾಶ ಸಂಸ್ಥೆಯು ಪ್ರಧಾನಿ ಮೋದಿಯವರ ಭಾವಚಿತ್ರವಿರುವ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಸೇರಿಸಿತು. ಒಂದೇ ವಾರದಲ್ಲಿ ಮೋದಿ ಹೆಸರು ಭೂಮಿ ಮತ್ತು ಆಕಾಶ ಎರಡರಲ್ಲಿಯೂ ಅಚ್ಚಳಿಯದೇ ಉಳಿಯುವಂತಾಯಿತು.

ಇದಕ್ಕೆ ಕಾರಣ ಯಶಸ್ವಿ ನಾಯಕನ ಬೆನ್ನ ಹಿಂದೆ ಹಿಂದೂ ರಾಷ್ಟ್ರೀಯತೆಯ ಪ್ರತಿಪಾದನೆ. ದೇಶದಲ್ಲಿ ತಮ್ಮ ಧರ್ಮವನ್ನು ಸಮರ್ಥಿಸಿಕೊಂಡ ಗೌರವಾನ್ವಿತ ವ್ಯಕ್ತಿಗಳ ಹೊರತಾಗಿ, ಹಿಂದೂ ರಾಷ್ಟ್ರೀಯವಾದಿಗಳು ಜಾತ್ಯತೀತ ಗಣರಾಜ್ಯವೆಂದು ಗುರುತಿಸಿಕೊಂಡ ದೇಶದಲ್ಲಿ ಸೈದ್ಧಾಂತಿಕ ದಂಗೆಕೋರರು ಎಂದು ದಶಕಗಳಿಂದ ಕಳಂಕಿತರಾಗಿದ್ದರು.

ಜಾತ್ಯಾತೀತರೆಂದು ಅನ್ನಿಸಿಕೊಂಡವರಲ್ಲಿ ಗಾಂಧಿ ಇದ್ದರು. ಭಾರತದ ಮೊತ್ತ ಮೊದಲ ಪ್ರಧಾನಿ ಜವಹರ್‌ ಲಾಲ್‌ ನೆಹರೂ ಇದ್ದರು. ಭಾರತದ ರಾಷ್ಟ್ರಗೀತೆ ಬರೆದ ರವೀಂದ್ರನಾಥ್‌ ಟ್ಯಾಗೋರ್‌ ಇದ್ದರು. ಹಿಂದೂ ರಾಷ್ಟ್ರೀಯತೆಯ ಕುಖ್ಯಾತಿಗಳಿಸಿದ್ದವರಲ್ಲಿ ಪ್ರಮುಖವಾಗಿ ಮಹಾತ್ಮ ಗಾಂಧಿಯನ್ನು ಕೊಂದಂತಹ ನಾಥೂರಾಂ ಗೋಡ್ಸೆ ಇದ್ದರು. ಇವರ ಗುರುವಾಗಿದ್ದ ಪವಿತ್ರ ಪ್ರವಾದಿ ವಿ ಡಿ ಸಾವರ್ಕರ್‌ ಇದ್ದರು. ಇವರೊಂದಿಗೆ ಎಂ ಎಸ್‌ ಗೋಲ್ವಾಲ್ಕರ್‌ ಇದ್ದರು. ಈ ಕಾರಣಕ್ಕಾಗಿ, 2014ರಲ್ಲಿ ನರೇಂದ್ರ ಮೋದಿ ಬಿಜೆಪಿಯ ಹಳೇ ಪ್ರಚಾರ ಕಾರ್ಯತಂತ್ರಗಳಿಂದ ದೂರ ಸರಿದು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಮ್ಮೆ ಅಧಿಕಾರ ಸ್ವೀಕರಿಸಿದ ಬಳಿಕ, ಮೋದಿ ಭಕ್ತರು ಕರೆಯುವಂತೆ ʼನವ ಭಾರತʼದ ರಾಷ್ಟ್ರಪಿತನಾಗಿ ತಮ್ಮನ್ನು ತಾವೇ ಬಿಂಬಿಸುವ ಕೆಲಸ ಆರಂಭವಾಗುತ್ತದೆ. ಈ ಹಂತಕ್ಕೆ ತಲುಪಲು ಪಕ್ಷವು ಬಳಸಿದ ಮೊದಲ ತಂತ್ರವೆಂದರೆ, ಮೋದಿಯವರ ತಾಯಿ ಬೇರೆಯವರ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದರು ಮತ್ತು ಅವರ ತಂದೆ ಚಹಾ ಮಾರುತ್ತಿದ್ದರು. ಆದರೆ, ಸ್ವತಂತ್ರ ಭಾರತವನ್ನು ಅತೀ ಹೆಚ್ಚು ಆಳಿದ ಪಕ್ಷವನ್ನು ಒಂದೇ ಕುಟುಂಬ ಆಳುತ್ತಾ ಬಂದಿತ್ತು. ಬಿಜೆಪಿ ಹಾಗೆ ಅಲ್ಲ ಎಂದು ತೋರಿಸುತ್ತಲೇ ಬಂದರು. ಬಿಜೆಪಿ ನಿಜವಾದ ಪ್ರಜಾಪ್ರಭುತ್ವ ಪಕ್ಷ, ಯಾರು ಹಿಂದು ಮೊದಲು ಎಂಬ ವಿಚಾರಧಾರೆಯನ್ನು ಹೊಂದಿರುತ್ತಾರೋ ಅವರು, ಅದನ್ನು ಮುನ್ನಡೆಸಬಹುದು ಎಂಬ ಸಂದೇಶ ರವಾನೆಯಾಯಿತು. ಆದರೆ, ಮೋದಿಯವರ ವೈಯಕ್ತಿಕ ದೈವೀ ವರ್ಚಸ್ಸಿನ ಮುಂದೆ ಅದು ಕೂಡಾ ಬಿದ್ದು ಹೋಯಿತು. ಪ್ರಧಾನಿ ಅವರನ್ನು ಎದುರು ಹಾಕಿಕೊಂಡ ಯಾವುದೇ ನಾಯಕನನ್ನು ದಯೆ ಇಲ್ಲದೇ ಪಕ್ಷದಿಂದ ಹೊರ ಹಾಕಲಾಯಿತು.

