ಪಶ್ಚಿಮ ಬಂಗಾಳ ಚುನಾವಣಾ ಹಿನ್ನಲೆಯಲ್ಲಿ ಸಿಎಂ ಮಮತಾ ಸುತ್ತ ಹೆಣೆಯಲ್ಪಟ್ಟ ಸುಳ್ಳುಗಳು

ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದರೂ‌ ಟಿಎಂಸಿ ಮತ್ತು ಬಿಜೆಪಿಯ‌ ಮಧ್ಯೆ ನೇರ ಹಣಾಹಣಿ ಇರುವುದರಿಂದ ಪಶ್ಚಿಮಬಂಗಾಳದ ಚುನಾವಣೆ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.‌ ಇನ್ನೆಷ್ಟು ಸುಳ್ಳುಗಳು, ಇನ್ನೆಷ್ಟು ಅಪಪ್ರಚಾರಗಳು ಚುನಾವಣಾ ಕಣವನ್ನು ಭ್ರಷ್ಟಗೊಳಿಸಲಿವೆಯೋ ಎಂಬುವುದನ್ನು ಕಾದು ನೋಡಬೇಕು.
ಪಶ್ಚಿಮ ಬಂಗಾಳ ಚುನಾವಣಾ ಹಿನ್ನಲೆಯಲ್ಲಿ ಸಿಎಂ ಮಮತಾ ಸುತ್ತ ಹೆಣೆಯಲ್ಪಟ್ಟ ಸುಳ್ಳುಗಳು

ಇತ್ತೀಚಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸುವುದು ಮತ್ತು ಚುನಾವಣಾ ಪ್ರಚಾರ ಕೈಗೊಳ್ಳುವುದೆಂದರೆ ಪ್ರತಿಸ್ಪರ್ಧಿಯ ವಿರುದ್ಧ ಸುಳ್ಳು ಆರೋಪ ಮಾಡುವುದು, ಸುಳ್ಳು ಪ್ರಚಾರ ಮಾಡುವುದು, ಸುಳ್ಳನ್ನು ಸತ್ಯವೆಂದು ನಂಬಿಸಲು ಆಧುನಿಕ ಸೌಲಭ್ಯಗಳನ್ನು ಬಳಸಿಕೊಳ್ಳುವುದು ಎಂಬಂತಾಗಿದೆ. ಅದರಲ್ಲೂ ಸಾಮಾಜಿಕ ಮಾಧ್ಯಮಗಳು‌ ಪ್ರಚಲಿತದಲ್ಲಿರುವ ಈ ಕಾಲದಲ್ಲಿ ಸುಳ್ಳು ಅತಿ ವೇಗವಾಗಿ ಜನರನ್ನು ತಲುಪುತ್ತದೆ.

ಮಾರ್ಚ್ 10 ರಂದು ನಂದಿಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಎಡಗಾಲಿಗೆ ಗಾಯವಾಗಿತ್ತು. ಎರಡು ದಿನಗಳ ನಂತರ ಆಕೆಯ ಕಾಲಿಗೆ ಪ್ಲ್ಯಾಸ್ಟರ್ ಹಾಕಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಮಾರ್ಚ್ 16 ರಂದು ಹಲವಾರು ನೆಟ್ಟಿಗರು ಸಿಎಂ ಮಮತಾ ಬ್ಯಾನರ್ಜಿಯವರ ಎರಡು ಚಿತ್ರಗಳನ್ನು ಹಂಚಿಕೊಂಡರು ಮತ್ತು ಅವರು ತಮ್ಮ ಗಾಯವನ್ನು ನಕಲಿ ಮಾಡಿದ್ದಾರೆ ಎಂದು ಆರೋಪಿಸಿದರು. ಆಸ್ಪತ್ರೆಯಲ್ಲಿದ್ದಾಗಿನ ಸಿಎಂ ಅವರ ಚಿತ್ರವು ಎಡಗಾಲಿನಲ್ಲಿ ಬ್ಯಾಂಡೇಜ್ ಇರುವುದನ್ನು ಎಂದು ತೋರಿಸಿದರೆ, ಗಾಲಿಕುರ್ಚಿಯಲ್ಲಿ ಕೂತು ಆಸ್ಪತ್ರೆಯಿಂದ ನಿರ್ಗಮಿಸುವ ಮತ್ತೊಂದು ಚಿತ್ರವು ಅವರ ಬಲ ಕಾಲಿನಲ್ಲಿ ಪ್ಲ್ಯಾಸ್ಟರ್ ಇರುವುದನ್ನು ತೋರಿಸುತ್ತಿತ್ತು.

