ಪಶ್ಚಿಮ ಬಂಗಾಳ: ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿಯೊಳಗೆ ಭುಗಿಲೆದ್ದ ಭಿನ್ನಮತ

ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಕಳೆದ ವಾರ ಬಿಡುಗಡೆ ಮಾಡಿದ ನಂತರ, ಬಂಗಾಳದ ಅನೇಕ ಬಿಜೆಪಿ ನಾಯಕರೇ ಉನ್ನತ ನಾಯಕತ್ವದ ವಿರುದ್ದ ತಿರುಗಿ ಬಿದ್ದಿದ್ದಾರೆ.
ಪಶ್ಚಿಮ ಬಂಗಾಳ: ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿಯೊಳಗೆ ಭುಗಿಲೆದ್ದ ಭಿನ್ನಮತ

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಶತಾಯ ಗತಾಯ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲೇಬೇಕೆಂದು ಶತಪ್ರಯತ್ನ ನಡೆಸುತ್ತಿರುವ ಬಿಜೆಪಿ ಪಕ್ಷಕ್ಕೆ ಈಗ ಟಿಕೇಟ್‌ ವಿಚಾರದಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಚುನಾವಣೆಗೆ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಕಳೆದ ವಾರ ಬಿಡುಗಡೆ ಮಾಡಿದ ನಂತರ, ಬಂಗಾಳದ ಅನೇಕ ಬಿಜೆಪಿ ನಾಯಕರೇ ಉನ್ನತ ನಾಯಕತ್ವದ ವಿರುದ್ದ ತಿರುಗಿ ಬಿದ್ದಿದ್ದಾರೆ.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಯಿಂದ ಪಕ್ಷಕ್ಕೆ ಬಂದಿರುವವರಿಗೆ ಟಿಕೆಟ್ ನೀಡಿ ಮತ್ತು ಪಕ್ಷಕ್ಕಾಗಿ ದೀರ್ಘಾವಧಿಯಿಂದ ದುಡಿದಿರುವವರನ್ನು ಕಡೆಗಣಿಸಿದೆ. ಭಾನುವಾರ ಮೂರನೇ ಮತ್ತು ನಾಲ್ಕನೇ ಹಂತದ ಚುನಾವಣೆಯ 63 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷ ಬಿಡುಗಡೆ ಮಾಡಿದ ನಂತರ ಬಿಜೆಪಿ ಕಾರ್ಯಕರ್ತರು ಕನಿಷ್ಠ ಒಂದು ಡಜನ್ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸಿದರು. ಇದಾದ ನಂತರ, ಎರಡು ವರ್ಷಗಳ ಹಿಂದೆ ಬಿಜೆಪಿಗೆ ಸೇರಿದ ಮಾಜಿ ಟಿಎಂಸಿ ಸಚಿವ ಸೋವನ್ ಚಟರ್ಜಿ ಮತ್ತು ಅವರ ಸ್ನೇಹಿತ ಬೈಸಾಖಿ ಬ್ಯಾನರ್ಜಿ ಅವರು ಪಕ್ಷದಿಂದ ಹೊರನಡೆದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬೆಹಲಾ ಪುರ್ಬಾ ಕ್ಷೇತ್ರವನ್ನು ಹಲವು ವರ್ಷಗಳಿಂದ ಪ್ರತಿನಿಧಿಸುತಿದ್ದ ಚಟರ್ಜಿ ಅವರ ಬದಲಿಗೆ ಬಿಜೆಪಿಯು ನಟಿ ಪಾಯಲ್‌ ಸರ್ಕಾರ್‌ ಅವರಿಗೆ ಟಿಕೇಟ್‌ ನೀಡಿದೆ. ಮಂಗಳವಾರ ಸಂಜೆ, ದಕ್ಷಿಣ ಕೋಲ್ಕತ್ತಾದ ಹೇಸ್ಟಿಂಗ್ಸ್‌ನಲ್ಲಿರುವ ಪಕ್ಷದ ಕೇಂದ್ರ ಚುನಾವಣಾ ಕಚೇರಿಯ ಮುಂದೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು. ಪಕ್ಷದ ಕಾರ್ಯಕರ್ತರು ಸೋಮವಾರ ಬೆಳಿಗ್ಗೆಯಿಂದಲೇ ಟಿಕೆಟ್‌ ವಿಚಾರವಾಗಿ ಅಲ್ಲಿ ಧರಣಿ ನಡೆಸುತ್ತಿದ್ದರು. ಸ್ವಪಕ್ಷದ ಕಾರ್ಯಕರ್ತರಿಂದಲೇ ಪ್ರತಿಭಟನೆಯನ್ನು ಎದುರಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳು, ಈ ಪ್ರತಿಭಟನೆಗಳ ಹಿಂದೆ ತೃಣಮೂಲ ಕಾಂಗ್ರೆಸ್ ಕುಮ್ಮಕ್ಕು ಇದ್ದು ಮತ್ತು ಉತ್ತಮ ಬಂಗಾಳಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ಪಕ್ಷದ ಕಾರ್ಯಕರ್ತರನ್ನು ಮನವೊಲಿಸಿದ್ದೇವೆ ಎಂದರು. ಹಿರಿಯ ಬಿಜೆಪಿ ನಾಯಕರು ಪ್ರತಿಭಟನೆಯನ್ನು ಅಶಿಸ್ತು ಎಂದು ಹೇಳಿದ್ದಾರಲ್ಲದೆ ಬಿಜೆಪಿಯಂತಹ ಶಿಸ್ತಿನ ಪಕ್ಷದಲ್ಲಿ ಹಿಂದೆ ನಡೆದಿಲ್ಲ ಎಂದು ಹೇಳಿದರು. ಪಕ್ಷದ ಮೂಲಗಳು, ತೃಣಮೂಲದಿಂದ ಬಿಜೆಪಿಗೆ ಬಂದಿರುವ ಅವಕಾಶವಾದಿ ನಾಯಕರ ಕಾರಣದಿಂದ ಪ್ರತಿಭಟನೆಗಳು ನಡೆದಿವೆ ಎಂದು ಹೇಳಿದೆ. ಏತನ್ಮಧ್ಯೆ, ಟಿಎಂಸಿ ರಾಜ್ಯದಲ್ಲಿ ಬಿಜೆಪಿಗೆ ತನ್ನದೇ ಆದ ಏನೂ ಇಲ್ಲ ಮತ್ತು ಈಗ ಏನು ನಡೆಯುತ್ತಿದೆ ಎಂಬುದು ಪಕ್ಷದೊಳಗಿನ ಸ್ಫೋಟವಾಗಿದೆ ಎಂದು ಹೇಳಿದೆ.