ಪ್ರಧಾನಿ ಮೋದಿಯವರು ಅಧಿಕಾರ ಸ್ವೀಕರಿಸಿದ ಎರಡು ವರ್ಷಗಳ ಬಳಿಕ ಮಧ್ಯಪ್ರದೇಶದ ಸಿಎಂ ಆಗಿರುವ ಶಿವರಾಜ್‌ ಸಿಂಗ್‌ ಚವ್ಹಾನ್‌ ಅವರು ಬಹಿರಂಗ ಸಭೆಯಲ್ಲಿ ಮಾತನಾಡುತ್ತಾ, ದೇವರು ನಮಗೆ ಕೊಟ್ಟ ಪವಿತ್ರ ವರವೆಂದರೆ ಅದು ಪ್ರಧಾನಿ ಮೋದಿ ಅಂದುಬಿಟ್ಟರು. ಕೇಂದ್ರ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಸಚಿವರಾದ ಕಿರಣ್‌ ರಿಜಿಜು ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇದು ಮೋದಿ ಯುಗ ಎಂದರು. ಫ್ರೆಂಚ್‌ ಪ್ರವಾದಿ ನಾಸ್ಟ್ರಡಮಾಸ್‌ 450 ವರ್ಷಗಳ ಹಿಂದೆ ಭವಿಷ್ಯ ನುಡಿದಂತೆ ಬಂದಿರುವ ವ್ಯಕ್ತಿ ನರೇಂದ್ರ ಮೋದಿ ಎಂದು ಹೇಳಿದ್ದರು.

