ಖಾಸಗೀಕರಣದ ವಿರುದ್ದ ಬ್ಯಾಂಕ್‌ ಸಿಬ್ಬಂದಿ ಮುಷ್ಕರದ ಬಿಸಿ ಸರ್ಕಾರಕ್ಕೇ ತಟ್ಟುವುದೇ?

ರೈತರನ್ನು ದೇಶದ್ರೋಹಿಗಳು ಎಂದು ಕರೆದಂತೆ ಬ್ಯಾಂಕ್ ನೌಕರರಿಗೂ ಹಣೆ ಪಟ್ಟಿ ಹಚ್ಚಲಾಗುತ್ತಾ ಎಂಬುವುದನ್ನು ಕಾದು ನೋಡಬೇಕಷ್ಟೇ.
ಖಾಸಗೀಕರಣದ ವಿರುದ್ದ ಬ್ಯಾಂಕ್‌ ಸಿಬ್ಬಂದಿ ಮುಷ್ಕರದ ಬಿಸಿ ಸರ್ಕಾರಕ್ಕೇ ತಟ್ಟುವುದೇ?

ಫೆಬ್ರವರಿ 1 ರಂದು ಮಂಡಿಸಿದ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಐಡಿಬಿಐ ಬ್ಯಾಂಕ್ ಹೊರತುಪಡಿಸಿ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣವನ್ನು 1.75 ಲಕ್ಷ ಕೋಟಿ ರೂ.ಗಳನ್ನು ಗಳಿಸುವ ಸರ್ಕಾರದ ಹೂಡಿಕೆಯ ಯೋಜನೆಯ ಭಾಗವಾಗಿ ಘೋಷಿಸಿದ್ದರು.

ಖಾಸಗೀಕರಣಕ್ಕಾಗಿ ಕಿರುಪಟ್ಟಿ ಮಾಡಿದ ಹೆಸರುಗಳನ್ನು ಸೀತಾರಾಮನ್ ಉಲ್ಲೇಖಿಸದಿದ್ದರೂ, ಫೆಬ್ರವರಿ 15 ರಂದು ರಾಯಿಟರ್ಸ್ ಮಾಡಿದ ವರದಿಯ ಪ್ರಕಾರ ಇದರಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸೇರಿವೆ.

"ಮಾರ್ಚ್ 4, 9 ಮತ್ತು 10 ರಂದು ಹೆಚ್ಚುವರಿ ಮುಖ್ಯ ಕಾರ್ಮಿಕ ಆಯುಕ್ತರೊಂದಿಗಿನ ಸಭೆ ಯಾವುದೇ ಸಕಾರಾತ್ಮಕ ಫಲಿತಾಂಶವನ್ನು ನೀಡಿಲ್ಲ" ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಪಿಟಿಐಗೆ ತಿಳಿಸಿದ್ದಾರೆ. "ಆದ್ದರಿಂದ, ಮಾರ್ಚ್ 15 ಮತ್ತು 16 ರಂದು ನಿರಂತರ ಎರಡು ದಿನಗಳವರೆಗೆ ಮುಷ್ಕರವನ್ನು ಮುಂದುವರಿಸಲು ನಿರ್ಧರಿಸಲಾಗಿದೆ" ಎಂದು ಅವರು ಹೇಳಿದರು. "ಸುಮಾರು 10 ಲಕ್ಷ ಬ್ಯಾಂಕ್ ನೌಕರರು ಮತ್ತು ಬ್ಯಾಂಕುಗಳ ಅಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ" ಎಂದೂ ಅವರು ಹೇಳಿದ್ದಾರೆ.

ಒಂಬತ್ತು ಬ್ಯಾಂಕ್ ಒಕ್ಕೂಟಗಳ ಸಂಸ್ಥೆಯಾದ 'ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್' ಮುಷ್ಕರಕ್ಕೆ ಕರೆ ನೀಡಿದೆ. ಶನಿವಾರ ಮತ್ತು ಭಾನುವಾರದಂದು ಬ್ಯಾಂಕುಗಳಿಗೆ ಎಂದಿನ‌ ರಜೆ ಇರುವುದರಿಂದ ನಿರಂತರ ನಾಲ್ಕು ದಿನಗಳ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಈ ಮುಷ್ಕರವು ಠೇವಣಿ ಮತ್ತು ವಾಪಸಾತಿ, ಚೆಕ್ ಕ್ಲಿಯರೆನ್ಸ್ ಮತ್ತು ಸಾಲ ಅನುಮೋದನೆಗಳಂತಹ ಸೇವೆಗಳ ಮೇಲೆ ಪರಿಣಾಮ ಬೀರಬಹುದು. ಆದರೆ ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ.

ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ, ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ, ಬ್ಯಾಂಕ್ ನೌಕರರ ಒಕ್ಕೂಟ, ಭಾರತೀಯ ರಾಷ್ಟ್ರೀಯ ಬ್ಯಾಂಕ್ ನೌಕರರ ಒಕ್ಕೂಟ, ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್, ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಸ್ಥೆ , ಮತ್ತು ಬ್ಯಾಂಕ್ ಕಾರ್ಮಿಕರ ರಾಷ್ಟ್ರೀಯ ಸಂಸ್ಥೆ ಸೋಮವಾರದ ಪ್ರತಿಭಟನೆಯಲ್ಲಿ ಭಾಗವಹಿಸಲಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಖಾಸಗಿ ಬ್ಯಾಂಕುಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್‌ ಈ ಮುಷ್ಕರದಲ್ಲಿ‌ ಪಾಲ್ಗೊಳ್ಳುವುದಿಲ್ಲ. ಆದರೆ ಈ ಖಾಸಗಿ ಬ್ಯಾಂಕುಗಳು ದೇಶದ ಮೂರನೇ ಒಂದು ಭಾಗದಷ್ಟು ಬ್ಯಾಂಕಿಂಗ್ ಸೇವೆಗಳಿಗೆ ಮಾತ್ರ ಸೀಮಿತವಾಗಿವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕುಗಳು ಈಗಾಗಲೇ ತಮ್ಮ ಗ್ರಾಹಕರಿಗೆ ಶಾಖೆಗಳಲ್ಲಿನ ಸೇವೆಗಳಲ್ಲಿ ವ್ಯತ್ಯಯ ಆಗಬಹುದು ಎಂದು ತಿಳಿಸಿದ್ದಾರೆ.

ಎರಡು ದಿನಗಳ ಮುಷ್ಕರದಲ್ಲಿ ಬಹುತೇಕ ಎಲ್ಲ ಬ್ಯಾಂಕ್ ನೌಕರರು ಭಾಗವಹಿಸುತ್ತಿದ್ದಾರೆ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸೌಮ್ಯ ದತ್ತಾ ತಿಳಿಸಿದ್ದಾರೆ. "ಎಲ್ಲಾ ಬ್ಯಾಂಕಿಂಗ್ ಸೇವೆಗಳು ನಗದು ಹಿಂಪಡೆಯುವಿಕೆಯಿಂದ ಠೇವಣಿ, ವ್ಯವಹಾರ ವಹಿವಾಟು, ಸಾಲ ಪ್ರಕ್ರಿಯೆ, ಚೆಕ್ ಕ್ಲಿಯರಿಂಗ್, ಖಾತೆ ತೆರೆಯುವಿಕೆ ಮತ್ತು ವ್ಯವಹಾರ ವಹಿವಾಟುಗಳಿಗೆ ಪರಿಣಾಮ ಬೀರಲಿವೆ" ಎಂದು ಅವರು ಪಿಟಿಐಗೆ ತಿಳಿಸಿದರು.

"ಎಲ್ಲೆಲ್ಲಿ ಅನುಮತಿ ನೀಡುತ್ತಾರೋ ಅಲ್ಲೆಲ್ಲಾ ಪ್ರತಿಭಟನಾಕಾರರು ರ‌್ಯಾಲಿಗಳನ್ನು‌ ನಡೆಸಲಿದ್ದಾರೆ ಮತ್ತು ಸೋಮವಾರ ದೇಶಾದ್ಯಂತ ಧರಣಿ ನಡೆಸಲಿದ್ದಾರೆ " ಎಂದು ಅವರು ಹೇಳಿದ್ದಾರೆ. "ಸರ್ಕಾರವು ಅವರ ಮಾತನ್ನು ಕೇಳದಿದ್ದರೆ, ಈಗ ನಡೆಯುತ್ತಿರುವ ರೈತರ ಆಂದೋಲನದಂತೆ ಇನ್ನೂ ದೊಡ್ಡದಾದ ಅನಿರ್ದಿಷ್ಟ ಮುಷ್ಕರಕ್ಕೆ ನೌಕರರು‌ ಇಳಿಯಲಿದ್ದಾರೆ" ಎಂದು ಅವರು ಎಚ್ಚರಿಸಿದರು.