ಸೋಮವಾರದಿಂದ, ಬಿಜೆಪಿ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ, ಹೂಗ್ಲಿಯ ಸಿಂಗೂರ್ ಮತ್ತು ತಾರಕೇಶ್ವರ, ಅಮ್ಟಾ ಮತ್ತು ಹೌರಾದ ಡೊಮ್ಜೂರ್, ಕುಲ್ಪಿ ಮತ್ತು ದಕ್ಷಿಣ 24 ಪರಗಣಗಳ ಡೈಮಂಡ್‌ ಹಾರ್ಬರ್ ಮತ್ತು ಉತ್ತರ ಬಂಗಾಳದ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಈ ಸ್ಥಾನಗಳಿಂದ ಪಕ್ಷಾಂತರ ಮಾಡಿದವರು, ರಾಜಕಾರಣಿಗಳಲ್ಲದವರು ಮತ್ತು ಹೊಸ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದೆ. ಈ ಕುರಿತು ಮಾತನಾಡಿದ

ತಾರಕೇಶ್ವರದ ಅಭ್ಯರ್ಥಿ ಪತ್ರಕರ್ತ ಸ್ವಪನ್ ದಾಸ್‌ಗುಪ್ತಾ ಅವರು ಒಬ್ಬಿಬ್ಬರು ನಾಯಕರ ನೇತೃತ್ವದಲ್ಲಿ ಕೆಲವು ಪ್ರತಿಭಟನೆಗಳು ನಡೆದಿದ್ದು ತಾವು ಸಹೋದ್ಯೋಗಿಗಳು, ಕಾರ್ಯಕರ್ತರು , ಬೆಂಬಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಬಂಗಾಳಕ್ಕಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಕಳೆದ 18 ತಿಂಗಳುಗಳಲ್ಲಿ ಬಿಜೆಪಿ ನಾಟಕೀಯ ಬೆಳವಣಿಗೆಯನ್ನು ಕಂಡಿದೆ. ಬಿಜೆಪಿಯ ಶಿಸ್ತಿನ ಸಂಸ್ಕೃತಿಗೆ ಒಗ್ಗಿಕೊಳ್ಳದ ಕೆಲವು ನಾಯಕರಿದ್ದಾರೆ. ಇದು ರಾಜಕೀಯ ಏಕೀಕರಣದ ಸವಾಲು. ಪಕ್ಷವು ಅದನ್ನು ಸಮರ್ಥವಾಗಿ ನಿರ್ವಹಿಸಲಿದೆ. ಪಕ್ಷವು ಎಂದಿಗೂ ಅಶಿಸ್ತಿಗೆ ತಲೆಬಾಗಿಲ್ಲ. ಮನವೊಲಿಸುವ ಮೂಲಕ ನಮ್ಮ ಕಾರ್ಯಕರ್ತರನ್ನು ಸಮಾಧಾನಗೊಳಿಸಲು ನಾವು ಪ್ರಯತ್ನಿಸಿದ್ದೇವೆ ಎಂದು ಅವರು ಹೇಳಿದರು.

89 ವರ್ಷದ ಟಿಎಂಸಿ ಮಾಜಿ ನಾಯಕ ಮತ್ತು ನಿವೃತ್ತ ಶಾಲಾ ಮುಖ್ಯೋಪಾಧ್ಯಾಯ ರವೀಂದ್ರನಾಥ್ ಭಟ್ಟಾಚಾರ್ಯ ಅವರನ್ನು ಸಿಂಗೂರ್ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿದ ನಂತರ ಸೋಮವಾರ ಮತ್ತು ಮಂಗಳವಾರ ಸಿಂಗೂರಿನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಭಟ್ಟಾಚಾರ್ಯ ಅವರನ್ನು ಕೈಬಿಡಬೇಕೆಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು. ಮಾಜಿ ಕ್ಯಾಬಿನೆಟ್ ಮಂತ್ರಿಯಾಗಿದ್ದ ಭಟ್ಟಾಚಾರ್ಯ ಅವರು ಸಿಂಗೂರ್ ಚಳವಳಿಯ ಸಂದರ್ಭದಲ್ಲಿ ಸಿಎಂ ಮಮತಾ ಬ್ಯಾನರ್ಜಿಯವರ ವಿಶ್ವಾಸಾರ್ಹ ಸಹಾಯಕರಾಗಿದ್ದ ಅವರು ಕೆಲ ದಿನಗಳ ಮೊದಲಷ್ಟೆ ಬಿಜೆಪಿಗೆ ಸೇರಿದ್ದರು. 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಯಾವುದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ಪಕ್ಷ ನಿರ್ಧರಿಸಿದ್ದರಿಂದ ಭಟ್ಟಾಚಾರ್ಯರಿಗೆ ಟಿಎಂಸಿ ಟಿಕೆಟ್ ನಿರಾಕರಿಸಿತ್ತು. ಸಿಂಗೂರಿನಲ್ಲಿ ಭಟ್ಟಾಚಾರ್ಯರ ಪ್ರತಿಸ್ಪರ್ಧಿಯಾಗಿ ಬೆಚರಾಮ್ ಮನ್ನಾ ಅವರನ್ನು ಟಿಎಂಸಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಈ ಕುರಿತು ಮಾತನಾಡಿದ ಭಟ್ಟಾಚಾರ್ಯ ಇದು ಸ್ವಯಂಪ್ರೇರಿತ ಪ್ರತಿಭಟನೆಯಲ್ಲ. ನನ್ನನ್ನು ತಿರಸ್ಕರಿಸಲು ಸ್ಥಳೀಯ ತೃಣಮೂಲ ನಾಯಕರು ಇಂತಹ ಪ್ರತಿಭಟನೆಗಳಿಗೆ ಹಣಕಾಸು ಒದಗಿಸುತ್ತಿದ್ದಾರೆ. ಆದರೆ ನಾನು ನಮ್ಮ ಕಾರ್ಯಕರ್ತರೊಂದಿಗೆ ಮಾತನಾಡಿದ್ದೇನೆ ಮತ್ತು ಅವರಿಗೆ ಮನವರಿಕೆ ಮಾಡಿದ್ದೇನೆ. ಅವರು ನನ್ನೊಂದಿಗೆ ಕೆಲಸ ಮಾಡಲು ಒಪ್ಪಿದ್ದಾರೆ ಎಂದರು.

ಅಲಿಪುರ್ದುರ್ನಲ್ಲಿ, ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅಶೋಕ್ ಲಾಹಿರಿ ಅವರ ಉಮೇದುವಾರಿಕೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಅಶೋಕ್ ಲಹಿರಿ ಯಾರೆಂದು ತಿಳಿದಿಲ್ಲ ಮತ್ತು ಅವರನ್ನು ಏಕೆ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಶೀಘ್ರದಲ್ಲೇ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡುತ್ತೇನೆ ಎಂದು ಲಾಹಿರಿ ತಿಳಿಸಿದರು. ಬಿಜೆಪಿ ಮುಖಂಡರು ಪಕ್ಷದ ಕಾರ್ಯಕರ್ತರಿಗೆ ಶಾಂತವಾಗಿರಲು ಮನವಿ ಮಾಡಿದ್ದಾರೆ ಮತ್ತು ಪ್ರತಿಭಟನೆಗಿಳಿಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ನಮ್ಮ ಕೆಲವು ಕಾರ್ಯಕರ್ತರು ಭಿನ್ನಾಭಿಪ್ರಾಯ ಹೊಂದಿದ್ದರು ಮತ್ತು ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬಂದರು. ಅವರು ಹಿಂಸಾಚಾರದಲ್ಲಿ ತೊಡಗಿದ್ದಾರೆಂದು ನಾನು ನಂಬುವುದಿಲ್ಲ. ಪೊಲೀಸರು ಉದ್ದೇಶಪೂರ್ವಕವಾಗಿ ಬೆಂಕಿಗೆ ತುಪ್ಪ ಸುರಿದಂತೆ ಲಾಠಿ ಚಾರ್ಜ್ ಮಾಡಿದರು. ಶಾಂತವಾಗಿರಲು ನಾವು ಕಾರ್ಯಕರ್ತರಿಗೆ ಮನವಿ ಮಾಡಿದ್ದೇವೆ ಎಂದು ಬಿಜೆಪಿ ಬಂಗಾಳ ಘಟಕದ ಮುಖ್ಯ ವಕ್ತಾರ ಶಮಿಕ್ ಭಟ್ಟಾಚಾರ್ಯ ಸುದ್ದಿಗಾರರಿಗೆ ತಿಳಿಸಿದರು. ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಅವರು ಪಕ್ಷವು ಯಾವುದೇ ಪಕ್ಷಾಂತರಿಗಳಿಗೆ ಟಿಕೆಟ್ ನೀಡುವ ಭರವಸೆ ನೀಡಿಲ್ಲ ಮತ್ತು ಇದು ಪಕ್ಷದ ಹಿರಿಯ ಕಾರ್ಯಕರ್ತರಿಗೂ ಅನ್ವಯಿಸುತ್ತದೆ ಎಂದು ಹೇಳಿದರು. ಅಶಿಸ್ತು ಇದ್ದರೆ, ಪಕ್ಷವು ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ನಮಗೆ, ಪಕ್ಷದ ನಿರ್ಧಾರವು ಅಂತಿಮವಾಗಿದೆ ಎಂದು ಅವರು ತಿಳಿಸಿದರು.

ಬಿಜೆಪಿ ರಾಜ್ಯದಲ್ಲಿ ತನ್ನದೇ ಆದ ಸಂಘಟನೆಯನ್ನು ನಿರ್ಮಿಸುವಲ್ಲಿ ವಿಫಲವಾದ ಕಾರಣ, ಅದು ಈಗ ಪಕ್ಷಾಂತರಿಗಳನ್ನೇ ಅವಲಂಬಿಸಿದೆ. ಟಿಕೆಟ್‌ ಹಂಚಿಕೆ ವಿಷಯದಲ್ಲಿ ಹೊಸಬರು ಮತ್ತು ಪಕ್ಷದ ಹಳೆಯ ನಾಯಕರ ನಡುವಿನ ಘರ್ಷಣೆ ಸಂಭವಿಸುತ್ತದೆ. ಇದು ಚುನಾವಣೆಗೆ ಮುನ್ನ ಬಿಜೆಪಿಗೆ ಕೆಟ್ಟ ದೃಷ್ಟಿಯಂತಾಗಿದೆ ಎಂದು ರಾಜಕೀಯ ವಿಶ್ಲೇಷಕ ಬಿಸ್ವಾನಾಥ್ ಚಕ್ರವರ್ತಿ ಹೇಳುತ್ತಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com