ಅಂದಹಾಗೆ, ಭಾರತಕ್ಕೆ ವೈಯಕ್ತಿಕ ವರ್ಚಸ್ಸಿನ ಆರಾಧನೆ ಹೊಸ ವಿಚಾರವೇನಲ್ಲ. ದೇಶದ 450 ಸರ್ಕಾರಿ ಸ್ಥಳಗಳನ್ನು ನೂರಾರು ಕೋಟಿ ಖರ್ಚು ಮಾಡಿ ನೆಹರು ಮತ್ತು ಗಾಂಧಿ ಕುಟುಂಬದ ಹೆಸರಿನೊಂದಿಗೆ ಜೋಡಿಸಲಾಗಿದೆ. ಈ ವೈಯಕ್ತಿಕ ವರ್ಚಸ್ಸಿನ ಆರಾಧನೆಯನ್ನು ಟೀಕಿಸುತ್ತಲೇ ಅಧಿಕಾರ ಹಿಡಿದ ಪ್ರಧಾನಿ ಮೋದಿ ಕಾಲಾಂತರದಲ್ಲಿ ಅದೇ ಪರಿಪಾಠವನ್ನು ಮುಂದುವರೆಸಿದ್ದಾರೆ. ಖಾದಿ ಉದ್ಯಮದ ಕ್ಯಾಲೆಂಡರ್‌ಗಳಲ್ಲಿ ಮಹಾತ್ಮಾ ಗಾಂಧೀಜಿಯ ಚಿತ್ರಗಳು ಮಾಯವಾಗಿ ಮೋದಿ ಭಾವಚಿತ್ರಗಳು ರಾರಾಜಿಸತೊಡಗಿವೆ. ಇದು ಸಣ್ಣ ವಿಚಾರವೆಂದು ಅನ್ನಿಸಿದರೂ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೇಶದ ಸ್ವಾಭಿಮಾನದ ಸಂಕೇತವಾಗಿದ್ದ ಚರಕದ ಪಕ್ಕದಲ್ಲಿ ತಾವು ಕುಳಿತದ್ದು, ತಾನೇ ದೇಶದ ರಾಷ್ಟ್ರಪಿತ ಎಂಬ ಸಂದೇಶ ಸಾರಲು ಎಂಬುದು ಜಗಜ್ಜಾಹೀರಾಯಿತು. ಇದಾಗಿ ಕೇವಲ ಒಂದು ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿರುವ 1,60,000 ಸರ್ಕಾರಿ ಶಾಲೆಗಳ ಮಕ್ಕಳನ್ನು ಭಾನುವಾರದ ರಜಾದಿನದಂದು ಶಾಲೆಗೆ ಕರೆಸಿ ಪ್ರಧಾನಿ ಮೋದಿಯವರ ಹುಟ್ಟು ಹಬ್ಬ ಆಚರಿಸಿ ಮಕ್ಕಳ ಅಚ್ಚುಮೆಚ್ಚಿನ ಪ್ರಧಾನಿ ಎಂಬ ಹಣೆಪಟ್ಟಿಯನ್ನು ಅವರೇ ಕೊಟ್ಟುಕೊಂಡಿದ್ದರು.

ಇನ್ನು ಬಿಜೆಪಿ ಐಟಿ ಸೆಲ್‌ ಕಂಪ್ಯೂಟರ್‌ನ ಮುಂದೆ ಕುಳಿತು ಹುಟ್ಟುಹಾಕಿದ ಸುಳ್ಳುಗಳಿಗಂತೂ ಲೆಕ್ಕವೇ ಇಲ್ಲ. ಭಾರತದಲ್ಲಿ ಅತೀ ಸುಲಭವಾಗಿ ಪ್ರೊಪಗಾಂಡವನ್ನು ಪ್ರಚಾರ ಮಾಡುವ ಮಾಧ್ಯಮವಾದ ವಾಟ್ಸಾಪ್‌ ಮೂಲಕ ಲೆಕ್ಕವಿಲ್ಲದಷ್ಟು ಟ್ರೋಲ್‌ಗಳನ್ನು ಸೃಷ್ಟಿಸಿ ಹರಿಬಿಡಲಾಯಿತು. ಪ್ರಧಾನಿ ಮೋದಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅತೀ ಹೆಚ್ಚು ಘನತೆ ಇರುವಂತಹ ನಾಯಕ ಎಂದು ಬಿಂಬಿಸಲಾಯಿತು. ಬರಾಕ್‌ ಒಬಾಮ ವೈಟ್‌ಹೌಸ್‌ನಲ್ಲಿ ಕುಳಿತು ಪ್ರಧಾನಿ ಮೋದಿ ಭಾಷಣ ಕೇಳುವಂತೆ ಫೋಟೊ ಮತ್ತು ವೀಡಿಯೋವನ್ನು ತಿರುಚಲಾಯಿತು. ಪ್ರಧಾನಿ ಮೋದಿ ವಿಶ್ವದ ಅತ್ಯುತ್ತಮ ಪ್ರಧಾನಿ ಎಂಬ ವಾಟ್ಸಾಪ್‌ ಸುಳ್ಳು ಸಂದೇಶ ಅತೀ ಹೆಚ್ಚು ಬಾರಿ ಹರಿದಾಡಿತ್ತು.

