ಅಧಿಕಾರಕ್ಕೆ ಬಂದ ಬಳಿಕ ಖಾಸಗೀಕರಣ ಹಾಗೂ ಮಾರಾಟಗಳಲ್ಲೇ ಹೆಚ್ಚಿನ ಆಸಕ್ತಿ ತೋರುತ್ತಿರುವ ಕೇಂದ್ರದ ಮೋದಿ ಸರ್ಕಾರವು ಇದೇ ಹಾದಿಯಲ್ಲಿ ಮತ್ತೊಂದು ಹೆಜ್ಜೆಯನ್ನಿಟ್ಟಿದೆ. ದೇಶದ ಪ್ರಮುಖ ವಿಮಾನ ನಿಲ್ದಾಣಗಳಾದ ಬೆಂಗಳೂರು, ದೆಹಲಿ, ಮುಂಬೈ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ, ಸರ್ಕಾರದ ಬಳಿ ಉಳಿದುಕೊಂಡಿರುವ ಷೇರುಗಳ ಮಾರಾಟಕ್ಕೆ ಕೇಂದ್ರ ಮುಂದಾಗಿದೆ.
ಈ ವಿಮಾನ ನಿಲ್ದಾಣಗಳ ಖಾಸಗಿಕರಣದ ಪ್ರಕ್ರಿಯೆಗಳು ಈಗಾಗಲೇ ನಡೆಯುತ್ತಿವೆ. ಕೇಂದ್ರ ಸರ್ಕಾರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶೇಕಡಾ 13 ಮತ್ತು ದೆಹಲಿ ವಿಮಾನ ನಿಲ್ದಾಣದಲ್ಲಿ ಶೇಕಡಾ 26 ಷೇರು ಪಾಲನ್ನು ಹೊಂದಿದೆ. ವಿಮಾನ ನಿಲ್ದಾಣಗಳನ್ನು ಈಗಾಗಲೇ ಖಾಸಗಿ ಕಂಪೆನಿಗಳು ನಿರ್ವಹಿಸುತ್ತಿವೆ.
.
ಇದೀಗ ಸರ್ಕಾರದ ಪಾಲಿನ ಎಲ್ಲಾ ಷೇರುಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ನಾಗರೀಕ ವಿಮಾನ ಸಚಿವಾಲಯ ನಿರ್ಧರಿಸಿದೆ. ಇದರಿಂದ 2022 ರ ವೇಳೆಗೆ 20 ಸಾವಿರ ಕೋಟಿ ನಗದು ಆದಾಯಗಳಿಸುವ ಗುರಿಯನ್ನು ಹೊಂದಿದೆ. ಈಗಾಗಲೇ ಮಂಗಳೂರು ಅಂತರಾಷ್ಟ್ರೀಯ ನಿಲ್ದಾಣ ಸರ್ಕಾರ ಖಾಸಗಿಯವರಿಗೆ ವಹಿಸಿಕೊಟ್ಟಿದ್ದು, ಅದಾನಿ ಗ್ರೂಪ್ ಅದನ್ನು ನಿರ್ವಹಿಸುತ್ತಿದೆ.
ಕೇಂದ್ರ ಸರ್ಕಾರ ಆದಾಯ ಗಳಿಕೆಯಿಂದ ಉದ್ದೇಶದಿಂದ ಖಾಸಗೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದರ ವಿರುದ್ಧ ವಿವಿಧ ಪ್ರತಿಭಟನೆಗಳು ನಡೆಯುತ್ತಿದ್ದು, ಸರ್ಕಾರ ಮಾತ್ರ ಯಾವುದಕ್ಕೂ ಕ್ಯಾರೇ ಅನ್ನುತ್ತಿಲ್ಲ.
ದೆಹಲಿಯ ಗಡಿಭಾಗಗಳಲ್ಲಿ ನಡೆಯುತ್ತಿರುವ ರೈತರ ಹೋರಾಟ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಸಗೀಕರಣ ನೀತಿಯನ್ನು ವಿರೋಧಿಸಿ ಬ್ಯಾಂಕ್ ನೌಕರರ ಮುಷ್ಕರ, ತೈಲ ಬೆಲೆ ಏರಿಕೆ ಖಂಡಿಸಿ ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳದೆ, ಸರ್ಕಾರ ಸರ್ವಾಧಿಕಾರದ ಆಡಳಿತ ತೋರುತ್ತಿದೆ ಎಂದು ದೇಶದ ಪ್ರಜ್ಞಾವಂತ ನಾಗರಿಕರು ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿದ್ದಾರೆ.