ಅಚ್ಛೇದಿನ ಭರವಸೆಯ ಹಿಂದಿನ ಸತ್ಯ ಸಾರುವ ಹಣದುಬ್ಬರ!

ಹಾವು ಬಡಿದು ಹದ್ದಿಗೆ ಹಾಕಿದರು ಎಂಬಂತೆ, ಬಡವನ ಬಡಿದು ಬಲ್ಲಿದರ ಖಜಾನೆ ತುಂಬಿಸುವ ಕೆಲಸ ಅಚ್ಛೇದಿನದ ಭರವಸೆಯ ಮೇಲೆ ಅಧಿಕಾರಕ್ಕೆ ಬಂದವರಿಂದಲೇ ನಡೆಯುತ್ತಿದೆ ಎಂಬುದಕ್ಕೆ ಹಣದುಬ್ಬರದ ಹಿಂದಿನ ಈ ಗುಟ್ಟುಗಳೇ ಸಾಕ್ಷಿ!
ಅಚ್ಛೇದಿನ ಭರವಸೆಯ ಹಿಂದಿನ ಸತ್ಯ ಸಾರುವ ಹಣದುಬ್ಬರ!

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದಿಂದ ಹಿಡಿದು ಹೊತ್ತಿನ ಊಟದ ಸೊಪ್ಪು ತರಕಾರಿಯವರೆಗೆ ಎಲ್ಲಾ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಸದ್ಯದ ಸ್ಥಿತಿಯಲ್ಲಿ ಈ ಏರುಗತಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರದ ಕಡೆಯಿಂದ ಯಾವುದೇ ಪ್ರಯತ್ನಗಳು ಕಾಣದೇ ಇರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳು ಇನ್ನಷ್ಟು ದುರ್ಬರವಾಗುವ ಸೂಚನೆಗಳೇ ಹೆಚ್ಚಿವೆ.

ಪ್ರಧಾನಿ ಮೋದಿಯವರು ಈ ಹಿಂದೆ ನೀಡಿದ್ದ ‘ಅಚ್ಛೇದಿನ’, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’, ‘ಸದೃಢ ಭಾರತ, ಬಲಿಷ್ಠ ಭಾರತ’ ಮುಂತಾದ ಭರವಸೆಗಳು ವಾಸ್ತವವಾಗಿ ಏನಾಗಿವೆ ಎಂಬುದನ್ನು ಈ ದುಬಾರಿ ದಿನಗಳು ಪ್ರತಿ ಭಾರತೀಯನಿಗೂ ವೈಯಕ್ತಿಕವಾಗಿ ಅನುಭವಕ್ಕೆ ತರುತ್ತಿವೆ. ಅದರಲ್ಲೂ ಜನಸಾಮಾನ್ಯರ ಪಾಲಿಗಂತೂ ಜೀವಮಾನದಲ್ಲೇ ಕಾಣದಂತಹ ಸಂಕಷ್ಟವನ್ನು ತಂದೊಡ್ಡಿವೆ ಎಂದರೂ ತಪ್ಪಾಗಲಾರದು.

ಈ ನಡುವೆ, ದೇಶದ ಹಣದುಬ್ಬರ ಪರಿಸ್ಥಿತಿ ದಿನದಿಂದ ದಿನಕ್ಕೇ ಕೈಮೀರುತ್ತಿದ್ದು, ಗ್ರಾಹಕರ ಖರೀದಿ ಸಾಮರ್ಥ್ಯ ಪಾತಾಳಮುಖಿಯಾಗಿದೆ. ಇದನ್ನು ಸ್ವತಃ ಮೋದಿಯವರ ಸರ್ಕಾರವೇ ಶುಕ್ರವಾರ ಬಿಡುಗಡೆ ಮಾಡಿರುವ ಹಣದುಬ್ಬರ ಅಂಕಿಅಂಶಗಳು ಸಾರಿ ಹೇಳುತ್ತಿವೆ. ಮುಖ್ಯವಾಗಿ ಇಂಧನ ಬೆಲೆ(ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ)ಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಿರಂತರ ಆಗುತ್ತಿರುವ ಭಾರೀ ಏರಿಕೆ ಮತ್ತು ಅದೇ ಹೊತ್ತಿಗೆ ಆಹಾರ ಸಾಮಗ್ರಿಗಳ ಬೆಲೆಯಲ್ಲಿನ ಭಾರೀ ಏರಿಕೆ ಈ ಹಣದುಬ್ಬರಕ್ಕೆ ಕಾರಣ ಎಂದು ಸರ್ಕಾರ ಹೇಳಿದೆ.

ಸರ್ಕಾರದ ಮಾಹಿತಿ ಪ್ರಕಾರ, ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ.5.3ಕ್ಕೆ ಏರಿಕೆಯಾಗಿದೆ. ಕಳೆದ ಜನವರಿಯಲ್ಲಿ ಶೇ.4.06ರಷ್ಟಿದ್ದ ಅದು, ಏಕಾಏಕಿ ಏರಿಕೆ ಕಂಡಿದೆ. ಹಾಗೇ ಜನವರಿಯಲ್ಲಿ ಶೇ.1.96ರಷ್ಟಿದ್ದ ಆಹಾರ ಹಣದುಬ್ಬರ ಪ್ರಮಾಣ, ಫೆಬ್ರವರಿಯಲ್ಲಿ ಶೇ.3.87ಕ್ಕೆ ಏರಿದೆ. ಅಂದರೆ, ಆಹಾರ ಹಣದುಬ್ಬರ ದರವು ಈ ಒಂದು ತಿಂಗಳಲ್ಲೇ ದುಪ್ಪಟ್ಟು ಏರಿಕೆ ಕಂಡಿದೆ. ಆಹಾರ ಧಾನ್ಯಗಳ ಹಣದುಬ್ಬರ ಹೆಚ್ಚಳವು ಫೆಬ್ರವರಿಯಲ್ಲಿ ಶೇ.10.25ರಷ್ಟು ಹೆಚ್ಚಾಗಿದೆ. ಹಾಗೇ ಹಣ್ಣುಗಳ ಹಣದುಬ್ಬರ ಪ್ರಮಾಣ ಕೂಡ ಶೇ.9.48ರಷ್ಟು ಹೆಚ್ಚಾಗಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ.

ಹಣದುಬ್ಬರ ಎಂದರೆ; ವಸ್ತುವಿನ ಬೆಲೆ ಏರಿಕೆ ಮತ್ತು ಅದಕ್ಕೆ ವ್ಯತಿರಿಕ್ತವಾಗಿ ಹಣದ ಮೌಲ್ಯ ಕುಸಿತ. ಅಂದರೆ ಗ್ರಾಹಕನ ಜೇಬಿನಲ್ಲಿರುವ ಹಣದ ಕೊಳ್ಳುವ ಶಕ್ತಿ ಕುಂಠಿತವಾಗುವುದು ಎಂದು. ಹಾಗಾಗಿ ಬಡವರು, ಕೂಲಿಕಾರ್ಮಿಕರ ದಿನದ ದುಡಿಮೆ ಏಕ ರೀತಿಯಲ್ಲೇ ಇದ್ದು, ಅವರ ಹೊತ್ತಿನ ಊಟದ ಆಹಾರ ಪದಾರ್ಥಗಳು, ದಿನಗಳಕೆ ವಸ್ತುಗಳು, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆಗಳು ಮಾತ್ರ ಏರುತ್ತಲೇ ಇರುತ್ತವೆ. ಅಂದರೆ; ಒಬ್ಬ ದಿನಗೂಲಿ ಕಾರ್ಮಿಕನ ತಿಂಗಳ ಆದಾಯ ಆರು ಸಾವಿರ ರೂಪಾಯಿಗಳಾಗಿದ್ದರೆ, ಆತನ ಆದಾಯದಲ್ಲಿ ಯಾವುದೇ ಬದಲಾವಣೆಯಾಗದೇ ಇದ್ದರೂ, ಆತನ ಕರ್ಚುಗಳಲ್ಲಿ ಭಾರೀ ಏರಿಕೆಯಾಗುತ್ತದೆ.

