ರೈತ ಮಹಾಪಂಚಾಯತ್ ಗೆ ಕಾಗೋಡು ಚಳವಳಿಯ ಹಿರಿಯ ಜೀವಗಳ ಕರೆ ಏನು?

ಹೋರಾಟದ ನೆಲ ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್ ನಡೆಯುತ್ತಿರುವ ಈ ಹೊತ್ತಲ್ಲಿ ಉಳುವವನೇ ಹೊಲದೊಡೆಯ ಕೂಗಿನ ಮೂಲಕ ದೇಶವ್ಯಾಪಿ ಭೂ ಸುಧಾರಣೆಗೆ ನಾಂದಿ ಹಾಡಿದ ಕಾಗೋಡು ಚಳವಳಿಯ ಈ ಒಳದನಿಗಳು ಹೇಳುವುದೇನು?.. ಕೇಳಿ.
ರೈತ ಮಹಾಪಂಚಾಯತ್ ಗೆ ಕಾಗೋಡು ಚಳವಳಿಯ ಹಿರಿಯ ಜೀವಗಳ ಕರೆ ಏನು?

ನಾಳೆ, ಶನಿವಾರ ಶಿವಮೊಗ್ಗದಲ್ಲಿ ನಡೆಯಲಿರುವ ರೈತ ಮಹಾಪಂಚಾಯತ್ ಮೂಲಕ ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧದ ದೇಶವ್ಯಾಪಿ ಜನಾಂದೋಲನದ ದಕ್ಷಿಣಾಯನ ಆರಂಭವಾಗಲಿದೆ.

ಈಗಾಗಲೇ ಕಳೆದ ಎರಡು ತಿಂಗಳ ಅವಧಿಯಲ್ಲಿ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಅಭೂತಪೂರ್ವ ಜನಬೆಂಬಲದೊಂದಿಗೆ ರೈತ ಮಹಾ ಪಂಚಾಯತ್ ಗಳು ಪ್ರಧಾನಿ ಮೋದಿಯವರ ಆಡಳಿತಕ್ಕೆ ದೊಡ್ಡ ಬಿಕ್ಕಟ್ಟಾಗಿವೆ. ವಿವಾದಿತ ಕಾಯ್ದೆಗಳು ಮತ್ತು ಒಟ್ಟಾರೆ ಕೃಷಿ ಕುರಿತ ವಿವಿಧ ಸರ್ಕಾರಗಳ ನೀತಿ-ನಿಲುವುಗಳ ಬಗ್ಗೆ ಜನಜಾಗೃತಿಯ ದಕ್ಷಿಣಭಾರತದ ಸರಣಿ ಸಮಾವೇಶಗಳಿಗೆ ಶಿವಮೊಗ್ಗದ ಮಹಾಪಂಚಾಯತ್ ನಾಂದಿ ಹಾಡಲಿದೆ. ದೆಹಲಿಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಸರ್ಕಾರದ ಸರ್ವ ರೀತಿಯ ದಮನ ಕ್ರಮಗಳ ಹೊರತಾಗಿಯೂ ನಿರಂತರವಾಗಿ ಮುಂದುವರಿದಿರುವ ಆಹೋರಾತ್ರಿ ಹೋರಾಟದ ನಾಯಕರಾದ ರಾಕೇಶ್ ಟಿಕಾಯತ್, ದರ್ಶನ್ ಪಾಲ್ ಮತ್ತು ಯಧುವೀರ್ ಸಿಂಗ್ ಸೇರಿದಂತೆ ಹಲವು ಪ್ರಮುಖರು ದಕ್ಷಿಣ ಭಾರತದ ಈ ಮೊಟ್ಟಮೊದಲ ರೈತ ಮಹಾಪಂಚಾಯತ್ ನಲ್ಲಿ ಭಾಗವಹಿಸಲಿದ್ದಾರೆ.

