ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿರುವಾಗಲೇ, ಬಿಜೆಪಿ- AIADMK ನಡುವೆ ಅಸಮಾಧಾನದ ಹೊಗೆ ಎದ್ದಿದೆ. ಸಿಎಎ ಕುರಿತಂತೆ AIADMK ತನ್ನ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ರಾಜ್ಯ ಬಿಜೆಪಿಗೆ ಇರಿಸು ಮುರಿಸು ತಂದಿದೆ. ಇದು ಬಿಜೆಪಿ ಕೇಂದ್ರ ನಾಯಕತ್ವದ ಕೆಂಗಣ್ಣಿಗೂ ಗುರಿಯಾಗಿದೆ.
AIADMK ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ ಸಿಎಎ ಕುರಿತಂತೆ ಬಿಜೆಪಿಯೊಂದಿಗೆ ಚರ್ಚಿಸಿ, ವಿವಾದಾತ್ಮಕ ಕಾನೂನನ್ನು ಹಿಂಪಡೆಯುವಂತೆ ಒತ್ತಾಯಿಸುವುದಾಗಿ ಭರವಸೆ ನೀಡಿದೆ. ಸಂಸತ್ತಿನಲ್ಲಿ ಸಿಎಎ ಪರವಾಗಿ ಮತ ಚಲಾಯಿಸಿದ AIADMK ಚುನಾವಣೆ ಹೊಸ್ತಿಲಲ್ಲಿ ಉಲ್ಟಾ ಹೊಡೆದಿರುವುದು ಬಿಜೆಪಿಗೆ ಆಘಾತ ತಂದಿದೆ.
DMK ಹಾಗೂ ಕಾಂಗ್ರೆಸ್ ಮಿತ್ರಕೂಟವನ್ನು ಬೆಂಬಲಿಸುವ ಅಲ್ಪಸಂಖ್ಯಾತ ಮತದಾರರನ್ನು ಸೆಳೆಯಲು ಸಿಎಎ ಚರ್ಚೆಯನ್ನು ಮತ್ತೆ ಕೆದಕಿದ ತನ್ನ ಮಿತ್ರಪಕ್ಷದ ಬಗ್ಗೆ ಬಿಜೆಪಿ ಅಸಮಾಧಾನವನ್ನೂ ಹೊರ ಹಾಕಿದೆ.
ಈ ಕುರಿತು ದಿ ಕ್ವಿಂಟ್ನೊಂದಿಗೆ ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ಹಿರಿಯ ನಾಯಕರೊಬ್ಬರು, ಸಿಎಎ ಕುರಿತಂತೆ ತನ್ನ ನಿಲುವಿನಲ್ಲಿ AIADMK ಬದಲಾವಣೆ ತಂದಿದೆ. ಅವರು ನಮ್ಮಲ್ಲಿ ಚರ್ಚಿಸದೆಯೇ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ. ಇದಕ್ಕೆ ನಾವೇನೂ ಮಾಡಲಾಗುವುದಿಲ್ಲ ಎಂದಿದ್ದಾರೆ.