ಉದಾಹರಣೆಗೆ ಕಳೆದ ಎರಡು ತಿಂಗಳ ಅವಧಿಯಲ್ಲಿ ಆತನ ಗೃಹಬಳಕೆ ಸಿಲಿಂಡರೊಂದಕ್ಕೆ ಹೆಚ್ಚುವರಿಯಾಗಿ 300 ರೂ.ನಷ್ಟು ತೆರಬೇಕಾಗಿದೆ. ಪೆಟ್ರೋಲ್ ಗೆ ಹೆಚ್ಚುವರಿಯಾಗಿ ಪ್ರತಿ ಲೀಟರಿಗೆ 18-20 ರೂ. ತೆರಬೇಕಾಗಿದೆ. ಎರಡು ದಿನಕ್ಕೆ ಒಂದು ಲೀಟರ್ ಪೆಟ್ರೋಲ್ ಬಳಸಿದರೂ ಎರಡು ಎರಡು ತಿಂಗಳಿಗೆ ಆತ ಸುಮಾರು 600 ರೂ. ಹೆಚ್ಚುವರಿ ವೆಚ್ಚ ಮಾಡಬೇಕಾಗಿದೆ. ಹಾಗೇ ಅಡುಗೆ ಎಣ್ಣೆ, ಧಾನ್ಯ, ತರಕಾರಿ, ಹಣ್ಣುಗಳ ಬೆಲೆಯಲ್ಲಿ ಈ ಎರಡು ತಿಂಗಳಲ್ಲಿ ಆಗಿರುವ ಸರಾಸರಿ ಏರಿಕೆಯನ್ನು ಗಣನೆಗೆ ತೆಗೆದುಕೊಂಡರೆ ಆತ ಕನಿಷ್ಟ ತಿಂಗಳಿಗೆ ಒಂದು ಸಾವಿರ ರೂ. ಹೆಚ್ಚುವರಿಯಾಗಿ ವ್ಯಯ ಮಾಡಬೇಕಿದೆ. ಅಂದರೆ ಎರಡು ತಿಂಗಳಿಗೆ ಎರಡು ಸಾವಿರ! ಹಾಗಾಗಿ ದಿನಗೂಲಿಯೊಬ್ಬನ ದೈನಂದಿನ ಅನಿವಾರ್ಯ ವೆಚ್ಚಗಳಲ್ಲೇ ಆತನ ದುಡಿಮೆಯಲ್ಲಿ ವಾಡಿಕೆಗಿಂತ ಹೆಚ್ಚುವರಿಯಾಗಿ ಎರಡು ಸಾವಿರ ರೂಪಾಯಿಯಾದರೂ ತಿಂಗಳಿಗೆ ಕೈಬಿಡುತ್ತಿದೆ!

ದೇಶದ ಬಡವರು ಮತ್ತು ಜನಸಾಮಾನ್ಯರು ಹೀಗೆ ದಿನದಿಂದ ದಿನಕ್ಕೆ ಸಂಕಷ್ಟದ ಕೂಪಕ್ಕೆ ಕುಸಿಯುತ್ತಿದ್ದರೆ, ಅದೇ ಹೊತ್ತಿಗೆ ದೇಶದ ಗ್ರಾಹಕ ಸರಕು ಮತ್ತು ಆಹಾರೋತ್ಪನ್ನ ಮಾರಾಟಗಾರರು ತಮ್ಮ ಲಾಭದಲ್ಲಿ ಭಾರೀ ಏರಿಕೆ ಕಾಣುತ್ತಿದ್ದಾರೆ. ಬಡವರನ್ನು ಬಡಿದು ಶ್ರೀಮಂತರ ಬಾಯಿಗೆ ಹಾಕುವ ಹೊಸ ಅಚ್ಛೇದಿನದ ಆರ್ಥಿಕತೆ ದೇಶದಲ್ಲಿ ಜಾರಿಯಲ್ಲಿದೆ ಎಂಬುದಕ್ಕೆ ಇತ್ತೀಚೆಗೆ ತಾನೇ ಬಿಡುಗಡೆಯಾದ ವರದಿಯೊಂದರ ಪ್ರಕಾರ, ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮೇಲೆ ಮೇಲೆ ಏರುತ್ತಿರುವ ದೇಶದ ಮುಂಚೂಣಿ ಗ್ರಾಹಕ ವಸ್ತು ಮತ್ತು ಆಹಾರ ಸಾಮಗ್ರಿ ಮಾರಾಟಗಾರರೇ ಸಾಕ್ಷಿ. ಒಂದು ಕಡೆ ಅದಾನಿ, ಮತ್ತೊಂದು ಕಡೆ ಅಂಬಾನಿಯ ಆಸ್ತಿಯಲ್ಲಿ, ಸಂಪತ್ತಿನಲ್ಲಿ ಭಾರೀ ಏರಿಕೆಯಾಗುತ್ತಿದ್ದರೆ, ದೇಶದ ಜನಸಾಮಾನ್ಯರು ಬೀದಿಪಾಲಾಗುತ್ತಿದ್ದಾರೆ.

ಹಾಗೇ, ಈ ಹಣದುಬ್ಬರಕ್ಕೆ ಸರ್ಕಾರ ನೀಡಿರುವ ಪ್ರಮುಖ ಎರಡು ಕಾರಣಗಳಲ್ಲಿ ಮೊದಲನೆಯದು; ಇಂಧನ ಬೆಲೆ ಏರಿಕೆ. ಇಂಧನ ಬೆಲೆ ಏರಿಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಕೆಲವು ತಿಂಗಳಿಂದ(ಕರೋನಾ ಲಾಕ್ ಡೌನ್ ಬಳಿಕ) ಲಾಕ್ ಡೌನ್ ಅವಧಿಗೆ ಹೋಲಿಸಿದರೆ ಏರಿಕೆ ಕಂಡಿದೆ ಎಂಬುದು ನಿಜ. ಆದರೆ, ಮೋದಿಯವರು ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡ 2014ರಲ್ಲಿ ತಾವು ಅಧಿಕಾರಕ್ಕೆ ಬರುತ್ತಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಇಳಿಕೆ ಮಾಡುವುದಾಗಿ ಹೇಳಿದ್ದರು. ಆದರೆ, ಆಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ 120 ಡಾಲರ್ ಆಸುಪಾಸಿನಲ್ಲಿದ್ದಾಗ, ದೇಶದಲ್ಲಿ ಪೆಟ್ರೋಲ್ 75 ರೂ. ಆಸುಪಾಸಿನಲ್ಲಿತ್ತು. ಈಗ ಕಚ್ಛಾತೈಲ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 70 ಡಾಲರ್ ಆಸುಪಾಸಿನಲ್ಲಿದೆ. ಆದರೆ, ಭಾರತದಲ್ಲಿ ಲೀಟರ್ ಪೆಟ್ರೋಲ್ ದರ ಬರೋಬ್ಬರಿ ನೂರು ರೂ. ಗಡಿ ತಲುಪಿದೆ. ವಾಸ್ತವವಾಗಿ, ಸದ್ಯದ ಕಚ್ಛಾ ತೈಲ ಬೆಲೆ ಮತ್ತು ಸಂಸ್ಕರಣೆಯ ವೆಚ್ಚ ಸೇರಿ ಪೆಟ್ರೋಲ್ ಬೆಲೆ 32 ರೂ. ಆಸುಪಾಸಿನಲ್ಲಿರಬೇಕಿದೆ. ಆದರೆ, ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಸೆಸ್ ಸೇರಿ ಮೂಲ ಬೆಲೆಯ ಮೂರು ಪಟ್ಟು ತೆರಿಗೆ ವಿಧಿಸುತ್ತಿವೆ. ಹಾಗಾಗಿ ಬೆಲೆ ನೂರು ರೂ. ಆಸುಪಾಸಿನಲ್ಲಿದೆ.

ಹಾಗಾದರೆ, ಇತರೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುವ ಮೂಲಕ ಹಣದುಬ್ಬರ ಏರಿಕೆಗೆ ಮತ್ತು ಅಂತಿಮವಾಗಿ ಬಡವರ ಬದುಕು ದುರ್ಬರವಾಗಲು ಕಾರಣವಾಗಿರುವ ಇಂಧನ ದರಕ್ಕೆ ಕಡಿವಾಣ ಹಾಕಿ, ಬಡವರ ಬದುಕನ್ನು ಕಾಪಾಡುವ ಹೊಣೆ ಸರ್ಕಾರದ್ದೇ ಅಲ್ಲವೆ?