ರಾಷ್ಟ್ರಮಟ್ಟದ ವಿವಿಧ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ಮಟ್ಟದ ವಿವಿಧ ಸಂಘಟನೆಗಳ ಒಕ್ಕೂಟ ಐಕ್ಯ ಹೋರಾಟ ಸಮಿತಿ ಮತ್ತು ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಹಾಗೂ ಬಿಜೆಪಿಯೇತರ ರಾಜಕೀಯ ಸಂಘಟನೆಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಮಹಾ ಸಮಾವೇಶ, ದಶಕಗಳ ಬಳಿಕ ಮಲೆನಾಡಿನಲ್ಲಿ ದೊಡ್ಡ ಇತಿಹಾಸ ಸೃಷ್ಟಿಸಲಿದೆ ಎಂಬ ನಿರೀಕ್ಷೆ ಸಂಘಟಕರದ್ದು. ಮುಖ್ಯವಾಗಿ ಕರ್ನಾಟಕದ ಮಟ್ಟಿಗೆ ಸಂಘಟನೆಗಳ ಆಂತರಿಕ ಒಡಕು, ಒಳಜಗಳಿಂದಾಗಿ ದಶಕಗಳಿಂದ ಹರಿದುಹಂಚಿಹೋಗಿರುವ ರೈತ ಶಕ್ತಿಯನ್ನು ಮತ್ತೆ ಸಾಮಾಜಿಕ ಮತ್ತು ರಾಜಕೀಯ ಪ್ರಬಲ ಶಕ್ತಿಯಾಗಿ ಪುನರ್ ಕಟ್ಟಲು ಈ ಮಹಾ ಪಂಚಾಯತ್ ಒಂದು ವೇದಿಕೆಯಾಗಲಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆ ಹಿನ್ನೆಲೆಯಲ್ಲೇ ಕಾಗೋಡು ಚಳವಳಿಯಂತಹ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ ರಕ್ತ ರಹಿತ ರೈತ ಕ್ರಾಂತಿಯ ನೆಲೆ ಶಿವಮೊಗ್ಗದಲ್ಲಿ ನಡೆಯುತ್ತಿರುವ ಈ ಮಹಾ ರೈತ ಪಂಚಾಯತ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಹಾಗಾಗಿ ಸಹಜವಾಗೇ ರೈತ ಪಂಚಾಯತ್ ನೆಪದಲ್ಲಿ ಏಳು ದಶಕಗಳ ಹಿಂದೆ, 1950-52ರ ಕಾಗೋಡು ಸತ್ಯಾಗ್ರಹದ ನೆನಪುಗಳು ಜನಮಾನಸದಲ್ಲಿ ಮತ್ತೆ ಬಿಚ್ಚಿಕೊಳ್ಳತೊಡಗಿವೆ. ಸಾಮಾಜಿಕ ಜಾಲತಾಣಗಳಲ್ಲಿ, ಜನಸಾಮಾನ್ಯರ ಮಾತುಕತೆಗಳಲ್ಲಿ ಪ್ರಸ್ತಾಪವಾಗುತ್ತಿರುವ ಮತ್ತು ಕರ್ನಾಟಕವಷ್ಟೇ ಅಲ್ಲದೆ, ದೇಶವ್ಯಾಪಿ ಉಳುವವನೇ ಹೊಲದೊಡೆಯ ಎಂಬ ಘೋಷಣೆಯ ಮೂಲಕ ಕ್ರಾಂತಿಕಾರಕ ಭೂ ಸುಧಾರಣೆ ಕಾಯ್ದೆ ಜಾರಿಗೆ ಕಾರಣವಾದ ಮಲೆನಾಡಿನ ಗೇಣಿ ರೈತರ ಹೋರಾಟದ ಕುರಿತು ಹೋರಾಟದ ಮೂಲ ರೂವಾರಿ ದಿವಂಗತ ಹೆಚ್ ಗಣ‌ಪತಿಯಪ್ಪ ಅವರ ಪತ್ನಿ ಮಂಜಮ್ಮ ಗಣಪತಿಯಪ್ಪ ಮತ್ತು ಹೋರಾಟದಲ್ಲಿ ಕಿರಿಯ ಸಂಗಾತಿಯಾಗಿ ಪ್ರತಿರೋಧದ ಚಾಟಿ ಬೀಸಿದ ದೊಡ್ಡೇರಿ ಈರಪ್ಪ ಅವರನ್ನು ಪ್ರತಿಧ್ವನಿ ಮಾತನಾಡಿಸಿದೆ.