ಈ ವೈಯಕ್ತಿಕ ಆರಾಧನೆ ಭಾರತೀಯರಿಗೆ ಮಾತ್ರ ತುಂಬಾ ದುಬಾರಿಯಾಗಿ ಪರಿಣಮಿಸಿತು. ಪ್ರಜಾಪ್ರಭುತ್ವದ ಪ್ರಮುಖ ಅಂಶವಾದ ಪ್ರಜೆಗಳೇ ಪ್ರಭುಗಳು ಎಂಬ ಮಾತು ಈ ಆರಾಧನೆಯಿಂದ ಮೌನವಾಗುವಂತಾಯಿತು. ಈ ಆರಾಧನೆಯಿಂದಾಗಿಯೇ ಮೋದಿ ತೆಗೆದುಕೊಂಡಂತಹ ಯಾವುದೇ ನಿರ್ಧಾರಗಳು ಕೂಡಾ ಪ್ರಶ್ನಿಸಲ್ಪಟ್ಟಿಲ್ಲ. ಕಪ್ಪು ಹಣವನ್ನು ಹೊರತರುವ ಆಲೋಚನೆಯಿಂದ ಡಿಮಾನಿಟೈಸೇಷನ್‌ ಮಾಡಲಾಯಿತು. ನಿಜವಾದ ಕಪ್ಪು ಹಣ ಹೊಂದಿರುವ ಕುಳಗಳು ಅದನ್ನು ಚಿನ್ನ ಅಥವಾ ಆಸ್ತಿಯ ರೂಪಕ್ಕೆ ಬದಲಾಯಿಸಿಕೊಂಡಿರುತ್ತಾರೆ ಎಂಬ ಪರಿಜ್ಞಾನವೂ ಇರಲಿಲ್ಲ. ಇದರಿಂದಾಗಿ, ಹದಿನೈದು ಲಕ್ಷಕ್ಕೂ ಹೆಚ್ಚು ಜನ ಕೆಲಸ ಕಳೆದುಕೊಂಡರು. ಭಾರತದ ಆರ್ಥಿಕತೆ ಎಂಬುದು ಅಂದಿನಿಂದಲೇ ಹಳ್ಳ ಹಿಡಿಯಲು ಆರಂಭಿಸಿತು.

ಮೂರು ವರ್ಷದ ನಂತರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಲಾಯಿತು. ನಂತರ ಕೃಷಿ ಕಾನೂನುಗಳ ಜಾರಿಯೂ ಈ ಆರಾಧನೆಯ ಫಲವೇ ಆಗಿದೆ ಎಂದರೆ ತಪ್ಪಲ್ಲ.

