ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ತಂದೆಯ ಸ್ಪರ್ಧೆಯನ್ನು ತಡೆಯಲು ಆತನ 16 ವರ್ಷ ಪ್ರಾಯದ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಅಮಾನುಷ ಘಟನೆ ಉತ್ತರಪ್ರದೇಶದ ಬಾರಬಂಕಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ಅತ್ಯಾಚಾರಕ್ಕೊಳಗಾದ ಹುಡುಗಿ ಶಾಲೆಯಿಂದ ಹಿಂತಿರುಗುವ ವೇಳೆ ಈ ಘಟನೆ ನಡೆದಿದೆ. ಬಳಿಕ ಅವರು ಆಕೆಯನ್ನು ಆಕೆಯ ನಿವಾಸದ ಸಮೀಪ ರಸ್ತೆಯಲ್ಲಿ ಎಸೆದು ಹೋಗಿದ್ದರು ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ತಿಳಿಸಿದೆ.
ಸಂತ್ರಸ್ತೆ ಶಾಲೆಯಿಂದ ಹಿಂತಿರುಗುತ್ತಿದ್ದ ವೇಳೆ ಅಡ್ಡಗಟ್ಟಿದ ಆರೋಪಿಗಳು, ಆಕೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ತಪಾಸನೆಗೆ ಒಳಪಡಿಸಿದ್ದು, ಆಕೆಯ ತಂದೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಎಎಸ್ಪಿ ಮನೋಜ್ ಪಾಂಡೆ ತಿಳಿಸಿದ್ದಾರೆ.
ಆಕೆ ತಂದೆ ಗ್ರಾಮ ಪ್ರಧಾನ್ (ಗ್ರಾಮ ಮುಖ್ಯಸ್ಥ) ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಅತ್ಯಾಚಾರ ಆರೋಪಿಗಳು, ಆತನನ್ನು ನಾಮಪತ್ರ ಹಿಂಪಡೆಯುವಂತೆ ಒತ್ತಡ ನೀಡಿದ್ದರು. ಹಣದ ಆಮಿಷ ಒಡ್ಡಿಯೂ ಆತ ನಾಮಪತ್ರ ಹಿಂಪಡೆಯಲು ಒಪ್ಪದಿದ್ದಾಗ ಆತನ ಮಗಳ ಮೇಲೆ ಹಗೆ ತೀರಿಸಲಾಗಿದೆ ಎಂದು ಆಕೆಯ ತಂದೆ ಆರೋಪಿಸಿದ್ದಾರೆ.
ನಾನು ಚುನಾವಣೆಯಿಂದ ಹಿಂದೆ ಸರಿಯುವಂತೆ ಸಾಕಷ್ಟು ಒತ್ತಡ ತಂದಿದ್ದರು. ನಾನು ನಿರಾಕರಿಸಿದಾಗ ಹಣದ ಆಮಿಷವನ್ನೂ ಒಡ್ಡಿದ್ದರು. ಆದರೂ, ನಾನು ಹಿಂದೆ ಸರಿಯಲು ಒಪ್ಪಿರಲಿಲ್ಲ ಎಂದು ಸಂತ್ರಸ್ತೆಯ ತಂದೆ ತಿಳಿಸಿದ್ದಾರೆ.
ಆರೋಪಿಗಳಾದ ಆಕಾಶ್ ವರ್ಮಾ, ಲಾಲ್ಜಿ ವರ್ಮಾ, ಸಚಿನ್ ವರ್ಮಾ ಹಾಗೂ ಶಿವಂ ವರ್ಮಾ ಪ್ರಕರಣ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದಾರೆ.