covid19 2ನೇ ಅಲೆ: ದೇಶವ್ಯಾಪಿ ಹಬ್ಬುವುದಕ್ಕೂ ಮುಂಚೆ ತಡೆಯಬೇಕು ಪ್ರಧಾನಿ ಮೋದಿ ರಾಜ್ಯಗಳಿಗೆ ಸಲಹೆ

ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 17,864, ಕೇರಳದಲ್ಲಿ 1,970, ಪಂಜಾಬ್‌ 1,463, ಕರ್ನಾಟಕದಲ್ಲಿ 1,135 ಮತ್ತು ಗುಜರಾತಿನಲ್ಲಿ 964 ಪ್ರಕರಣಗಳು ದಾಖಲಾಗಿವೆ.
covid19 2ನೇ ಅಲೆ: ದೇಶವ್ಯಾಪಿ ಹಬ್ಬುವುದಕ್ಕೂ ಮುಂಚೆ ತಡೆಯಬೇಕು ಪ್ರಧಾನಿ ಮೋದಿ ರಾಜ್ಯಗಳಿಗೆ  ಸಲಹೆ

ಕರೋನಾ ಎರಡನೇ ಅಲೆ ಶುರುವಾಗಿದ್ದು, ಸೋಂಕಿನ ಪ್ರಮಾಣ ದಿನೇ-ದಿನೇ ಏರಿಕೆಯಾಗಿತ್ತಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ‌ ನಡೆಸಿದ್ದಾರೆ. ಕರೋನಾ ಎರಡನೇ ಅಲೆಯನ್ನು ಆದಷ್ಟು ಬೇಗ ತಡೆಯಬೇಕು, ಇಲ್ಲದಿದ್ದರೆ ದೇಶ ವ್ಯಾಪಿ ಆರ್ಭಟ ಹೆಚ್ಚಾಗಲಿದೆ ಎಂದು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪ್ರಧಾನಿ ಸೂಚನೆ ಕೊಟ್ಟಿದ್ದಾರೆ.

ದೇಶದ ಸುಮಾರು 70 ಜಿಲ್ಲೆಗಳಲ್ಲಿ ಕರೋನಾ ಪಾಸಿಜಿಟಿವ್ ಪ್ರಕರಣದ ಪ್ರಮಾಣ ಶೇಕಡಾ 150 ಕ್ಕಿಂತಲೂ ಹೆಚ್ಚಾಗಿದೆ. ಸೋಂಕು ಹೆಚ್ಚಿರುವ ವಲಯಗಳಲ್ಲಿ ಆರಂಭದಿಂದಲೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಎಚ್ಚರಿಸಿದ್ದಾರೆ. ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ. ಹಳ್ಳಿಗಳಿಗೆ ಸೋಂಕು ವ್ಯಾಪಿಸುವುದಕ್ಕೂ ಮುನ್ನ ಚಿಕಿತ್ಸೆಗೆ ಸಂಬಂಧಿಸಿದಂತೆ ನಗರಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕರೋನಾ ಲಸಿಕೆ ಕುರಿತು ಪ್ರಸ್ತಾಪಿಸಿದ ಮೋದಿ, ಲಸಿಕೆ ತಯಾರಿಕೆ ಸಂಬಂಧ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸದುಪಯೋಗ ಪಡೆದುಕೊಳ್ಳಲು ಸಿದ್ಧವಿದ್ದು, ನಮ್ಮೊಂದಿಗೆ ರಾಜ್ಯಗಳು ಕೈಜೋಡಿಸ ಬೇಕೆಂದು ಮನವಿಮಾಡಿದ್ದಾರೆ. ಭದ್ರತೆಯ ದೃಷ್ಟಿಯಿಂದ ಸಣ್ಣ ಪಟ್ಟಣ್ಣಗಳ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯ ಬಲಪಡಿಸುವುದು ಮತ್ತು ಆಂಬ್ಯುಲೆನ್ಸ್‌ ವ್ಯವಸ್ಥೆಯನ್ನು ಹೆಚ್ಚು ಅಭಿವೃದ್ಧಿ ಪಡಿಸುವಂತೆ ಸೂಚಿಸಲಾಗಿದೆ. ಕೋವಿಡ್‌ ಜಾಗೃತಿಯ ಕುರಿತು ಮುನ್ನೆಚ್ಚರಿಕೆಯ ಅಭಿಯಾನವನ್ನು ಕೈಗೊಳ್ಳಬೇಕು. ರಾಜ್ಯಗಳು ಲಸಿಕೆಯ ಅವಧಿ ಮುಗಿಯುವುದಕ್ಕೂ ಮುನ್ನ ಬಳಸಬೇಕು ಮತ್ತು ವ್ಯರ್ಥವಾಗದಂತೆ ನೋಡಿಕೊಳ್ಳಬೇಕೆಂದು ಎಚ್ಚರಿಸಿದ್ದಾರೆ.

ಮಹಾರಾಷ್ಟ್ರ, ಬೆಂಗಳೂರು ಮತ್ತು ಕೇರಳ ಗಡಿ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಈ ಜಿಲ್ಲೆಗಳಲ್ಲಿ ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸುವ ಕುರಿತು ಕ್ರಮಕೈಗೊಳ್ಳಬೇಕೆಂದು ತಿಳಿಸಲಾಗಿದೆ. ಬೆಂಗಳೂರಿನಲ್ಲಿ ಮೂರು ಕೋವಿಡ್‌ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧಾರ ಮಾಡಲಾಗಿದ್ದು, 3500 ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳಲ್ಲಿ ಲಸಿಕಾ ಅಭಿಯಾನವನ್ನು ತೀವ್ರಗೊಳಿಸಲು ಸಲಹೆ ನೀಡಲಾಗಿದೆ. ಹಾಗು ಪ್ರತಿ ದಿನ ಮೂರು ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದೇವೆಂದು ಮೋದಿಯೊಂದಿಗಿನ ಸಂವಾದದಲ್ಲಿ ಯಡಿಯೂರಪ್ಪ ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 17,864, ಕೇರಳದಲ್ಲಿ 1,970, ಪಂಜಾಬ್‌ 1,463, ಕರ್ನಾಟಕದಲ್ಲಿ 1,135 ಮತ್ತು ಗುಜರಾತಿನಲ್ಲಿ 964 ಪ್ರಕರಣಗಳು ದಾಖಲಾಗಿವೆ. ಇತ್ತೀಚಿನ ವರದಿಯನ್ನು ಗಮನಿಸಿದರೆ ಪ್ರಕರಣಗಳ ಸರಾಸರಿ ಸಂಖ್ಯೆ ಗರಿಷ್ಟ ಮಟ್ಟದಲ್ಲಿದ್ದು, ಒಂದು ತಿಂಗಳ ಹಿಂದೆ ನಾಲ್ಕು ರಾಜ್ಯಗಳಲ್ಲಿ ಪ್ರಕರಣ ಹೆಚ್ಚಿತ್ತು, ಈಗ 19 ರಾಜ್ಯಗಳಲ್ಲಿ ಪ್ರಕರಣ ಹೆಚ್ಚಿದೆ ಎಂದು ತಿಳಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com