ಈ ಚಿತ್ರವನ್ನು ಬಳಸಿಕೊಂಡು ಮಮತಾ ಅವರು‌ ಮತದಾರರ ಕರುಣೆ ಗಳಿಸಿಕೊಳ್ಳಲು ನಾಟಕವಾಡುತ್ತಿದ್ದಾರೆ ಎಂದು ವ್ಯಾಪಕ ಪ್ರಚಾರ ಮಾಡಲಾಯಿತು. ಆದರೆ ಮಮತಾ ಅವರಿಗೆ ನಿಜಕ್ಕೂ ಎಡಗಾಲಿಗೇ ಗಾಯವಾಗಿತ್ತು, ಆಸ್ಪತ್ರೆಯಿಂದ ಹೊರಬರುವ ಚಿತ್ರದಲ್ಲೂ ಎಡಗಾಲಿನಲ್ಲೇ ಪ್ಲ್ಯಾಸ್ಟರ್ ಇತ್ತು. ಆದರೆ ಆ ಚಿತ್ರವನ್ನು ಅಡ್ಡಲಾಗಿ ತಿರುಗಿಸಿ (flipped horizontally) ಬಲಗಾಲಿನಲ್ಲಿ ಪ್ಲ್ಯಾಸ್ಟರ್ ಇರುವಂತೆ ಮಾಡಿ ಸಾಮಾಜಿಕಜಾಲತಾಣದಾದ್ಯಂತ ಹರಿ ಬಿಡಲಾಗಿತ್ತು.

admin

"ಒಂದು ಚಿತ್ರವು ಸಾವಿರಕ್ಕೂ ಹೆಚ್ಚು ಪದಗಳನ್ನು ಮಾತನಾಡುತ್ತದೆ. ಮಮತಾ ತನ್ನ ತಾಯಿಯ ಧರ್ಮವಾದ ಇಸ್ಲಾಂ ಧರ್ಮವನ್ನು ಅಳವಡಿಸಿಕೊಂಡವರು, ಈ ಚಿತ್ರದಲ್ಲಿ ಅವರು ಜ್ಯೋತಿ ಬಸು ಅವರನ್ನು ಅದಾಬ್‌ನೊಂದಿಗೆ ಸ್ವಾಗತಿಸುತ್ತಿದ್ದಾರೆ. ಅವರು ಸ್ನಾತಕೋತ್ತರ ಪದವಿ ಪಡೆದುಕೊಂಡದ್ದು ಕೂಡಾ ಇಸ್ಲಾಮಿಕ್ ಇತಿಹಾಸದಲ್ಲಿ. ಅವರು ಹಿಂದೂ ವಿರೋಧಿ ಮತ್ತು ಹಿಂದೂಗಳ ವಿರುದ್ಧದ ದ್ವೇಷಪೂರಿತತೆಯು ಇಸ್ಲಾಂ ಧರ್ಮಕ್ಕೆ ತನ್ನ ನಿಷ್ಠೆಯನ್ನು ಸಾಬೀತುಪಡಿಸುತ್ತದೆ ”, ಎಂದು‌‌ ಒಂದು ಚಿತ್ರ ಪೋಸ್ಟ್ ಮಾಡಿ ಶೀರ್ಷಿಕೆ ಕೊಡಲಾಗಿದೆ. ಆ ಚಿತ್ರದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಪಶ್ಚಿಮ ಬಂಗಾಳದ ಮಾಜಿ ಸಿಎಂ ಜ್ಯೋತಿ ಬಸು ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾದ ಈ‌‌ ಪೋಸ್ಟ್ ‌ಮಮತಾ ಬ್ಯಾನರ್ಜಿಯ ತಾಯಿ ಮುಸ್ಲಿಂ ಎಂದು ಹೇಳುತ್ತದೆ ಮತ್ತು ಮಮತಾ ತನ್ನ ತಾಯಿಯ ಧರ್ಮವನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದಾರೆ ಆದ್ದರಿಂದ ಜ್ಯೋತಿ ಬಸುಗೆ ಅದಾಬ್ನೊಂದಿಗೆ ಶುಭಾಶಯ ಕೋರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಬ್ಬ ಮುಸ್ಲಿಂ ಮಹಿಳೆ ಜಾತ್ಯಾತೀತ ದೇಶವಾದ ಭಾರತದ ಒಂದು ರಾಜ್ಯದ ಮುಖ್ಯಮಂತ್ರಿ ಆಗಬಾರದೇ ಎನ್ನುವ ಮೂಲಭೂತ ಪ್ರಶ್ನೆಯನ್ನು ಬದಿಗಿಟ್ಟರೂ ಮಮತಾ ಬ್ಯಾನರ್ಜಿ ಇಸ್ಲಾಮಿಕ್ ಇತಿಹಾಸದಲ್ಲಿ ತನ್ನ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ ಎಂಬುವುದನ್ನು‌‌ ಹೊರತುಪಡಿಸಿ ಆಕೆಯ ತಾಯಿ ಮುಸ್ಲಿಂ ಎಂಬುವುದು ಶುದ್ಧ ಸುಳ್ಳು.

