ಗುಜರಾತ್‌: ನಾಲ್ಕು ವರ್ಷಗಳಲ್ಲಿ 302 ಜನರ ಕಸ್ಟಡಿಯಲ್‌ ಸಾವು

ಯಾವ ಪ್ರಕರಣಗಳಲ್ಲಿ ಪೊಲೀಸರ ತಪ್ಪು ಕಂಡುಬಂದಿದೆಯೋ, ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಗುಜರಾತ್‌ ಡಿಜಿಪಿ ಆಶೀಷ್‌ ಭಾಟಿಯಾ ಅವರು ಹೇಳಿದ್ದಾರೆ.
ಗುಜರಾತ್‌: ನಾಲ್ಕು ವರ್ಷಗಳಲ್ಲಿ 302 ಜನರ ಕಸ್ಟಡಿಯಲ್‌ ಸಾವು

2014ರ ಲೋಕಸಭೆ ಚುನಾವಣೆಯ ವೇಳೆ ದೇಶಕ್ಕೇ ʼಮಾದರಿʼ ಎಂದು ಬಿಂಬಿಸಲಾಗಿದ್ದ ಗುಜರಾತ್‌ನ ಕರಾಳ ಮುಖವೊಂದು ಬಯಲಾಗಿದೆ. 2017ರಿಂದ 2020ರ ವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ 302 ಜನರು ಪೊಲೀಸ್‌ ಕಸ್ಟಡಿ ಅಥವಾ ನ್ಯಾಯಾಂಗ ಬಂಧನದಲ್ಲಿ ಮೃತಪಟ್ಟಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಗೃಹ ಸಚಿವಾಲಯವು ಈ ಮಾಹಿತಿಯನ್ನು ನೀಡಿದೆ. ಏಪ್ರಿಲ್‌ 1, 2020 ರಿಂದ ಮಾರ್ಚ್‌ 31, 2021ರವರೆಗೆ (ಕಳೆದ ಮಂಗಳವಾರದ ವರೆಗಿನ ದತ್ತಾಂಶಗಳ ಪ್ರಕಾರ) ಗುಜರಾತ್‌ನಲ್ಲಿ 15 ಲಾಕ್‌ಅಪ್‌ ಸಾವುಗಳಾಗಿವೆ. ಇದರೊಂದಿಗೆ, 78 ಜನರು ನ್ಯಾಯಾಂಗ ಬಂಧನ ಅಥವಾ ಪೊಲೀಸ್‌ ಕಸ್ಟಡಿಯಲ್ಲಿ ಇರುವಾಗ ಸಾವನ್ನಪ್ಪಿದ್ದಾರೆಂದು ವರದಿ ತಿಳಿಸಿದೆ.

2017-18ರ ವರೆಗೆ 64 ಸಾವುಗಳು, 2018-19ರಲ್ಲಿ 80 ಸಾವುಗಳು, 2019-20ರಲ್ಲಿ 65 ಸಾವುಗಳು ಮತ್ತು 2020-21ರಲ್ಲಿ 93 ಸಾವುಗಳು ಪೊಲೀಸ್‌ ಕಸ್ಟಡಿ ಅಥವಾ ನ್ಯಾಯಾಂಗ ಬಂಧನದಲ್ಲಿ ನಡೆದಿವೆ. ಒಟ್ಟು 302 ವಿಚಾರಣಾಧೀನ ಕೈದಿಗಳು ಹಾಗೂ ಇನ್ನೂ ಪೊಲೀಸ್‌ ವಶದಲ್ಲಿದ್ದ ವ್ಯಕ್ತಿಗಳು ನಾಲ್ಕು ವರ್ಷದ ಅವಧಿಯಲ್ಲಿ ಮೃತಪಟ್ಟಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇವರಲ್ಲಿ ಪೊಲೀಸ್‌ ಕಸ್ಟಡಿಯಲ್ಲಿದ್ದು ಮೃತಪಟ್ಟ 20 ಜನ ಖೈದಿಗಳ ಕುಟುಂಬಕ್ಕೆ ಒಟ್ಟು ರೂ. 48.49 ಲಕ್ಷ ಪರಿಹಾರವನ್ನು ನೀಡಲಾಗಿದೆ. ನ್ಯಾಯಾಂಗ ಬಂಧನದಲ್ಲಿದ್ದು ಮೃತಪಟ್ಟ 13 ಜನರ ಕುಟುಂಬಗಳಿಗೆ ರೂ. 31 ಲಕ್ಷ ಪರಿಹಾರವಾಗಿ ನೀಡಲಾಗಿದೆ.

ಇನ್ನು ಇದೇ ಪ್ರಶ್ನೆಯನ್ನು ಗುಜರಾತ್‌ ವಿಧಾನಸಭೆಯಲ್ಲಿಯೂ ಕೇಳಲಾಗಿದ್ದು, 2019-20ರ ವರೆಗಿನ ಎರಡು ವರ್ಷಗಳ ಅವಧಿಯಲ್ಲಿ ಒಬ್ಬ ವ್ಯಕ್ತಿಯ ಕುಟುಂಬಕ್ಕಷ್ಟೇ ರೂ. 2.50 ಲಕ್ಷ ಪರಿಹಾರ ನೀಡಲಾಗಿದೆ. ಉಳಿದವರಿಗೆ ನೀಡುವ ಅಗತ್ಯವಿಲ್ಲ, ಎಂಬ ಉತ್ತವನ್ನು ಗುಜರಾತ್‌ ರಾಜ್ಯದ ಗೃಹ ಸಚಿವರಾದ ಪ್ರದೀಪ್‌ ಸಿಂಗ್‌ ಜಡೇಜಾ ಅವರು ನೀಡಿದ್ದಾರೆ.

ಈ ಸಾವುಗಳ ಕುರಿತು ತನಿಖೆಯನ್ನು ಕೂಡಾ ನಡೆಸಲಾಗಿದ್ದು, 3 ಇನ್ಸ್‌ಪೆಕ್ಟರ್‌, 5 ಸಬ್‌-ಇನ್ಸ್‌ಪೆಕ್ಟರ್‌, 19 ಕಾನ್ಸ್ಟೇಬಲ್‌ ಮತ್ತು ಇತರ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಡೇಜಾ ಅವರು ವಿಧಾನಸಭೆಯಲ್ಲಿ ಉತ್ತರಿಸಿದ್ದಾರೆ.

ಈ ಕುರಿತಾಗಿ ಟೈಮ್ಸ್‌ ಆಫ್‌ ಇಂಡಿಯಾಗೆ ಹೇಳಿಕೆ ನೀಡಿರುವ ಗುಜರಾತ್‌ ಡಿಜಿಪಿ ಆಶೀಷ್‌ ಭಾಟಿಯಾ ಅವರು, ಎಲ್ಲಾ ಸಾವುಗಳು ಪೊಲೀಸರ ಹಿಂಸೆಯಿಂದ ನಡೆದಿದ್ದಲ್ಲ. ಕಾಯಿಲೆಯಿಂದ ಬಳಲುತ್ತಿರುವ ಕೆಲವರು ಸಾವನ್ನಪ್ಪಿದ್ದಾರೆ. ಕೆಲವರು ತಾವೇ ಗಾಯ ಮಾಡಿಕೊಂಡವರೂ ಮೃತಪಟ್ಟಿದ್ದಾರೆ. ಯಾವ ಪ್ರಕರಣಗಳಲ್ಲಿ ಪೊಲೀಸರ ತಪ್ಪು ಕಂಡುಬಂದಿದೆಯೋ, ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com