ಕಮ್ಯುನಿಸ್ಟೂ ಅಲ್ಲ, ಬಿಜೆಪಿಯೂ ಅಲ್ಲ- ನಾನು ಅಂಬೇಡ್ಕರ್‌ ಹಿಂಬಾಲಕ: ಮಣಿಕಂಟನ್ ಸ್ಪಷ್ಟಣೆ

ನಾನು ಬಿಜೆಪಿಯ ಅಥವಾ ಎಡಪಕ್ಷಗಳ ಕಾರ್ಯಕರ್ತ ಅಲ್ಲ. ಬಿಜೆಪಿಯೊಂದಿಗೂ, ಎಡಪಕ್ಷಗಳೊಂದಿಗೂ ಅಭಿಪ್ರಾಯ ವ್ಯತ್ಯಾಸ ಇದೆ. ನಮ್ಮ ಸಮುದಾಯಗಳನ್ನುಇವತ್ತಿಗೂ ತಾರತಮ್ಯಗಳಿಂದ ನಡೆಸಲಾಗುತ್ತಿದೆ. ಅಂಬೇಡ್ಕರ್‌ ರನ್ನು ನಾನು ಹಿಂಬಾಲಿಸಲು ತೊಡಗಿದ್ದೇನೆ. ಅವರ ಸಿದ್ದಾಂತಗಳನ್ನು ಇನ್ನಷ್ಟು ಓದಬೇಕು. ಆ ಸಿದ್ದಾಂತಗಳೊಂದಿಗೆ ನಡೆಯಬೇಕೆಂದು ಆಶಿಸುತ್ತೇನೆ ಎಂದು ಮಣಿಕಂಟನ್‌ ಸ್ಪಷ್ಟಪಡಿಸಿದ್ದಾರೆ.
ಕಮ್ಯುನಿಸ್ಟೂ ಅಲ್ಲ, ಬಿಜೆಪಿಯೂ ಅಲ್ಲ- ನಾನು ಅಂಬೇಡ್ಕರ್‌ ಹಿಂಬಾಲಕ: ಮಣಿಕಂಟನ್ ಸ್ಪಷ್ಟಣೆ
Admin

ಸಾಮಾಜಿಕ ಜಾಲತಾಣದಲ್ಲಿ ಕಳೆದೆರಡು ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿರುವ ಕೇರಳದ ಆದಿವಾಸಿ ಯುವಕ ಮಣಿಕಂಟನ್‌, ತನ್ನ ಸುತ್ತ ಉಂಟಾಗಿರುವ ಗೊಂದಲಗಳಿಗೆ, ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ನಾನೊಬ್ಬ ಕಮ್ಯೂನಿಸ್ಟೂ ಅಲ್ಲ, ಬಿಜೆಪಿಯೂ ಅಲ್ಲ, ಅಂಬೇಡ್ಕರ್‌ ಚಿಂತನೆಗಳನ್ನು ಈಗಷ್ಟೇ ಓದುತ್ತಿರುವವನು, ಅವರ ಹಿಂಬಾಲಿಸಬೇಕೆಂದಿರುವವನು ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರದಲ್ಲಿ ಸ್ವಂತ ಬಲದಿಂದ ಸರ್ಕಾರವನ್ನು ರಚಿಸುವಲ್ಲಿ ಯಶಸ್ವಿಯಾದರೂ, ಶ್ರೀಮಂತ ಪಕ್ಷ ಬಿಜೆಪಿ ಮಣಿಕಂಟನ್‌ ವಿಚಾರದಲ್ಲಿ ತನ್ನ ಅಧಿಕಪ್ರಸಂಗಿತನ ಅಥವಾ ದಾರ್ಷ್ಟ್ಯದಿಂದ ಮಾನಕಳೆದುಕೊಂಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪಂಚರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಬಿಜೆಪಿ ಈ ರಾಜ್ಯಗಳಲ್ಲಿ ತನಗೊಂದು ನೆಲೆ ಇಲ್ಲದ ಕಾರಣ, ಸ್ಥಳೀಯ ಸೆಲೆಬ್ರಿಟಿಗಳನ್ನು ಮುಂದೆಬಿಟ್ಟಿದೆ. ಆದರೆ, ಕೇರಳದಲ್ಲಿ ತಾನು ಮಾಡಿದ ಒಂದು ಎಡವಿಟ್ಟಿನಿಂದಾಗಿ ನಗೆಪಾಟಲೀಗೀಡಾಗಿತ್ತು.