admin

ಮಮತಾ ಅವರ ತಾಯಿ ಗಾಯತ್ರಿ ದೇವಿ 2011ರ ಡಿಸೆಂಬರ್ 17ರಂದು ತಮ್ಮ 81ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಮತ್ತು ಅವರ ಅಂತಿಮ‌ ಕ್ರಿಯೆಯನ್ನು ಹಿಂದೂ ವಿಧಿ ವಿಧಾನದಂತೆಯೇ ನಡೆಸಲಾಗಿತ್ತು. ಅಲ್ಲದೆ ಸ್ವತಃ ಮಮತಾ ಅವರೇ ಕಾಳಿ ಭಕ್ತೆಯಾಗಿದ್ದು ಪ್ರತಿ ವರ್ಷ ಅವರ ಮನೆಯಲ್ಲಿ ಕಾಳಿ ಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬರಲಾಗುತ್ತದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹಲವಾರು ಫೇಸ್‌ಬುಕ್ ಬಳಕೆದಾರರು ಗೃಹ ಸಚಿವ ಅಮಿತ್ ಶಾ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತರ ಇಬ್ಬರು ವ್ಯಕ್ತಿಗಳೊಂದಿಗೆ ಊಟ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡು ಆ ಚಿತ್ರವನ್ನು ಬಂಗಾಳದ ಚುನಾವಣಾ ಸಮಾಲೋಚನೆ ಎಂಬಂತೆ ಪ್ರಚಾರ ಮಾಡುತ್ತಿದ್ದಾರೆ. ಫೇಸ್‌ಬುಕ್ ಬಳಕೆದಾರ ಹಕೀಮ್ ಅಬ್ದುಸ್ ಸಲಾಮ್ ಖಾನ್ ಎಂಬವರು “ಪಶ್ಚಿಮ ಬಂಗಾಳ ಚುನಾವಣೆಯ ಕುರಿತು ಉಪಾಹಾರದೊಂದಿಗೆ ಚರ್ಚೆ. ಆದರೆ ಕೆಲವು ಕುರುಡರು ಓವೈಸಿಯನ್ನು 'ಬಿಜೆಪಿ ಏಜೆಂಟ್' ಎಂದು ಮಾತ್ರ ಕರೆಯುತ್ತಾರೆ" ಎಂದು‌ ಪೋಸ್ಟ್ ಮಾಡಿದ್ದರು‌ ಸದರಿ ಪೋಸ್ಟನ್ನು ಸುಮಾರು 1,100 ಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ.

admin

ಫೆಬ್ರವರಿ 2020 ರ ಎನ್‌ಡಿಟಿವಿ ವರದಿಯ ಪ್ರಕಾರ, ಗೃಹ ಸಚಿವ ಅಮಿತ್ ಶಾ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರ ನಿವಾಸದಲ್ಲಿ ಒಟ್ಟಿಗೆ ಊಟ ಮಾಡುತ್ತಿರುವುದು ಕಂಡುಬಂದಿದೆ. "ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವ ರಾಜ್ಯಗಳ ವೇದಿಕೆಯಾದ ಪೂರ್ವ ವಲಯ ಮಂಡಳಿಯ (EZC) ಸಭೆಯಲ್ಲಿ ಪಾಲ್ಗೊಳ್ಳಲು ಮಮತಾ ಬ್ಯಾನರ್ಜಿ ಮತ್ತು ಅಮಿತ್ ಶಾ ಭುವನೇಶ್ವರಕ್ಕೆ ಪ್ರಯಾಣಿಸಿದ್ದಾರೆ. ನವೀನ್ ಪಟ್ನಾಯಕ್ ಮತ್ತು ನಿತೀಶ್ ಕುಮಾರ್ ಸಹ ಹಾಜರಿದ್ದರು. ಆದರೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ‌ ಈ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ " ಎಂದು ಅದು ಫೆಬ್ರವರಿ 29 ರಂದು ಪ್ರಕಟವಾದ ಲೇಖನದಲ್ಲಿ ತಿಳಿಸಿದೆ.

ಈಗ ಚುನಾವಣೆಯು ಕೆಲವೇ ಕೆಲವು ದಿನಗಳ ದೂರದಲ್ಲಿದೆ.‌‌ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದರೂ‌ ಟಿಎಂಸಿ ಮತ್ತು ಬಿಜೆಪಿಯ‌ ಮಧ್ಯೆ ನೇರ ಹಣಾಹಣಿ ಇರುವುದರಿಂದ ಪಶ್ಚಿಮಬಂಗಾಳದ ಚುನಾವಣೆ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.‌ ಇನ್ನೆಷ್ಟು ಸುಳ್ಳುಗಳು, ಇನ್ನೆಷ್ಟು ಅಪಪ್ರಚಾರಗಳು ಚುನಾವಣಾ ಕಣವನ್ನು ಭ್ರಷ್ಟಗೊಳಿಸಲಿವೆಯೋ ಎಂಬುವುದನ್ನು ಕಾದು ನೋಡಬೇಕು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com