ಇನ್ನು, ಕರೋನಾ ಸೋಂಕಿನ ಸಂದರ್ಭದಲ್ಲಿ ಈ ವೈಭವೀಕರಣ ಅಥವಾ ಆರಾಧನೆಯನ್ನು ಏಕೀಕರಿಸಲಾಯಿತು. ಕೇವಲ ನಾಲ್ಕು ಗಂಟೆಗಳ ಅವಧಿಯಲ್ಲಿ ಪ್ರಪಂಚದ ಅತೀ ದೊಡ್ಡ ಲಾಕ್‌ಡೌನ್‌ ಅನ್ನು ಘೋಷಿಸಿದ ಕೆಲವೇ ದಿನಗಳ ಬಳಿಕ, ಜನರಿಗೆ ತೆರಿಗೆ ವಿನಾಯಿತಿ ನೀಡುವ ಅಪಾರದರ್ಶಕ PM-CARES ನಿಧಿಯನ್ನು ಸ್ಥಾಪಿಸಲಾಯಿತು. ಒಂದು ವಾರದಲ್ಲಿಯೇ ಇದಕ್ಕೆ ಹಲವು ಕೋಟಿಗಳ ದೇಣಿಗೆ ಹರಿದು ಬಂತು. ʼಬಡವರಲ್ಲಿ ಬಡವರಿಗಾಗಿʼ (?) ಈ ನಿಧಿ ಸ್ಥಾಪನೆಯಾಯಿತು. ಸರ್ಕಾರಿ ಉದ್ಯೋಗಿಗಳಿಗೆ ತಮ್ಮ ಸಂಬಳದ ಒಂದು ಪಾಲನ್ನು ಈ ನಿಧಿಗೆ ದಾನ (ಅದನ್ನು ಕಡ್ಡಾಯ ದಾನವೆನ್ನಬಹುದು) ನೀಡುವಂತೆ ಪ್ರೇರೇಪಿಸಲಾಯಿತು. ಆದರೆ, ಖಾಸಗೀ ಕಾರ್ಮಿಕರು ಬೀದಿ ಪಾಲಾದರು. ಒಂದು ಕಂಪೆನಿಯಂತು, ಪಿಎಂ ಕೇರ್ಸ್‌ಗೆ ನೂರಾರು ಕೋಟಿ ದೇಣಿಗೆ ನೀಡಿದ ನಂತರ ಸುಮಾರು 1,000 ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿತು. ಆದರೆ, ಆ ಹಣ ಎಲ್ಲಿ ಹೋಯಿತು? ಈ ಪ್ರಶ್ನೆಗೆ ಸಿಗುವ ಉತ್ತರ ಒಂದೇ, ಇದೊಂದು ಖಾಸಗಿ ಟ್ರಸ್ಟ್‌. ಸರ್ಕಾರಿ ಆಡಿಟರ್‌ ಇದನ್ನು ಪರಿಶೀಲಿಸುವಂತಿಲ್ಲ.

ಭಾರತದ ಆರ್ಥಿಕತೆ ಸಮಾಧಿಯಾಗಿದೆ. ಸ್ವಾತಂತ್ರ್ಯ ಕಡಿಮೆಯಾಗುತ್ತಿದೆ. ಪಂಥೀಯತೆಯ ಹಗೆತನಗಳು ಹೆಚ್ಚಾಗುತ್ತಿವೆ. ಒಂದು ತಲೆಮಾರಿನ ಭವಿಷ್ಯವೇ ವೈರಸ್‌ನ ದೆಸೆಯಿಂದ ನಲುಗಿ ಹೋಗಿದೆ. ಆದರೆ, ದೇಶದ ಒಬ್ಬ ವ್ಯಕ್ತಿಯ ವೈಯಕ್ತಿಕ ಆರಾಧನೆಗೆ ಯಾವುದೇ ಧಕ್ಕೆ ಉಂಟಾಗಿಲ್ಲ. ಏಕೆಂದರೆ, ಕೋವಿಡ್‌ ಲಸಿಕೆಯ ಪ್ರಮಾಣಪತ್ರದಲ್ಲಿ ಅವನ ಭಾವಚಿತ್ರವಿದೆ. ಸುಪ್ರಿಂಕೋರ್ಟ್‌ನ ನ್ಯಾಯಾಧೀಶರು ಸುಮ್ಮನಾಗಿದ್ದಾರೆ. ಪ್ರಧಾನಿಯ ವಿರುದ್ದ ಮಾತನಾಡಿದವರನ್ನು ದೇಶದ್ರೋಹಿಗಳಾಗಿ ಬಿಂಬಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈಗ ಓರ್ವ ದೂರದೃಷ್ಟಿತ್ವ ಉಳ್ಳಂತಹ ವ್ಯಕ್ತಿಯಾಗಿದ್ದಾರೆ. ಒಂದು ಕಾಲದಲ್ಲಿ ಪ್ರಜಾಪ್ರಭುತ್ವ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿದ್ದ ಭಾರತ, ಇಂದು ಪ್ರಜಾಪ್ರಭುತ್ವವೆಂದರೆ ಹೇಗಿರಬಾರದು ಎಂಬುದಕ್ಕೆ ಪಾಠವಾಗಿ ನಿಂತಿದೆ.

ಮೂಲ: ದ ವಾಷಿಂಗ್ಟನ್‌ ಪೋಸ್ಟ್‌

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com