ಪಶ್ಚಿಮ ಘಟ್ಟ: ದಟ್ಟ ಕಾನನದಲ್ಲಿ ಮುಚ್ಚಿಹೋಗಿದ್ದ ಪೋರ್ಚುಗೀಸ್ ಯುಗದ ‌ ಪುರಾತನ ಕಟ್ಟಡ ಪತ್ತೆ

ಗೇಜ್ ಪರಿವರ್ತನೆಯ ಸಮಯದಲ್ಲಿ ರೈಲು ಮಾರ್ಗದಲ್ಲಿದ್ದ ಪೋರ್ಚುಗೀಸ್ ಯುಗದ ಹಲವಾರು ಐತಿಹಾಸಿಕ ರಚನೆಗಳನ್ನು ಕೆಡವಲಾಗಿತ್ತು. ಹೊಸದಾಗಿ ಪತ್ತೆಯಾದ ಈ ರಚನೆಯು ಪೋರ್ಚುಗೀಸ್ ಅವಧಿಯ ಇತಿಹಾಸ ಮತ್ತು ಪೊರ್ಚುಗೀಸರ ವಾಸ್ತುಶಿಲ್ಪದ ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಿದೆ
ಪಶ್ಚಿಮ ಘಟ್ಟ: ದಟ್ಟ ಕಾನನದಲ್ಲಿ ಮುಚ್ಚಿಹೋಗಿದ್ದ ಪೋರ್ಚುಗೀಸ್ ಯುಗದ ‌ ಪುರಾತನ ಕಟ್ಟಡ ಪತ್ತೆ

ಕರ್ನಾಟಕ-ಗೋವಾ ಗಡಿ ಪ್ರಾಂತ್ಯದ ದಟ್ಟ ಪಶ್ಚಿಮ ಘಟ್ಟದ ಕಾಡಿನಲ್ಲಿ ಮುಚ್ಚಿಹೋಗಿದ್ದ ಪೋರ್ಚುಗೀಸ್‌ ಕಾಲದ ಪುರಾತನ ಕಟ್ಟಡವನ್ನು ನೈಋತ್ಯ ರೈಲ್ವೇಯ ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಸುಮಾರು 135 ವರ್ಷಗಳ ಹಿಂದೆ ನಿರ್ಮಿಸಲಾದ ಎರಡು ಅಂತಸ್ತಿನ ಕಟ್ಟಡವು ಕ್ಯಾಸಲ್‌ರಾಕ್‌ ಸಮೀಪದ ಬರ್ಗಾಂಝಾ ಘಾಟಿಯಲ್ಲಿದೆ. ಇದು ಪ್ರಸಿದ್ಧ ದೂಧ್‌ ಸಾಗರ್‌ ಜಲಪಾತದಿಂದ ಕೇವಲ ಅರ್ಧ ಕಿ.ಮೀ ಅಂತರದಲ್ಲಿದೆ.

ಈ ಆವಿಷ್ಕಾರದಿಂದ ಉಲ್ಲಸಿತಗೊಂಡಿರುವ ನೈಋತ್ಯ ರೈಲ್ವೇ ಅಧಿಕಾರಿಗಳು ಈ ಪಾರಂಪರಿಕ ಕಟ್ಟಡವನ್ನು ಸಂರಕ್ಷಿಸುವುದು ಮಾತ್ರವಲ್ಲದೆ ಪೋರ್ಚುಗೀಸರ ಕಾಲದ ಗೋವಾದ ಚರಿತ್ರೆಯನ್ನು ಮರುಪರಿಷ್ಕರಿಸುವ ಆಸಕ್ತಿಯನ್ನು ಕೂಡಾ ವ್ಯಕ್ತಪಡಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕಟ್ಟಡವನ್ನು ವೆಸ್ಟ್‌ ಆಫ್‌ ಇಂಡಿಯಾ ಪೋರ್ಚುಗೀಸ್‌ ಗ್ಯಾರಂಟೀಡ್‌ ರೈಲ್ವೇ [West of India Portuguese Guaranteed Railway (WIPGR)] 1885 ರಲ್ಲಿ ನಿರ್ಮಿಸಿದ್ದು, ಈ ರಚನೆಯು ಗೋವಾದ ಮರ್ಮೊಗಾವ್‌ ಬಂದರು ನಿರ್ಮಾಣ ವೇಳೆಯಲ್ಲಿ WIPGR ತೆಗೆದುಕೊಂಡ ಐತಿಹಾಸಿಕ ಯೋಜನೆಯಾಗಿತ್ತು. ಈ ಯೋಜನೆಯ 83 ಕಿ.ಮೀ ರೈಲು ಮಾರ್ಗವು ಅಂದಿನ ಪೋರ್ಚುಗೀಸ್ ಆಡಳಿತದ ಗೋವಾವನ್ನು ಪಶ್ಚಿಮ ಘಟ್ಟಗಳ ಮೂಲಕ ಬ್ರಿಟಿಷ್ ಅಧಿಪತ್ಯದ ಭಾರತದೊಂದಿಗೆ ಸಂಪರ್ಕಿಸಿತ್ತು.‌ ಇದು ಅಂದು ಎರಡು ವಸಾಹತುಶಾಹಿ‌ ಕಂಪನಿಗಳ (ಬ್ರಿಟೀಷ್‌ ಹಾಗೂ ಪೋರ್‌ಚುಗೀಸ್) ಅಧಿಕಾರವ್ಯಾಪ್ತಿಯಲ್ಲಿ ರಚನೆಯಾಗಿತ್ತು ಎಂದು ನೈಋತ್ಯ ರೈಲ್ವೇ ಅಡಿಷನಲ್‌ ಜನರಲ್‌ ಮೆನೇಜರ್‌ ಪಿ ಕೆ ಮಿಶ್ರಾ ಇಂಡಿಯನ್‌ ಎಕ್ಸ್‌ಪ್ರೆಸ್‌ ಗೆ ತಿಳಿಸಿದ್ದಾರೆ.