ಹಿರೇನೆಲ್ಲೂರು ಗ್ರಾಮದ ಈಶ್ವರ ದೇವಸ್ತಾನದ ಪುನರ್ ಪ್ರತಿಷ್ಠಾಪನೆ ಮಹೋತ್ಸವದ ಆಹ್ವಾನ ಪತ್ರಿಕೆಯ ವಿವಾದದೊಂದಿಗೆ ಆರಂಭವಾಗುವ ಭೂ ಮಾಲೀಕರು ಮತ್ತು ಗೇಣಿದಾರರ ನಡುವಿನ ಸಂಘರ್ಷದಿಂದ ಆರಂಭವಾಗಿ ಭೂ ನ್ಯಾಯ ಮಂಡಳಿಯ ಮೂಲಕ ಉಳುವವರಿಗೆ ಭೂಮಿಯ ಒಡೆತನದ ಹಕ್ಕು ನೀಡುವವರೆಗಿನ ಹೋರಾಟದ ಪ್ರತಿ ಹಂತದಲ್ಲೂ ನೇತಾರ ಗಣಪತಿಯಪ್ಪನವರೊಂದಿಗೆ ಅವರ ಪ್ರತಿ ಏಳು-ಬೀಳಿನ ಸಹಭಾಗಿಯಾಗಿದ್ದ ಎಂಭತ್ತೈದು ವಯೋಮಾನದ ಮಂಜಮ್ಮ ಅವರ ಮಾತುಗಳು, ಸ್ಥಾಪಿತ ವ್ಯವಸ್ಥೆಯೊಂದರ ವಿರುದ್ಧ ಸಿಡಿದೆದ್ದು ಮುಗ್ಧ ಮತ್ತು ಹುಂಬ ಜನರನ್ನೇ ಕಟ್ಟಿಕೊಂಡು ಒಂದು ಐತಿಹಾಸಿಕ ಚಳವಳಿ ಕಟ್ಟಿದ ನೇತಾರನ ಹೋರಾಟದ ಹಾದಿಯ ಕುರಿತ ಆಸಕ್ತಿಕರ ಮಾಹಿತಿ ನೀಡುತ್ತವೆ.

ಹಾಗೇ ಹಿರಿಯರ ಹೋರಾಟ ಕಾವೇರಿದ ಹೊತ್ತಲ್ಲಿ ಹೈಸ್ಕೂಲು ಹುಡುಗನಾಗಿದ್ದರೂ, ಉಮೇದಿನಿಂದ ಭೂ ಮಾಲೀಕರ ಜಮೀನಿಗೆ ನುಗ್ಗಿ ಬೇಸಾಯ ಹೊಡೆಯಲು ಮುಂದಾಗುವ ಮೂಲಕ ಗೇಣಿದಾರನ ಮಗನಾಗಿ ತಾನು ಉಳುವ ಭೂಮಿಯ ಹಕ್ಕು ಮಂಡಿಸಿ, ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲಿಗೆ ಹೋಗಿ ಬಂದ 90 ರ ವಯೋವೃದ್ಧ ಈರಪ್ಪರ ಮಾತುಗಳಲ್ಲಿ ಇಂದಿಗೂ ಕೆಚ್ಚು ಕಾಣದೇ ಇರದು.

ಬಡ ಗೇಣಿದಾರರಿಗೆ ಭೂಮಿಯ ಹಕ್ಕು ಕೊಡಿಸುವ ಮೂಲಕ ಸ್ವಾಭಿಮಾನದ ಬದುಕು ಕೊಟ್ಟ ಕಾಗೋಡು ಹೋರಾಟಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ವ್ಯವಸ್ಥೆ ಮತ್ತೆ ಹಿಮ್ಮುಖ ಚಲನೆ ಆರಂಭಿಸಿರುವ ಹೊತ್ತಿನಲ್ಲಿ, ಬಡವರ ಭೂಮಿ ಮತ್ತು ಕೃಷಿ ರಂಗವನ್ನು ಬೃಹತ್ ಉದ್ಯಮಿ, ಕಾರ್ಪೊರೇಟ್ ಕುಳಗಳೆಂಬ ಆಧುನಿಕ ಭೂಮಾಲೀಕರ ಕೈಗೆ ಒಪ್ಪಿಸಲು ಸರ್ಕಾರಗಳೇ ಮುಂದಾಗಿರುವುದನ್ನು ಕೇಳಿ ಈ ಇಬ್ಬರೂ ಹಿರಿಯ ಜೀವಗಳು ಸಂಕಟ ಮತ್ತು ಆಕ್ರೋಶವನ್ನೂ ವ್ಯಕ್ತಪಡಿಸಿವೆ. ಜೊತೆಗೆ, ಇಂತಹ ರೈತ ವಿರೋಧಿ ನೀತಿ- ನಿಲುವನ್ನು ಪ್ರಬಲವಾಗಿ ವಿರೋಧಿಸುವಂತೆ, ತಮ್ಮವರು ಜೀವ ಪಣಕ್ಕಿಟ್ಟು ಗಳಿಸಿಕೊಟ್ಟ ಭೂಮಿಯ ಹಕ್ಕು ಉಳಿಸಿಕೊಳ್ಳಲು ಮಹಾ ಪಂಚಾಯತ್ ಮೂಲಕ ದನಿ ಎತ್ತುವಂತೆ ಹೊಸ ತಲೆಮಾರಿಗೆ ಕರೆಯನ್ನೂ ಕೊಟ್ಟಿದ್ದಾರೆ..

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com