ಹಾಗೇ, ಬಡವರ ಜೇಬು ಬರಿದು ಮಾಡುತ್ತಿರುವ ಹಣದುಬ್ಬರಕ್ಕೆ ಸರ್ಕಾರ ನೀಡಿರುವ ಮತ್ತೊಂದು ಕಾರಣ; ಆಹಾರ ಪದಾರ್ಥಗಳ ಬೆಲೆ ಏರಿಕೆ. ವಾಸ್ತವವಾಗಿ ದೇಶದಲ್ಲಿ ಧಾನ್ಯಗಳು, ಹಣ್ಣು ತರಕಾರಿಗಳು ಸೇರಿದಂತೆ ಬಹುತೇಕ ಆಹಾರ ಪದಾರ್ಥಗಳ ಉತ್ಪಾದನೆ ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿರುವಾಗ, ದೇಶದ ಒಟ್ಟಾರೆ ಕೃಷಿ ಕ್ಷೇತ್ರದ ಉತ್ಪಾದಕತೆ ಗಣನೀಯ ಏರಿಕೆ ಕಂಡಿರುವಾಗ, ಆಹಾರ ಪದಾರ್ಥ ಬೆಲೆ ಏರಿಕೆಯನ್ನು ಹೇಗೆ ಅರ್ಥಮಾಡಿಕೊಳ್ಳುವುದು ಎಂಬುದು ಒಗಟಿನ ಪ್ರಶ್ನೆ. ಏಕೆಂದರೆ, ಸಾಮಾನ್ಯವಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವುದು ಎರಡು ಮುಖ್ಯ ಕಾರಣಗಳಿಂದ. ಒಂದು; ಬರ, ಪ್ರವಾಹ, ರೋಗ, ಕೀಟದಾಳಿ, ಅತಿವೃಷ್ಟಿ, ಅನಾವೃಷ್ಟಿಯಂತಹ ಪ್ರಾಕೃತಿಕ ವಿಕೋಪದಿಂದ ಬೆಳೆ ನಾಶವಾಗಿ ಉತ್ಪಾದನೆ ಕುಸಿದಾಗ. ಮತ್ತೊಂದು; ಉತ್ಪಾದನೆ ಹೆಚ್ಚಿದ್ದರೂ ಆಹಾರ ಧಾನ್ಯ, ತಕ್ಷಣಕ್ಕೆ ಕೆಡದ ಹಣ್ಣುಹಂಪಲು, ತರಕಾರಿಗಳನ್ನು ಕಾಳದಂಧೆಕೋರರು ದಾಸ್ತಾನು ಮಾಡುವುದರಿಂದ.

ಸರ್ಕಾರವೇ ಆಗಾಗ ನೀಡುವ ಅಧಿಕೃತ ಮಾಹಿತಿಗಳ ಪ್ರಕಾರ, ಕಳೆದ ವರ್ಷ ಮತ್ತು ಈ ವರ್ಷ ದೇಶದ ಆಹಾರ ಉತ್ಪನ್ನಗಳ ಉತ್ಪಾದನೆ ಗಣನೀಯವಾಗಿ ಹೆಚ್ಚಿದೆ. ಅದರಲ್ಲೂ 2020-21ರ ಅವಧಿಯಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಹಿಂದಿನ ವರ್ಷಗಳಿಗಿಂತ ಶೇ.2ರಷ್ಟು ಹೆಚ್ಚಾಗಿದೆ. ಅಂದರೆ; ಹಿಂದಿನ ಐದು ವರ್ಷದ ಸರಾಸರಿಗೆ ಹೋಲಿಸಿದರೆ, ಬರೋಬ್ಬರಿ 27.47 ಮಿಲಿಯರ್ ಟನ್ ನಷ್ಟು ಹೆಚ್ಚುವರಿ ಆಹಾರ ಧಾನ್ಯ ಉತ್ಪಾದನೆಯಾಗಿದೆ. ಇದು ಸರ್ಕಾರದ ಅಂದಾಜಿಗಿಂತ ಅತಿ ಹೆಚ್ಚು ಉತ್ಪಾದನೆಯ ದಾಖಲೆಯ ಪ್ರಗತಿ. ಹಾಗೇ ಕೇಂದ್ರ ಕೃಷಿ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, 2020-21ನೇ ಸಾಲಿನಲ್ಲಿ ಟ್ಯೊಮ್ಯಾಟೋ, ಬಾಳೆಹಣ್ಣು, ಈರುಳ್ಳಿ, ಆಲೂಗಡೆ ಮತ್ತಿತರ ಹಣ್ಣು ತರಕಾರಿಗಳ ಉತ್ಪಾದನೆಯಲ್ಲಿ ಕೂಡ ದಾಖಲೆಯ ಪ್ರಗತಿಯಾಗಿದೆ.

ಹಾಗಿದ್ದರೂ, ದೇಶದಲ್ಲಿ ಕಳೆದ ಒಂದು ವರ್ಷದಿಂದ ನಿರಂತರವಾಗಿ, ಕೋವಿಡ್ ಲಾಕ್ ಡೌನ್ ಬಳಿಕವೂ ಇಳಿಕೆಯಾಗದೇ ಏರುಗತಿಯಲ್ಲೇ ಇರುವ; ಅದರಲ್ಲೂ ಕಳೆದ ಎರಡು ಮೂರು ತಿಂಗಳಲ್ಲಿ ಹಿಂದೆಂದೂ ಕಂಡುಕೇಳರಿಯದ ಪ್ರಮಾಣದಲ್ಲಿ ಏರಿರುವ ಅಡುಗೆ ಎಣ್ಣೆ, ಹಿಟ್ಟು, ಧಾನ್ಯ, ತರಕಾರಿ, ಹಣ್ಣುಗಳ ಬೆಲೆ ಏರಿಕೆಯ ಹಿಂದಿನ ಅಸಲೀ ಕಾರಣವೇನು? ಹಾಗೇ ಸರ್ಕಾರ, ವಾಸ್ತವಾಂಶಗಳು ಬೆಲೆ ಇಳಿಕೆಗೆ ಪೂರಕವಾಗಿರುವಾಗಲೂ ವಿಪರೀತ ಬೆಲೆ ಏರಿಕೆಯ ಮೂಲಕ ಗ್ರಾಹಕರನ್ನು ಹಗಲುದರೋಡೆ ಮಾಡುತ್ತಿರುವ ವ್ಯಾಪಾರಿ ಜಾಲದ ವಿಷಯದಲ್ಲಿ ಕಣ್ಣುಮುಚ್ಚಿ ಕುಳಿತಿರುವುದರ ಹಿಂದೆ ಯಾರ ಹಿತಾಸಕ್ತಿ ಕಾಯುವ ಷಢ್ಯಂತ್ರವಿದೆ?

ಈ ಪ್ರಶ್ನೆಗೂ, ಆಹಾರೋತ್ಪನ್ನ ವಲಯದ ಬಹುದೊಡ್ಡ ಕಂಪನಿಗಳು, ಕರೋನಾ, ಲಾಕ್ ಡೌನ್, ಆರ್ಥಿಕ ಹಿಂಜರಿತಗಳ ಹೊರತಾಗಿಯೂ ಕಾಣುತ್ತಿರುವ ನಿರಂತರ ಲಾಭದಲ್ಲೇ ಉತ್ತರವಿದೆ. ಅದೂ ಆ ಮುಂಚೂಣಿ ಕಂಪನಿಗಳಲ್ಲಿ ಬಹುತೇಕ, ಪ್ರಧಾನಿ ಮೋದಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮತ್ತು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ವಿವಿಧ ರೀತಿಯಲ್ಲಿ ನೆರವಾಗುತ್ತಿರುವ ವ್ಯಕ್ತಿಗಳಿಗೆ ಸೇರಿವೆ ಎಂಬುದು ಕೂಡ ಗುಟ್ಟೇನಲ್ಲ!

ಹಾಗಾಗಿ, ಹಾವು ಬಡಿದು ಹದ್ದಿಗೆ ಹಾಕಿದರು ಎಂಬಂತೆ, ಬಡವನ ಬಡಿದು ಬಲ್ಲಿದರ ಖಜಾನೆ ತುಂಬಿಸುವ ಕೆಲಸ ‘ಅಚ್ಛೇದಿನ’ದ ಭರವಸೆಯ ಮೇಲೆ ಅಧಿಕಾರಕ್ಕೆ ಬಂದವರಿಂದಲೇ ನಡೆಯುತ್ತಿದೆ ಎಂಬುದಕ್ಕೆ ಹಣದುಬ್ಬರದ ಹಿಂದಿನ ಈ ಗುಟ್ಟುಗಳೇ ಸಾಕ್ಷಿ! ಹಾಗಾಗಿ ಅಚ್ಛೇದಿನ ನಿಜವಾಗಿಯೂ ಜನರ ಪಾಲಿಗೆ ಅಥವಾ ಪ್ರಧಾನಿಗಳ ಪರಮಾಪ್ತ ಉದ್ಯಮಪತಿಗಳ ಪಾಲಿಗೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ!

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com