ವಾಹನ ಗುಜರಿ ನೀತಿಯಿಂದ ಎಲ್ಲರಿಗೂ ಲಾಭ – ನಿತಿನ್‌ ಗಡ್ಕರಿ

ಆಟೋಮೊಬೈಲ್‌ ಕ್ಷೇತ್ರದ ವಹಿವಾಟು ವಾರ್ಷಿಕ 4.5 ಲಕ್ಷ ಕೋಟಿ ರೂ. ನಿಂದ 10 ಲಕ್ಷ ಕೋಟಿ ರೂ. ವರೆಗೆ ಏರಲಿದೆ, ಎಂದು ಗಡ್ಕರಿ ಹೇಳಿದ್ದಾರೆ.
ವಾಹನ ಗುಜರಿ ನೀತಿಯಿಂದ ಎಲ್ಲರಿಗೂ ಲಾಭ – ನಿತಿನ್‌ ಗಡ್ಕರಿ

ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಇಂದು ಲೋಕಸಭೆಯಲ್ಲಿ ವಾಹನ ಗುಜರಿ ನೀತಿಯ ಪ್ರಸ್ತಾವಣೆಯನ್ನು ಇಟ್ಟಿದ್ದಾರೆ. ಈ ನೀತಿಯಿಂದಾಗಿ ಎಲ್ಲರಿಗೂ ಲಾಭವೇ ಹೆಚ್ಚು. ಇಂಧನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಜೊತೆಗೆ ಪರಿಸರ ಮಾಲಿನ್ಯವನ್ನೂ ತಡೆಗಟ್ಟಬಹುದು ಎಂದು ಅವರು ಹೇಳಿದ್ದಾರೆ.

“ಹಳೆಯ ಮತ್ತು ದೋಷಯುಕ್ತ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ, ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ತಗ್ಗಿಸುವುದು ಮತ್ತು ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದು ಈ ನೀತಿಯ ಗುರಿಯಾಗಿದೆ. ಇದರಿಂದಾಗಿ ಇಂಧನ ಕಾರ್ಯಕ್ಷಮತೆಯೂ ಹೆಚ್ಚುವುದು. ಅಷ್ಟು ಮಾತ್ರವಲ್ಲದೇ, ಆಟೊಮೊಬೈಲ್‌ ಕ್ಷೇತ್ರಕ್ಕೆ ಬೇಕಾಗುವ ಕಚ್ಚಾ ವಸ್ತುಗಳ ಲಭ್ಯತೆಯೂ ಸುಲಭದಲ್ಲಿ ಆಗಲಿದೆ,” ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಾಹನಗಳನ್ನು ಗುಜರಿಗೆ ನೀಡುವ ವಾಹನ ಮಾಲಿಕರಿಗೆ ಹೊಸ ಕಾರಿನ ಮೂಲ ಬೆಲೆಯ 4-6 ಶೇಕದಷ್ಟು ಮೊತ್ತ ಸಿಗಲಿದೆ. ಈ ನೀತಿಯಡಿಯಲ್ಲಿ ಕೊಳ್ಳುವ ಹೊಸ ವಾಹನಗಳಿಗೆ ರಾಜ್ಯ ಸರ್ಕಾರಗಳು ರಸ್ತೆ ತೆರಿಗೆಯ ಮೇಲೆ ಶೇ. 25 (ಖಾಸಗಿ ವಾಹನ) ಮತ್ತು ಶೇ. 15 (ವಾಣಿಜ್ಯ ವಾಹನ) ವಿನಾಯತಿ ನೀಡಲಿವೆ, ಎಂದು ಈ ಹೊಸ ನೀತಿಯು ಹೇಳುತ್ತದೆ.

ಇನ್ನು, ಹಳೇಯ ಗಾಡಿಯನ್ನು ಗುಜರಿಗೆ ನೀಡಿರುವ ಪ್ರಮಾಣ ಪತ್ರ ನೀಡಿದ್ದಲ್ಲಿ, ವಾಹನ ನೋಂದಣಿಯ ಶುಲ್ಕದಲ್ಲಿಯೂ ವಿನಾಯತಿ ಪಡೆಯಬಹುದು.

ಈ ಅಂಶಗಳನ್ನು ಮುಂದಿಟ್ಟುಕೊಂಡು ನಿತಿನ್‌ ಗಡ್ಕರಿ ಅವರು, ಈ ನೀತಿಯಿಂದಾಗಿ ಎಲ್ಲರಿಗೂ ಲಾಭವಾಗಲಿದೆ. ಜನರು ಹೊಸ ಗಾಡಿಯನ್ನು ಖರೀದಿಸಲು ಮುಂದೆ ಬರುವುದರಿಂದ ಜಿಎಸ್‌ಟಿ ಗಳಿಕೆಯೂ ಹೆಚ್ಚಾಗಲಿದೆ. ಆಟೋಮೊಬೈಲ್‌ ಕ್ಷೇತ್ರದ ವಹಿವಾಟು ವಾರ್ಷಿಕ 4.5 ಲಕ್ಷ ಕೋಟಿ ರೂ. ನಿಂದ 10 ಲಕ್ಷ ಕೋಟಿ ರೂ. ವರೆಗೆ ಏರಲಿದೆ, ಎಂದು ಗಡ್ಕರಿ ಹೇಳಿದ್ದಾರೆ.

ವಾಹನ ಗುಜರಿ ನೀತಿಯ ಪ್ರಮುಖಾಂಶಗಳು:

1. ನೋಂದಣಿ ಪ್ರಮಾಣ ಪತ್ರ ಹಾಗೂ ಫಿಟ್ನೆಸ್‌ ಪ್ರಮಾಣಪತ್ರದ ಶುಲ್ಕ ಹೆಚ್ಚಳವಾಗುತ್ತದೆ. ಈ ಎರಡೂ ಪ್ರಮಾಣ ಪತ್ರವನ್ನು ಪಡೆಯುವುದು ವಿಳಂಬವಾದಲ್ಲಿ ಹೆಚ್ಚುವರಿ ಶುಲ್ಕವನ್ನು ದಂಡದ ರೂಪದಲ್ಲಿ ಕಟ್ಟಬೇಕಾಗುತ್ತದೆ.

2. ಹಳೆಯ ವಾಹನಗಳಿಗೆ ಹೆಚ್ಚುವರಿ ʼಹಸಿರು ತೆರಿಗೆʼಯನ್ನು ವಿಧಿಸಲು ರಾಜ್ಯಗಳಿಗೆ ಅನುಮತಿಯಿದೆ.

3. ಫಿಟ್ನೆಸ್‌ ಟೆಸ್ಟ್‌ ಕಡ್ಡಾಯ. ಒಂದು ವೇಳೆ ಪರೀಕ್ಷೆ ಮಾಡಿಸದಿದ್ದಲ್ಲಿ, ಅಂತಹ ವಾಹನಗಳ ನೋಂದಣಿಯನ್ನು ಅನೂರ್ಜಿತಗೊಳಿಸಲಾಗುತ್ತದೆ.

4. ಗುಜರಿಗೆ ಹಾಕಲಾದ ವಾಹನಗಳ ಬದಲಿಗೆ ಹೊಸ ವಾಹನ ಕೊಂಡುಕೊಳ್ಳುವವರಿಗೆ ವಾಹನದ ಉತ್ಪಾದಕ ಕಂಪೆನಿಯವರು ಶೇ. 5ರಷ್ಟು ರಿಯಾಯಿತಿ ನೀಡಬಹುದು.

5. ಗುಜರಿಗೆ ಹಾಕಲಾಗುವ ವಾಹನಗಳ ನೋಂದಣಿ ಹಾಗೂ ಅದರ ಮಾಲಕತ್ವದ ಪರಿಶೀಲನೆಯನ್ನು VAHAN ತಂತ್ರಾಂಶದಲ್ಲಿನ ದತ್ತಾಂಶವನ್ನು ಬಳಸಿ ತಾಳೆ ನೋಡಲಾಗುತ್ತದೆ.

6. ಕದಿಯಲಾದ ವಾಹನಗಳನ್ನು ಗುಜರಿಗೆ ಹಾಕಲು ಅವಕಾಶವಿರುವುದಿಲ್ಲ

7. ಸಹಜವಾಗಿ ಗುಜರಿಗೆ ಹೋಗುವ ವಾಹನಗಳು: 15 ವರ್ಷಕ್ಕೂ ಮೇಲ್ಪಟ್ಟ ಸರ್ಕಾರಿ ಹಾಗೂ ಅರೆ ಸರ್ಕಾರಿ ವಾಹನಗಳು, ಬೆಂಕಿ ಅಪಘಾತ, ದೊಂಬಿ, ಗಲಭೆ ಮತ್ತು ಯಾವುದೇ ಅನಾಹುತಕಾರಿ ಘಟನೆಗೆ ಸಿಲುಕಿದ ವಾಹನಗಳು, ಉತ್ಪಾದಕರು ದೋಷಪೂರಿತ ಎಂದು ಗುರುತಿಸಿದ ವಾಹನಗಳು ಮತ್ತು ಜಾರಿ ಇಲಾಖೆಗಳು ವಶಪಡಿಸಿಕೊಂಡ ವಾಹನಗಳು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com