ಗ್ರಾಹಕ ಹಿತರಕ್ಷಣೆಯ ಬಗ್ಗೆ ಗಂಭೀರ ಪ್ರಶ್ನೆ ಎತ್ತುವ ಕಾಶ್ಮೀರ ಇಂಟರ್‌ನೆಟ್‌ ಸ್ಥಗಿತ

ಯುಕೆ ಮೂಲದ 'ಟಾಪ್10ವಿಪಿಎನ್' ಸಂಸ್ಥೆಯ ಪ್ರಕಾರ, ಇಂಟರ್ನೆಟ್ ಸ್ಥಗಿತದಿಂದಾಗಿ ಭಾರತದ ಆರ್ಥಿಕತೆಯು 2.8 ಬಿಲಿಯನ್ ಡಾಲರ್‌ (ಅಂದಾಜು 20,404 ಕೋಟಿ ರೂ.) ನಷ್ಟವನ್ನು ಅನುಭವಿಸಿದೆ.
ಗ್ರಾಹಕ ಹಿತರಕ್ಷಣೆಯ ಬಗ್ಗೆ ಗಂಭೀರ ಪ್ರಶ್ನೆ ಎತ್ತುವ ಕಾಶ್ಮೀರ ಇಂಟರ್‌ನೆಟ್‌ ಸ್ಥಗಿತ

ಫೆಬ್ರವರಿ 5, 2020 ರಂದು ಕೇಂದ್ರವು ಜಮ್ಮು ಮತ್ತು ಕಾಶ್ಮೀರದಲ್ಲಿ 550 ದಿನಗಳ ದೀರ್ಘಾವಧಿಯ ನಂತರ ಹೆಚ್ಚಿನ ವೇಗದ ಅಂತರ್ಜಾಲವನ್ನು ಪುನಃಸ್ಥಾಪಿಸಿತು. ಇದು ವಿಶ್ವದ ಅತ್ಯಂತ ದೀರ್ಘಾವಧಿಯ ಇಂಟರ್ನೆಟ್ ಸ್ಥಗಿತ ಎಂದು ಕರೆಯಲ್ಪಟ್ಟಿತ್ತು. ಭಾರತೀಯ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಿದ್ದಕ್ಕಾಗಿ ಮತ್ತು ಲಕ್ಷಾಂತರ ಜನರಿಗೆ ಇಂಟರ್ನೆಟ್ ಬಳಕೆಯನ್ನು ನಿರಾಕರಿಸಿದ್ದಕ್ಕಾಗಿ ಭಾರೀ ಟೀಕೆಗೆ ಗುರಿಯಾಗಿತ್ತು. ಇತ್ತೀಚೆಗೆ, ಹಲವಾರು ಅಂತರರಾಷ್ಟ್ರೀಯ ಸೆಲೆಬ್ರಿಟಿಗಳು ಭಾರತದ ಇಂಟರ್ನೆಟ್ ನೀತಿಯ ವಿರುದ್ಧ ಮಾತನಾಡಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ, ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯು ಉದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಆರೋಗ್ಯ ಕಾರ್ಯಕರ್ತರಂತಹ ವಿವಿಧ ವರ್ಗದ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರಿತ್ತು. ಯುಕೆ ಮೂಲದ 'ಟಾಪ್10ವಿಪಿಎನ್' ಸಂಸ್ಥೆಯ ಪ್ರಕಾರ, ಇಂಟರ್ನೆಟ್ ಸ್ಥಗಿತದಿಂದಾಗಿ ಭಾರತದ ಆರ್ಥಿಕತೆಯು 2.8 ಬಿಲಿಯನ್ ಡಾಲರ್‌ (ಅಂದಾಜು 20,404 ಕೋಟಿ ರೂ.) ನಷ್ಟವನ್ನು ಅನುಭವಿಸಿದೆ.

ಟಾಪ್10ವಿಪಿಎನ್
ಟಾಪ್10ವಿಪಿಎನ್

ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (COAI) ಡಿಸೆಂಬರ್ 2019 ರ ಹೇಳಿಕೆಯ ಪ್ರಕಾರ ಮೊಬೈಲ್ ವಾಹಕಗಳಾದ ಭಾರತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಜಿಯೋ ಇನ್ಫೋಕಾಮ್ ಟೆಲಿಕಾಂ ಆಪರೇಟರ್‌ಗಳು ಇಂಟರ್ನೆಟ್ ಸ್ಥಗಿತಗೊಳಿಸುವಾಗ ಪ್ರತಿ ಗಂಟೆಗೆ 2.4 ಕೋಟಿ ರೂ. ನಷ್ಟ ಅನುಭವಿಸಿವೆ.