ಮುಂಬರುವ ಕೇರಳ ವಿಧಾನಸಭೆ ಚುನಾವಣೆಗೆ ಎನ್‌ಡಿಎ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಕುತೂಹಲಕಾರಿಯೆಂಬಂತೆ, ವಯನಾಡ್‌ ಜಿಲ್ಲೆಯ ಮಾನಂದವಾಡಿ ಕ್ಷೇತ್ರಕ್ಕೆ ಬಿಜೆಪಿ ಘೋಷಿಸಿದ ಅಭ್ಯರ್ಥಿ ಸಿ. ಮಣಿಕಂಟನ್‌ ಅಥವಾ ಮಣಿಕುಟ್ಟನ್ ಅವರಿಗೆ ತಾನು ಬಿಜೆಪಿಯ ಅಭ್ಯರ್ಥಿ ಅನ್ನುವುದೇ ಗೊತ್ತಿರಲಿಲ್ಲ.

ಮಾನಂದವಾಡಿಗೆ ಬಿಜೆಪಿ ತನ್ನನ್ನು ಅಭ್ಯರ್ಥಿಯಾಗಿ ಘೋಷಿಸಿಕೊಂಡಿರುವುದನ್ನು ವಾರ್ತೆಗಳ ಮೂಲಕ ಅರಿತುಕೊಂಡ ಮಣಿಕಂಟನ್‌ ಆಶ್ಚರ್ಯಗೊಂಡಿದ್ದಾರೆ. ತನ್ನ ಒಪ್ಪಿಗೆ ಪಡೆಯದೆಯೇ ದೇಶದ ಚುಕ್ಕಾಣಿ ಹಿಡಿದಿರುವ ರಾಷ್ಟ್ರೀಯ ಪಕ್ಷವೊಂದು ಹೇಗೆ ಅಭ್ಯರ್ಥಿಯನ್ನಾಗಿ ಘೋಷಿಸಿಕೊಂಡಿತು ಎಂದು ಆಶ್ಚರ್ಯಚಕಿತರಾಗಿದ್ದಾರೆ.

ವಯನಾಡಿನ ಪಣಿಯ ಎಂಬ ಆದಿವಾಸಿ ಸಮುದಾಯದ ಮೊದಲ ಎಂಬಿಎ ಪದವೀಧರನಾಗಿರುವ ಮಣಿಕಂಟನ್‌, ತಕ್ಷಣವೇ ವೀಡಿಯೋ ಒಂದು ಹಂಚಿಕೊಂಡಿದ್ದು, ತನಗೂ ಬಿಜೆಪಿಗೂ ಸಂಬಂಧವಿಲ್ಲ. ತಾನು ಅದರ ಕಾರ್ಯಕರ್ತನಲ್ಲ. ನನಗೆ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶವೂ ಇಲ್ಲ. ರಾಜಕಾರಣಕ್ಕೆ ಬರುವುದಿಲ್ಲ‌, ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು.

ಮಣಿಕಂಟನ್‌ ಅವರ ವೀಡಿಯೋ ಕೆಲವೇ ಕ್ಷಣದಲ್ಲಿ ಸಾಕಷ್ಟು ವೈರಲ್‌ ಆಗಿದ್ದು, ಬಿಜೆಪಿಯ ಅಧಿಕಪ್ರಸಂಗಿತನ ಸಾಕಷ್ಟು ವ್ಯಂಗ್ಯ, ಟ್ರಾಲ್‌ಗಳಿಗೆ ಆಹಾರವಾಗಿತ್ತು. ಈ ಕುರಿತು ʼಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಎಲ್ಲರೂ ನೋಡುವುದು ಒಳ್ಳೆಯದು, ಯಾರಿಗೆ ಗೊತ್ತು, ನೀವು ಕೂಡಾ ಬಿಜೆಪಿಯ ಅಭ್ಯರ್ಥಿಗಳು ಆಗಿರಲೂಬಹುದುʼ ಮೊದಲಾದ ಟ್ರಾಲ್‌ಗಳು ಹರಿದಾಡಿತ್ತು.

ಆದಿವಾಸಿಗಳ ಒಪ್ಪಿಗೆಯ, ಅಭಿಪ್ರಾಯಗಳಿಗೆ ಬೆಲೆ ಕೊಡದ ಸಂಘಪರಿವಾರದ ದಾರ್ಷ್ಟ್ಯ ಇದು ಎಂದು ಕೆಲವರು ಕಟುವಾಗಿ ಟೀಕಿಸಿದ್ದರು.

ಅದಾಗ್ಯೂ, ಬಿಜೆಪಿಯ ವಕ್ತಾರರು ಪಕ್ಷವನ್ನು ಸಮರ್ಥಿಸಿಕೊಂಡಿದ್ದು, ಮಣಿಕಂಟನ್‌ ಹಿಂದೇಟಿನ ಹಿಂದೆ ಕಮ್ಯುನಿಸ್ಟ್‌ ಗೂಂಡಾಗಳ ಬೆದರಿಕೆ ಕೆಲಸ ಮಾಡಿದೆ ಎಂದು ಆರೋಪಿಸಿದ್ದರು.