ಆದರೆ ಸರ್ಕಾರ ನೋಟ್ ಬ್ಯಾನ್, ಆಧಾರ್ ಕಡ್ಡಾಯದಂತಹ ಬ್ಯಾಂಕ್ ಗೆ ಸಂಬಂಧಿಸಿದ ಅನಗತ್ಯದ ಕಾಯ್ದೆಗಳನ್ನು ಜಾರಿಗೆ ತಂದಾಗ ಇದೇ ಬ್ಯಾಂಕ್ ನೌಕರರು ಸರ್ಕಾರವನ್ನು ಮೌನವಾಗಿ ಬೆಂಬಲಿಸಿದ್ದರು, ಬ್ಯಾಂಕ್‌ಗಳ ವಿಲೀನವಾದಗಲೂ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿರಲಿಲ್ಲ. ಸಿಎಎ ವಿರುದ್ಧದ ಪ್ರತಿಭಟನೆಗಾಗಲೀ, ರೈತರ ಪ್ರತಿಭಟನೆಗಾಗಲೀ ಬ್ಯಾಂಕ್ ನೌಕರರು ಬೆಂಬಲ ಸೂಚಿಸಿರಲಿಲ್ಲ. ಈಗ ತಮ್ಮ ಬುಡಕ್ಕೆ ಬಂದಾಗ ಮುಷ್ಕರಕ್ಕೆ ಸಾರ್ವಜನಿಕರ ಬೆಂಬಲ ಕೋರುವುದು ಎಷ್ಟು ಸರಿ‌ ಎಂಬ ಪ್ರಶ್ನೆಗಳೂ ಎದ್ದಿವೆ.

1969ರಲ್ಲಿ ಇಂದಿರಾಗಾಂಧಿಯವರು ಖಾಸಗಿಯವರ ಕೈಯಲ್ಲಿದ್ದ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ್ದರು. ತನ್ನನ್ನು ಮತ್ತೆ ಜನರ ನಾಯಕಿಯಾಗಿ ಪ್ರತಿಷ್ಠಾಪಿಸಿಕೊಳ್ಳುವ ರಾಜಕೀಯ ಉದ್ದೇಶ ಮತ್ತು ಬ್ಯಾಂಕಿಂಗ್ ಸೇವೆಗಳು ಸಮಾಜದ ಎಲ್ಲಾ ಸ್ತರದ ಜನರನ್ನು ತಲುಪುವ ಸಾಮಾಜಿಕ ಉದ್ದೇಶಗಳಾಚೆಗೆ ರಾಷ್ಟ್ರೀಕರಣದ ಹಿಂದೆ ಮಹತ್ವದ ಆರ್ಥಿಕ ಉದ್ದೇಶಗಳೂ ಇದ್ದವು.

1969ರ ವರೆಗೂ ಭಾರತೀಯ ಬ್ಯಾಂಕುಗಳು ಕೃಷಿಗೆ ಸಾಲ ನೀಡಲು ಸಿದ್ಧರಿಲ್ಲ ಎಂಬ ದೀರ್ಘಕಾಲದ ಟೀಕೆ ಇತ್ತು. ಅಲ್ಲದೆ, ಖಾಸಗಿ ಬ್ಯಾಂಕುಗಳನ್ನು ದೊಡ್ಡ ಕೈಗಾರಿಕೋದ್ಯಮಿಗಳು ನಡೆಸುತ್ತಿದ್ದರಿಂದ, ಅವರು ತಮಗೆ ಬೇಕಾದಂತೆ ಕೈಗಾರಿಕಾ ಕ್ಷೇತ್ರಕ್ಕೆ ಮಾತ್ರ ಸಾಲ ನೀಡುತ್ತಿದ್ದರು.

1951ರಲ್ಲಿ ಸಾಲದಲ್ಲಿ ಕೃಷಿಯ ಪಾಲು 2 ಪ್ರತಿಶತ ಮತ್ತು 1967 ರಲ್ಲೂ ಈ‌ ಪಾಲು ಬದಲಾಗಿರಲಿಲ್ಲ. ಆದರೆ, ಉದ್ಯಮದ ಪಾಲು 1951 ರಲ್ಲಿ 34 ಪ್ರತಿಶತದಿಂದ 1967 ರಲ್ಲಿ 64.3 ಕ್ಕೆ ಏರಿತ್ತು.

ಬ್ಯಾಂಕುಗಳು 1950 ರ ದಶಕದಲ್ಲಿ ಸುಮಾರು 4,000 ದಿಂದ 1967 ರ ವೇಳೆಗೆ ಸುಮಾರು 7,000 ಕ್ಕೆ ಏರಿತು. ಆದರೆ ಗ್ರಾಮೀಣ ಮತ್ತು ಅರೆ ನಗರ ಶಾಖೆಗಳ ಪಾಲು 61 ಪ್ರತಿಶತದಷ್ಟೇ ಇತ್ತು. ನಗರ ಶಾಖೆಗಳ ಪಾಲು 1952 ರಲ್ಲಿ 36 ಪ್ರತಿಶತದಿಂದ 1967 ರಲ್ಲಿ 39 ಪ್ರತಿಶತಕ್ಕೆ ಏರಿತ್ತು.