“ಎಐಎಡಿಎಂಕೆ ಸಂಸತ್ತಿನಲ್ಲಿ ಸಿಎಎಗೆ ಬೆಂಬಲ ನೀಡಿತು. ಈಗ ಅವರು ಅಲ್ಪಸಂಖ್ಯಾತ ಮತಗಳನ್ನು ಪಡೆಯಲು ಬಯಸುವುದರಿಂದ ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದಾರೆ. ನಾವು ಇದನ್ನು ಬೆಂಬಲಿಸುವುದಿಲ್ಲ. ಸಿಎಎ ಬಿಜೆಪಿ ಸರ್ಕಾರದ ಒಂದು ಪ್ರಮುಖ ಶಾಸನ. ಹಾಗೂ ಇದನ್ನು "ಮಿತ್ರ ಪಕ್ಷಗಳ ಆಶಯಗಳನ್ನು" ಆಧರಿಸಿ ರದ್ದುಪಡಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಎಐಎಡಿಎಂಕೆ ಅವರ ಭರವಸೆಯನ್ನು ಬಿಜೆಪಿಯ ರಾಷ್ಟ್ರೀಯ ನಾಯಕತ್ವವೂ ಆಕ್ಷೇಪಿಸಿದೆ ಎಂದು ಅವರು ತಿಳಿಸಿದ್ದಾರೆ. "ಪ್ರಣಾಳಿಕೆ ಹೊರಬಂದ ನಂತರ ನಾವು ಅವರ ನಿಲುವನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ಬಿಜೆಪಿ ಮತ್ತು ಎಐಎಡಿಎಂಕೆ ಚುನಾವಣಾ ಮೈತ್ರಿಕೂಟದಲ್ಲಿವೆ. ನಾವು ಮೈತ್ರಿಯ ನಿಯಮಗಳನ್ನು ಗೌರವಿಸುತ್ತೇವೆ ಆದರೆ ಮತದಾರರಿಗೆ ಭರವಸೆ ನೀಡುವ ಎಲ್ಲದರಲ್ಲೂ ನಾವು ಎಐಎಡಿಎಂಕೆ ಅವರನ್ನು ಬೆಂಬಲಿಸಲು ಸಾಧ್ಯವಿಲ್ಲ.” ಎಂದು ಅವರು ಹೇಳಿದ್ದಾರೆ.
ಆದರೆ, ತಮ್ಮ ಭರವಸೆಯನ್ನು ಸಮರ್ಥಿಸಿಕೊಂಡ AIADMK ನಾಯಕರು, ತಮ್ಮದು ಬಿಜೆಪಿಯೊಂದಿಗೆ ರಾಜಕೀಯ ಮೈತ್ರಿ ಮಾತ್ರ, ಸೈದ್ಧಾಂತಿಕ ಮೈತ್ರಿಯಲ್ಲ ಎಂದು ಹೇಳಿದ್ದಾರೆ.
ನಾವು ಸೈದ್ಧಾಂತಿಕವಾಗಿ ಬಿಜೆಪಿಯೊಂದಿಗೆ ಭಿನ್ನತೆ ಹೊಂದಿದ್ದೇವೆ. ನಮ್ಮದು ದ್ರಾವಿಡಿಯನ್ ಪಕ್ಷ ಎಂದು AIADMK ವಕ್ತಾರ ಬಾಬು ಮುರುಗವೇಲ್ ತಿಳಿಸಿದ್ದಾರೆ.
ಸಂಸತ್ತಿನಲ್ಲಿ ಸಿಎಎಗೆ ಮತಚಲಾಯಿಸಿ, ರಾಜ್ಯದಲ್ಲಿ ತನ್ನ ನಿಲುವಿನಿಂದ ಹಿಂದೆ ಸರಿದಿರುವುದನ್ನು ಸಮರ್ಥಿಸಿಕೊಂಡ ಅವರು, ಆರಂಭದಲ್ಲಿ ಸಿಎಎ ವಿದೇಶಿ ಮುಸ್ಲಿಮರನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂದು ನಂಬಿದ್ದೆವು. ಆದರೆ ಸಿಎಎ ಬಗ್ಗೆ ತಮಿಳುನಾಡಿನ ಮುಸ್ಲಿಮರೂ ಆತಂಕ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ನಾವು ಅವರ (ಮುಸ್ಲಿಮರ) ಆತಂಕವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅದಾಗ್ಯೂ, ಬಿಜೆಪಿ ಉನ್ನತ ನಾಯಕತ್ವವು, AIADMK ಯು ಸಿಎಎ ವಿಷಯದಲ್ಲಿ ರಾಜಕೀಯ ಅಪ್ರಾಮಾಣಿಕತೆ ತೋರುತ್ತಿದೆ ಎಂದು ಹೇಳಿದೆ. ಹಾಗೂ AIADMK ಪ್ರಣಾಳಿಕೆ ಕುರಿತಂತೆ ತೀಕ್ಷ್ಣವಾಗಿ ಪ್ರತಿಕ್ರಯಿಸಿದೆ.