ಅದರ ಬೆನ್ನಿಗೆ, ಮಣಿಕಂಟನ್‌, ಕಮ್ಯೂನಿಸ್ಟ್‌ ಪಕ್ಷದವರೆಂಬ ವದಂತಿ ಹರಿದಾಡಿತ್ತು. ಈ ಎಲ್ಲಾ ಊಹಾಪೋಹಗಳಿಗೆ ಸ್ವತಃ ನಾಂದಿ ಹಾಡಿದ ಮಣಿಕಂಟನ್‌, ರಾಜಕೀಯ ಜಂಜಾಟಗಳು ಕಳೆದ ಎರಡು ದಿನಗಳ ಮಟ್ಟಿಗೆ ತನ್ನ ಬದುಕಿನಲ್ಲಿ ಬೀರಿದ ಹಸ್ತಕ್ಷೇಪವನ್ನು, ತಾನು ಅನುಭವಿಸಿದ ಮಾನಸಿಕ ಯಾತನೆಗಳನ್ನು ಬಿಚ್ಚಿಟ್ಟಿದ್ದಾರೆ.

ತಾನು ಯಾವುದೇ ಬಾಹ್ಯ ಶಕ್ತಿಗಳಿಗೆ ಬೆದರಿ ಬಿಜೆಪಿಯ ಆಹ್ವಾನವನ್ನು ತಿರಸ್ಕರಿಸಿದ್ದಲ್ಲ. ನಾನು ನನ್ನ ಆದಿವಾಸಿ ಅಸ್ಮಿತೆಯ ನಿಲುವನ್ನು ಹೊಂದಿದ್ದೇನೆ. ನನ್ನ ಸಮುದಾಯದ ಹೊರತು, ನನ್ನ ಸಮಸ್ಯೆಗಳನ್ನು ಬಗೆಹರಿಸಲು ನಾನು ಯಾರನ್ನೂ ಅವಲಂಬಿಸಿಲ್ಲ. ಹಾಗಾಗಿ ನನ್ನ ಜನರ ನಿಲುವೇ ನನ್ನದು ಎಂದು ಮಣಿಕಂಟನ್‌ ಹೇಳಿದ್ದಾರೆ.

ನಾನು ಬಿಜೆಪಿಯ ಬೆಂಬಲಿಗನಲ್ಲ, ಅದೇ ವೇಳೆ ಎಡಪಕ್ಷಗಳ ಕಾರ್ಯಕರ್ತನೂ ಅಲ್ಲ. ಬಿಜೆಪಿಯೊಂದಿಗೂ, ಎಡಪಕ್ಷಗಳೊಂದಿಗೂ ಅಭಿಪ್ರಾಯ ವ್ಯತ್ಯಾಸ ಇದೆ. ನಮ್ಮ ಸಮುದಾಯಗಳನ್ನುಇವತ್ತಿಗೂ ತಾರತಮ್ಯಗಳಿಂದ ನಡೆಸಲಾಗುತ್ತಿದೆ. ಅಂಬೇಡ್ಕರ್‌ ರನ್ನು ನಾನು ಹಿಂಬಾಲಿಸಲು ತೊಡಗಿದ್ದೇನೆ. ಅವರ ಸಿದ್ದಾಂತಗಳನ್ನು ಇನ್ನಷ್ಟು ಓದಬೇಕು. ಆ ಸಿದ್ದಾಂತಗಳೊಂದಿಗೆ ನಡೆಯಬೇಕೆಂದು ಆಶಿಸುತ್ತೇನೆ ಎಂದು ಮಣಿಕಂಟನ್‌ ಸ್ಪಷ್ಟಪಡಿಸಿದ್ದಾರೆ.

ಮಾನಂದವಾಡಿ ಕ್ಷೇತ್ರವನ್ನು ಆದಿವಾಸಿಗಳಿಗೆ ಮೀಸಲಿರಿಸಲಾಗಿದೆ. ಹಾಗಾಗಿ, ಬಿಜೆಪಿ ಮಣಿಕಂಟನ್‌ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿಕೊಂಡಿದೆ. ಮಣಿಕಂಡನ್‌ ನಿರಾರಣೆಯಿಂದ ಈ ಕ್ಷೇತ್ರದಲ್ಲಿ ಸದ್ಯ ಬಿಜೆಪಿ ಅಭ್ಯರ್ಥಿಯಿಲ್ಲ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com