COAI ಯ ಮಾಜಿ ನಿರ್ದೇಶಕ ರಾಜನ್ ಮ್ಯಾಥ್ಯೂಸ್ ಅವರು "ಇಡೀ ಭೌಗೋಳಿಕ ಪ್ರದೇಶದ ಜನರ ಹಕ್ಕನ್ನು ನಿರಾಕರಿಸಿ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ" ಎಂದು ಸರ್ಕಾರವನ್ನು ಟೀಕಿಸಿದ್ದರು.

ಈ ಹೇಳಿಕೆಗಳಿಂದ ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಟೆಲಿಕಾಂ ಆಪರೇಟರ್‌ಗಳು ಕಳೆದ ಒಂದೂವರೆ ವರ್ಷಗಳ‌ಲ್ಲಿ ಅಪಾರ ನಷ್ಟ ಅನುಭವಿಸಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

TRAI ಯ ಮಾಹಿತಿಯ ಪ್ರಕಾರ ಸಂಪೂರ್ಣ ಸಂವಹನಕ್ಕೆ ದಿಗ್ಬಂಧನ ವಿಧಿಸಿದ ತ್ರೈಮಾಸಿಕ (ಜುಲೈ- ಸಪ್ಟೆಂಬರ್)ದಲ್ಲಿ ಟೆಲಿಕಾಂ ಸಂಸ್ಥೆಗಳು ದಾಖಲೆ ಮಟ್ಟದ ಆದಾಯ ಕುಸಿತ ಅನುಭವಿಸಿದೆ.

ಆಗಸ್ಟ್ 4, 2019 ರ ರಾತ್ರಿ, ಕಾಲಿಂಗ್ ಸೇವೆಗಳನ್ನು (ಮೊಬೈಲ್ ಮತ್ತು ಲ್ಯಾಂಡ್‌ಲೈನ್) ಮತ್ತು ಇಂಟರ್ನೆಟ್ ಸೇವೆಗಳನ್ನು (ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್) ಸರ್ಕಾರ ನಿಷೇಧಿಸಿತು.

ಎರಡು ತಿಂಗಳ ನಂತರ ಅಂದರೆ 2019 ರ ಅಕ್ಟೋಬರ್‌ನಲ್ಲಿ 40 ಲಕ್ಷ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಕಾಲಿಂಗ್ ಸೇವೆಗಳನ್ನು ಪುನಃಸ್ಥಾಪಿಸಲಾಯಿತು. 2020 ರ ಜನವರಿಯಲ್ಲಿ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ 2 ಜಿ ಇಂಟರ್ನೆಟ್ ಅನ್ನು ಮರುಸ್ಥಾಪಿಸಲಾಯಿತು. ಪ್ರಿಪೇಯ್ಡ್ ಗ್ರಾಹಕರಿಗೆ 2 ಜಿ ಇಂಟರ್ನೆಟ್ ಮತ್ತು ಕರೆ ಸೇವೆಗಳನ್ನು ಸಹ ಅದೇ ತಿಂಗಳಲ್ಲಿ ಪುನಃಸ್ಥಾಪಿಸಲಾಯಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಟೆಲಿಕಾಂ ಆಪರೇಟರ್‌ಗಳು ಪೋಸ್ಟ್‌ಪೇಯ್ಡ್ ಸಂಪರ್ಕಗಳಿಗಾಗಿ ಧ್ವನಿ /ಟಾಕ್-ಟೈಮ್ ಸೇವೆಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುವುದಿಲ್ಲ. ಅವರು ಡೇಟಾ ಪ್ಯಾಕ್‌ಗಳ ಜೊತೆಗೆ “ಉಚಿತ” ಸೇವೆಯಾಗಿ ಮಾತ್ರ ಮಾರಾಟ ಮಾಡುತ್ತಾರೆ. ಐದು ತಿಂಗಳ ಕಾಲ ಮೊಬೈಲ್ ಇಂಟರ್ನೆಟ್ ಮೇಲೆ ಸಂಪೂರ್ಣ ನಿಷೇಧವಿತ್ತು ಆದರೆ ಈ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೋಸ್ಟ್ ಪೇಯ್ಡ್ ಗ್ರಾಹಕರು ಕಾಲಿಂಗ್ ಸೇವೆಗಳನ್ನು ಪಡೆಯಲು 4 ಜಿ ಡೇಟಾ ಪ್ಯಾಕ್ಗಳನ್ನೇ ಖರೀದಿಸಬೇಕಾಗಿತ್ತು. ನಂತರ 2ಜಿ ಸೇವೆಗಳನ್ನು ಪುನರಾರಂಭಿಸಿದಾಗಲೂ ಪೋಸ್ಟ್‌ಪೇಯ್ಡ್ ಗ್ರಾಹಕರು 4 ಜಿ ಇಂಟರ್‌ನೆಟ್‌ಗೆ ಪಾವತಿಸಿ 2 ಜಿ ವೇಗದಲ್ಲಿ ಮಾತ್ರ ಇಂಟರ್‌ನೆಟ್ ಬಳಸಬಹುದಾಗಿತ್ತು.