ಗೇಜ್ ಪರಿವರ್ತನೆಯ ಸಮಯದಲ್ಲಿ ರೈಲು ಮಾರ್ಗದಲ್ಲಿದ್ದ ಪೋರ್ಚುಗೀಸ್ ಯುಗದ ಹಲವಾರು ಐತಿಹಾಸಿಕ ರಚನೆಗಳನ್ನು ಕೆಡವಲಾಗಿತ್ತು. ಹೊಸದಾಗಿ ಪತ್ತೆಯಾದ ಈ ರಚನೆಯು ಪೋರ್ಚುಗೀಸ್ ಅವಧಿಯ ಇತಿಹಾಸ ಮತ್ತು ಪೊರ್ಚುಗೀಸರ ವಾಸ್ತುಶಿಲ್ಪದ ವೈಶಿಷ್ಟ್ಯಗಳಿಗೆ ಸಾಕ್ಷಿಯಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.

ದೂಧ್‌ ಸಾಗರ್‌ ನೋಟ
ದೂಧ್‌ ಸಾಗರ್‌ ನೋಟಅಂತರ್ಜಾಲ ಚಿತ್ರ

ಕರ್ನಾಟಕ-ಗೋವಾ ಗಡಿ ಪ್ರದೇಶದ ಗತವೈಭವವನ್ನು ಪುನರುಜ್ಜೀವನಗೊಳಿಸಲು ಈ ಕಟ್ಟಡವನ್ನು ಪುನಃಸ್ಥಾಪಿಸುವ ಅಗತ್ಯವನ್ನು ಮಿಶ್ರಾ ಒತ್ತಿ ಹೇಳಿದ್ದಾರೆ.

ಈ ಕಟ್ಟಡದ ಜೀರ್ಣೋಧ್ಧಾರದ ಕುರಿತಂತೆ ತಮ್ಮ ಇಲಾಖೆಯ ಕಾರ್ಯಯೋಜನೆಯನ್ನು ವಿವರಿಸಿದ ಮಿಶ್ರಾ, ಮೊದಲ ಮತ್ತು ಎರಡನೆಯ ಮಹಡಿಗಳಲ್ಲಿ ಪಾರಂಪರಿಕ ಗ್ಯಾಲರಿಯನ್ನು ಹೊಂದಿದ್ದು, ನೆಲಮಹಡಿಯನ್ನು ವಿಶ್ರಾಂತಿ ಗೃಹವಾಗಿ ಅಭಿವೃದ್ಧಿಪಡಿಸಲಾಗುವುದು. ಈ ದಟ್ಟ ಹಸಿರು ಪ್ರದೇಶದಲ್ಲಿ ಪ್ರವಾಸಿಗರಿಗೆ ವಿಹಂಗಮ ನೋಟವನ್ನು ಒದಗಿಸಲು ಅಷ್ಟೇ ಅಲ್ಲದೇ ದೂಧ್ ಸಾಗರ್ ಪ್ರದೇಶದಾದ್ಯಂತ ಹೆರಿಟೇಜ್ ವಾಕ್ ನ್ನು ಅಭಿವೃದ್ಧಿಪಡಿಸುವ ಯೋಜನೆಯೂ ಇದೆ ಎಂದು ಹೇಳಿದ್ದಾರೆ.

1200 ಚದರ ಅಡಿ ವಿಸ್ತಾರವಿರುವ ಈ ಎರಡಂತಸ್ತಿನ ಪುರಾತನ ಬಂಗಲೆಯು, ಮೀಟರ್‌ ಗೇಜ್‌ ರೈಲು ಇಲ್ಲಿ ಕಾರ್ಯಾಚರಿಸಲು ಆರಂಭಗೊಂಡಾಗ ರೈಲ್ವೇ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತಿತ್ತು. ಮೂಲಗಳ ಪ್ರಕಾರ ನೆಲಮಹಡಿಯ ಒಂದು ಕೊಠಡಿಯಲ್ಲಿ ಸ್ಟೇಷನ್‌ ಮಾಸ್ಟರ್‌ ತಂಗುತ್ತಿದ್ದರೆ, ಅದೇ ಮಹಡಿಯ ಇನ್ನೆರಡು ಕೊಠಡಿಗಳನ್ನು ಶೌಚಾಲಯ ಹಾಗೂ ಸಂಗ್ರಹ ಕೊಠಡಿಗಳನ್ನಾಗಿ ಬಳಸಲಾಗುತ್ತಿತ್ತು. ಮೊದಲ ಮಹಡಿಯಲ್ಲಿ ವಿಶಾಲ ಡ್ರಾಯಿಂಗ್‌ ರೂಮ್‌, ಮಲಗುವ ಕೋಣೆ ಹಾಗೂ ಅಡುಗೆ ಕೋಣೆ ಇದ್ದರೆ, ಎರಡನೆ ಮಹಡಿಯಲ್ಲಿ ಪ್ರದೇಶದ ವಿಹಂಗಮ ನೋಟ ಕಾಣುತ್ತದೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com