ಈ ಎಲ್ಲಾ ಕಾರಣಕ್ಕಾಗಿ ಬ್ಯಾಂಕುಗಳ‌ ರಾಷ್ಟ್ರೀಕರಣದಂತಹ ಅತಿ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಹೀಗಾಗಿಯೇ 'ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಇತಿಹಾಸ'ದ ಮೂರನೆಯ ಸಂಪುಟವು ಬ್ಯಾಂಕುಗಳ ರಾಷ್ಟ್ರೀಕರಣವನ್ನು "1947 ರಿಂದ ಯಾವುದೇ ಸರ್ಕಾರವು ತೆಗೆದುಕೊಂಡ ಏಕೈಕ ಪ್ರಮುಖ ಆರ್ಥಿಕ ನಿರ್ಧಾರ" ಎಂದು ಕರೆದಿದೆ.

ಈಗ ಕೇಂದ್ರ ಸರ್ಕಾರವು ರಾಷ್ಟ್ರೀಕರಣಗೊಂಡ ಬ್ಯಾಂಕುಗಳನ್ನು ಮತ್ತೆ ಖಾಸಗಿಯವರ ಕೈಗೊಪ್ಪಿಸಲು ಹೊರಟಿವೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಕೇವಲ ಉದ್ಯಮಗಳಲ್ಲ, ಸಾಮಾಜಿಕ ಪರಿವರ್ತನೆಯ ವಾಹಕಗಳಾಗಿಯೂ ಸೇವೆ ಸಲ್ಲಿಸಿವೆ.‌ ಸಹಜವಾಗಿಯೇ ಬ್ಯಾಂಕಿಂಗ್ ನೌಕರರು ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ.

ಸಮಾಜದ ಎಲ್ಲಾ ವಲಯಗಳಿಂದಲೂ ಬ್ಯಾಂಕ್ ನೌಕರರಿಗೆ ಬೆಂಬಲವೂ ವ್ಯಕ್ತವಾಗಿದೆ. ಜನರಿಗೆ ಉಂಟಾಗಲಿರುವ ಅನನುಕೂಲತೆಗೆ ಮೋದಿ ಸರ್ಕಾರವೇ ಕಾರಣ ಎಂದಿರುವ ಕಾಂಗ್ರೆಸ್ ನೌಕರರ ಮುಷ್ಕರಕ್ಕೆ ಪೂರ್ಣ ಪ್ರಮಾಣದ ಬೆಂಬಲ ವ್ಯಕ್ತಪಡಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಮುಖ್ಯ ವಕ್ತಾರ ರಣ‌್ ದೀಪ್ ಸುರ್ಜೆವಾಲಾ "ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣದ ವಿರುದ್ಧದ ಮುಷ್ಕರದಲ್ಲಿ 10 ಲಕ್ಷ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸುವುದರೊಂದಿಗೆ ನಾವು ನಿಲ್ಲುತ್ತೇವೆ. 'ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್' ಕರೆದಿರುವ ಮುಷ್ಕರವು ಮೋದಿ ಸರ್ಕಾರದ ಕೆಟ್ಟ ಯೋಜನೆಗಳ ವಿರುದ್ಧದ ಆಕ್ರೋಶವಾಗಿದೆ. ಜನರು ಎದುರಿಸುತ್ತಿರುವ ಅನನುಕೂಲತೆಗೆ ಮೋದಿ ಸರ್ಕಾರವೇ ಕಾರಣ ”ಎಂದು ಹೇಳಿದ್ದಾರೆ.

ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಸರ್ಕಾರದ ಕ್ರಮವನ್ನು ಟೀಕಿಸಿದ್ದು, ಇದೊಂದು "ದೊಡ್ಡ ತಪ್ಪು" ಎಂದು ಕರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ಅವಧಿ ಈಗಾಗಲೇ ಸಿಎಎ ವಿರೋಧಿ ಹೋರಾಟ, ರೈತ ಪ್ರತಿಭಟನೆಯಂತಹ ದೊಡ್ಡ ಮಟ್ಟದ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದು ಈ ಬ್ಯಾಂಕ್ ನೌಕರರ ಪ್ರತಿಭಟನೆಯೂ ಅದೇ ಸಾಲಿಗೆ ಸೇರುತ್ತಾ, ಸಿಎಎ ವಿರೋಧಿ ಹೋರಾಟಗಾರರನ್ನು, ರೈತರನ್ನು ದೇಶದ್ರೋಹಿಗಳು ಎಂದು ಕರೆದಂತೆ ಬ್ಯಾಂಕ್ ನೌಕರರಿಗೂ ಹಣೆ ಪಟ್ಟಿ ಹಚ್ಚಲಾಗುತ್ತಾ ಎಂಬುವುದನ್ನು ಕಾದು ನೋಡಬೇಕಷ್ಟೇ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com