ಪೋಸ್ಟ್‌ಪೇಯ್ಡ್ ಗ್ರಾಹಕರು ಮಾತ್ರವಲ್ಲದೆ ಪ್ರಿಪೇಯ್ಡ್ ಗ್ರಾಹಕರೂ ಈ ನೀತಿಯಿಂದ ತೊಂದರೆ ಅನುಭವಿಸಿದ್ದಾರೆ. ಅವರು ಧ್ವನಿ-ಮಾತ್ರ / ಟಾಕ್-ಟೈಮ್ ಪ್ಯಾಕ್‌ಗಳನ್ನು ಖರೀದಿಸುವ ಆಯ್ಕೆಯನ್ನು ಹೊಂದಿದ್ದರೂ 2 ಜಿ ಇಂಟರ್ನೆಟ್ ಬಳಸಲು 4 ಜಿ ಪ್ಯಾಕ್‌ಗಳನ್ನು ಖರೀದಿಸಬೇಕಿತ್ತು.

COVID-19 ಸಾಂಕ್ರಾಮಿಕ ಮತ್ತು ನಂತರದ ಲಾಕ್‌ಡೌನ್ ಭಾರತದಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಮಾಡಿತು. 4G ಸೇವೆಗಳಿಲ್ಲದ ಕಾಶ್ಮೀರದ ವಿದ್ಯಾರ್ಥಿಗಳು ಒಂದೆಡೆ ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಲು‌ ಮತ್ತು ಪರೀಕ್ಷೆಗಳಿಗೆ ಹಾಜರಾಗಲು ಪರದಾಡಿದರು ಮತ್ತೊಂದೆಡೆ ಕಡಿಮೆ ವೇಗದ 2 ಜಿ ಇಂಟರ್ನೆಟ್ ಅನ್ನು ಪ್ರಡೆಯಲು ಅವರು 4 ಜಿ ಡೇಟಾ ಪ್ಯಾಕ್‌ಗಳನ್ನು ಖರೀದಿಸಬೇಕಾಗಿತ್ತು.

ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಧ್ವನಿ-ಮಾತ್ರ ಪ್ಯಾಕ್‌ಗಳನ್ನು (ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ) ಮತ್ತು ಕಡಿಮೆ-ವೆಚ್ಚದ 2 ಜಿ ಪ್ಯಾಕ್‌ಗಳನ್ನು ಪರಿಚಯಿಸಲು TRAI ಟೆಲಿಫೋನ್ ಆಪರೇಟರ್‌ಗಳಿಗೆ ಏಕೆ ನಿರ್ದೇಶನ ನೀಡಲಿಲ್ಲ? ನಿರ್ವಾಹಕರು ಹಾಗೆ ಮಾಡಲು ತಾಂತ್ರಿಕವಾಗಿ ಸಾಧ್ಯವಿದೆಯೇ? (ಉದಾಹರಣೆಗೆ ಜಿಯೋ 4 ಜಿ ನೆಟ್‌ವರ್ಕ್‌ ಮಾತ್ರ ಹೊಂದಿದೆ).

ಸರ್ಕಾರವು 4Gಗೆ ಅನುಮತಿಸದಿದ್ದಾಗ ಟೆಲಿಕಾಂ ಆಪರೇಟರ್‌ಗಳಿಗೆ 4 ಜಿ ಡಾಟಾ ಪ್ಯಾಕ್‌ಗಳನ್ನು ಮಾರಾಟ ಮಾಡಲು ಏಕೆ ಅವಕಾಶ ನೀಡಿತು? ಮತ್ತು ಜಮ್ಮು ಮತ್ತು ಕಾಶ್ಮೀರದ ಅನೇಕ ಗ್ರಾಹಕರು ಅವರಿಂದ ಬಳಸಿಕೊಳ್ಳಲಾಗದ ಸೇವೆಗೆ ಪಾವತಿಸಲು ಏಕೆ ಒತ್ತಾಯಿಸಲಾಯಿತು? ಎಂಬ ಪ್ರಶ್ನೆಗಳು ಪ್ರಮುಖವಾಗಿ ಉದ್ಭವಿಸುತ್ತದೆ.

ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ (ಕೆಸಿಸಿಐ) ಅಧ್ಯಕ್ಷ ಶೇಖ್ ಆಶಿಕ್ ಅಹ್ಮದ್ ಅವರು "ಯಾವ ತಪ್ಪೂ ಮಾಡದೆ ನಾವು ಕೇವಲ 2 ಜಿ ಸೇವೆಗಳನ್ನು ಪಡೆದಿದ್ದರೂ 4 ಜಿ ಇಂಟರ್‌ನೆಟ್‌ಗಾಗಿ ಪಾವತಿಸಬೇಕಾಗಿತ್ತು. ಸರ್ಕಾರ ಇದರ ಬಗ್ಗೆ ಕ್ರಮ‌ ಕೈಗೊಳ್ಳಬೇಕಿತ್ತು. ಆದರೆ ದುರದೃಷ್ಟವಶಾತ್ ಅವರು ಅದನ್ನು ಗಮನಿಸಲಿಲ್ಲ" ಎಂದು 'ದಿ ವೈರ್'ಗೆ ತಿಳಿಸಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿತ್ತು ಆದರೆ ಅವರು ಅದನ್ನು ಮಾಡಲು ವಿಫಲರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿನ 550 ದಿನಗಳ ದೀರ್ಘ ಕಾಲ ಇಂಟರ್ನೆಟ್ ಸ್ಥಗಿತಗೊಳಿಸಿದ್ದರಿಂದ ಕರಕುಶಲ ವಲಯವು ನೆಲಸಮಗೊಂಡಿತು ಮತ್ತು ದೊಡ್ಡ ಉದ್ಯೋಗ ನಷ್ಟಕ್ಕೆ ಕಾರಣವಾಯಿತು ಎಂದು ಅವರು ಹೇಳಿಕೆ ನೀಡಿದ್ದಾರೆ.

ಸಂಸತ್ತಿನ ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ದಿ ವೈರ್ ಈ ಬಗ್ಗೆ ಸಂಪರ್ಕಿಸಿದಾಗ "ಸಂಸದೀಯ ಸಮಿತಿಯು ಈ ವಿಷಯದ ಬಗ್ಗೆ ಚರ್ಚಿಸಿಲ್ಲ. ಆದರೆ 4 ಜಿ ಲಭ್ಯವಿಲ್ಲದ ಅವಧಿಗೆ ಗ್ರಾಹಕರಿಗೆ ಪರಿಹಾರವನ್ನು ನೀಡಬೇಕು"ಎಂದು ಹೇಳಿದ್ದಾರೆ.

"ತಮ್ಮ ಗ್ರಾಹಕರಿಗೆ ಕಡಿಮೆ ವೆಚ್ಚದ 2 ಜಿ ಪ್ಯಾಕ್‌ಗಳನ್ನು ಪರಿಚಯಿಸಲು ಟೆಲಿಕಾಂ ಆಪರೇಟರ್‌ಗಳಿಗೆ ಸರ್ಕಾರ ನಿರ್ದೇಶನ ನೀಡಬೇಕಾಗಿತ್ತು ಮತ್ತು ಸರ್ಕಾರದ ಕ್ರಮದಿಂದಾಗಿ 4 ಜಿ ಲಭ್ಯವಿಲ್ಲದಿರುವ ಅವಧಿಗೆ ಆಪರೇಟರ್‌ಗಳು ಮರುಪಾವತಿಯನ್ನು ಕಡ್ಡಾಯಗೊಳಿಸಬೇಕು ಎಂದು ನಾನು ಭಾವಿಸುತ್ತೇನೆ. ಮತ್ತು ಅದು ನನ್ನ ವೈಯಕ್ತಿಕ ದೃಷ್ಟಿಕೋನ ”ಎಂದು ತರೂರ್ ಹೇಳಿದರು.

'ದಿ ವೈರ್' ಅವರು ಕಾಲಿಂಗ್ ಸೇವೆಗಾಗಿ ಗ್ರಾಹಕರು 4G ದರವನ್ನು ಪಾವತಿಸಬೇಕಾಗಿದ್ದ ಬಗ್ಗೆ ಮತ್ತು 2G ಸೇವೆಗಳಿಗೆ 4G‌ ದರವನ್ನು ಪಾವತಿಸಬೇಕಾಗಿದ್ದ ಬಗ್ಗೆ ಭಾರ್ತಿ ಏರ್‌ಟೆಲ್ ಮತ್ತು ರಿಲಯನ್ಸ್ ಜಿಯೋ ಕಂಪೆನಿಗಳ ಪ್ರತಿಕ್ರಿಯೆ ಕೇಳಿತ್ತು. ಆದರೆ ಎರಡೂ ಕಂಪೆನಿಗಳು ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ಕೊಟ್ಟಿಲ್ಲ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com