ಹೊಸದಾಗಿ ನೇಮಕಗೊಂಡ ಉತ್ತರಾಖಂಡ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಮಂಗಳವಾರ ಹರಿದ (ripped jeans) ಜೀನ್ಸ್ ಧರಿಸಿದ ಮಹಿಳೆಯರು ಮಕ್ಕಳಿಗೆ ಕೆಟ್ಟ ಮಾದರಿಯನ್ನು ಕಲಿಸುತ್ತಾರೆ ಎಂದು ಹೇಳಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಡೆಹ್ರಾಡೂನ್ನಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡುವಾಗ ರಾವತ್ ವಿಮಾನದಲ್ಲಿ ಭೇಟಿಯಾದ ಮಹಿಳೆಯೊಂದಿಗಿನ ಸಂಭಾಷಣೆಯನ್ನು ವಿವರಿಸಿ, ಇಬ್ಬರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ವಿಮಾನದಲ್ಲಿ ನನ್ನ ಪಕ್ಕದಲ್ಲಿ ಕುಳಿತಿದ್ದರು, ಹಾಗಾಗಿ ನಾನು ಅವಳೊಂದಿಗೆ ಮಾತನಾಡಿದೆ ಎಂದು ಎಎನ್ಐ ಟ್ವೀಟ್ ಮಾಡಿದ ವೀಡಿಯೊವೊಂದರಲ್ಲಿ ರಾವತ್ ಹೇಳಿದ್ದಾರೆ. "ಅವರು ಗಮ್ ಬೂಟುಗಳನ್ನು ಧರಿಸಿದ್ದರು ಮತ್ತು ಅವರ ಜೀನ್ಸ್ ಮೊಣಕಾಲುಗಳಲ್ಲಿ ಹರಿದುಹೋಗಿತ್ತು" ಎಂದಿದ್ದಾರೆ.
"ಅವರು ಎನ್ಜಿಒ ನಡೆಸುತ್ತಿದ್ದಾರೆ, ಅವರ ಮೊಣಕಾಲುಗಳು ಗೋಚರಿಸುತ್ತವೆ, ಅದೇ ಸ್ಥಿತಿಯಲ್ಲಿ ಅವರು ಸಮಾಜದಲ್ಲಿ ತಿರುಗಾಡುತ್ತಾರೆ ಮತ್ತು ಮಕ್ಕಳು ಅವರೊಂದಿಗೆ ಇದ್ದಾರೆ. ಅಂತವರು (ಮಕ್ಕಳಿಗೆ)ಯಾವ ಮೌಲ್ಯಗಳನ್ನು ನೀಡಲು ಸಾಧ್ಯ? ” ಎಂದೂ ಅವರು ಪ್ರಶ್ನಿಸುತ್ತಾರೆ.
ಮಕ್ಕಳು ಮನೆಯಲ್ಲೇ ಕೆಟ್ಟ ವಿಚಾರಗಳನ್ನು ಕಲಿತುಕೊಳ್ಳುತ್ತಾರೆ ಎಂದು ರಾವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಮನೆಯಲ್ಲಿ ಸರಿಯಾದ ಸಂಸ್ಕೃತಿಯನ್ನು ಕಲಿಯುವ ಮಗು, ಅವನು ಎಷ್ಟೇ ಆಧುನಿಕನಾಗಿದ್ದರೂ, ಜೀವನದಲ್ಲಿ ಎಂದಿಗೂ ವಿಫಲವಾಗುವುದಿಲ್ಲ" ಎಂದು ರಾವತ್ ಹೇಳಿದ್ದಾರೆ. ಯೋಗದ ಮೂಲಕ, ದೇಹವನ್ನು ಸಂಪೂರ್ಣ ಮುಚ್ಚಿಕೊಳ್ಳುವ ಮೂಲಕ ಪಾಶ್ಚಿಮಾತ್ಯ ಜಗತ್ತು ನಮ್ಮನ್ನು ಅನುಸರಿಸುತ್ತಿದೆ ಆದರೆ ನಾವು ನಗ್ನತೆಯೆಡೆಗೆ ಓಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ಉತ್ತರಾಖಂಡದ ಮತ್ತೋರ್ವ ಸಚಿವ ಗಣೇಶ್ ಜೋಶಿ "ಮಹಿಳೆಯರು ಜೀವನದಲ್ಲಿ ಅವರು ಮಾಡಲು ಬಯಸುವ ಎಲ್ಲ ವಿಷಯಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಅವರಿಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಅವರ ಕುಟುಂಬ ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ”ಎಂದು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಉತ್ತರಾಖಂಡ ಮುಖ್ಯಮಂತ್ರಿಯವರ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. "ಸಮಾಜಕ್ಕೆ ಸಂದೇಶ: ರಿಪ್ಡ್ ಜೀನ್ಸ್ಗಳು ಮತ್ತು ಕೂಲ್ ಮತ್ತು ಟ್ರೆಂಡಿ ಆಗಿವೆ" ಎಂದು ಪತ್ರಕರ್ತ ಆದಿತ್ಯ ರಾಜ್ ಕೌಲ್ ಟ್ವೀಟ್ ಮಾಡಿದ್ದಾರೆ.
ಮಹಿಳೆ ಸ್ವತಂತ್ರವಾಗಿ ಇರಲಾರಳು ಎನ್ನುವ ಭಾವನೆ ಒಂದು ರಾಜ್ಯದ ಮುಖ್ಯಮಂತ್ರಿಯಂತಹ ಉನ್ನತಮಟ್ಟದ ಸ್ಥಾನ ಅಲಂಕರಿಸಿರುವಂತಹ ವ್ಯಕ್ತಿಯಲ್ಲಿ ಇರುವುದು ಭಾರತದಲ್ಲಿ ಇನ್ನೂ ಅಂತರ್ಗತವಾಗಿರುವ ಪುರುಷ ಪ್ರಧಾನ ಮನಸ್ಥಿತಿ ಸೂಚಿಸುತ್ತದೆ. ಸ್ವತಂತ್ರವಾಗಿ ಎನ್.ಜಿ.ಒ ಒಂದನ್ನು ನಡೆಸುವ ಮಹಿಳೆ ತಾನು ಉಡುವ ಬಟ್ಟೆಗಾಗಿ ಟೀಕೆಗೊಳಗಾಗುತ್ತಾಳೆ ಎಂದರೆ ಅದು ವೈಚಾರಿಕವಾಗಿ, ವೈಜ್ಞಾನಿಕವಾಗಿ ಇಷ್ಟೊಂದು ಮುಂದುವರಿದಿರುವ ಇಪ್ಪತ್ತೊಂದನೇ ಶತಮಾನದ ವ್ಯಂಗ್ಯ. ಸಮಾಜವನ್ನು ಹರಿದು ತನ್ನ ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುವ ರಾಜಕಾರಣಿಗಳ ಮಧ್ಯೆ ಹರಿದ ಜೀನ್ಸ್ ಧರಿಸಿ ಸಮಾಜವನ್ನು ಹೊಲಿಯಲು ಯತ್ನಿಸುವ ಆ ಮಹಿಳೆಯಂತವರು ಗ್ರೇಟ್ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.